×
Ad

ಸಿನೆಮಾದಿಂದ ರಾಜಕೀಯಕ್ಕೆ: ಗೆದ್ದವರೆಷ್ಟು? ಬಿದ್ದವರೆಷ್ಟು?

Update: 2026-01-21 16:02 IST

ತಮಿಳುನಾಡು ರಾಜಕಾರಣದಲ್ಲಿ ನಟ ದಳಪತಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಪಕ್ಷ ಈಗಾಗಲೇ ಅಸ್ತಿತ್ವದಲ್ಲಿರುವ ಎಲ್ಲ ಪಕ್ಷಗಳಿಗೂ ನಡುಕ ಹುಟ್ಟಿಸಿರುವಾಗಲೇ, ಅವರ ಸಿನೆಮಾ ಬದುಕಿನ ಕೊನೇ ಚಿತ್ರಕ್ಕೆ ದೊಡ್ಡ ಸವಾಲು ಎದುರಾಗಿದೆ. ಜನನಾಯಗನ್ ಸಿನೆಮಾ ಬಿಡುಗಡೆಗೆ ಸೆನ್ಸರ್ ಮಂಡಳಿಯಿಂದ ಅಡೆತಡೆ ಉಂಟಾಗಿದೆ. ಸೆನ್ಸರ್ ಸರ್ಟಿಫಿಕೇಟ್ ಸಿಗದ ಹಿನ್ನೆಲೆಯಲ್ಲಿ ಸಿನೆಮಾ ಬಿಡುಗಡೆ ಮುಂದೂಡಲಾಗಿದೆ. ನಿರ್ಮಾಪಕರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಳ್ಳಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಮದ್ರಾಸ್ ಹೈಕೋರ್ಟ್‌ನ ವಿಭಾಗೀಯ ಪೀಠದೆದುರು ಹೋಗಲು ಸೂಚಿಸಿದೆ. ತಮ್ಮ ನೆಚ್ಚಿನ ನಟನ ಚಿತ್ರಕ್ಕಾಗಿ ಕಾದಿದ್ದ ಅಭಿಮಾನಿಗಳಿಗೆ ಇದು ನಿರಾಸೆ ತಂದಿದೆ. ಇನ್ನೊಂದೆಡೆ ಇದು ವಿಜಯ್ ಪಾಲಿನ ರಾಜಕೀಯ ಸವಾಲಾಗಿಯೂ ಕಾಣತೊಡಗಿದೆ. ರಾಜಕೀಯಕ್ಕಾಗಿ ಈಗಾಗಲೇ ಸಿನೆಮಾ ರಂಗಕ್ಕೆ ವಿದಾಯ ಘೋಷಿಸಿರುವ ವಿಜಯ್ ಎದುರಿನ ದಾರಿ ಸುಲಭವಿಲ್ಲ ಎಂಬ ಸೂಚನೆ ಇದಾಗಿರುವಂತಿದೆ. ಅವರು ಸಿನೆಮಾದಿಂದ ಸಿಎಂ ಕುರ್ಚಿಯೆಡೆಗಿನ ಹಾದಿಗೆ ಸಜ್ಜಾಗಿರುವ ಹೊತ್ತಲ್ಲಿನ ಸವಾಲು ಇದು.

2026ರಲ್ಲಿ ಇತಿಹಾಸ ಪುನರಾವರ್ತನೆಯಾಗುತ್ತದೆ ಎಂದು ಹೇಳುವ ಮೂಲಕ ಅವರು, ಮತ್ತೊಮ್ಮೆ ಸಿನೆಮಾ ಸ್ಟಾರ್ ರಾಜಕೀಯದಲ್ಲಿ ಅಧಿಕಾರಕ್ಕೇರುವ ಭರವಸೆ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಈಗ ತಮಿಳುನಾಡು ರಾಜಕೀಯದಲ್ಲಿ ನಿಜವಾಗಿಯೂ ಇತಿಹಾಸ ಪುನರಾವರ್ತನೆಗೆ ಕಾರಣರಾಗುತ್ತಾರೆಯೇ ಎಂಬ ಕುತೂಹಲವಿದೆ.

ಸಿಎಂ ಆಗಬೇಕೆಂದು ರಾಜಕೀಯಕ್ಕೆ ಬಂದ ಚಿತ್ರನಟರಲ್ಲಿ ಗೆದ್ದವರೆಷ್ಟು, ವಿಫಲರಾದವರೆಷ್ಟು? ರಾಜಕೀಯ ಏಕೆ ಚಿತ್ರನಟರ ಪಾಲಿನ ಆಕರ್ಷಣೆಯಾಗಿದೆ ಅಥವಾ ರಾಜಕೀಯ ಹೇಗೆ ಚಿತ್ರನಟರನ್ನು ಬಂಡವಾಳ ಮಾಡಿಕೊಳ್ಳಲು ನೋಡುತ್ತದೆ?

ಭಾಗ - 1

ಸಿನೆಮಾ ಮತ್ತು ರಾಜಕಾರಣದ ಭಾರೀ ನಂಟಿನ ಬಗ್ಗೆ ಹೇಳುವಾಗ ತಮಿಳುನಾಡು ಮತ್ತು ಆಂಧ್ರವನ್ನು ಬಿಟ್ಟು ಮಾತಾಡುವುದು ಸಾಧ್ಯವೇ ಇಲ್ಲ. ಹಾಗೆ ನೋಡಿದರೆ, ಸಿನೆಮಾ ಮತ್ತು ರಾಜಕೀಯದ ನಂಟು ಉತ್ತರಕ್ಕಿಂತ ದಕ್ಷಿಣ ಭಾರತದಲ್ಲೇ ಹೆಚ್ಚು. ಕರ್ನಾಟಕದಲ್ಲೂ ರಾಜಕೀಯ ಮತ್ತು ಸಿನೆಮಾ ರಂಗದ ನಡುವೆ ಒಂದು ನಿರಂತರ ಬೆಸುಗೆ ಇದ್ದೇ ಇದೆ.

ತಮಿಳುನಾಡಿನಲ್ಲಿ ಸಿನೆಮಾ ರಂಗದ ಐವರು ಮುಖ್ಯಮಂತ್ರಿ ಹುದ್ದೆ ಅಲಂಕರಿಸಿದರೆಂಬುದು ದೊಡ್ಡ ಸಂಗತಿ. ಸಿ.ಎನ್. ಅಣ್ಣಾದೊರೈ, ಎಂ.ಜಿ. ರಾಮಚಂದ್ರನ್, ಎಂ. ಕರುಣಾನಿಧಿ, ಜಾನಕಿ ರಾಮಚಂದ್ರನ್ ಮತ್ತು ಜೆ. ಜಯಲಲಿತಾ ಆ ಸಾಲಿನಲ್ಲಿರುವ ಹೆಸರುಗಳು. ಇದಲ್ಲದೆ ತಮಿಳಿನ ಸೂಪರ್ ಸ್ಟಾರ್‌ಗಳಾದ ರಜನಿಕಾಂತ್, ಕಮಲ್ ಹಾಸನ್, ವಿಜಯಕಾಂತ್, ಶಿವಾಜಿ ಗಣೇಶನ್, ಟಿ. ರಾಜೇಂದರ್, ಶರತ್ ಕುಮಾರ್ ಎಲ್ಲರೂ ರಾಜಕೀಯದಲ್ಲಿ ಒಂದಲ್ಲ ಒಂದು ಹಂತದಲ್ಲಿ ಗುರುತಿಸಿಕೊಂಡವರೇ ಆಗಿದ್ದಾರೆ. ಈಗ ರಾಜಕಿಯಕ್ಕೆ ಇಳಿದಿರುವವರು ದಳಪತಿ ವಿಜಯ್. ಅವರ ಪಕ್ಷ ತಮಿಳಗ ವೆಟ್ರಿ ಕಳಗಂ ದೊಡ್ಡ ಸದ್ದು ಮಾಡುತ್ತಿದ್ದು, ಈ ಸಲದ ಚುನಾವಣೆಯಲ್ಲಿ ಇತಿಹಾಸ ಪುನರಾವರ್ತಿಸುವ ಮಹತ್ವಾಕಾಂಕ್ಷೆ ಹೊಂದಿದೆ. 2026ರ ವಿಧಾನಸಭಾ ಚುನಾವಣೆಗೆ ತಮಿಳುನಾಡು ಸಜ್ಜಾಗುತ್ತಿರುವಾಗ, ಎಲ್ಲರ ಕಣ್ಣು ನೆಟ್ಟಿರುವುದು ಟಿವಿಕೆ ಮೇಲೆ.

ತಮಿಳು ರಾಜಕಾರಣದಲ್ಲಿ ಚಿತ್ರರಂಗದವರ ಸ್ಥಾನ ಬಹಳ ಹಿಂದಿನಿಂದಲೂ ಪ್ರಬಲವಾಗಿದೆ. ತಮಿಳುನಾಡಿನಲ್ಲಿ ಸಿನೆಮಾ ಕೇವಲ ಮನರಂಜನೆಗೆ ಸೀಮಿತವಾಗುಳಿಯದೆ, ರಾಜಕೀಯವನ್ನೇ ಬದಲಿಸಿದ ಹೆಚ್ಚುಗಾರಿಕೆ ಹೊಂದಿದೆ.

ಅಣ್ಣಾದೊರೈ

ತಮಿಳುನಾಡು ರಾಜಕೀಯದಲ್ಲಿ ಸಿನೆಮಾ ರಂಗದ ತಾಕತ್ತು ದಾಖಲಿಸಿದ ಮೊದಲ ನಾಯಕರಲ್ಲಿ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಸ್ಥಾಪಕ ಸಿ.ಎನ್. ಅಣ್ಣಾದೊರೈ ಪ್ರಮುಖರು. ಅವರು ಸಿನೆಮಾ ನಟರಲ್ಲದಿದ್ದರೂ ತಮ್ಮ ಬರವಣಿಗೆ ಮತ್ತು ಭಾಷಣಕ್ಕೆ ಹೆಸರಾಗಿದ್ದರು. ರಾಜಕೀಯ ಪ್ರಚಾರಕ್ಕೆ ತಮಿಳು ಸಿನೆಮಾಗಳನ್ನು ಬಳಸುವ ಮೂಲಕ ಹೊಸ ಪರಂಪರೆಯೊಂದಕ್ಕೆ ನಾಂದಿ ಹಾಡಿದ್ದವರೂ ಅವರೇ. ರಾಜ್ಯಸಭೆಯಲ್ಲಿನ ಭಾಷಣಗಳಿಗಾಗಿ ಅತ್ಯುತ್ತಮ ಸಂಸದೀಯ ಪಟು ಎಂದು ನೆಹರೂ ಅವರಿಂದ ಹೊಗಳಿಸಿಕೊಂಡಿದ್ದರೆಂದು ಹೇಳಲಾಗುತ್ತದೆ. ತಮಿಳು ರಾಜಕಾರಣದಲ್ಲಿ ಸೈದ್ಧಾಂತಿಕ ಕಾರಣಕ್ಕೂ ಅಣ್ಣಾದೊರೈ ಬಹಳ ದೊಡ್ಡ ಹೆಸರು. ಅವರ ಸರಕಾರ ಪೂರ್ಣ ಬಹುಮತದೊಂದಿಗೆ ಅಧಿಕಾರಕ್ಕೆ ಬಂದ ಮೊದಲ ಕಾಂಗ್ರೆಸೇತರ ಸರಕಾರವಾಗಿತ್ತು. 1967ರಿಂದ 1969ರವರೆಗೆ ಅವರು ತಮಿಳುನಾಡು ಮುಖ್ಯಮಂತ್ರಿಯಾಗಿದ್ದರು.

ಎಂ.ಜಿ. ರಾಮಚಂದ್ರನ್

ಅಣ್ಣಾದೊರೈ ಅವರ ಜೊತೆಗೇ ಕೆಲಸ ಮಾಡಿದ್ದ ಎಂ.ಜಿ. ರಾಮಚಂದ್ರನ್, ತಮಿಳು ಚಿತ್ರರಂಗದ ಐಕಾನ್ ಹೇಗೋ ಹಾಗೆಯೇ ತಮಿಳು ರಾಜಕೀಯದಲ್ಲೂ ಅಸಾಮಾನ್ಯ ಹೆಸರು. ಸಿನೆಮಾ ತಾರೆಯರು ಹಾಗೂ ರಾಜಕೀಯದ ನಡುವಿನ ನಂಟು ಗಟ್ಟಿಯಾಗಿ ಬೆಳೆದದ್ದು ಎಂಜಿಆರ್ ಮೂಲಕ. ತೆರೆಯ ಮೇಲಿನ ಅವರ ಇಮೇಜ್ ರಾಜಕೀಯದಲ್ಲೂ ಅಷ್ಟೇ ಪ್ರಭಾವಶಾಲಿಯಾಯಿತು. ವಿಶೇಷವೆಂದರೆ, ಇಂಥ ಎಂಜಿಆರ್ ಸಿನೆಮಾದಿಂದ ರಾಜಕೀಯಕ್ಕೆ ಬರುವ ಮೊದಲೇ ಅವರ ಬೇರುಗಳು ರಾಜಕೀಯದಲ್ಲಿದ್ದವು. ಅವರು ಡಿಎಂಕೆ ಸೇರುವ ಮೊದಲು 1953ರವರೆಗೆ ಕಾಂಗ್ರೆಸ್‌ನಲ್ಲಿದ್ದರು. ಡಿಎಂಕೆ ಒಡೆದಾಗ ಅವರು ‘ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ’ (ಎಐಎಡಿಎಂಕೆ) ಪಕ್ಷ ಸ್ಥಾಪಿಸಿದರು ಮತ್ತು ತಮಿಳುನಾಡಿನ ಮುಖ್ಯಮಂತ್ರಿಯಾದರು. ಅವರ ಚಲನಚಿತ್ರಗಳು ಜನರೊಂದಿಗೆ ಆಳವಾದ ಭಾವನಾತ್ಮಕ ಬಾಂಧವ್ಯ ಹೊಂದಿದ್ದವು.

ಜಯಲಲಿತಾ

ಎಂಜಿಆರ್ ಅವರಂತೆಯೇ ಸಿನೆಮಾದಿಂದ ರಾಜಕೀಯಕ್ಕೆ ಬಂದವರಲ್ಲಿ ಬಹಳ ದೊಡ್ಡ ಹೆಸರು ಜಯಲಲಿತಾ ಅವರದು. ಎಂಜಿಆರ್ ಜೊತೆ ಹಲವಾರು ಚಿತ್ರಗಳಲ್ಲಿ ಕಾಣಿಸಿಕೊಂಡಿದ್ದ ಕರ್ನಾಟಕ ಮೂಲದ ಜಯಲಲಿತಾ ರಾಜಕೀಯದಲ್ಲೂ ಆವರ ಹೆಜ್ಜೆಯನ್ನೇ ಅನುಸರಿಸಿ ಬಂದರು. ಅವರ ಪಕ್ಷದಲ್ಲಿ ಅತ್ಯುನ್ನತ ಹುದ್ದೆಗೆ ಏರಿದರು ಮಾತ್ರವಲ್ಲ, 1991ರಿಂದ 2016ರವರೆಗಿನ ಅವಧಿಯಲ್ಲಿ ಸುಮಾರು 16 ವರ್ಷಗಳ ಕಾಲ ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾಗಿ ಆಳ್ವಿಕೆ ನಡೆಸಿದರು. ತಮಿಳು ರಾಜಕಾರಣದಲ್ಲಿ ಅಮ್ಮ ಎಂದೇ ಗುರುತಾದರು.

ಎಂ. ಕರುಣಾನಿಧಿ

ತಮಿಳು ಸಾಹಿತ್ಯದಲ್ಲಿ ದೊಡ್ಡ ಹೆಸರಾಗಿದ್ದ ಕರುಣಾನಿಧಿ ಅವರು, ಸಿನೆಮಾಗಳಲ್ಲಿನ ಬರವಣಿಗೆ ಮೂಲಕವೂ ಮನೆಮಾತಾಗಿದ್ದರು. 1960ರ ದಶಕದಲ್ಲಿ ರಾಜಕಾರಣಕ್ಕೆ ಬಂದರು. ಅಣ್ಣಾದೊರೈ ಮರಣದ ಬಳಿಕ ಡಿಎಂಕೆ ಪಕ್ಷದ ನಾಯಕತ್ವ ವಹಿಸಿಕೊಂಡರು. ಅವರು ಐದು ಬಾರಿ ತಮಿಳುನಾಡು ಮುಖ್ಯಮಂತ್ರಿಯಾದರು.

ವಿ.ಎನ್. ಜಾನಕಿ ರಾಮಚಂದ್ರನ್

ಚಿತ್ರನಟಿಯಾಗಿದ್ದ ಜಾನಕಿ ಅವರು ಎಂಜಿಆರ್ ಪತ್ನಿಯೂ ಹೌದು. ಎಂಜಿಆರ್ ಮರಣದ ಬಳಿಕ ಸಿಎಂ ಹುದ್ದೆಗೇರಿದರಾದರೂ, ಅವರು ಅಧಿಕಾರದಲ್ಲಿದ್ದದ್ದು 23 ದಿನಗಳು ಮಾತ್ರ. ಅದೇನೇ ಇದ್ದರೂ, ತಮಿಳುನಾಡಿನ ಮೊದಲ ಮಹಿಳಾ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಅವರದು. ದೇಶದ ಇತಿಹಾಸದಲ್ಲಿ ಸಿಎಂ ಹುದ್ದೆಗೇರಿದ ಮೊದಲ ನಟಿ ಎಂಬ ಹೆಗ್ಗಳಿಕೆಗೂ ಅವರು ಪಾತ್ರರಾಗಿದ್ದಾರೆ.

ತಮಿಳು ರಾಜಕಾರಣದಲ್ಲಿ ಜಯಲಲಿತಾ ಯುಗದ ನಂತರ ಚಿತ್ರರಂಗದ ಸೂಪರ್ ಸ್ಟಾರ್‌ಗಳು ಅಷ್ಟೇ ಮಟ್ಟದ ಪ್ರಭಾವ ಬೀರುವುದು ಸಾಧ್ಯವಾಗಿಲ್ಲ. ಸಿಎಂ ಹುದ್ದೆಯೆಡೆಗಿನ ಹಾದಿಯಲ್ಲಿ ಹೋಗಬಯಸಿದ್ದವರ ಕನಸುಗಳು ಅರ್ಧದಲ್ಲೇ ಮುರಿದಿವೆ. ಶಿವಾಜಿ ಗಣೇಶನ್, ವಿಜಯಕಾಂತ್, ಆರ್. ಶರತ್ ಕುಮಾರ್, ರಜನಿಕಾಂತ್, ಕಮಲ್ ಹಾಸನ್, ನೆಪೋಲಿಯನ್ ರಾಜಕೀಯಕ್ಕೆ ಬಂದರೂ, ರಾಜಕೀಯ ರಂಗ ಅವರನ್ನು ಅಷ್ಟಾಗಿ ಸ್ವೀಕರಿಸದೇ ಹೋಯಿತು. ನಟಿಯರಾದ ಖುಷ್ಬೂ, ಗೌತಮಿಯಂಥವರೂ ರಾಜಕೀಯದಲ್ಲಿ ಕಾಣಿಸಿರುವುದು ಹೌದು.

ತಮಿಳುನಾಡಿನಲ್ಲಿ ಎಸ್.ಎಸ್. ರಾಜೇಂದ್ರನ್ ಶಾಸಕರಾಗಿ ಆಯ್ಕೆಯಾದ ಮೊದಲ ನಟ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಹಾಗೆಯೇ ನಟ ನೆಪೋಲಿಯನ್ ಕೇಂದ್ರ ಸಚಿವರಾಗಿ ಮತ್ತು ನಟಿ ಖುಷ್ಬೂ ಸುಂದರ್ ವಿವಿಧ ಪಕ್ಷಗಳಲ್ಲಿ ಗುರುತಿಸಿಕೊಂಡು ರಾಷ್ಟ್ರೀಯ ಮಹಿಳಾ ಆಯೋಗದ ಸದಸ್ಯರಾಗಿಯೂ ಕಾರ್ಯನಿರ್ವಹಿಸಿದ್ದಾರೆ.

ತಮಿಳು ಸಿನೆಮಾ ರಂಗದಲ್ಲಿ ಮತ್ತೊಂದು ದೊಡ್ಡ ಹೆಸರಾಗಿದ್ದ ಶಿವಾಜಿ ಗಣೇಶನ್ ರಾಜಕೀಯ ಒಲವು ಹೊಂದಿದ್ದವರಾಗಿದ್ದರೂ, ಅವರಿಗೆ ಎಂಜಿಆರ್ ಅವರಂತೆ ರಾಜಕೀಯ ವ್ಯಕ್ತಿತ್ವ ಬೆಳೆಸಿಕೊಳ್ಳುವುದು ಸಾಧ್ಯವಾಗಲೇ ಇಲ್ಲ. 1988ರಲ್ಲಿ ಅವರು ತಮಿಳಗ ಮುನ್ನೇಟ್ರ ಮುನ್ನನಿ (ಟಿಎಂಎಂ) ಪಕ್ಷ ಸ್ಥಾಪಿಸಿದರು. ಆದರೆ 1989ರ ವಿಧಾನಸಭಾ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದೂ ಅದಕ್ಕೆ ಸಾಧ್ಯವಾಗಲಿಲ್ಲ. ಆಮೇಲೆ ಶಿವಾಜಿ ಗಣೇಶನ್ ರಾಜಕೀಯದಿಂದಲೇ ಹಿಂದೆ ಸರಿದರು. 2005ರಲ್ಲಿ ದೇಶೀಯ ‘ಮುರ್ಪೋಕ್ಕು ದ್ರಾವಿಡ ಕಳಗಂ’ (ಡಿಎಂಡಿಕೆ) ಸ್ಥಾಪಿಸಿದ ವಿಜಯಕಾಂತ್, ಜಯಲಲಿತಾ ನಂತರ ಗಮನಾರ್ಹ ಚುನಾವಣಾ ಯಶಸ್ಸನ್ನು ಸಾಧಿಸಿದ ಮತ್ತು ತಮಿಳುನಾಡು ವಿಧಾನಸಭೆಯಲ್ಲಿ ವಿಪಕ್ಷ ನಾಯಕನಾಗಿ ಸೇವೆ ಸಲ್ಲಿಸಿದ ಏಕೈಕ ನಟ. ರಜನಿಕಾಂತ್ ಡಿಸೆಂಬರ್ 2017ರಲ್ಲಿ ರಾಜಕೀಯ ಪ್ರವೇಶಿಸುವ ನಿರ್ಧಾರ ಘೋಷಿಸಿದರು. 2020ರಲ್ಲಿ ಅವರು ತಮ್ಮ ರಾಜಕೀಯ ಪಕ್ಷ ‘ರಜನಿ ಮಕ್ಕಳ್ ಮಂದ್ರಂ’ ಅನ್ನು ಪ್ರಾರಂಭಿಸುವ ಘೋಷಣೆಯನ್ನೂ ಮಾಡಿದ್ದರು. ಆದರೆ ಅದಾವುದೂ ಈಡೇರಲಿಲ್ಲ. ನಂತರ ಅವರು ಅನಾರೋಗ್ಯದ ಕಾರಣ ಮುಂದೆಮಾಡಿ ರಾಜಕೀಯದಿಂದ ದೂರವಾದರು. 2018ರಲ್ಲಿ ಕಮಲ್ ಹಾಸನ್ ರಾಜಕೀಯ ಪ್ರವೇಶದ ಘೋಷಣೆ ಮಾಡಿದರು. ಅವರು ಸ್ಥಾಪಿಸಿದ ‘ಮಕ್ಕಳ್ ನೀಧಿ ಮಯ್ಯಮ್’ ಪಕ್ಷ ಕೂಡ ಲೋಕಸಭೆಯಲ್ಲಾಗಲೀ ವಿಧಾನಸಭೆಯಲ್ಲಾಗಲೀ ಒಂದೇ ಒಂದು ಸ್ಥಾನ ಗೆಲ್ಲಲೂ ಆಗದೆ ಮೂಲೆಗುಂಪಾಯಿತು. ಬಳಿಕ ಡಿಎಂಕೆಗೆ ಬೆಂಬಲ ಘೋಷಿಸಿದ ಅವರು ಈಗ ರಾಜ್ಯಸಭಾ ಸದಸ್ಯರಾಗಿದ್ದಾರೆ.

ಹೀಗಿರುವಾಗ, ಜಯಲಲಿತಾ ನಂತರ ಚಿತ್ರರಂಗದ ಮತ್ತೊಬ್ಬರು ತಮಿಳುನಾಡಿನ ಮುಖ್ಯಮಂತ್ರಿ ಹುದ್ದೆಯತ್ತ ಹೋಗಬಹುದು ಎಂಬ ನಿರೀಕ್ಷೆ ಹುಟ್ಟುಹಾಕಿರುವುದು ನಟ ದಳಪತಿ ವಿಜಯ್. ಸದ್ಯದ ತಮಿಳು ರಾಜಕಾರಣವೇನಿದ್ದರೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ಕದನ ಮಾತ್ರವಾಗಿರುವಾಗ, ವಿಜಯ್ ಅವರ ಟಿವಿಕೆ ಈ ಪ್ರಾಬಲ್ಯಕ್ಕೆ ದೊಡ್ಡ ಪೈಪೋಟಿಯಾಗುವ ಹಾಗೆ ಕಂಡಿದೆ. ರಾಜಕೀಯಕ್ಕಾಗಿ ಚಿತ್ರರಂಗವನ್ನೇ ತೊರೆದಿರುವ, ಜನರಿಗಾಗಿ ಹೋರಾಟದ ಮಾತಾಡುತ್ತಿರುವ ಅವರ ಪ್ರಯಾಣ ಚರಿತ್ರೆ ಬರೆಯಲಿದೆಯೇ ಎಂಬುದನ್ನು ನೋಡಬೇಕಿದೆ.

ಎನ್.ಟಿ. ರಾಮರಾವ್

ಸಿನೆಮಾ ಮತ್ತು ರಾಜಕೀಯ ನಂಟಿನ ವಿಷಯದಲ್ಲಿ ಆಂಧ್ರದ ಎನ್.ಟಿ. ರಾಮರಾವ್ ಅವರದು ಬಹಳ ದೊಡ್ಡ ಸಾಧನೆ. ತೆಲುಗು ಚಿತ್ರರಂಗದ ಮಹಾತಾರೆ ಎನ್.ಟಿ. ರಾಮರಾವ್ ಚುನಾವಣಾ ರಾಜಕಾರಣದಲ್ಲೂ ಅಷ್ಟೇ ದೊಡ್ಡ ಯಶಸ್ಸು ಕಂಡಿದ್ದವರು. 1982ರಲ್ಲಿ ತೆಲುಗು ದೇಶಂ ಪಕ್ಷ (ಟಿಡಿಪಿ) ಸ್ಥಾಪಿಸಿದರು. ಆಂಧ್ರದಲ್ಲಿ ಮೊದಲ ಕಾಂಗ್ರೆಸೇತರ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ. ಆಂಧ್ರ ಮುಖ್ಯಮಂತ್ರಿಯಾಗಿ ಮೂರು ಅವಧಿಗೆ ಸುಮಾರು 7 ವರ್ಷಗಳ ಕಾಲ ಆಳ್ವಿಕೆ ನಡೆಸಿದರು. ತೆರೆಯ ಮೇಲಿನ ವರ್ಚಸ್ಸೇ ಹೀಗೆ ನಿಜಜೀವನದ ರಾಜಕಾರಣದಲ್ಲೂ ಮುಂದುವರಿದು ಮಿಂಚಿದ ಇಂಥ ಅದೃಷ್ಟಶಾಲಿಗಳು ಕಡಿಮೆ. ಎನ್‌ಟಿಆರ್ ಕುಟುಂಬದ ನಂತರದ ತಲೆಮಾರು ರಾಜಕಾರಣದಲ್ಲಿ ಮೊದಮೊದಲು ಕೊಂಚ ಆಸಕ್ತಿ ತೋರಿಸಿತ್ತಾದರೂ, ಈಗ ರಾಜಕೀಯದಿಂದ ದೂರವೇ ಇದೆ.

ಚಿರಂಜೀವಿ

ಎನ್‌ಟಿಆರ್ ಬಳಿಕ, ಚಿತ್ರರಂಗದಲ್ಲಿನ ಸ್ಟಾರ್‌ಗಿರಿಯನ್ನು ಬಳಸಿಕೊಂಡು ಆಂಧ್ರ ಸಿಎಂ ಆಗುವ ಕನಸು ಕಂಡಿದ್ದವರು ಚಿರಂಜೀವಿ. ಚಿರಂಜೀವಿ ಪಾಲಿಗೆ ಎಷ್ಟೇ ಅಭಿಮಾನಿಗಳಿದ್ದರೂ, ಆಂಧ್ರ ರಾಜಕಾರಣದಲ್ಲಿ ಮತ್ತೊಂದು ಅಧ್ಯಾಯವನ್ನೇ ಬರೆಯುತ್ತಾರೇನೋ ಅನ್ನಿಸುವಂತೆ ಕಾಣಿಸಿಕೊಂಡಿದ್ದರೂ ಕಡೆಗೆ ಎಲ್ಲ ಸುಳ್ಳಾಗಿತ್ತು. ಚಿರಂಜೀವಿ 2008ರಲ್ಲಿ ಆಂಧ್ರಪ್ರದೇಶದಲ್ಲಿ ‘ಪ್ರಜಾ ರಾಜ್ಯಂ ಪಕ್ಷ’ ಸ್ಥಾಪಿಸಿದರು. 2009ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಜಾರಾಜ್ಯಂ ಪಕ್ಷ ಹೆಚ್ಚಿನ ಪ್ರಭಾವ ಬೀರಲಿಲ್ಲ. ಹಾಗಾಗಿ ಚಿರಂಜೀವಿ ಪಿಆರ್‌ಪಿಯನ್ನು ಕಾಂಗ್ರೆಸ್ ನಲ್ಲಿ ವಿಲೀನಗೊಳಿಸಿದರು. ಕಾಂಗ್ರೆಸ್ ಸರಕಾರದಲ್ಲಿ ಪ್ರವಾಸೋದ್ಯಮ ಖಾತೆ ಸಹಾಯಕ ಸಚಿವರಾಗಿ ಸೇವೆ ಸಲ್ಲಿಸಿದರು. ಪ್ರಸ್ತುತ ರಾಜಕೀಯದಿಂದ ದೂರ ಉಳಿದಿದ್ದಾರೆ.

ಪವನ್ ಕಲ್ಯಾಣ್

ಚಿರಂಜೀವಿ ಸಹೋದರ ಪವನ್ ಕಲ್ಯಾಣ್ ಪಾಲಿಗೆ ಮಾತ್ರ ರಾಜಕೀಯದಲ್ಲಿ ಯಶಸ್ಸು ಒಲಿದಿದೆ. ಜನಸೇನಾ ಪಕ್ಷ ಕಟ್ಟಿದ್ದ ಅವರಿಗೆ ಸದ್ಯದ ರಾಜಕೀಯ ಸನ್ನಿವೇಶವೂ ಅನುಕೂಲಕರವಾಗಿ ಒದಗಿತು. ಕಳೆದ ಆಂಧ್ರಪ್ರದೇಶ ವಿಧಾನ ಸಭಾ ಚುನಾವಣೆಯಲ್ಲಿ ಅವರ ಪಕ್ಷ ಯಶಸ್ಸು ಸಾಧಿಸಿದ್ದು, ಅವರೀಗ ಆಂಧ್ರಪ್ರದೇಶ ಮೈತ್ರಿ ಸರಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾರೆ.

ಇವರಲ್ಲದೆ, ಆಂಧ್ರ ಚಿತ್ರರಂಗದ ನಂದಮೂರಿ ಬಾಲಕೃಷ್ಣ, ನಂದಮೂರಿ ಹರಿಕೃಷ್ಣ, ಜಮುನಾ, ಜಯಸುಧಾ, ಕೃಷ್ಣಂರಾಜು, ದಾಸರಿ ನಾರಾಯಣ ರಾವ್, ರೋಜಾ, ವಿಜಯಶಾಂತಿ ಮುಂತಾದವರು ರಾಜ್ಯ ಮತ್ತು ರಾಷ್ಟ್ರ ಮಟ್ಟದ ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದಾರೆ. ಲೇಡಿ ಸೂಪರ್‌ಸ್ಟಾರ್ ವಿಜಯಶಾಂತಿ ತೆಲಂಗಾಣ ಹೋರಾಟದಲ್ಲಿ ಸಕ್ರಿಯರಾಗಿ ಮುಂದೆ ಸಂಸದೆಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News