‘ಮನರೇಗಾ’ದ ಜನಪರತೆಯನ್ನು ‘ವಿಬಿ-ಜಿ ರಾಮ್ ಜಿ’ಯಿಂದ ನಿರೀಕ್ಷಿಸಲು ಸಾಧ್ಯವೇ?
ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಜಾರಿಗೆ ತಂದಿದ್ದ, ಗ್ರಾಮೀಣ ಭಾಗದ ಬಡವರ ಕೈಹಿಡಿದಿದ್ದ ಮನರೇಗಾ ಯೋಜನೆ ಇನ್ನು ಮುಂದೆ ಮನರೇಗಾ ಆಗಿ ಉಳಿಯುವುದಿಲ್ಲ. ಮಹಾತ್ಮಾ ಗಾಂಧಿ ಹೆಸರನ್ನು ತೆಗೆದು, ರಾಮನ ಹೆಸರನ್ನು ಸೇರಿಸಿ, ಯೋಜನೆ ಹೆಸರಲ್ಲಿ ರಾಜಕೀಯ ಮಾಡುವುದು ನಡೆದಿರುವಾಗ, ಗ್ರಾಮೀಣ ಜನರ ಬಗೆಗಿನ ಕಾಳಜಿಯೂ ಇಲ್ಲವಾಗಿದೆ ಎಂಬುದು ಸ್ಷಷ್ಟ. ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ವಿಬಿ-ಜಿ ರಾಮ್ ಜಿ, ಅಂದರೆ ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಎಂದು ಬದಲಿಸಲಾಗಿದೆ. ಹೊಸ ಮಸೂದೆಯನ್ನು ಡಿಸೆಂಬರ್ 18ರಂದು ಲೋಕಸಭೆಯಲ್ಲಿ ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಅಂಗೀಕರಿಸಲಾಗಿದೆ. ಸ್ಥಾಯಿ ಸಮಿತಿಗೆ ಕಳಿಸಬೇಕೆಂಬ ವಿಪಕ್ಷಗಳ ಮನವಿಯನ್ನು ತಿರಸ್ಕರಿಸಲಾಗಿದೆ. ಈ ದೇಶದಲ್ಲಿ ಗ್ರಾಮೀಣ ಬಡವರು ಮತ್ತು ಮಹಿಳೆಯರ ಬದುಕನ್ನೇ ಬದಲಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದ, ಬಹುದೊಡ್ಡ ಭರವಸೆಯಾಗಿದ್ದ ಈ ಯೋಜನೆ ಬಗ್ಗೆ ಮೋದಿ ಮೊದಲಿಂದಲೂ ಅಸಹನೆ ತೋರಿಸುತ್ತಲೇ ಬಂದರು. ಅದನ್ನು ಕಾಂಗ್ರೆಸ್‌ನ ವೈಫಲ್ಯಗಳ ಜೀವಂತ ಸ್ಮಾರಕ ಎಂದು ಜರೆದಿದ್ದರು. ಈಗ ಯೋಜನೆಯ ಆತ್ಮದಂತಿದ್ದ ಕಾಳಜಿಗಳನ್ನೇ ಕಿತ್ತುಹಾಕಿ, ಅದರ ಹೆಸರನ್ನೂ ಬದಲಿಸಿ, ಗಾಂಧಿಯ ಬಗೆಗಿನ ಅಸಹನೆಯನ್ನೂ ಬಹಿರಂಗವಾಗಿಯೇ ತೋರಿಸಿದ್ದಾರೆ. ಈ ಯೋಜನೆ ಮೊದಲಿನ ಯಾವುದೇ ಆಶಯಗಳೊಂದಿಗೆ ಉಳಿಯುವುದಿಲ್ಲ ಎಂದು ಪರಿಣಿತರು ಕಳವಳ ವ್ಯಕ್ತಪಡಿಸಿದ್ದಾರೆ. ವಿಪಕ್ಷಗಳು ಆಕ್ರೋಶ ಹೊರಹಾಕುತ್ತಿವೆ. ಈ 20 ವರ್ಷಗಳಲ್ಲಿ ಮೋದಿ ಕಾಲದ ದಶಕವೆಲ್ಲ ಮನರೇಗಾ ಪಾಲಿನ ಅಸಹನೆಯಾಗಿಯೇ ಕುದಿಯುತ್ತಿತ್ತು. ಈಗ ಯೋಜನೆಯೇ ಬೇರೆ ರೂಪದಲ್ಲಿ ಬರುತ್ತಿದೆ.
ಭಾಗ - 1
2005ರಲ್ಲಿ ಜಾರಿಗೆ ಬಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗಾ) 20 ವರ್ಷಗಳನ್ನು ಪೂರೈಸಿದೆ. ಈಗ ಅದನ್ನು ಬದಲಾವಣೆ ಹೆಸರಲ್ಲಿ ಮುಗಿಸಿಹಾಕಲಾಗಿದೆ. ಈ ಕಾನೂನಿನಿಂದ ಮಹಾತ್ಮಾ ಗಾಂಧಿಯವರ ಹೆಸರನ್ನು ತೆಗೆದುಹಾಕುವುದರೊಂದಿಗೇ ಯೋಜನೆಯ ನಿಜವಾದ ಉದ್ದೇಶಕ್ಕೂ ಕೊನೆಹಾಡಲಾಗಿದೆ. ಮನರೇಗಾ ಇನ್ನು ಮುಂದೆ ಮೊದಲಿದ್ದ ಹಾಗೆ ಇರುವುದಿಲ್ಲ. ಅದು ಕೊನೆಯಾಗುತ್ತಿದೆ. ಮನರೇಗಾ ಸಂಸತ್ತಿನ ಸರ್ವಾನುಮತದ ಒಪ್ಪಿಗೆ ಪಡೆದೇ ಬಂದಿದ್ದರೂ, ಆ ಸಮಯದಲ್ಲಿ ಕಾನೂನಿನ ಸದೃಢತೆ ಬಗ್ಗೆ ಅನೇಕ ಅರ್ಥಶಾಸ್ತ್ರಜ್ಞರಿಗೆ ಅನುಮಾನಗಳಿದ್ದವು ಎಂದು ವಿಶ್ಲೇಷಣೆಗಳು ಹೇಳುತ್ತವೆ. ಕಾಯ್ದೆ ಜಾರಿಗೆ ಬಂದ ಕೂಡಲೇ ಹಲವಾರು ಅನುಷ್ಠಾನ ಅಡೆತಡೆಗಳು ಉದ್ಭವಿಸಿದವು. ಅಷ್ಟಾಗಿಯೂ, ಮನರೇಗಾ ಉದ್ಯೋಗ ಖಾತರಿ ನೀಡುವಲ್ಲಿ ತನ್ನ ಅಸಾಧಾರಣ ತಾಕತ್ತನ್ನೇ ತೋರಿಸಿತು. ಆದರೆ ಈ ಯೋಜನೆಗೆ ಗ್ರಹಣ ಹಿಡಿಯಲು ಶುರುವಾಗಿಯೇ ದಶಕ ದಾಟಿತು. ಮೋದಿ ಅಧಿಕಾರಕ್ಕೆ ಬಂದಾಗಿನಿಂದಲೂ ಇದು ಅವರಿಗೆ ಬೇಡವಾದ ಯೋಜನೆಯಾಗಿತ್ತು. ಆದರೂ ಅದಕ್ಕೆ ಪರ್ಯಾಯವಾದ ಏನನ್ನೂ ತರಲಾಗದ ಅವರಿಗೆ ಈ ಯೋಜನೆಯನ್ನೇ ಉಳಿಸಿಕೊಳ್ಳುವುದು ಅನಿವಾರ್ಯವೂ ಆಗಿತ್ತು. ಈಗ ಅದನ್ನು ಮುಗಿಸಿಹಾಕಲಾಗುತ್ತಿದೆ.
ವಿಕಸಿತ ಭಾರತ - ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ (ಗ್ರಾಮೀಣ) ಮಸೂದೆ 2025ನ್ನು ಡಿಸೆಂಬರ್ 18ರಂದು ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ. ವಿಪಕ್ಷಗಳ ಪ್ರತಿಭಟನೆಯ ನಡುವೆಯೇ ಲೋಕಸಭೆ ಮಸೂದೆ ಅಂಗೀಕಾರಗೊಂಡಿದ್ದು, ಇನ್ನು ರಾಜ್ಯಸಭೆಯಲ್ಲಿ ಮಂಡಿಸಲು ತಯಾರಿ ನಡೆದಿದೆ. ಈ ಹೊಸ ಮಸೂದೆಯಲ್ಲಿ ಏನಿದೆ, ಅದರ ಮೂಲಕ ಮೋದಿ ಸರಕಾರ ಏನು ಮಾಡಲು ಹೊರಟಿದೆ ಎನ್ನುವುದನ್ನು ನೋಡುವ ಮೊದಲು, ಮನಮೋಹನ್ ಸಿಂಗ್ ತಂದಿದ್ದ ಮನರೇಗಾ ಹೇಗಿತ್ತು ಎಂಬುದನ್ನು ಒಮ್ಮೆ ಗಮನಿಸಬೇಕು.
2005ರಲ್ಲಿ ಜಾರಿಗೆ ತಂದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ, 1970ರ ದಶಕದ ಆರಂಭದಲ್ಲಿ ಮಹಾರಾಷ್ಟ್ರ ಸರಕಾರ ಮೊದಲು ಪರಿಚಯಿಸಿದ ಉದ್ಯೋಗ ಖಾತರಿ ಯೋಜನೆಯಿಂದ (ಇಜಿಎಸ್) ಪ್ರೇರಿತವಾಗಿದೆ. ತೀವ್ರ ಬರ, ಕ್ಷಾಮ ಮತ್ತು ವ್ಯಾಪಕ ಗ್ರಾಮೀಣ ಬಡತನಕ್ಕೆ ಪರಿಹಾರವಾಗಿ 1972 ಮತ್ತು 1974ರ ನಡುವೆ ಇಜಿಎಸ್ ಅನ್ನು ಪ್ರಾರಂಭಿಸಲಾಯಿತು. ಅದು, ನಿಗದಿತ ವೇತನದಲ್ಲಿ ಉದ್ಯೋಗ ಖಾತರಿಪಡಿಸುವ ಮೂಲಕ ಕೆಲಸದ ಹಕ್ಕನ್ನು ಗುರುತಿಸುವ ಭಾರತದ ಮೊದಲ ಶಾಸನಬದ್ಧ ಯೋಜನೆಯಾಗಿತ್ತು. ಅದನ್ನು ಆಧರಿಸಿ ಕಾಂಗ್ರೆಸ್ ತನ್ನ 2004ರ ಚುನಾವಣಾ ಪ್ರಣಾಳಿಕೆಯಲ್ಲಿ ರಾಷ್ಟ್ರವ್ಯಾಪಿ ಉದ್ಯೋಗ ಖಾತರಿ ಯೋಜನೆ ಬಗ್ಗೆ ಭರವಸೆ ನೀಡಿದ್ದಂತೆ, ಮನರೇಗಾ ಯೋಜನೆಯನ್ನು ಜಾರಿಗೆ ತಂದಿತು. ಇದು ದೇಶದಾದ್ಯಂತ ಉದ್ಯೋಗ ವಂಚಿತರಾಗಿ ವಲಸೆ ಹೋಗುತ್ತಿದ್ದ ಕಾರ್ಮಿಕರಿಗೆ ಗ್ರಾಮೀಣ ಭಾಗದಲ್ಲಿ ಉದ್ಯೋಗ ನೀಡಲು ಹಾಗೂ ದುಡಿಮೆಗೆ ತಕ್ಕಂತೆ ದಿನಗೂಲಿ ಕೊಡುವುದಕ್ಕೆ ತರಲಾದ ಯೋಜನೆ.
ಮನರೇಗಾ ಯೋಜನೆಯ ಮುಖ್ಯ ಉದ್ದೇಶವೇ ಗ್ರಾಮೀಣ ಪ್ರದೇಶದ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡುವುದು ಮತ್ತು ಪ್ರತೀ ಕುಟುಂಬದ ಒಬ್ಬರಿಗೆ ವರ್ಷದಲ್ಲಿ ಕನಿಷ್ಠ 100 ದಿನಗಳ ವೇತನ ಸಹಿತ ಉದ್ಯೋಗ ಖಚಿತಪಡಿಸುವುದು. ಇದು ಕೌಶಲ್ಯವಿಲ್ಲದ ಕೆಲಸಗಳಿಗೆ ಆದ್ಯತೆ ನೀಡುತ್ತದೆ ಮತ್ತು ಮಹಿಳೆಯರು, ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದ ವರ್ಗದವರಿಗೆ ಉದ್ಯೋಗ ನೀಡಿ ಅವರ ಬದುಕು ಕಟ್ಟಿಕೊಳ್ಳಲು ನೆರವಾಗುತ್ತದೆ. ದುರ್ಬಲ ವರ್ಗದವರಿಗೆ ಆದ್ಯತೆ ನೀಡುವ ಮೂಲಕ ಸಾಮಾಜಿಕ ನ್ಯಾಯದ ಉದ್ದೇಶವನ್ನು ಸಾಧಿಸುತ್ತದೆ. ಕೃಷಿ, ನೀರಾವರಿ, ರಸ್ತೆ ನಿರ್ಮಾಣ ಮುಂತಾದ ಕೆಲಸಗಳ ಮೂಲಕ ಗ್ರಾಮೀಣ ಸಂಪನ್ಮೂಲಗಳನ್ನು ಬಲಪಡಿಸುತ್ತದೆ. ಯೋಜನೆಯ ಅನುಷ್ಠಾನದಲ್ಲಿ ಗ್ರಾಮ ಪಂಚಾಯತ್‌ಗಳ ಪಾತ್ರ ಪ್ರಮುಖವಾಗಿರುತ್ತಿತ್ತು. ಈ ಯೋಜನೆ ಗ್ರಾಮೀಣ ಜನರ ಆದಾಯ ಹೆಚ್ಚಳಕ್ಕೆ ದೊಡ್ಡ ಪಾಲು ನೀಡಿತು. ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರ ಪಾಲ್ಗೊಳ್ಳುವಿಕೆ ಇರುವುದರಿಂದ ಸ್ತ್ರೀ ಸಬಲೀಕರಣವನ್ನು ಸಾಧಿಸಿತು. ಒಟ್ಟಾರೆಯಾಗಿ, ಮನರೇಗಾ ಯೋಜನೆ ಗ್ರಾಮೀಣ ಭಾರತದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೆ ದೊಡ್ಡ ಬಲವೊದಗಿಸಿತು.
ಮನರೇಗಾವನ್ನು ಹಂತಗಳಲ್ಲಿ ಜಾರಿಗೆ ತರಲಾಯಿತು: ಮೊದಲು ಫೆಬ್ರವರಿ 2, 2006ರಂದು 200 ಜಿಲ್ಲೆಗಳಲ್ಲಿ ಜಾರಿಗೊಳಿಸಲಾಯಿತು. ನಂತರ 2007ರಲ್ಲಿ ಇನ್ನೂ 130 ಜಿಲ್ಲೆಗಳಲ್ಲಿ ತರಲಾಯಿತು. ಅಂತಿಮವಾಗಿ ಎಪ್ರಿಲ್ 1, 2008ರಂದು ದೇಶಾದ್ಯಂತ ವಿಸ್ತರಿಸಲಾಯಿತು. ಮನರೇಗಾ ಆರಂಭಿಕ ವರ್ಷಗಳ ಬಗ್ಗೆ ಡೇಟಾ ಲಭ್ಯವಿಲ್ಲವಾದರೂ, ಅದರ ಅಡಿಯಲ್ಲಿನ ಉದ್ಯೋಗ ಸೃಷ್ಟಿಯ ಅಧಿಕೃತ ಅಂದಾಜುಗಳನ್ನು ಎರಡು ಸ್ವತಂತ್ರ ಸಮೀಕ್ಷೆಗಳು ಮಾಡಿವೆ. ಅವೆಂದರೆ, 68ನೇ ರಾಷ್ಟ್ರೀಯ ಮಾದರಿ ಸಮೀಕ್ಷೆ (ಎನ್‌ಎಸ್‌ಎಸ್) ಮತ್ತು ಎರಡನೇ ಭಾರತ ಮಾನವ ಅಭಿವೃದ್ಧಿ ಸಮೀಕ್ಷೆ (ಐಎಚ್‌ಡಿಎಸ್-2).
ಉದ್ಯೋಗ ಸೃಷ್ಟಿ
2008-09ರಲ್ಲಿ ಮನರೇಗಾ ಇಡೀ ದೇಶಕ್ಕೆ ವಿಸ್ತರಣೆಯಾಯಿತು. ಹೆಚ್ಚಿನ ವರ್ಷಗಳಲ್ಲಿ ಮನರೇಗಾ ಉದ್ಯೋಗ ಸೃಷ್ಟಿ 200ರಿಂದ 300 ಕೋಟಿ ಮಾನವ ದಿನಗಳ ನಡುವೆ ಇತ್ತು. ಗಮನಾರ್ಹ ಸಂಗತಿಯೆಂದರೆ, 2009-10ರಲ್ಲಿ ವಿಶ್ವಾದ್ಯಂತ ಆರ್ಥಿಕ ಬಿಕ್ಕಟ್ಟಿನ ಹೊತ್ತಲ್ಲಿ ಮತ್ತು 2020-22ರಲ್ಲಿ ಕೋವಿಡ್ ಕಾಲದಲ್ಲಿ ಮನರೇಗಾ ಅಡಿಯಲ್ಲಿ ಉದ್ಯೋಗ ಸೃಷ್ಟಿ ಹಿಂದಿನ ವರ್ಷಗಳಿಗಿಂತ ಹೆಚ್ಚಿತ್ತು. ಆದರೆ, 2014-15ರ ಒಂದೇ ವರ್ಷದಲ್ಲಿ ಉದ್ಯೋಗ ಸೃಷ್ಟಿ 200 ಕೋಟಿ ಮಾನವ ದಿನಗಳಿಗಿಂತ ಕಡಿಮೆಯಾಯಿತು. ಹಿಂದಿನ ವರ್ಷಕ್ಕೆ ಹೋಲಿಸಿದರೆ ಅದು ಶೇ. 25ರಷ್ಟು, ಅಂದರೆ 166 ಕೋಟಿ ಮಾನವ ದಿನಗಳಿಗೆ ಕುಸಿದಿತ್ತು. ಅದು ಮೋದಿ ನೇತೃತ್ವದ ಎನ್‌ಡಿಎ ಸರಕಾರದ ಮೊದಲ ವರ್ಷವಾಗಿತ್ತು. 2014-15ರ ಕುಸಿತ, ಮನರೇಗಾ ಕುರಿತ ಮೋದಿ ಸರಕಾರದ ದ್ವೇಷವನ್ನು ಸೂಚಿಸುತ್ತದೆ. ಯೋಜನೆಯನ್ನು ಆಯ್ದ ಜಿಲ್ಲೆಗಳಿಗೆ ಸೀಮಿತಗೊಳಿಸುವ ಅಲ್ಪಾವಧಿಯ ಪ್ರಯತ್ನದಲ್ಲಿಯೂ ಆ ದ್ವೇಷ ಸ್ಪಷ್ಟವಾಗಿತ್ತು. 2023-24ರಲ್ಲಿ ಮನರೇಗಾ 309 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸಿತು. ಅಂದರೆ, ಸುಮಾರು 6 ಕೋಟಿ ಕುಟುಂಬಗಳಿಗೆ ಸರಾಸರಿ 50 ದಿನಗಳ ಕೆಲಸ ಒದಗಿಸಿತ್ತು. 2023-24 ರಲ್ಲಿ ಸುಮಾರು 50 ಲಕ್ಷ ಕುಟುಂಬಗಳು ಪೂರ್ಣ 100 ದಿನಗಳ ಕೆಲಸ ಪಡೆದವು.
ಪ್ರಾದೇಶಿಕ ಉದ್ಯೋಗ ವಿತರಣೆ
ಮನರೇಗಾ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚಿನ ಪ್ರಮಾಣದ ಉದ್ಯೋಗ ಸೃಷ್ಟಿಸುತ್ತದೆ. ಆದರೆ ಉದ್ಯೋಗದ ವಿತರಣೆಯಲ್ಲಿ ತೀವ್ರ ಅಸಮಾನತೆ ಕಾಣಿಸುತ್ತದೆ. 2011-12ರಲ್ಲಿ ತಮಿಳುನಾಡು, ಆಂಧ್ರಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ ಮತ್ತು ಮಧ್ಯಪ್ರದೇಶ ಈ ಐದು ರಾಜ್ಯಗಳು ಒಟ್ಟು ಮನರೇಗಾ ಉದ್ಯೋಗಗಳಲ್ಲಿ ಅರ್ಧಕ್ಕಿಂತ ಹೆಚ್ಚನ್ನು ಪಡೆದಿದ್ದವು. 2023-24ರಲ್ಲಿ ಮಧ್ಯಪ್ರದೇಶದ ಬದಲು ಬಿಹಾರ ಆ ಐದು ರಾಜ್ಯಗಳ ಪಟ್ಟಿಯಲ್ಲಿತ್ತು ಮತ್ತು ಆ ವರ್ಷವೂ ಶೇ. 50ಕ್ಕಿಂತ ಹೆಚ್ಚು ಮನರೇಗಾ ಉದ್ಯೋಗಗಳು ಅವೇ ಐದು ರಾಜ್ಯಗಳಲ್ಲಿದ್ದವು. 2011-12 ಮತ್ತು 2023-24 ಈ ಎರಡೂ ವರ್ಷಗಳಲ್ಲಿ ಆಂಧ್ರಪ್ರದೇಶ, ಛತ್ತೀಸ್‌ಗಡ, ಹಿಮಾಚಲ ಪ್ರದೇಶ, ಕೇರಳ, ರಾಜಸ್ಥಾನ, ತಮಿಳುನಾಡು ಮತ್ತು ತೆಲಂಗಾಣ ಈ ಏಳು ರಾಜ್ಯಗಳು ತಲಾವಾರು ಆಧಾರದ ಮೇಲೆ ಹೆಚ್ಚಿನ ಮನರೇಗಾ ಉದ್ಯೋಗ ಪಡೆದಿದ್ದವು. ಈ ರಾಜ್ಯಗಳು ಮನರೇಗಾ ಅನುಷ್ಠಾನಕ್ಕೆ ಹೆಸರುವಾಸಿಯಾಗಿವೆಯಾದರೂ, 2023-24ರಲ್ಲಿ ಅತ್ಯಧಿಕ ಮಟ್ಟದ ಮನರೇಗಾ ಉದ್ಯೋಗಗಳು ಕೆಲವು ಸಣ್ಣ ಈಶಾನ್ಯ ರಾಜ್ಯಗಳು ಮತ್ತು ಲಡಾಖ್‌ನಲ್ಲಿ ಕಂಡಿವೆ. 2011-12ರಲ್ಲಿ ಬಿಹಾರ, ಗುಜರಾತ್, ಒಡಿಶಾ, ಮಹಾರಾಷ್ಟ್ರ ಮತ್ತು ಉತ್ತರ ಪ್ರದೇಶದಂತಹ ಹೆಚ್ಚಿನ ಜನಸಂಖ್ಯೆ ಹೊಂದಿರುವ ಕೆಲ ರಾಜ್ಯಗಳೂ ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಮನರೇಗಾ ಕಾರ್ಯರೂಪಕ್ಕೆ ಬರಲಿಲ್ಲ. 2023-24ರಲ್ಲಿ ಈ ಕೆಲವು ರಾಜ್ಯಗಳಲ್ಲಿ ಯೋಜನೆ ಚುರುಕುಗೊಂಡಿತಾದರೂ, ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಮನರೇಗಾ ಉದ್ಯೋಗ ಪ್ರಮಾಣ ತುಂಬಾ ಕಡಿಮೆ ಇತ್ತು. ಗುಜರಾತ್ ನಾಯಕತ್ವ ಮನರೇಗಾ ಬಗ್ಗೆ ಎಂದಿಗೂ ಹೆಚ್ಚು ಆಸಕ್ತಿ ತೋರಿಸಿಲ್ಲವಾದ್ದರಿಂದ, ಅಲ್ಲಿ ಮನರೇಗಾ ಉದ್ಯೋಗ ಕಡಿಮೆಯಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಮಹಿಳೆಯರ ಪಾಲ್ಗೊಳ್ಳುವಿಕೆ
ಆರಂಭದಿಂದಲೂ ಮನರೇಗಾ ಗ್ರಾಮೀಣ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಆಕರ್ಷಿಸಿದೆ. ಇದು ಅವರಿಗೆ ಸ್ವಂತ ಆದಾಯ ಗಳಿಸಲು ಒಂದು ಅವಕಾಶವಾಗಿದೆ. ಮನೆಯ ಹತ್ತಿರವೇ ಕೆಲಸ ಲಭ್ಯವಿರುತ್ತದೆ ಮತ್ತು ಕೆಲಸದ ವಾತಾವರಣ ಸಾಕಷ್ಟು ಸುರಕ್ಷಿತ ಮತ್ತು ಮಹಿಳೆಯರಿಗೆ ಪುರುಷರಂತೆಯೇ ವೇತನ ನೀಡಲಾಗುತ್ತದೆ. 2008-09ರಲ್ಲಿ ಯೋಜನೆಯನ್ನು ಇಡೀ ದೇಶಕ್ಕೆ ವಿಸ್ತರಿಸಿದಾಗ ರಾಷ್ಟ್ರೀಯ ಮಟ್ಟದಲ್ಲಿ ಮಹಿಳೆಯರ ಪಾಲು ಶೇ. 50ರಷ್ಟಿತ್ತು. ಮತ್ತದು ಹೆಚ್ಚುತ್ತಲೇ ಇದೆ ಎಂಬುದು ಹೌದಾದರೂ, ವೇತನ ಕಡಿತ ಅವರು ಬೇರೆಡೆಗೆ ಹೊರಳುವಂತೆ ಮಾಡಿರುವುದೂ ನಿಜ. 2011-12 ಮತ್ತು 2023-24ರಲ್ಲಿ ಹಲವಾರು ರಾಜ್ಯಗಳಲ್ಲಿ, ಮುಖ್ಯವಾಗಿ ಉತ್ತರ ಭಾರತದಲ್ಲಿ ಮಹಿಳೆಯರ ಪಾಲು ನಿಗದಿತ ಕನಿಷ್ಠ ಮೂರನೇ ಒಂದು ಭಾಗಕ್ಕಿಂತ ಕಡಿಮೆಯಿತ್ತು. 2011-12ರಲ್ಲಿ ಬಿಹಾರ, ಜಾರ್ಖಂಡ್, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಜಮ್ಮು-ಕಾಶ್ಮೀರ ಮತ್ತು ಹಲವಾರು ಈಶಾನ್ಯ ರಾಜ್ಯಗಳಲ್ಲಿ ಈ ಕನಿಷ್ಠ ಮಾನದಂಡವನ್ನು ಈವರೆಗೆ ಮುಟ್ಟಲಾಗಿಲ್ಲ. 2023-24 ರ ಹೊತ್ತಿಗೆ ಜಮ್ಮು-ಕಾಶ್ಮೀರ ಹೊರತುಪಡಿಸಿ ಎಲ್ಲಾ ರಾಜ್ಯಗಳಲ್ಲಿ ಮನರೇಗಾ ಕೆಲಸದಲ್ಲಿ ಮಹಿಳೆಯರ ಪಾಲು ಮೂರನೇ ಒಂದು ಭಾಗಕ್ಕಿಂತ ಹೆಚ್ಚಾಗಿದೆ.
ಅಂಚಿನಲ್ಲಿರುವ ಗುಂಪುಗಳ ಪಾಲ್ಗೊಳ್ಳುವಿಕೆ
2006-07ರಿಂದ 2010-11ರ ಅವಧಿಯಲ್ಲಿ ಪರಿಶಿಷ್ಟ ಪಂಗಡಗಳ ಪಾಲು ಮನರೇಗಾ ಉದ್ಯೋಗಗಳಲ್ಲಿ ಕಡಿಮೆಯಾಯಿತು. ಆದರೆ ಪರಿಶಿಷ್ಟ ಜಾತಿಗಳ ಪಾಲು ಹೆಚ್ಚಾಯಿತು. 2006ರ ಫೆಬ್ರವರಿ 2ರಂದು ಕಾಯ್ದೆ ಆರಂಭದಲ್ಲಿ ಜಾರಿಗೆ ಬಂದ 200 ಜಿಲ್ಲೆಗಳಲ್ಲಿ ಹಲವು ಜಿಲ್ಲೆಗಳು ದೊಡ್ಡ ಪ್ರಮಾಣದ ಎಸ್‌ಟಿ ಜನಸಂಖ್ಯೆಯನ್ನು ಹೊಂದಿದವಾಗಿದ್ದವು. ಯೋಜನೆ ವಿಸ್ತರಿಸಿದಂತೆ ಎಸ್‌ಟಿ ಸಮುದಾಯಗಳ ಪಾಲು ಮನರೇಗಾ ಉದ್ಯೋಗದಲ್ಲಿ ತಗ್ಗಿತು ಮತ್ತು ಎಸ್‌ಸಿಗಳ ಪಾಲು ಹೆಚ್ಚಾಯಿತು. ಆದರೆ, 2010-11ರಿಂದ 2011-12ರ ಅವಧಿಯಲ್ಲಿ ಅವೆರಡೂ ಕುಸಿದವು. 2011-12ರ ನಂತರ ಎಸ್‌ಟಿಗಳ ಪಾಲು ಸರಿಸುಮಾರಾಗಿ ಉಳಿಯಿತಾದರೂ, ಎಸ್‌ಸಿಗಳ ಪಾಲು ಸ್ವಲ್ಪ ಹೆಚ್ಚು ಕಡಿಮೆಯಾಯಿತು. ಇದಕ್ಕೆ ಯಾವುದೇ ಸಮರ್ಥನೀಯ ಕಾರಣಗಳು ತಿಳಿಯುತ್ತಿಲ್ಲ ಎಂದು ಸಮೀಕ್ಷೆಗಳು ಹೇಳುತ್ತವೆ. ಈ ಕುಸಿತದ ಹೊರತಾಗಿಯೂ, 2023-24ರಲ್ಲಿ ಮನರೇಗಾ ಉದ್ಯೋಗಗಳಲ್ಲಿ ಎಸ್‌ಸಿ ಮತ್ತು ಎಸ್‌ಟಿಗಳ ಒಟ್ಟು ಪಾಲು ಶೇ. 37ರಷ್ಟಿದೆ.