×
Ad

ಬಾಂಗ್ಲಾದೇಶ ಮಿಲಿಟರಿ ದಂಗೆಗಳೆಷ್ಟು? ಸರ್ವಾಧಿಕಾರಿಗಳೆಷ್ಟು ?

ಭಾಗ - 2

Update: 2025-12-31 10:43 IST

1981ರಲ್ಲಿ ನಡೆದ ಚುನಾವಣೆ ಬಳಿಕ ಉಪಾಧ್ಯಕ್ಷ ಅಬುಸ್ಸತ್ತಾರ್ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಆದರೆ ಅವರ ಅನಾರೋಗ್ಯದ ಕಾರಣದಿಂದಾಗಿ ನಿಜವಾದ ಅಧಿಕಾರ ಲೆಫ್ಟಿನೆಂಟ್ ಜನರಲ್ ಹುಸೇನ್ ಮುಹಮ್ಮದ್ ಇರ್ಷಾದ್ ಮತ್ತು ರಾಷ್ಟ್ರೀಯ ಭದ್ರತಾ ಮಂಡಳಿ ಕೈಯಲ್ಲಿತ್ತು. 1982ರ ಮಾರ್ಚ್ 24ರಂದು ಅವರನ್ನು ಪದಚ್ಯುತಗೊಳಿಸಿ ಇರ್ಷಾದ್ ಸತ್ತಾರ್ ಮುಖ್ಯ ಸಮರ ಕಾನೂನು ಆಡಳಿತಗಾರರಾಗಿ ಅಧಿಕಾರ ವಹಿಸಿಕೊಂಡರು. 1983ರ ಡಿಸೆಂಬರ್‌ನಲ್ಲಿ ಅಧ್ಯಕ್ಷ ಹುದ್ದೆಯನ್ನು ವಹಿಸಿಕೊಂಡ ಅವರು, ತಮ್ಮದೇ ಆದ ರಾಷ್ಟ್ರೀಯ ಪಕ್ಷ ಸ್ಥಾಪಿಸಿ, 1986ರ ಚುನಾವಣೆಯಲ್ಲಿ ಅನೇಕ ವಿರೋಧ ಪಕ್ಷಗಳನ್ನು ಹೊರಗಿರಿಸಿ, ಹೆಚ್ಚಿನ ಸ್ಥಾನಗಳನ್ನು ಗೆದ್ದರು. ಇರ್ಷಾದ್ ಆ ವರ್ಷದ ಕೊನೆಯಲ್ಲಿ ಸಮರ ಕಾನೂನನ್ನು ಹಿಂದೆಗೆದುಕೊಂಡರು ಮತ್ತು ಅಕ್ಟೋಬರ್‌ನಲ್ಲಿ ಅಧ್ಯಕ್ಷೀಯ ಚುನಾವಣೆಗೆ ಕರೆ ನೀಡಿದರು. ಪ್ರಮುಖ ವಿರೋಧ ಪಕ್ಷಗಳಾದ, ಮುಜೀಬ್ ಅವರ ಪುತ್ರಿ ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಮತ್ತು ಹತ್ಯೆಗೀಡಾದ ಅಧ್ಯಕ್ಷ ಝಿಯಾವುರ್ ರಹಮಾನ್ ಅವರ ಪತ್ನಿ ಖಾಲಿದಾ ಝಿಯಾ ನೇತೃತ್ವದ ಬಿಎನ್‌ಪಿ ಚುನಾವಣೆಯನ್ನು ಬಹಿಷ್ಕರಿಸಿದವು ಮತ್ತು ಇರ್ಷಾದ್ ಬಹುಮತ ಪಡೆದರು. 1980ರ ದಶಕದ ಉತ್ತರಾರ್ಧದಲ್ಲಿ ದೇಶದ ಆರ್ಥಿಕತೆ ಕಳಪೆ ಸ್ಥಿತಿ ಮುಟ್ಟಿ, ಇರ್ಷಾದ್ ಮೇಲೆ ಹೆಚ್ಚಿನ ಒತ್ತಡ ತಂದಿತು. 1990 ರ ಡಿಸೆಂಬರ್‌ನಲ್ಲಿ ವಾರಗಳ ಕಾಲ ನಡೆದ ಹಿಂಸಾತ್ಮಕ ಸರಕಾರಿ ವಿರೋಧಿ ಪ್ರತಿಭಟನೆಗಳ ಬಳಿಕ ಅವರು ಹುದ್ದೆಯಿಂದಿಳಿಯಲು ಒಪ್ಪಿಕೊಂಡರು. ಮುಖ್ಯ ನ್ಯಾಯಮೂರ್ತಿ ಶಹಬುದ್ದೀನ್ ಅಹ್ಮದ್ ನೇತೃತ್ವದ ಉಸ್ತುವಾರಿ ಸರಕಾರವನ್ನು ವಿರೋಧ ಪಕ್ಷಗಳು ಆಯ್ಕೆ ಮಾಡಿದವು.

ಕೇವಲ ಎರಡು ತಿಂಗಳ ನಂತರ ನಡೆದ ಸಂಸತ್ತಿನ ಚುನಾವಣೆಯಲ್ಲಿ ಬಿಎನ್‌ಪಿ ಏಕೈಕ ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು ಮತ್ತು ಖಾಲಿದಾ ಝಿಯಾ 1991ರಲ್ಲಿ ದೇಶದ ಮೊದಲ ಮಹಿಳಾ ಪ್ರಧಾನಿಯಾದರು. ಖಾಲಿದಾ ಅವರ ಸಾಧನೆಗಳಲ್ಲಿ, ಅಧ್ಯಕ್ಷೀಯ ಸ್ವರೂಪಕ್ಕೆ ವಿರುದ್ಧವಾಗಿ ಸಂಸದೀಯ ಸರಕಾರದ ಸಾಂವಿಧಾನಿಕ ತಿದ್ದುಪಡಿ ಮತ್ತು ಆರ್ಥಿಕ, ಶೈಕ್ಷಣಿಕ ಸುಧಾರಣೆಗಳು ಮುಖ್ಯವಾಗಿವೆ. ಆದರೂ, ಅವಾಮಿ ಲೀಗ್ ಮತ್ತಿತರ ವಿರೋಧ ಪಕ್ಷಗಳು ನಿರಂತರ ಅಡಚಣೆಯಾಗಿದ್ದವು. 1996ರ ಫೆಬ್ರವರಿಯಲ್ಲಿ ನಡೆದ ಚುನಾವಣೆಯಲ್ಲಿ ಬಿಎನ್‌ಪಿ ಭಾರೀ ಜಯ ಸಾಧಿಸಿದರೂ, ಅದು ಒಂದು ಪೊಳ್ಳು ವಿಜಯವೆನ್ನಲಾಯಿತು. ಅಂತಿಮವಾಗಿ ಸಾರ್ವಜನಿಕ ಒತ್ತಡಕ್ಕೆ ಮಣಿದ ಖಾಲಿದಾ, ಸುಮಾರು ಆರು ವಾರಗಳ ನಂತರ ಉಸ್ತುವಾರಿ ಸರಕಾರವನ್ನು ಬೆಂಬಲಿಸಿ ರಾಜೀನಾಮೆ ನೀಡಿದರು.

1996ರ ಜೂನ್‌ನಲ್ಲಿ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಅಧಿಕಾರಕ್ಕೆ ಬಂತು ಮತ್ತು ಮುಜೀಬ್ ಅವರ ಮಗಳು ಶೇಕ್ ಹಸೀನಾ ಪ್ರಧಾನಿಯಾದರು. ಹಸೀನಾ ಅವಧಿಯಲ್ಲಿ ರಾಜಕೀಯ ಪರಿಸ್ಥಿತಿ ಹೆಚ್ಚು ಸುಧಾರಿಸಲಿಲ್ಲ. ಬಿಎನ್‌ಪಿ ಸತತವಾಗಿ ಸಂಸತ್ತನ್ನು ಬಹಿಷ್ಕರಿಸುತ್ತಿತ್ತು. ಪ್ರಭುತ್ವ ವಿರೋಧಿ ಪ್ರತಿಭಟನೆಗಳು ಸಾಮಾನ್ಯವಾಗಿದ್ದವು. ಕಡೆಗೆ 2001ರಲ್ಲಿ ಖಾಲಿದಾ ಝಿಯಾ ಮತ್ತೆ ಅಧಿಕಾರಕ್ಕೆ ಬಂದರು. ಅವರ ಬಿಎನ್‌ಪಿ ಮತ್ತು ಮಿತ್ರಪಕ್ಷಗಳು ದೊಡ್ಡ ಮಟ್ಟದ ಗೆಲುವು ಸಾಧಿಸಿದ್ದವು. 2006ರ ಕೊನೆಯಲ್ಲಿ ಅವರು ಪ್ರಧಾನಿ ಹುದ್ದೆಯಿಂದ ಕೆಳಗಿಳಿದರು. ಮುಂದಿನ ವರ್ಷದ ಆರಂಭದಲ್ಲಿ ಚುನಾವಣೆಗಳು ನಡೆಯುವವರೆಗೆ ಅಧಿಕಾರವನ್ನು ಉಸ್ತುವಾರಿ ಸರಕಾರಕ್ಕೆ ವಹಿಸಿದರು. ಆದರೂ, ಬಿಎನ್‌ಪಿ ಮತ್ತು ಅವಾಮಿ ಲೀಗ್ ನಡುವಿನ ಅಶಾಂತಿಯ ಪರಿಣಾಮವಾಗಿ ಮಧ್ಯಂತರ ಸರಕಾರದ ಮುಖ್ಯಸ್ಥರನ್ನು ಚುನಾವಣೆಗೂ ಮೊದಲೇ ಕೆಳಗಿಳಿಸಲಾಯಿತು. ತುರ್ತು ಪರಿಸ್ಥಿತಿ ಘೋಷಿಸಲಾಯಿತು ಮತ್ತು ಚುನಾವಣೆ ರದ್ದುಗೊಳಿಸಲಾಯಿತು. ಹೊಸ ಉಸ್ತುವಾರಿ ಸರಕಾರ 2008 ರ ಅಂತ್ಯದಲ್ಲಿ ನಿಗದಿಯಾಗಿದ್ದ ಚುನಾವಣೆಗಳನ್ನು ನಡೆಸುವ ಮೊದಲು ದೇಶವನ್ನು ಭ್ರಷ್ಟಾಚಾರದಿಂದ ಮುಕ್ತಗೊಳಿಸಲು ಮುಂದಾಯಿತು.

ಈ ನಡುವೆ, ಖಾಲಿದಾ ಮತ್ತು ಹಸೀನಾ ನಡುವೆ ನಡೆಯುತ್ತಿದ್ದ ರಾಜಕೀಯ ಸಂಘರ್ಷ ದೇಶದ ಸ್ಥಿರತೆಗೆ ಅಡ್ಡಿಯಾಗಿದೆ ಎಂದು ಭಾವಿಸಿದ ಸರಕಾರ 2007ರಲ್ಲಿ ಇಬ್ಬರನ್ನೂ ಬಂಧಿಸಿತ್ತು. ಭ್ರಷ್ಟಾಚಾರದ ಆರೋಪದ ಮೇಲೆ ಖಾಲಿದಾ ಮತ್ತು ಸುಲಿಗೆ ಆರೋಪದ ಮೇಲೆ ಹಸೀನಾ ಅವರನ್ನು ಜೈಲಿಗೆ ಅಟ್ಟಿ, ಬಳಿಕ 2008ರಲ್ಲಿ ಬಿಡುಗಡೆ ಮಾಡಲಾಯಿತು. 2008ರ ಡಿಸೆಂಬರ್ ನಲ್ಲಿ ನಡೆದ ಚುನಾವಣೆಯಲ್ಲಿ ಅವಾಮಿ ಲೀಗ್ ಮೇಲುಗೈ ಸಾಧಿಸಿತು ಮತ್ತು 2009ರ ಜನವರಿಯಲ್ಲಿ ಹಸೀನಾ ಮತ್ತೆ ಪ್ರಧಾನಿಯಾದರು. 2014ರ ಜನವರಿಯಲ್ಲಿ ನಡೆದ ಚುನಾವಣೆ ಬಾಂಗ್ಲಾದೇಶದ ಪ್ರಜಾಪ್ರಭುತ್ವಕ್ಕೆ ದೊಡ್ಡ ಹಿನ್ನಡೆ ಉಂಟುಮಾಡಿತು. ಬಿಎನ್‌ಪಿ ಮತದಾನ ನಿಗ್ರಹಿಸಲು ಅಭಿಯಾನ ನಡೆಸಿತ್ತು. ಸರಾಸರಿ ಮತದಾನ ಅರ್ಧಕ್ಕಿಂತ ಸ್ವಲ್ಪ ಹೆಚ್ಚಿತ್ತು. ರಾಜಧಾನಿ ಢಾಕಾದಲ್ಲಿ, ಮತದಾನ ಪ್ರಮಾಣ ಕಾಲುಭಾಗಕ್ಕಿಂತ ಕಡಿಮೆ ಇತ್ತು. ಹಿಂದಿನ ಚುನಾವಣೆಗಳಲ್ಲಿ ಮತದಾನ ಸಾಮಾನ್ಯವಾಗಿ 80 ಪ್ರತಿಶತಕ್ಕಿಂತ ಹೆಚ್ಚಿತ್ತು. 2018ರ ಡಿಸೆಂಬರ್‌ನಲ್ಲಿನ ಚುನಾವಣೆಯಲ್ಲಿ ಬಿಎನ್‌ಪಿಯನ್ನು ಮುನ್ನಡೆಸಲು ಖಾಲಿದಾ ಅವರನ್ನು ಅನರ್ಹಗೊಳಿಸಲಾಯಿತು ಮತ್ತು ಪಕ್ಷದ ಅನೇಕ ಅಭ್ಯರ್ಥಿಗಳನ್ನು ಜೈಲಿಗೆ ಹಾಕಲಾಯಿತು, ಅನರ್ಹಗೊಳಿಸಲಾಯಿತು ಅಥವಾ ಹಲ್ಲೆ ಮಾಡಲಾಯಿತು. ಚುನಾವಣೆಗೆ ಮುನ್ನ 10 ಸಾವಿರಕ್ಕೂ ಹೆಚ್ಚು ಬೆಂಬಲಿಗರನ್ನು ಜೈಲಿಗೆ ಹಾಕಲಾಯಿತು. ಅವಾಮಿ ಲೀಗ್ ಭರ್ಜರಿ ಜಯ ಸಾಧಿಸಿತು. ಚುನಾವಣೆಯಲ್ಲಿ ಅಕ್ರಮವೆಸಗಿದ ಆರೋಪಗಳನ್ನು ಹಸೀನಾ ನಿರಾಕರಿಸಿದರು. ನಾಯಕತ್ವದ ಕೊರತೆಯೇ ಬಿಎನ್‌ಪಿ ಸೋಲಿಗೆ ಕಾರಣ ಎಂದರು.

2018ರ ಚುನಾವಣೆಯ ನಂತರ ಕಠಿಣ ಪೊಲೀಸ್ ವ್ಯವಸ್ಥೆಯಿಂದಾಗಿ ದೇಶ ನಾಲ್ಕು ವರ್ಷಗಳ ರಾಜಕೀಯ ಮೌನಕ್ಕೆ ಸಾಕ್ಷಿಯಾಯಿತು. ಆ ಸಮಯದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿತ್ತು. 2022ರಲ್ಲಿ ಬಿಎನ್‌ಪಿ ಮತ್ತು ಜಮಾಅತೆ ಇಸ್ಲಾಮಿ ಹೆಚ್ಚುತ್ತಿರುವ ಹಣದುಬ್ಬರ ಬಿಕ್ಕಟ್ಟು ಮತ್ತು ಭ್ರಷ್ಟಾಚಾರದ ಬಗ್ಗೆ ಅವಾಮಿ ಲೀಗ್ ಸರಕಾರವನ್ನು ಟೀಕಿಸಲು ಪ್ರಾರಂಭಿಸಿದವು. ಬೃಹತ್ ಪ್ರತಿಭಟನೆಗಳು ನಡೆದವು. ಕಟ್ಟುನಿಟ್ಟಿನ ಪೊಲೀಸ್ ವ್ಯವಸ್ಥೆಯಿಂದಾಗಿ ಪ್ರತಿಭಟನೆಗಳು ಅಕಾಲಿಕವಾಗಿ ಕೊನೆಗೊಂಡವು. ಹಿಂಸಾಚಾರದಿಂದ ಕೂಡಿದ್ದ 2014 ಮತ್ತು 2018ರ ಚುನಾವಣೆಗಳಿಗಿಂತ ಭಿನ್ನವಾಗಿ 2024ರ ಜನವರಿಯಲ್ಲಿನ ಚುನಾವಣೆ ಶಾಂತಿಯುತವಾಗಿತ್ತು ಮತ್ತು ಅವಾಮಿ ಲೀಗ್ ಪುನಃ ಗೆದ್ದಿತು. ಶೇಕ್ ಹಸೀನಾ ನೇತೃತ್ವದ ಅವಾಮಿ ಲೀಗ್ ಸತತ ನಾಲ್ಕನೇ ಬಾರಿಗೆ ಅಧಿಕಾರ ಪಡೆಯಿತು. ಸರಕಾರದ ಹೆಚ್ಚುತ್ತಿದ್ದ ಸರ್ವಾಧಿಕಾರದ ವಿರುದ್ಧ ವಿದ್ಯಾರ್ಥಿಗಳ ನೇತೃತ್ವದಲ್ಲಿ ಶುರುವಾದ ದೊಡ್ಡ ಪ್ರಮಾಣದ ಪ್ರತಿಭಟನೆ ಕಡೆಗೆ 2024ರ ಜುಲೈ ಮತ್ತು ಆಗಸ್ಟ್‌ನಲ್ಲಿ ದಂಗೆಯ ಸ್ವರೂಪ ಪಡೆಯಿತು. ಸರಕಾರದ ಆದೇಶದಂತೆ ಪ್ರತಿಭಟನಾಕಾರರ ಮೇಲೆ ಕ್ರೂರ ದಾಳಿಗಳು ನಡೆದವು. ಪ್ರತಿಭಟನೆ ದೇಶಾದ್ಯಂತ ವಿಸ್ತರಿಸಿ, ಸಾವಿರಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಕಡೆಗೆ 2024ರ ಆಗಸ್ಟ್ 5ರಂದು ಶೇಕ್‌ಹಸೀನಾ ಪದಚ್ಯುತರಾಗಿ, ಅದೇ ದಿನ ಭಾರತಕ್ಕೆ ಪಲಾಯನ ಮಾಡಿದರು. ಅದೇ ದಿನ ಸಂಜೆ 4 ಗಂಟೆಗೆ ಸೇನಾ ಮುಖ್ಯಸ್ಥ ವಕಾರುಝ್ಝಮಾನ್ ದೇಶವನ್ನುದ್ದೇಶಿಸಿ ಭಾಷಣ ಮಾಡಿ, ಕೆಲವೇ ದಿನಗಳಲ್ಲಿ ಮಧ್ಯಂತರ ಸರಕಾರ ರಚನೆಯಾಗಲಿದೆ ಎಂಬ ಭರವಸೆ ನೀಡಿದರು. ನೊಬೆಲ್ ಪ್ರಶಸ್ತಿ ವಿಜೇತ ಮುಹಮ್ಮದ್ ಯೂನುಸ್ ನೇತೃತ್ವದ ಮಧ್ಯಂತರ ಸರಕಾರ 2024ರ ಆಗಸ್ಟ್ 8 ರಂದು ಅಧಿಕಾರ ವಹಿಸಿಕೊಂಡಿತು. ಶೇಕ್ ಹಸೀನಾ ಪದಚ್ಯುತಿಗೆ ಕಾರಣವಾದ ವಿದ್ಯಾರ್ಥಿ ಚಳವಳಿಯ ನಾಯಕ ಷರೀಫ್ ಉಸ್ಮಾನ್ ಹಾದಿ ಹತ್ಯೆಯೊಂದಿಗೆ ಈಗ ಬಾಂಗ್ಲಾ ರಾಜಕೀಯದಲ್ಲಿ ಪ್ರಕ್ಷುಬ್ಧತೆ ತಲೆದೋರಿದೆ. ಈಗಾಗಲೇ ಘೋಷಣೆಯಾಗಿರುವಂತೆ, ಚುನಾವಣೆಗೆ ಇನ್ನು ಹೆಚ್ಚು ದಿನಗಳಿಲ್ಲ.

ಈ ಸುಮಾರು ಐದೂವರೆ ದಶಕಗಳ ಅವಧಿಯಲ್ಲಿ, ಬಾಂಗ್ಲಾದೇಶದ ಪ್ರಜಾಪ್ರಭುತ್ವ ಹಿನ್ನಡೆಯನ್ನೇ ಕಂಡಿದೆ. ಯಾರೇ ಅಧಿಕಾರದಲ್ಲಿದ್ದರೂ ಬಾಂಗ್ಲಾವು ಮಾದರಿ ಉದಾರ ಪ್ರಜಾಪ್ರಭುತ್ವವಾಗಿ ಜಗತ್ತಿಗೆ ಕಂಡದ್ದು ತೀರಾ ವಿರಳ. ಈ ನಡುವೆ, ಮುಹಮ್ಮದ್ ಯೂನುಸ್ ಅವರನ್ನು ಪ್ರಜಾಪ್ರಭುತ್ವದ ಸಂರಕ್ಷಕ ಎಂಬಂತೆ ನೋಡಲಾಗುತ್ತಿರುವುದು, ಶೇಕ್ ಹಸೀನಾ ವಿರುದ್ಧದ ಆಕ್ರೋಶದ ಪರಿಣಾಮವಾಗಿ ಮೂಡಿದ ಅತಿರೇಕ ಎಂಬ ವಿಮರ್ಶೆಗಳೂ ಇವೆ. ವಿಶ್ಲೇಷಣೆಗಳ ಪ್ರಕಾರ, ಪ್ರಸ್ತುತ ಅವ್ಯವಸ್ಥೆಯ ಎರಡು ಸ್ಪಷ್ಟ ಫಲಾನುಭವಿಗಳೆಂದರೆ, ಜಮಾಅತೆ ಇಸ್ಲಾಮಿ ನೇತೃತ್ವದ ಬಲಪಂಥೀಯ ಇಸ್ಲಾಮಿಸ್ಟ್ ಶಕ್ತಿಗಳು ಮತ್ತು ಪಾಕಿಸ್ತಾನ. ರಾಜಕೀಯ ಅನಿಶ್ಚಿತತೆ ಮತ್ತು ದುರ್ಬಲಗೊಳ್ಳುತ್ತಿರುವ ಬಾಂಗ್ಲಾದ ಸನ್ನಿವೇಶವನ್ನು ಅವೆರಡೂ ಬಂಡವಾಳ ಮಾಡಿಕೊಂಡಿವೆ. ಪ್ರಮುಖ ಸೋಲು ಕಂಡವರು ಸಾಮಾನ್ಯ ಬಾಂಗ್ಲಾದೇಶಿಯರು, ಅದರಲ್ಲೂ ಯುವಕರು. ಅವರನ್ನು ಭಾವನಾತ್ಮಕ ನಿರೂಪಣೆಗಳು, ಅವಾಸ್ತವಿಕ ಭರವಸೆಗಳು ಮತ್ತು ಬಾಹ್ಯ ಶತ್ರುಗಳ ಬಗೆಗೆ ಭೀತಿ ಹುಟ್ಟಿಸುವ ಮೂಲಕ ಖೆಡ್ಡಾಕ್ಕೆ ಕೆಡವಲಾಗುತ್ತಿದೆ. ಭಾರತ ವಿರೋಧಿ ಭಾವನೆಯನ್ನು ಹರಡಲಾಗುತ್ತಿರುವುದು ಸ್ಪಷ್ಟವಾಗಿ ರಾಜಕೀಯ ಕುಶಲತೆಯಾಗಿದೆ.

ದೇಶ ರಚನೆಯಾಗುವಲ್ಲಿನ ಭಾರತದ ಪಾತ್ರವನ್ನೇ ಮರೆತಂಥ ನಡೆ ಇವತ್ತು ಬಾಂಗ್ಲಾ ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸಿಕೊಳ್ಳುತ್ತಿದೆ. ಈ ಪ್ರಕ್ಷುಬ್ಧತೆಯ ಹಿಂದೆ ಕೇವಲ ಆಂತರಿಕ ಕಲಹವಲ್ಲದೆ, ದಕ್ಷಿಣ ಏಶ್ಯದಲ್ಲಿ ಹಿಡಿತ ಸಾಧಿಸಲು ಅಮೆರಿಕ ಮತ್ತು ಚೀನಾಗಳ ನಡುವಿನ ಶೀತಲ ಸಮರದ ಛಾಯೆಯೂ ಇದೆ ಎಂಬುದು ಗಮನಿಸಬೇಕಾದ ಅಂಶ. ಕಳೆದ ಹಲವು ತಿಂಗಳುಗಳಲ್ಲಿ ಇಸ್ಲಾಮಿಸ್ಟ್ ಪ್ರಭಾವ ಸದ್ದಿಲ್ಲದೆ ಆವರಿಸಿದೆ ಮತ್ತು ಪ್ರಮುಖ ಸಂಸ್ಥೆಗಳ ಒಳಗೆ ಅದು ನುಸುಳಿಕೊಂಡಿದೆ. ಸರಕಾರದೊಳಗೆ ಹುದುಗಿಕೊಂಡೇ ಆಟವಾಡುತ್ತಿದೆ. ಮಾಧ್ಯಮಗಳು ಭಯ ಮತ್ತು ಬೆದರಿಕೆಯ ನಡುವೆ ವಿರೋಧಿ ನಿಲುವು ತೋರಿಸದೆ ಹೆಚ್ಚು ಜಾಗರೂಕವಾಗಿರುವಂತೆ ಕಾಣುತ್ತಿದೆ. ಈ ಸಂದರ್ಭದಲ್ಲಿ, ಯೂನುಸ್ ಮತ್ತವರ ಸಲಹೆಗಾರರನ್ನು ತಟಸ್ಥ ಸುಧಾರಕರೆಂದು ನೋಡದೆ, ಈಗಿನ ಅಸ್ತವ್ಯಸ್ತತೆಯ ಭಾಗೀದಾರರು ಎಂದು ನೋಡಲಾಗುತ್ತಿದೆ.

2026ರ ಫೆಬ್ರವರಿಯಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಲಿದ್ದು, ವಿದ್ಯಾರ್ಥಿ ಕಾರ್ಯಕರ್ತರು ಮತ್ತು ಬಾಂಗ್ಲಾದೇಶದ ಅತಿದೊಡ್ಡ ಇಸ್ಲಾಮಿಸ್ಟ್ ಪಕ್ಷವಾದ ಬಾಂಗ್ಲಾದೇಶ ಜಮಾಅತೆ ಇಸ್ಲಾಮಿ (ಜೆಇಐ) ಬಾಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ ಮತ್ತು ಅವಾಮಿ ಲೀಗ್ ಅನ್ನು ಹಿಂದಿಕ್ಕಬಹುದು ಎನ್ನಲಾಗುತ್ತಿದೆ. ವಿದ್ಯಾರ್ಥಿ ಸಲಹೆಗಾರರು ಮತ್ತು ಜೆಇಐ, ಮಧ್ಯಂತರ ಸರಕಾರಕ್ಕೆ ಆರಂಭದಿಂದಲೂ ಬೆಂಬಲ ನೀಡಿದ್ದು, ಪ್ರಸ್ತುತ ವ್ಯವಸ್ಥೆಯ ಲಾಭ ಪಡೆಯಲು ಎಲ್ಲವನ್ನೂ ಯೋಜಿಸಿರುವುದು ಸ್ಪಷ್ಟ. ಹಾಗಾಗಿ, ಅವಾಮಿ ಲೀಗ್ ಮತ್ತು ಬಿಎನ್‌ಪಿಗಳೇ ಇದ್ದ ಹಳೆಯ ದ್ವಿಪಕ್ಷೀಯ ವ್ಯವಸ್ಥೆಗೆ ಇದು ದೊಡ್ಡ ಸವಾಲು. ಸರಕಾರ ದುರ್ಬಲವಾಗಿದೆ, ಸಂಸ್ಥೆಗಳು ರಾಜಿಯಾಗಿವೆ ಮತ್ತು ರಾಜಕೀಯ ನಂಬಿಕೆ ಕಡಿಮೆಯಾಗಿದೆ. 17 ವರ್ಷಗಳ ದೇಶಭ್ರಷ್ಟತೆಯ ನಂತರ ಬಿಎನ್‌ಪಿ ನಾಯಕ ತಾರೀಕ್ ರಹಮಾನ್ ಅವರ ನಿರೀಕ್ಷಿತ ಮರಳುವಿಕೆ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಬಹುದು.

ಬಾಂಗ್ಲಾದೇಶದಲ್ಲಿ ಹೊರಹೊಮ್ಮುವ ಯಾವುದೇ ಕಾನೂನುಬದ್ಧ ರಾಜಕೀಯ ಸರಕಾರದೊಂದಿಗೆ ತೊಡಗಿಸಿಕೊಳ್ಳಲು ತಾನು ತಯಾರಿರುವುದನ್ನು ಭಾರತ ಸೂಚಿಸಿದೆ. ಅದೇ ಸಮಯದಲ್ಲಿ, ಅಸ್ಥಿರತೆಯನ್ನು ಹೆಚ್ಚಿಸುವಲ್ಲಿ ಪಾಕಿಸ್ತಾನದ ಪಾತ್ರದ ಬಗ್ಗೆ ಹೊಸದಿಲ್ಲಿಗೆ ಚೆನ್ನಾಗಿ ತಿಳಿದಿದೆ. ಬಾಂಗ್ಲಾದ ಅಸ್ಥಿರತೆ ಭಾರತಕ್ಕೆ ಕೇವಲ ನೆರೆಹೊರೆಯ ಸಮಸ್ಯೆಯಲ್ಲ, ಇದು ಭಾರತದ ಆಂತರಿಕ ಭದ್ರತೆಯ ಮೇಲೂ ನೇರ ಪರಿಣಾಮ ಬೀರುವ ಆತಂಕಕಾರಿ ಬೆಳವಣಿಗೆ. ಢಾಕಾ ಸಹಕಾರಿ ಸಂಬಂಧಗಳನ್ನು ಬಯಸುವ ಸರಕಾರವನ್ನು ರಚಿಸಿದರೆ, ಭಾರತ ಅದನ್ನು ನಿರಾಕರಿಸುವ ಸಾಧ್ಯತೆಯಿಲ್ಲ. ಆದರೆ ಪಾಕಿಸ್ತಾನದೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಅಥವಾ ಅಲ್ಪಸಂಖ್ಯಾತರ ಮೇಲಿನ ದಾಳಿಗಳನ್ನು ಸಹಿಸಿಕೊಳ್ಳುವ ಮೂಲಕ ಸ್ವಾಯತ್ತೆ ಪ್ರತಿಪಾದಿಸುವ ಪ್ರಯತ್ನಗಳು ಭಾರತದ ಹಿತಾಸಕ್ತಿಗಳಿಗಿಂತ ಬಾಂಗ್ಲಾದೇಶದ ಸ್ಥಿರತೆಗೆ ಅಪಾಯವನ್ನುಂಟುಮಾಡಬಹುದು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News