×
Ad

‘ಮನರೇಗಾ’ದ ಜನಪರತೆಯನ್ನು ‘ವಿಬಿ-ಜಿ ರಾಮ್ ಜಿ’ಯಿಂದ ನಿರೀಕ್ಷಿಸಲು ಸಾಧ್ಯವೇ?

Update: 2025-12-24 15:08 IST

ಭಾಗ - 2

ವೇತನ ಪಾವತಿ

ಮನರೇಗಾ ಕಾಯ್ದೆಯಡಿಯಲ್ಲಿ ಕಾರ್ಮಿಕರು 14 ದಿನಗಳಲ್ಲಿ ಪಾವತಿಗೆ ಅರ್ಹರಾಗಿರುತ್ತಾರೆ. ಆದರೂ, 20 ವರ್ಷಗಳ ನಂತರ ಈ ಹಕ್ಕೂ ಅಸ್ಪಷ್ಟವಾಗಿಯೇ ಉಳಿದಿದೆ. ಅದು ವಿಳಂಬವಾದ ಸಂದರ್ಭವೇ ಹೆಚ್ಚು. ವಿಳಂಬಿತ ಪಾವತಿಗಳ ಪ್ರಮಾಣ ಬಿಹಾರದಲ್ಲಿ ಶೇ. 19ರಿಂದ ಪಶ್ಚಿಮ ಬಂಗಾಳದಲ್ಲಿ ಶೇ. 80ರ ವರೆಗೆ ಇದೆ. ಈ ವ್ಯತಿರಿಕ್ತತೆಗಳಿಗೆ ಯಾವುದೇ ಸ್ಪಷ್ಟ ಕಾರಣವಿಲ್ಲವಾದರೂ, ಕೆಲವೊಮ್ಮೆ ರಾಜಕೀಯ ಪಕ್ಷಪಾತ ನಡೆಯುತ್ತದೆ. ಉದಾಹರಣೆಗೆ, ಬಿಜೆಪಿ ಅಧಿಕಾರದಲ್ಲಿರುವ ಬಿಹಾರದಲ್ಲಿ ವೇತನ ಪಾವತಿಯಾಗುತ್ತಿದ್ದರೂ, ವಿಪಕ್ಷ ಅಧಿಕಾರದಲ್ಲಿರುವ ಪಶ್ಚಿಮ ಬಂಗಾಳಕ್ಕೆ ವೇತನ ಪಾವತಿಯನ್ನು ಕೇಂದ್ರ ಸರಕಾರ ತಡೆಹಿಡಿಯುತ್ತದೆ.

ಇದೇನೇ ಇದ್ದರೂ, ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಕಾರ್ಯಸಾಧ್ಯತೆ ಮತ್ತು ಸುಸ್ಥಿರತೆಯನ್ನು ಮನರೇಗಾ ತೋರಿಸಿದೆ ಎಂಬುದು ನಿಜ. ಆದರೆ ಈಗ ಅಂಥ ಮಹತ್ವದ ಯೋಜನೆಗೇ ಕೊನೆ ಹಾಡಿದಂತಾಗಿದೆ. ಮನರೇಗಾವನ್ನು ಈಗ ವಿಬಿ-ಜಿ ರಾಮ್ ಜಿ ಎಂದು ಬದಲಿಸಲಾಗಿರುವಾಗ, ಇದು ಹಿಂದಿನ ಯೋಜನೆಗಿಂತ ಹೇಗೆ ಭಿನ್ನವಾಗಿದೆ ಎಂಬುದನ್ನು ನೋಡಬೇಕು.

ಹೊಸ ಮಸೂದೆ ಪ್ರಸ್ತಾವಿಸಿರುವ ಪ್ರಮುಖ ಬದಲಾವಣೆಗಳೆಂದರೆ, ಮೊದಲನೆಯದಾಗಿ, ಉದ್ಯೋಗ ಖಾತರಿ ದಿನಗಳನ್ನು 100ರಿಂದ 125ಕ್ಕೆ ಹೆಚ್ಚಿಸಲಾಗಿದೆ. ಆದರೆ ಆ ಕೆಲಸದ ಕೋಟಾವನ್ನು ಖಾಲಿ ಮಾಡುವ ಕುಟುಂಬಗಳ ಸಂಖ್ಯೆ ಬಹಳ ಸೀಮಿತವಾಗಿದೆ. ಉದಾಹರಣೆಗೆ, 2024-25ರಲ್ಲಿ ಪ್ರತೀ ಮನೆಗೆ ಸರಾಸರಿ ಉದ್ಯೋಗ ದಿನಗಳ ಸಂಖ್ಯೆ ಕೇವಲ 50 ಆಗಿತ್ತು. ವಾಸ್ತವವಾಗಿ, ಕಳೆದ ಹಣಕಾಸು ವರ್ಷದಲ್ಲಿ 100 ದಿನಗಳನ್ನು ಪೂರ್ಣಗೊಳಿಸಿದ ಕುಟುಂಬಗಳ ಸಂಖ್ಯೆ 40.70 ಲಕ್ಷ. ಈ ಹಣಕಾಸು ವರ್ಷದಲ್ಲಿ ಕೇವಲ 6.74 ಲಕ್ಷ ಕುಟುಂಬಗಳು ಮಾತ್ರ 100 ದಿನಗಳ ಮಿತಿಯನ್ನು ತಲುಪಿವೆ. ಮನರೇಗಾದಲ್ಲಿ ಕನಿಷ್ಠ 100 ದಿನಗಳ ಕೆಲಸವೆನ್ನುವುದು ಅದರ ಗರಿಷ್ಠ ಮಿತಿಯೂ ಆಗಿದೆ. ಆದರೂ, ಸರಕಾರ ನಿಗದಿತ ಕೋಟಾವನ್ನು ಮೀರಿ ಹೆಚ್ಚುವರಿ 50 ದಿನಗಳ ಉದ್ಯೋಗಕ್ಕೆ ಅವಕಾಶ ಕೊಡುತ್ತದೆ. ಹೀಗಿರುವಾಗ, ಹೊಸ ಮಸೂದೆಯಲ್ಲಿನ 125 ದಿನಗಳ ಉಲ್ಲೇಖ ಕೂಡ ಹೊಸ ಭ್ರಮೆಯನ್ನು ಸೃಷ್ಟಿಸುವುದಕ್ಕೇ ಇರುವಂತಿದೆ.

ಎರಡನೆಯದಾಗಿ, ಕೇಂದ್ರ ಸರಕಾರವೇ ಸಂಪೂರ್ಣ ವೇತನ ಪಾವತಿಸುವ ಮನರೇಗಾಕ್ಕಿಂತ ಭಿನ್ನವಾಗಿ, ರಾಜ್ಯಗಳು ವೇತನದ ಹೊರೆ ಹಂಚಿಕೊಳ್ಳಬೇಕೆಂಬ ಪ್ರಸ್ತಾವ ಈ ಮಸೂದೆಯಲ್ಲಿದೆ. ರಾಜ್ಯಗಳ ಹಣಕಾಸು ಸ್ಥಿತಿ ಈಗಾಗಲೇ ಉತ್ತಮವಾಗಿಲ್ಲದಿರುವಾಗ, ಇದು ಹಲವಾರು ರಾಜ್ಯಗಳಿಗೆ ಮತ್ತೊಂದು ಹೊರೆಯಾಗಲಿದೆ. ಈ ವೇತನ ಹಂಚಿಕೆ ಪ್ರಸ್ತಾಪ ಕೇಂದ್ರ ಮತ್ತು ರಾಜ್ಯಗಳ ನಡುವೆ 60:40 ಆಗಿರುತ್ತದೆ. ಈಶಾನ್ಯ ಮತ್ತು ಹಿಮಾಲಯ ರಾಜ್ಯಗಳಿಗೆ ಇದು 90:10 ಆಗಿದೆ. ಕೇಂದ್ರದ ಪ್ರಮಾಣಿತ ಹಂಚಿಕೆಯನ್ನು ಮೀರಿದರೆ, ರಾಜ್ಯಗಳೇ ಶೇ.100ರಷ್ಟು ವೆಚ್ಚ ಭರಿಸಬೇಕಾಗುತ್ತದೆ.

ಮೂರನೆಯದಾಗಿ, ಕೃಷಿ ಋತುವಿನಲ್ಲಿ ಉದ್ಯೋಗ ಖಾತರಿ ಇರುವುದಿಲ್ಲ. ಹೊಸ ಮಸೂದೆ ಬಿತ್ತನೆ ಮತ್ತು ಕೊಯ್ಲು ಸಮಯದಲ್ಲಿ ಉದ್ಯೋಗ ಖಾತರಿ ಯೋಜನೆಯನ್ನು 60 ದಿನಗಳವರೆಗೆ ಸ್ಥಗಿತಗೊಳಿಸುವ ನಿಬಂಧನೆಯನ್ನು ತಂದಿದೆ. ಸಾಕಷ್ಟು ಕೃಷಿ ಕಾರ್ಮಿಕರ ಲಭ್ಯತೆಗಾಗಿ ಈ ಕ್ರಮ ಎಂದು ಹೇಳಲಾಗಿದೆ. ರಾಜ್ಯಗಳು ಈ 60 ದಿನಗಳ ಅವಧಿಯನ್ನು ಮುಂಚಿತವಾಗಿ ತಿಳಿಸಬೇಕಿರುತ್ತದೆ. ಈ 60 ದಿನಗಳ ಉದ್ಯೋಗ ಖಾತರಿ ಇಲ್ಲದಿರುವುದು ಕೃಷಿ ಕೆಲಸಕ್ಕೆ ಕಾರ್ಮಿಕರ ಅಲಭ್ಯತೆ ಸಮಸ್ಯೆಯನ್ನು ಬಗೆಹರಿಸಬಹುದಾದರೂ, ಇಲ್ಲಿ 125 ದಿನಗಳ ಯೋಜನೆ ಎನ್ನುವುದರ ಅಸಲಿಯತ್ತು ಏನೆಂಬುದು ಬಯಲಾಗುತ್ತದೆ. ಭಾರತದಲ್ಲಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಬೆಳೆಗಳು ಬದಲಾಗುವ ವೈವಿಧ್ಯಮಯ ಕೃಷಿ ಕ್ಯಾಲೆಂಡರ್ ಇರುವುದರಿಂದ ಈ ನಿಬಂಧನೆ ಕೂಡ ಒಂದು ತಂತ್ರದಂತೆ ಕಾಣಿಸುತ್ತದೆ. ಕೃಷಿ ಕೆಲಸದ ಹೆಸರಲ್ಲಿ ವರ್ಷದ 60 ದಿನಗಳ ಕಾಲ ಉದ್ಯೋಗ ಖಾತರಿಯನ್ನು ಸ್ಥಗಿತಗೊಳಿಸುವುದರಿಂದ ಗ್ರಾಮೀಣ ಭಾಗದಲ್ಲಿ ವಲಸೆ ಬಿಕ್ಕಟ್ಟು ಹೆಚ್ಚಾಗುವ ಸಾಧ್ಯತೆಯಿದೆ. ಬಿತ್ತನೆ ಅಥವಾ ಕೊಯ್ಲು ಇಲ್ಲದ ಸಮಯದಲ್ಲೂ ಉದ್ಯೋಗ ಸಿಗದಿದ್ದರೆ ಬಡವರು ಅನಿವಾರ್ಯವಾಗಿ ನಗರಗಳಿಗೆ ವಲಸೆ ಹೋಗಬೇಕಾಗುತ್ತದೆ. ಇದು ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬನ್ನು ಮುರಿಯುವಂತಿದೆ. ಬಡವರ ಬದುಕನ್ನು ಹಸನು ಮಾಡುವುದಕ್ಕಿಂತ ಹೆಚ್ಚಾಗಿ, ಕೃಷಿ ಕೂಲಿ ಕಾರ್ಮಿಕರ ವೇತನವನ್ನು ಕಡಿಮೆ ಮಟ್ಟದಲ್ಲಿರಿಸಲು ಬಯಸುವ ಪ್ರಬಲ ವರ್ಗಗಳ ಹಿತಾಸಕ್ತಿ ಕಾಯುವ ಪ್ರಯತ್ನವಾಗಿ ಈ ಬದಲಾವಣೆ ಕಾಣುತ್ತಿದೆ.

ಮನರೇಗಾ ಯೋಜನೆಯನ್ನು ಕಾಂಗ್ರೆಸ್ ವೈಫಲ್ಯದ ಸ್ಮಾರಕ ಎಂದು ಜರೆದಿದ್ದ ಮೋದಿ ಅದೇ ಯೋಜನೆಯನ್ನು ಈಗ ಏಕೆ ಬದಲಾಯಿಸಿದರು ಎಂಬ ಪ್ರಶ್ನೆ ಸಹಜ. ಪ್ರಸ್ತಾವಿತ ಕಾನೂನು ರಾಜ್ಯ ಸರಕಾರಗಳ ಮೇಲಿನ ಹೆಚ್ಚಿನ ಆರ್ಥಿಕ ಹೊರೆಗೆ ಕಾರಣವಾಗಲಿದೆ ಎಂದು ವಿಶ್ಲೇಷಕರು ಹೇಳುತ್ತಿದ್ಧಾರೆ. ಮಸೂದೆಯಲ್ಲಿನ ಹಲವಾರು ನಿಬಂಧನೆಗಳು, ಯೋಜನೆಯನ್ನು ಬೇಡಿಕೆಗೆ ಅನುಗುಣವಾದ ಉದ್ಯೋಗ ಖಾತರಿಯಿಂದ ಪೂರೈಕೆ ಚಾಲಿತ ಯೋಜನೆಯಾಗಿ ಬದಲಿಸುತ್ತವೆ ಎಂದು ಅವರು ಹೇಳುತ್ತಾರೆ. ಮನಮೋಹನ್ ಸಿಂಗ್ ಕಾಲದ ಮನರೇಗಾ, ಆರ್‌ಟಿಐ ಕಾಯ್ದೆ ಮತ್ತು ಆಹಾರದ ಹಕ್ಕಿನಂತಹ ಪ್ರಮುಖ ಶಾಸನಗಳು ಸರಕಾರದ ಹೊಣೆಗಾರಿಕೆಯನ್ನು ಹೆಚ್ಚಿಸಿದ್ದವು. ಆದರೆ ಕಾಲಾನಂತರದಲ್ಲಿ ಪಾರದರ್ಶಕತೆಯನ್ನು ಬದಿಗಿಟ್ಟ ಸರಕಾರಗಳಿಂದ ಆರ್‌ಟಿಐ ವ್ಯವಸ್ಥಿತವಾಗಿ ದುರ್ಬಲಗೊಂಡಿದೆ. ಈಗ ಮನರೇಗಾ ಬದಲಿಗೆ ಹೊಸ ಮಸೂದೆ ಬಂದಿರುವುದರಿಂದ, ಉದ್ಯೋಗ ಖಾತರಿ ಕಾನೂನು ನಿಷ್ಪರಿಣಾಮಕಾರಿಯಾಗುತ್ತದೆ ಎಂದು ಪರಿಣಿತರು ಅನುಮಾನಿಸುತ್ತಿದ್ದಾರೆ.

ಮನರೇಗಾ ಯೋಜನೆಯಲ್ಲಿ ಹಗರಣಗಳನ್ನು ತಡೆಯಲು ‘ಸಾಮಾಜಿಕ ತಪಾಸಣೆ’ ಎಂಬ ಬಲಿಷ್ಠ ವ್ಯವಸ್ಥೆಯಿತ್ತು. ಗ್ರಾಮಸ್ಥರೇ ಸೇರಿ ಕಾಮಗಾರಿಗಳನ್ನು ಪರಿಶೀಲಿಸುವ ಅಧಿಕಾರ ಹೊಂದಿದ್ದರು. ಈಗ ಯೋಜನೆ ಕೇಂದ್ರೀಕೃತವಾಗುತ್ತಿರುವುದರಿಂದ ಮತ್ತು ತಂತ್ರಜ್ಞಾನದ ಅತಿಯಾದ ಬಳಕೆಯಿಂದಾಗಿ ಈ ತಳಮಟ್ಟದ ಪಾರದರ್ಶಕತೆ ಮಾಯವಾಗಲಿದೆ. ಸ್ಥಳೀಯ ಗ್ರಾಮ ಪಂಚಾಯತ್‌ಗಳ ಅಧಿಕಾರವನ್ನು ಮೊಟಕುಗೊಳಿಸಿ, ದಿಲ್ಲಿಯಿಂದಲೇ ಎಲ್ಲವನ್ನೂ ನಿಯಂತ್ರಿಸುವ ಕ್ರಮವು ಭ್ರಷ್ಟಾಚಾರಕ್ಕೆ ಹೊಸ ದಾರಿ ಮಾಡಿಕೊಡಬಹುದು ಎಂಬ ಭೀತಿಯಿದೆ.

ಉದ್ಯೋಗ ಖಾತರಿಯನ್ನು 100 ದಿನಗಳಿಂದ 125 ದಿನಗಳಿಗೆ ಹೆಚ್ಚಿಸುವ ಪ್ರಸ್ತಾವವಿದ್ದರೂ, ಕೆಲಸದ ಹಂಚಿಕೆ ಕೇಂದ್ರ ಸರಕಾರ ನಿರ್ಧರಿಸಿದ ಸ್ಥಿರ ಬಜೆಟ್‌ನ ಮಿತಿಗೆ ಒಳಪಟ್ಟಿರುತ್ತದೆ. ಉದ್ಯೋಗವನ್ನು ಕೇಂದ್ರ ಸೂಚಿಸಿದ ಗ್ರಾಮೀಣ ಪ್ರದೇಶಗಳಿಗೆ ಸೀಮಿತಗೊಳಿಸಲಾಗುತ್ತದೆ. ಇನ್ನು, ಜನರ ಬೇಡಿಕೆಯಂತೆ ಉದ್ಯೋಗಗಳು ಸಿಗುವುದಿಲ್ಲ. ಕೇಂದ್ರ ಸರಕಾರ ಬಜೆಟ್ ಹೊಂದಿದ್ದು, ಯಾವುದೇ ಗ್ರಾಮದಲ್ಲಿ ಕೆಲಸ ನೀಡುವುದು ಸೂಕ್ತವೆಂದು ಅದು ಭಾವಿಸಿದರೆ ಮಾತ್ರ ಉದ್ಯೋಗಗಳು ಸಿಗುತ್ತವೆ. ಇದರೊಂದಿಗೆ, ನಾವು ಮನರೇಗಾ ಪೂರ್ವದ ದಿನಗಳಿಗೆ ಮರಳಲಿದ್ದೇವೆ ಎಂದು ಪರಿಣಿತರು ಹೇಳುತ್ತಿದ್ದಾರೆ. ಬಯೋಮೆಟ್ರಿಕ್ ಹಾಜರಾತಿ ಮತ್ತು ಕಡ್ಡಾಯ ಆಧಾರ್ ಆಧಾರಿತ ಪಾವತಿ ಬಗೆಗಿನ ಮೋದಿ ಸರಕಾರದ ಒತ್ತಾಯದ ಕ್ರಮ ಯೋಜನೆಯನ್ನು ಹಳಿತಪ್ಪಿಸಿದೆ ಮತ್ತು ಕಾರ್ಮಿಕರನ್ನು ಹಿಂಡಿಹಾಕಿದೆ. ಈ ಕ್ರಮ ಈಗಾಗಲೇ ದೊಡ್ಡ ಮಟ್ಟದಲ್ಲಿ ಕಾರ್ಮಿಕರನ್ನು ಈ ಯೋಜನೆಯಿಂದ ಹೊರಗಿಟ್ಟಿದೆ. ಉದಾಹರಣೆಗೆ, ಕಡ್ಡಾಯ ಇ-ಕೆವೈಸಿ ಕ್ರಮ ಇದೇ ಅಕ್ಟೋಬರ್ 10ರಿಂದ ನವೆಂಬರ್ 14ರ ಅವಧಿಯಲ್ಲಿ ಕನಿಷ್ಠ 27 ಲಕ್ಷ ಕಾರ್ಮಿಕರನ್ನು ಅಳಿಸಲು ಕಾರಣವಾಯಿತು. ಹೊಸ ಮಸೂದೆ ಕಾರ್ಮಿಕರ ಮೇಲೆ ಡಿಜಿಟಲ್ ಹೊರೆಯನ್ನು ಹೆಚ್ಚಿಸುತ್ತದೆ. ದೂರದ ಗ್ರಾಮೀಣ ಪ್ರದೇಶಗಳಲ್ಲಿ ತಂತ್ರಜ್ಞಾನ ವೈಫಲ್ಯವಿದ್ದಲ್ಲಿ ಹೊಸ ಮಸೂದೆ ಹೆಚ್ಚಿನ ನಿರ್ಗತಿಕ ಫಲಾನುಭವಿಗಳನ್ನು ಯೋಜನೆಯಿಂದ ದೂರ ತಳ್ಳಬಹುದು ಎಂದು ಪರಿಣಿತರು ಹೇಳುತ್ತಿದ್ದಾರೆ.

ಈಗಿನ ಕ್ರಮ ಈ ಯೋಜನೆಯನ್ನು ಬೇಡಿಕೆ ಚಾಲಿತ ಯೋಜನೆಯಾಗಿ ಬದಲಿಸುವುದರಿಂದ, ಮನರೇಗಾದ ಉದ್ದೇಶವನ್ನೇ ತೆಗೆದುಹಾಕುತ್ತದೆ. ಇಲ್ಲಿ ಮಹಾತ್ಮಾ ಗಾಂಧಿಯವರ ಹೆಸರು ತೆಗೆಯುವ ಮೂಲಕ ಬಿಜೆಪಿ ತನ್ನ ಸೈದ್ಧಾಂತಿಕ ಉದ್ದೇಶ ಸಾಧಿಸಲು ಬಯಸುವುದರ ಜೊತೆಗೆ, ಇನ್ನು ಮುಂದೆ ಉದ್ಯೋಗವನ್ನು ಕಾನೂನುಬದ್ಧ ಹಕ್ಕಾಗಿ ಖಾತರಿಪಡಿಸುವುದಿಲ್ಲ. ಮನರೇಗಾ ಅತ್ಯಂತ ಜನಪ್ರಿಯ ಯೋಜನೆಯಾಗಿದೆ ಮತ್ತು ಲಕ್ಷಾಂತರ ಜನರ ಜೀವನವನ್ನು ಬದಲಾಯಿಸಿದೆ. ಆದರೆ ಈ ಯೋಜನೆ ಈಗಿರುವ ಸ್ವರೂಪದಲ್ಲಿ ಮುಂದುವರಿಯುವುದು ಆರೆಸ್ಸೆಸ್‌ಗೆ, ಮೋದಿ ಸರಕಾರಕ್ಕೆ ಇಷ್ಟವಿಲ್ಲ. ಈ ಹಠದಲ್ಲಿ ಮೋದಿ ಸರಕಾರ ಈ ಯೋಜನೆಯ ಮಹತ್ವವನ್ನೇ ಮರೆತಿದೆ.

ಅರ್ಥಶಾಸ್ತ್ರಜ್ಞ ಜೀನ್ ಡ್ರೇಜ್, ಮನರೇಗಾ ಸಾಮಾನ್ಯವಾಗಿ ವಾರ್ಷಿಕ 200ರಿಂದ 300 ಕೋಟಿ ಮಾನವ ದಿನಗಳ ಉದ್ಯೋಗ ಸೃಷ್ಟಿಸುವುದನ್ನು ಬಹಳ ಮಹತ್ವದ್ದೆಂದು ಗಮನಿಸುತ್ತಾರೆ. ಅದರಲ್ಲೂ ಎರಡು ಪ್ರಮುಖ ಬಿಕ್ಕಟ್ಟುಗಳ ಸಮಯದಲ್ಲಿ, ಅಂದರೆ 2009-10ರಲ್ಲಿ, ಜಾಗತಿಕ ಆರ್ಥಿಕ ಬಿಕ್ಕಟ್ಟಿನ ನಂತರ ಮತ್ತು 2020-22 ರಲ್ಲಿ ಕೋವಿಡ್ ಸಮಯದಲ್ಲಿ ಉದ್ಯೋಗಗಳು ಹೆಚ್ಚಿದ್ದೇ ಮನರೇಗಾದಿಂದ ಎಂಬುದನ್ನು ಡ್ರೆಜ್ ಅವರು ತಪ್ಪದೆ ಉಲ್ಲೇಖಿಸುತ್ತಾರೆ. ಈಗ ಅದನ್ನು ಪರಿಷ್ಕರಿಸುವ ನೆಪದಲ್ಲಿ ಸರಕಾರ ಪೂರ್ತಿ ನಾಶಮಾಡುತ್ತಿದೆ ಎಂದು ಜೀನ್ ಡ್ರೇಜ್ ಹೇಳುತ್ತಾರೆ.

ಮನರೇಗಾ ಯೋಜನೆಯ ಅತಿದೊಡ್ಡ ಶಕ್ತಿಯೆಂದರೆ ಅದು ‘ಬೇಡಿಕೆ ಆಧಾರಿತ’ ಯೋಜನೆಯಾಗಿತ್ತು. ಅಂದರೆ, ಒಬ್ಬ ಕಾರ್ಮಿಕ ಕೆಲಸ ಕೇಳಿದರೆ ಸರಕಾರ ಕೆಲಸ ಕೊಡಲೇಬೇಕಿತ್ತು, ಇಲ್ಲವಾದರೆ ನಿರುದ್ಯೋಗ ಭತ್ತೆ ನೀಡಬೇಕಿತ್ತು. ಇದು ನಾಗರಿಕನ ‘ಕೆಲಸದ ಹಕ್ಕು’ ಆಗಿತ್ತು. ಆದರೆ ಹೊಸ ಮಸೂದೆಯು ಇದನ್ನು ‘ಬಜೆಟ್ ಆಧಾರಿತ’ ಯೋಜನೆಯನ್ನಾಗಿ ಬದಲಿಸುತ್ತಿದೆ. ಇದರರ್ಥ, ಕೇಂದ್ರ ಸರಕಾರ ನಿಗದಿಪಡಿಸಿದ ಹಣ ಮುಗಿದುಹೋದರೆ, ಕಾರ್ಮಿಕರು ಕೆಲಸ ಕೇಳಿದರೂ ಸರಕಾರ ನೀಡುವ ಕಾನೂನಾತ್ಮಕ ಬಾಧ್ಯತೆ ಇರುವುದಿಲ್ಲ. ಇದು ಬಡವರ ಪಾಲಿಗೆ ಅತ್ಯಂತ ಅಪಾಯಕಾರಿ ಬೆಳವಣಿಗೆ.

ಗುಜರಾತ್ ಮೂಲದ ಕಾರ್ಮಿಕ ಮತ್ತು ಉದ್ಯೋಗದ ಸಂಶೋಧಕಿ ಸುಧಾ ಮೆನನ್, ಮನರೇಗಾ ಗ್ರಾಮೀಣ ವೇತನ ರಚನೆಯನ್ನು ಮೂಲಭೂತವಾಗಿ ಬದಲಾಯಿಸಿದೆ ಎಂದು ವಾದಿಸುತ್ತಾರೆ. ಈ ಯೋಜನೆ ಕೌಶಲ್ಯರಹಿತ ಕಾರ್ಮಿಕರಿಗೆ ಹೆಚ್ಚು ವೇತನ ಸಿಗಲು ಕಾರಣವಾಗಿದೆ. ದೊಡ್ಡ ಭೂಮಾಲಕರು ಕಾರ್ಮಿಕರ ಕೊರತೆಯಾಗಿರುವ ಬಗ್ಗೆ ಮತ್ತು ಕಾರ್ಮಿಕರಿಗೆ ಹೆಚ್ಚಿನ ವೇತನ ನೀಡುವ ಅನಿವಾರ್ಯತೆ ಬಂದಿದೆ ಎಂದು ಪದೇ ಪದೇ ದೂರುವುದರ ಬಗ್ಗೆಯೂ ಸುಧಾ ಮೆನನ್ ಪ್ರಸ್ತಾಪಿಸಿದ್ದಾರೆ. ಅವರ ಪ್ರಕಾರ, ಕಾಯ್ದೆಯ ಪ್ರಸ್ತಾವಿತ ಬದಲಾವಣೆ ಪ್ರಬಲ ಭೂಮಾಲಕ ವರ್ಗಗಳ ಪರವಾಗಿ ಸರಕಾರದ ನೀತಿಯನ್ನು ರೂಪಿಸುವ ಪ್ರಯತ್ನವಾಗಿದೆ.

ಸರಕಾರ ಹಕ್ಕು ಆಧಾರಿತ ಖಾತರಿ ಕಾನೂನಿನ ಆತ್ಮವನ್ನು ತೆಗೆದುಹಾಕಿ, ರಾಜ್ಯ ಸರಕಾರಗಳು ಮತ್ತು ಕಾರ್ಮಿಕರ ವಿರುದ್ಧ ಸಿದ್ಧಪಡಿಸಲಾದ ಷರತ್ತುಬದ್ಧ, ಕೇಂದ್ರ ನಿಯಂತ್ರಿತ ಯೋಜನೆಯನ್ನು ಜಾರಿಗೆ ತರುತ್ತಿದೆ ಎಂದು ಸಿಪಿಐಎಂ ರಾಜ್ಯಸಭಾ ಸದಸ್ಯ ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ. ಇದು ಕಾರ್ಮಿಕರ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುತ್ತದೆಯೇ ಹೊರತು, ನರೇಗಾ ಯೋಜನೆಯನ್ನು ಸುಧಾರಿಸುವುದಿಲ್ಲ. ಆರ್ಥಿಕ, ಸಾಂಸ್ಥಿಕ ಮತ್ತು ನೈತಿಕವಾಗಿ ನರೇಗಾ ಯೋಜನೆಯನ್ನು ಹಾಳು ಮಾಡುತ್ತದೆ. ರಾಮ್ ಹೆಸರಿನಲ್ಲಿ, ರಾಜ್ಯಗಳು ಮತ್ತು ಬಡವರನ್ನು ದಂಡಿಸಲಾಗುತ್ತಿದೆ. ಹಕ್ಕು, ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೊರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುತ್ತಿದೆ ಎಂದು ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.

ಇನ್ನು ಕರ್ನಾಟಕದ ವಿಚಾರವನ್ನು ಕೊಂಚ ಗಮನಿಸಲು, ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಹೇಳಿರುವುದನ್ನು ನೋಡಬೇಕು. ಕಳೆದ ಮೂರು ವರ್ಷದಲ್ಲಿ ಮೋದಿ ಸರಕಾರ ಈ ಯೋಜನೆಯಡಿ ಕರ್ನಾಟಕಕ್ಕೆ ನೀಡಲಾಗುತ್ತಿದ್ದ 5 ಕೋಟಿ ಮಾನವ ದಿನಗಳನ್ನು ಕಡಿತಗೊಳಿಸಿ ರಾಜ್ಯಕ್ಕೆ ಅನ್ಯಾಯ ಮಾಡುತ್ತಿದೆ ಎಂದು ಅವರು ಆಕ್ಷೇಪಿಸಿದ್ದಾರೆ.

2023-24ರ ಅವಧಿಯಲ್ಲಿ 14 ಕೋಟಿ ಮಾನವ ದಿನಗಳ ಸಂಖ್ಯೆಯಿತ್ತು. 2024-25ರ ಸಾಲಿನಲ್ಲಿ 13 ಕೋಟಿಗೆ ಇಳಿಸಲಾಯಿತು. 2025-26ರ ಸಾಲಿನಲ್ಲಿ ಈಗ 9 ಕೋಟಿ ಮಾನವ ದಿನಗಳಿಗೆ ಇಳಿಸಲಾಗಿದೆ. ಈ ಮೂಲಕ ಕಳೆದ 3 ವರ್ಷಗಳಲ್ಲಿ ಒಟ್ಟು 5 ಕೋಟಿ ಮಾನವ ದಿನಗಳನ್ನು ಕರ್ನಾಟಕ ರಾಜ್ಯಕ್ಕೆ ನಿರಾಕರಿಸಲಾಗಿದೆ ಎಂದು ರಾಜ್ಯದ ಜನತೆಗೆ ಆಗುತ್ತಿರುವ ಅನ್ಯಾಯದ ಕುರಿತು ಪ್ರಿಯಾಂಕ್ ಖರ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅವರು ಹೇಳಿರುವ ಪ್ರಕಾರ, ಕಳೆದ ಮೂರು ವರ್ಷಗಳಲ್ಲಿ ಕರ್ನಾಟಕದಲ್ಲಿ 80.25 ಲಕ್ಷ ಬಡ ಕುಟುಂಬಗಳಿಗೆ ಈ ಯೋಜನೆಯಡಿ ಉದ್ಯೋಗ ಒದಗಿಸಲಾಗಿದೆ. ಈ ಪೈಕಿ 25.63 ಲಕ್ಷ ಪರಿಶಿಷ್ಟ ಜಾತಿಗೆ ಸೇರಿದ ಕುಟುಂಬಗಳಿದ್ದು, 9.48 ಲಕ್ಷ ಪರಿಶಿಷ್ಟ ಪಂಗಡಕ್ಕೆ ಸೇರಿದ ಕುಟುಂಬಗಳು ಈ ಯೋಜನೆಯ ಫಲಾನುಭವಿಗಳಾಗಿವೆ. ಇಡೀ ರಾಜ್ಯದಲ್ಲಿ 2023 ರಿಂದ ಈಗಿನವರೆಗೆ ಒಟ್ಟು 21,411 ರೂ ವೆಚ್ಚದಲ್ಲಿ 15.94 ಲಕ್ಷಕ್ಕೂ ಹೆಚ್ಚು ಗ್ರಾಮಿಣ ಆಸ್ತಿಗಳನ್ನು ಸೃಷ್ಟಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್.ಜೀವಿ

contributor

Similar News