ಹಗರಣಗಳ ಬಲೆಯಲ್ಲಿ ರಾಬರ್ಟ್ ವಾದ್ರಾ

Update: 2026-05-19 11:40 IST

ಭಾಗ - 2

2014ರಲ್ಲಿ ನರೇಂದ್ರ ಮೋದಿ ಪ್ರಧಾನಿಯಾದಾಗ, ರಾಬರ್ಟ್ ವಾದ್ರಾ ವಿರುದ್ಧದ ಆರೋಪಗಳ ದಾಖಲೆ ಬೆಳೆಯತೊಡಗಿತ್ತು. ಬಿಜೆಪಿ ರಾಬರ್ಟ್ ವಾದ್ರಾ ಮೂಲಕ ಗಾಂಧಿ ಕುಟುಂಬವನ್ನು ಗುರಿಯಾಗಿಸುವುದು ಮುಂದುವರಿಯಿತು. ಮೇ 2014ರ ಮೊದಲು, ಬಿಜೆಪಿ ಗಾಂಧಿ ಕುಟುಂಬ ಮತ್ತು ರಾಬರ್ಟ್ ವಾದ್ರಾ ವಿರುದ್ಧ ಆರೋಪ ಮಾಡುತ್ತಲೇ ಇತ್ತು. ನಂತರ ನವೆಂಬರ್ 2014ರಲ್ಲಿ ಮನೋಹರ್ ಲಾಲ್ ಖಟ್ಟರ್ ನೇತೃತ್ವದಲ್ಲಿ ಹರ್ಯಾಣದಲ್ಲಿ ಬಿಜೆಪಿ ಸರಕಾರ ಬಂದಾಗಲೂ ವಾದ್ರಾ ವಿರುದ್ಧದ ಫೈಲ್ ಬಯಲಾಗುತ್ತಲೇ ಇತ್ತು. ಖಟ್ಟರ್ ಅವರು 2015ರ ಮೇ ತಿಂಗಳಲ್ಲಿ ರಾಬರ್ಟ್ ವಾದ್ರಾ ಮತ್ತು ಡಿಎಲ್‌ಎಫ್ ಭೂ ಒಪ್ಪಂದ ತನಿಖೆಗೆ ನಿವೃತ್ತ ನ್ಯಾಯಮೂರ್ತಿ ಎಸ್.ಎ. ಧಿಂಗ್ರಾ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಸಮಿತಿ ರಚಿಸಿದರು. 2016ರ ಆಗಸ್ಟ್ ನಲ್ಲಿ ಆ ಸಮಿತಿ ಸರಕಾರಕ್ಕೆ 182 ಪುಟಗಳ ವರದಿ ಸಲ್ಲಿಸಿತು. ಆದರೆ ಅದನ್ನು ಸರಕಾರ ಎಂದಿಗೂ ಬಹಿರಂಗಪಡಿಸಲಿಲ್ಲ. ಮಾಧ್ಯಮಗಳಿಗೆ ಸೋರಿಕೆಯಾದ ದಾಖಲೆಗಳ ಪ್ರಕಾರ, ರಾಬರ್ಟ್ ವಾದ್ರಾ ಅವರ ಕಂಪೆನಿಗೆ ಲಾಭವಾಗುವಂತೆ ವಾಣಿಜ್ಯ ಪರವಾನಿಗೆ ನಿಯಮಗಳನ್ನು ಕಡೆಗಣಿಸಲಾಗಿತ್ತು. ಭೂಮಿ ಖರೀದಿಸಿದ ಒಂದು ತಿಂಗಳೊಳಗೆ, ಭೂ ಬಳಕೆಯನ್ನು ವಾಣಿಜ್ಯ ಉದ್ದೇಶಕ್ಕೆ ಬದಲಿಸಿದ್ದರ ಬಗ್ಗೆಯೂ ಪ್ರಶ್ನೆಗಳಿದ್ದವು. ಅದೇನೇ ಇದ್ದರೂ, ಖಟ್ಟರ್ ಸರಕಾರವಾಗಲಿ, ಅವರ ನಂತರದ ನಯಾಬ್ ಸಿಂಗ್ ಸೈನಿ ಸರಕಾರವಾಗಲಿ ಧಿಂಗ್ರಾ ಸಮಿತಿಯ ವರದಿಯನ್ನು ಬಹಿರಂಗಪಡಿಸಲಿಲ್ಲ. ಪ್ರಕರಣ ಇನ್ನೂ ನಡೆಯುತ್ತಿದ್ದು, ಇದು ವಾದ್ರಾ ವಿರುದ್ಧದ ಆರೋಪಗಳ ಪೈಕಿ ಮೊದಲ ಗಂಭೀರ ಪ್ರಕರಣವಾಗಿದೆ.

ವಾದ್ರಾ ವಿರುದ್ಧದ ಈ ಮೊದಲ ಪ್ರಕರಣ 2018ರಲ್ಲಿ, ರಾಜ್ಯದಲ್ಲಿ ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಸುಮಾರು ನಾಲ್ಕು ವರ್ಷಗಳ ನಂತರ ದಾಖಲಾಯಿತು. ಈ.ಡಿ. 2018ರ ಡಿಸೆಂಬರ್‌ನಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣವನ್ನು ಸಹ ದಾಖಲಿಸಿದೆ. ಸುಮಾರು ಏಳು ವರ್ಷಗಳ ನಂತರ, ಎಪ್ರಿಲ್ 2025ರಲ್ಲಿ ಈ.ಡಿ. ರಾಬರ್ಟ್ ವಾದ್ರಾ ಅವರನ್ನು ಸತತ ಮೂರು ದಿನಗಳ ಕಾಲ, ಎಪ್ರಿಲ್ 15, 16 ಮತ್ತು 17 ರಂದು ಗಂಟೆಗಟ್ಟಲೆ ವಿಚಾರಣೆ ನಡೆಸಿತು. 2019ರಲ್ಲಿಯೂ ಈ.ಡಿ. ರಾಬರ್ಟ್ ವಾದ್ರಾ ಅವರನ್ನು ಎರಡು ಬಾರಿ ದೀರ್ಘ ವಿಚಾರಣೆ ನಡೆಸಿತ್ತು. ಆದರೆ, ಎಪ್ರಿಲ್ 2025 ರಲ್ಲಿನ ವಿಚಾರಣೆ ಬಳಿಕ ಈ.ಡಿ. ಜುಲೈ 2025ರಲ್ಲಿ ದಿಲ್ಲಿಯ ರೌಸ್ ಅವೆನ್ಯೂ ಕೋರ್ಟ್‌ನಲ್ಲಿ ಆರೋಪಪಟ್ಟಿ ಸಲ್ಲಿಸಿತು. ವಿಚಾರಣೆ ನಡೆಸಿದ ವಿಶೇಷ ಕೋರ್ಟ್ 2026ರ ಮೇ 16ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ರಾಬರ್ಟ್ ವಾದ್ರಾಗೆ ಆದೇಶಿಸಿತು. ಇದರ ವಿರುದ್ಧ ಇತ್ತೀಚೆಗೆ ಮೇ 13ರಂದು ವಾದ್ರಾ ದಿಲ್ಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದರು. ಆದರೆ ಅವರ ವಾದವನ್ನು ಈ.ಡಿ. ತೀವ್ರವಾಗಿ ವಿರೋಧಿಸಿರುವುದು ವರದಿಯಾಗಿದೆ.

ಬಿಕಾನೇರ್ ಭೂ ಹಗರಣ ಎಂದೇ ಗೊತ್ತಿರುವ ಕೇಸ್ ರಾಬರ್ಟ್ ವಾದ್ರಾ ವಿರುದ್ಧದ ಮತ್ತೊಂದು ಆರೋಪಕ್ಕೆ ಸಂಬಂಧಿಸಿದೆ. ರಾಜಸ್ಥಾನದ ಬಿಕಾನೇರ್‌ನ ಕೊಲಾಯತ್ ಪ್ರದೇಶದಲ್ಲಿ, ಮಹಾಜನ್ ಫೀಲ್ಡ್ ಫೈರಿಂಗ್ ರೇಂಜ್ ಎಂಬ ಭಾರತೀಯ ಸೇನೆಯ ಫೈರಿಂಗ್ ರೇಂಜ್ ಇದೆ. ಈ ರೇಂಜ್ ಅನ್ನು ವಿಸ್ತರಿಸಲು, 1990ರ ದಶಕದಲ್ಲಿ ಸರಕಾರ ಸುತ್ತಲಿನ ಭೂಮಿಯನ್ನು ಸ್ವಾಧೀನಪಡಿಸಿಕೊಂಡಿತು ಮತ್ತು ಪ್ರತಿಯಾಗಿ, ಗ್ರಾಮಸ್ಥರಿಗೆ ಬೇರೆಡೆ ಭೂಮಿ ನೀಡುವುದಾಗಿ ಭರವಸೆ ನೀಡಿತು. 2007ರ ಹೊತ್ತಿಗೆ ಕೆಲ ಅಧಿಕಾರಿಗಳು ಭೂ ಮಾಫಿಯಾಗಳೊಂದಿಗೆ ಶಾಮೀಲಾಗಿ, ಫೈರಿಂಗ್ ರೇಂಜ್‌ನಲ್ಲಿ ತಮ್ಮ ಭೂಮಿ ಕಳೆದುಕೊಳ್ಳದ ಜನರನ್ನು ಫಲಾನುಭವಿಗಳೆಂದು ತೋರಿಸುವ ದಾಖಲೆಗಳನ್ನು ಸೃಷ್ಟಿಸಿದರು ಮತ್ತು ಅವರಿಗೆ ಪರಿಹಾರವನ್ನು ಸಹ ನೀಡಲಾಯಿತು. ಅಂದರೆ ನಕಲಿ ದಾಖಲೆಗಳ ಮೂಲಕ ಸರಕಾರಿ ಭೂಮಿ ಖಾಸಗಿಯವರ ಕೈಗೆ ಹೋಯಿತು. ಇಲ್ಲಿಯೇ ಮತ್ತೊಮ್ಮೆ ವಾದ್ರಾ ಅವರ ಸ್ಕೈಲೈಟ್ ಹಾಸ್ಪಿಟಾಲಿಟಿ ಕಂಪೆನಿಯ ಪ್ರಸ್ತಾಪ ಬರುತ್ತದೆ. 2010ರ ಜನವರಿಯಲ್ಲಿ ಸ್ಕೈಲೈಟ್ ಕಂಪೆನಿ ಬಿಕಾನೇರ್‌ನ ಕೊಲಾಯತ್ ಪ್ರದೇಶದಲ್ಲಿ 69.55 ಹೆಕ್ಟೇರ್ ಭೂಮಿಯನ್ನು ಕೇವಲ 72 ಲಕ್ಷಕ್ಕೆ ಖರೀದಿಸಿತು. ಈ ಭೂಮಿಯನ್ನು ಪವರ್ ಆಫ್ ಅಟಾರ್ನಿ ಹೊಂದಿದ್ದ ರಾಜೇಂದ್ರ ಕುಮಾರ್ ಮತ್ತು ಕಿಶೋರ್ ಸಿಂಗ್ ಅವರಿಂದ ಖರೀದಿಸಲಾಯಿತು. ಫೈರಿಂಗ್ ರೇಂಜ್ ವಿಸ್ತರಣೆಗಾಗಿ ತಮ್ಮ ಸ್ವಂತ ಭೂಮಿ ಬಿಟ್ಟುಕೊಟ್ಟ ಅವರು ಅದನ್ನು ಸರಕಾರಿ ಪರಿಹಾರವಾಗಿ ಪಡೆದಿದ್ದಾರೆ ಎಂದು ಹೇಳುವ ದಾಖಲೆಗಳನ್ನು ಸೃಷ್ಟಿಸಲಾಗಿತ್ತು. ಸ್ಕೈಲೈಟ್ ಈ ಭೂಮಿಯನ್ನು 2012 ರ ಜನವರಿಯಲ್ಲಿ ಬೇರೊಂದು ಕಂಪೆನಿಗೆ ಸುಮಾರು 5.15 ಕೋಟಿಗೆ ಮಾರಾಟ ಮಾಡಿತು. ಅಂದರೆ, ಸ್ಕೈಲೈಟ್ ಕಂಪೆನಿ ಕೆಲವೇ ತಿಂಗಳುಗಳಲ್ಲಿ ಸುಮಾರು 4.43 ಕೋಟಿ ಗಳಿಸಿತ್ತು. ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ನೇತೃತತ್ವದ ಕಾಂಗ್ರೆಸ್ ಸರಕಾರ ಅಧಿಕಾರದಲ್ಲಿದ್ದಾಗ ಈ ಭೂಮಿಯನ್ನು ಖರೀದಿಸಿ ಮಾರಾಟ ಮಾಡಲಾಯಿತು.

ಈ ಪ್ರಕರಣದಲ್ಲಿ ವಾದ್ರಾ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖಿಸಲಾಗಿಲ್ಲ. ಕೊಲಾಯತ್‌ನ ಸ್ಥಳೀಯ ತಹಶೀಲ್ದಾರ್ ಅವರ ದೂರಿನ ಆಧಾರದ ಮೇಲೆ, ರಾಜಸ್ಥಾನ ಪೊಲೀಸರು 2014ರಲ್ಲಿ ಬಿಕಾನೇರ್‌ನ ಕೊಲಾಯತ್‌ನಲ್ಲಿ ಸರಕಾರಿ ಭೂಮಿಯನ್ನು ವಂಚನೆಯಿಂದ ಸ್ವಾಧೀನಪಡಿಸಿಕೊಂಡ ಆರೋಪದ ಮೇಲೆ ಒಟ್ಟು 18 ಎಫ್‌ಐಆರ್‌ಗಳನ್ನು ದಾಖಲಿಸಿದರು. ಈ ಪ್ರಕರಣ ಕೋಟ್ಯಂತರ ರೂಪಾಯಿಗಳ ಒಪ್ಪಂದವನ್ನು ಒಳಗೊಂಡಿರುವುದರಿಂದ, ಹಣ ವರ್ಗಾವಣೆ ಬಗ್ಗೆಯೂ ಈ.ಡಿ. ಶಂಕಿಸಿದೆ. ಪೊಲೀಸರ ಎಫ್‌ಐಆರ್ ಆಧರಿಸಿ, ಈ.ಡಿ. ಸೆಪ್ಟೆಂಬರ್ 2015ರಲ್ಲಿ ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿತು. ಭೂಮಿ ಖರೀದಿಸಿದ ಮತ್ತು ರಾಬರ್ಟ್ ವಾದ್ರಾ ಅವರ ತಾಯಿ ನಿರ್ದೇಶಕರಾಗಿರುವ ಸ್ಕೈಲೈಟ್ ಕಂಪೆನಿಗೆ ಜೂನ್ 2016ರಲ್ಲಿ ಈ.ಡಿ. ನೋಟಿಸ್ ಕಳುಹಿಸಿತು. ಈ ನಡುವೆ, ಸಿಬಿಐ ಕೂಡ ಈ ಬಗ್ಗೆ 17 ಪ್ರತ್ಯೇಕ ಪ್ರಕರಣಗಳನ್ನು ದಾಖಲಿಸಿದ್ದು, ಅವುಗಳಲ್ಲಿ ನಾಲ್ಕು ರಾಬರ್ಟ್ ವಾದ್ರಾ ಅವರ ಕಂಪೆನಿಗೆ ಸಂಬಂಧಿಸಿವೆ. ಈ ಪ್ರಕರಣದಲ್ಲಿ, 2019 ರ ಜುಲೈನಲ್ಲಿ ವಾದ್ರಾ ಮತ್ತು ಅವರ ತಾಯಿ ಮೌರೀನ್ ವಾದ್ರಾ ಅವರನ್ನು ಈ.ಡಿ. ದೀರ್ಘ ವಿಚಾರಣೆ ನಡೆಸಿತು. ಅಲ್ಲದೆ, ವಾದ್ರಾ ಮತ್ತು ಅವರ ಕುಟುಂಬದ ಕೆಲ ಆಸ್ತಿಗಳನ್ನು ಎರಡನೇ ಬಾರಿಗೆ ಮುಟ್ಟುಗೋಲು ಹಾಕಿಕೊಳ್ಳಲಾಯಿತು. ವಾದ್ರಾ ಅವರ ಕೆಲವು ಆಪ್ತರನ್ನು ಸಹ ಬಂಧಿಸಲಾಯಿತು. ಮತ್ತು ಆರೋಪಪಟ್ಟಿ ಸಲ್ಲಿಸಿದ ನಂತರ ಪ್ರಕರಣ ಇನ್ನೂ ನ್ಯಾಯಾಲಯದ ಮುಂದೆ ಬಾಕಿ ಇದೆ.

ರಾಬರ್ಟ್ ವಾದ್ರಾ ವಿರುದ್ಧದ ಮೂರನೇ ಮತ್ತು ಅಂತಿಮ ಪ್ರಕರಣ ಶಸ್ತ್ರಾಸ್ತ್ರ ವ್ಯಾಪಾರಿ ಮತ್ತು ಪರಾರಿಯಾಗಿರುವ ಭಾರತೀಯ ಅಪರಾಧಿ ಸಂಜಯ್ ಭಂಡಾರಿ ಜೊತೆಗಿನ ಸಂಪರ್ಕಕ್ಕೆ ಸಂಬಂಧಿಸಿದೆ. ಲಂಡನ್‌ನ ಅತ್ಯಂತ ಐಷಾರಾಮಿ ಪ್ರದೇಶಗಳಲ್ಲಿ ಒಂದಾದ ಮೇರಿಲ್‌ಬೋನ್‌ನ ಬ್ರಿಯಾನ್‌ಸ್ಟನ್ ಸ್ಕ್ವೇರ್‌ನಲ್ಲಿರುವ ಬಂಗಲೆಗೆ ಸಂಬಂಧಿಸಿ, ಸಂಜಯ್ ಭಂಡಾರಿ ಮತ್ತು ವಾದ್ರಾ ನಡುವಿನ ಸಂಪರ್ಕವನ್ನು ಉಲ್ಲೇಖಿಸಲಾಗಿದೆ. ಸಂಜಯ್ ಭಂಡಾರಿ ಈ ಮನೆಯನ್ನು 2009ರಲ್ಲಿ ಖರೀದಿಸಿದ್ದಾರೆ ಎನ್ನಲಾಗಿದ್ದು, 2016ರಲ್ಲಿ ಭಾರತದಿಂದ ಲಂಡನ್‌ಗೆ ಪರಾರಿಯಾಗಿದ್ದಾರೆ. ವಾಸ್ತವವಾಗಿ, ಸಂಜಯ್ ಭಂಡಾರಿ ಭಾರತ ಸರಕಾರದ ಶಸ್ತ್ರಾಸ್ತ್ರ ವ್ಯಾಪಾರಿ ಮತ್ತು ರಕ್ಷಣಾ ಸಲಹೆಗಾರರಾಗಿದ್ದರು. ಅವರ ಕಂಪೆನಿ ಆಫ್ಸೆಟ್ ಇಂಡಿಯಾ ಸೊಲ್ಯೂಷನ್ಸ್ ಮೇಲೆ 2016ರಲ್ಲಿ ಐಟಿ ರೇಡ್ ಆದಾಗ, ಭಾರತ ಸರಕಾರದ ರಕ್ಷಣಾ ಒಪ್ಪಂದಗಳಿಗೆ ಸಂಬಂಧಿಸಿದ ಗೌಪ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಈ ದಾಳಿಯ ನಂತರ, ಸಂಜಯ್ ಭಂಡಾರಿ ವಿರುದ್ಧ ಅಧಿಕೃತ ರಹಸ್ಯ ಕಾಯ್ದೆಯಡಿ ಆರೋಪ ಹೊರಿಸಲಾಯಿತು ಮತ್ತು ಆಗ ಅವರು ಬಂಧನ ತಪ್ಪಿಸಿಕೊಳ್ಳಲು ದೇಶದಿಂದ ಪಲಾಯನ ಮಾಡಿದರು. ತನಿಖಾ ಸಂಸ್ಥೆಗಳ ಪ್ರಕಾರ, ಭಾರತೀಯ ವಾಯುಪಡೆ ಮತ್ತು ನೌಕಾಪಡೆಗೆ ಭವಿಷ್ಯದ ಶಸ್ತ್ರಾಸ್ತ್ರ ಖರೀದಿಗೆ ಸಂಬಂಧಿಸಿದ ಮಾಹಿತಿಯನ್ನು ಸಂಜಯ್ ಭಂಡಾರಿ ಮನೆಯಿಂದ ವಶಪಡಿಸಿಕೊಳ್ಳಲಾಗಿದೆ. ವಿಶ್ವಾದ್ಯಂತ ಶಸ್ತ್ರಾಸ್ತ್ರ ಕಂಪೆನಿಗಳು ಭಾರತ ಸರಕಾರಕ್ಕೆ ಸಲ್ಲಿಸಿದ ಪ್ರಸ್ತಾವನೆಗಳನ್ನು ಒಳಗೊಂಡಿರುವ ಗೌಪ್ಯ ದಾಖಲೆಗಳನ್ನು ಸಹ ವಶಪಡಿಸಿಕೊಳ್ಳಲಾಗಿದೆ. ಇದಲ್ಲದೆ, ರಕ್ಷಣಾ ಸಚಿವಾಲಯದೊಳಗಿನ ಉನ್ನತ ಮಟ್ಟದ ಸಭೆಗಳಲ್ಲಿ ಶಸ್ತ್ರಾಸ್ತ್ರಗಳ ಬೆಲೆಗಳ ಕುರಿತ ಚರ್ಚೆಗಳನ್ನು ವಿವರಿಸುವ ದಾಖಲೆಗಳು ಕೂಡ ರೇಡ್ ವೇಳೆ ಸಿಕ್ಕಿವೆ. ಈ ದಾಖಲೆಗಳ ಆಧಾರದ ಮೇಲೆ, ಅವರು ರಕ್ಷಣಾ ಒಪ್ಪಂದಗಳಲ್ಲಿ ಕಮಿಷನ್ ಪಡೆದಿದ್ದಾರೆ ಹಾಗೂ ವಿದೇಶಗಳಲ್ಲಿ ಅಪಾರ ಪ್ರಮಾಣದ ಅಘೋಷಿತ ಆಸ್ತಿ ಮತ್ತು ಬೇನಾಮಿ ಆಸ್ತಿಗಳನ್ನು ಹೊಂದಿದ್ದಾರೆ ಎಂದು ಆರೋಪಿಸಲಾಗಿದೆ ಮತ್ತು ರಕ್ಷಣಾ ಒಪ್ಪಂದಗಳಿಂದ ಪಡೆದ ಕಮಿಷನ್ ಹಣ ಬಳಸಿಕೊಂಡು ತಮ್ಮ ಲಂಡನ್ ಬಂಗಲೆ ಖರೀದಿಸಿದ್ದಾರೆ ಎಂದು ತನಿಖಾ ಸಂಸ್ಥೆಗಳು ಆರೋಪಿಸಿವೆ. ತನಿಖಾ ಸಂಸ್ಥೆಗಳ ಪ್ರಕಾರ, ಸಂಜಯ್ ಭಂಡಾರಿ ಕೆಲಸದ ಹಿಂದೆ ರಾಬರ್ಟ್ ವಾದ್ರಾ ಅವರ ಪ್ರಭಾವವಿತ್ತು. ಮತ್ತು ಕಮಿಷನ್ ಹಣ ಅಥವಾ ಲಂಡನ್ ಬಂಗಲೆಯ ನಿಜವಾದ ಮಾಲಕ ರಾಬರ್ಟ್ ವಾದ್ರಾ ಎನ್ನಲಾಗಿದೆ.

ಈ ವಿಷಯದಲ್ಲೂ ಈಡಿ 2016ರಲ್ಲಿ ರಾಬರ್ಟ್ ವಾದ್ರಾ ವಿರುದ್ಧ ಹಣ ವರ್ಗಾವಣೆ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಿದೆ. ಈ.ಡಿ. ಮೊದಲ ಸಲ ವಾದ್ರಾ ಅವರನ್ನು ಪ್ರಶ್ನಿಸಲು ಧೈರ್ಯ ಮಾಡಿದ್ದೇ ಈ ಪ್ರಕರಣದಲ್ಲಿ. ದಿಲ್ಲಿಯ ಜಾಮ್‌ನಗರ ಕಚೇರಿಯಲ್ಲಿ ವಿಚಾರಣೆಗೆ ಕರೆಸಿತು. ಪ್ರಿಯಾಂಕಾ ಗಾಂಧಿ ವಾದ್ರಾ ಕೂಡ ರಾಬರ್ಟ್ ಅವರೊಂದಿಗೆ ಜಾಮ್‌ನಗರ ಕಚೇರಿಗೆ ಬಂದಿದ್ದರು. ನವೆಂಬರ್ 2025ರಲ್ಲಿ ಈ.ಡಿ. ವಾದ್ರಾ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. 2026ರ ಪೂರಕ ಚಾರ್ಜ್‌ಶೀಟ್‌ನಲ್ಲಿ ಈ.ಡಿ. ರಾಬರ್ಟ್ ವಾದ್ರಾ ಅವರನ್ನು ಆರೋಪಿಯನ್ನಾಗಿ ಹೆಸರಿಸಿ, ರಾಬರ್ಟ್ ವಾದ್ರಾ ಲಂಡನ್ ಬಂಗಲೆಯ ನಿಜವಾದ ಮಾಲಕ ಎಂದು ಹೇಳಿದೆ. ಈ ಪ್ರಕರಣದಲ್ಲಿ ವಿಚಾರಣೆಗಾಗಿ ಸಂಜಯ್ ಭಂಡಾರಿಯನ್ನು ಭಾರತಕ್ಕೆ ಕರೆತರಲು ಈ.ಡಿ. ಕೋರಿದೆ. ಭಾರತ ಬ್ರಿಟನ್‌ನೊಂದಿಗೆ ಹಸ್ತಾಂತರ ಒಪ್ಪಂದ ಹೊಂದಿದ್ದರೂ, ಅವರನ್ನು ಇನ್ನೂ ಭಾರತಕ್ಕೆ ಕರೆತರಲು ಸಾಧ್ಯವಾಗಿಲ್ಲ. ಇದರ ಪರಿಣಾಮವಾಗಿ ತನಿಖೆ ಅರ್ಧಕ್ಕೇ ನಿಂತಿದ್ದು, ಪ್ರಕರಣ ನ್ಯಾಯಾಲಯದಲ್ಲಿ ಬಾಕಿಯಿದೆ. ರಾಬರ್ಟ್ ವಾದ್ರಾ ವಿರುದ್ಧದ ಆರೋಪಗಳ ಹಿಂದಿನ ಸತ್ಯವೇನು ಎಂಬುದನ್ನು ಕೋರ್ಟ್ ಮಾತ್ರವೇ ನಿರ್ಧರಿಸಬೇಕಿದೆ.

ಗಾಂಧಿ ಕುಟುಂಬದ ಅಳಿಯ ಎಂಬ ಕಾರಣದಿಂದ ವಾದ್ರಾ ಪಡೆದ ಸೌಲಭ್ಯಗಳಲ್ಲಿ ವಿವಾದಕ್ಕೆ ಒಳಗಾಗಿದ್ದ ಒಂದು ಸಂಗತಿಯ ಬಗ್ಗೆಯೂ ಇಲ್ಲಿ ಪ್ರಸ್ತಾಪಿಸಬೇಕು. 2005ರಲ್ಲಿ ಯುಪಿಎ ಸರಕಾರ ರಾಬರ್ಟ್ ವಾದ್ರಾ ಅವರನ್ನು ವಿಮಾನ ನಿಲ್ದಾಣ ಭದ್ರತಾ ತಪಾಸಣೆಯಿಂದ ವಿನಾಯಿತಿ ಪಡೆದ ವಿಐಪಿಗಳ ಪಟ್ಟಿಯಲ್ಲಿ ಸೇರಿಸಿತು. ರಾಬರ್ಟ್ ವಾದ್ರಾಗೆ ಈ ಸವಲತ್ತನ್ನು ಯಾವ ಆಧಾರದ ಮೇಲೆ ನೀಡಲಾಯಿತು ಎಂಬ ಪ್ರಶ್ನೆಗಳು ಉದ್ಭವಿಸಿದವು. ವಿಮಾನ ನಿಲ್ದಾಣ ಭದ್ರತಾ ತಪಾಸಣೆ ಮಂಡಳಿಯಲ್ಲಿ ಸಾಂವಿಧಾನಿಕ ಹುದ್ದೆಗಳನ್ನು ಹೊಂದಿರುವವರ ಜೊತೆಗೆ, ಯಾವುದೇ ಸ್ಥಾನದಲ್ಲಿ ಇಲ್ಲದೆಯೂ ಕಾಣಿಸಿಕೊಳ್ಳುತ್ತಿದ್ದ ದೇಶದ ಏಕೈಕ ವ್ಯಕ್ತಿ ವಾದ್ರಾ ಆಗಿರಬಹುದು. ವಾದ್ರಾಗೆ, ಸಾಮಾನ್ಯ ನಾಗರಿಕರಿಗೆ ನಿಗದಿಪಡಿಸಲಾದ ವಿಮಾನ ನಿಲ್ದಾಣ ಭದ್ರತಾ ನಿಯಮಗಳು ಕೇವಲ ಔಪಚಾರಿಕವಾಗಿದ್ದವು. ಆ ಸಮಯದಲ್ಲಿ, ಪ್ರಶ್ನೆಗಳು ಎದ್ದವು, ಸುದ್ದಿಗಳು ಪ್ರಕಟವಾದವು ಮತ್ತು ಮಾಧ್ಯಮಗಳು ಸಹ ಅದರ ಬಗ್ಗೆ ಒತ್ತಿ ಹೇಳಿದ್ದವು. ಆದರೆ ಕಾಲ ಕಳೆದಂತೆ, ಇಡೀ ವಿವಾದ ಮರೆಯಾಗಿತ್ತು.

ಗಾಂಧಿ ಕುಟುಂಬದ ಈ ಅಳಿಯ ಮೂರು ಪ್ರಮುಖ ಆರೋಪಗಳನ್ನು ಎದುರಿಸುತ್ತಿದ್ದಾರೆ. ದೇಶದ ತನಿಖಾ ಸಂಸ್ಥೆಗಳು ಇನ್ನೂ ತನಿಖೆ ನಡೆಸುತ್ತಿವೆ. ಚಾರ್ಜ್‌ಶೀಟ್ ಸಲ್ಲಿಸುತ್ತಿವೆ ಮತ್ತು ನ್ಯಾಯಾಲಯಕ್ಕೆ ಸಹ ಕರೆದೊಯ್ಯುತ್ತಿವೆ. ಆದರೆ ಪ್ರಶ್ನೆ, ಇದು ಕಾನೂನಿನ ವಿಜಯವೇ ಅಥವಾ ನ್ಯಾಯಾಂಗ ಪ್ರಕ್ರಿಯೆಯ ಒಂದು ಸಣ್ಣ ಭಾಗವೇ ಎಂಬುದು. ಏಕೆಂದರೆ ವಾದ್ರಾ ಬಳಿ ದೇಶದ ಅತ್ಯಂತ ದುಬಾರಿ ವಕೀಲರಿದ್ದಾರೆ. ಅವರು ಸುಮಾರು ಎರಡು ದಶಕಗಳಿಂದ ಕಸ್ಟಡಿ ವಿಚಾರಣೆಯಿಂದ ವಾದ್ರಾ ಅವರನ್ನು ರಕ್ಷಿಸಿದ್ದಾರೆ. ಈ ಪ್ರಕರಣಗಳಲ್ಲಿನ ಅಂತಿಮ ತೀರ್ಪು ಏನೇ ಇರಲಿ, ಅವು ಖಂಡಿತವಾಗಿಯೂ ಪ್ರಶ್ನೆಗಳನ್ನು ಹುಟ್ಟುಹಾಕುತ್ತವೆ.

ಗಾಂಧಿ ಕುಟುಂಬದ ಕುಡಿಯ ಪ್ರೇಮದ ನೆರಳಲ್ಲಿ ಆ ಕುಟುಂಬದ ಭಾಗವಾಗಿ ಬಂದ ವಾದ್ರಾ, ಅದರ ಲಾಭವನ್ನು ತನ್ನ ಉದ್ಯಮ ಮಹತ್ವಾಕಾಂಕ್ಷೆಗೆ ಬಳಸಿಕೊಂಡಂತೆ ಅವರ ಪೂರ್ತಿ ಕಥೆಯ ವಿವರಗಳು ಗೋಚರವಾಗುತ್ತವೆ. ಅಲ್ಲದೆ, ವಿರೋಧಿಗಳು ಗಾಂಧಿ ಕುಟುಂಬವನ್ನು ಹಣಿಯಲು ಹೊರಟಾಗ, ಉಳಿದ ವಿಷಯಗಳೇನೇ ಇದ್ದರೂ, ಆ ಕುಟುಂಬದ ಅತಿ ದುರ್ಬಲ ಭಾಗವಾಗಿ ವಾದ್ರಾ ಉದ್ಯಮದ ನಿಗೂಢತೆಯೇ ಗುರಿಯಾಗುತ್ತದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News