ಯಾರೂ ಗುಳೆ ಹೋಗಬೇಡಿ, ಊರಲ್ಲೇ ಕೆಲಸ ಕೊಡುತ್ತೇವೆ : ಡಿಸಿಎಂ ಡಾ.ಜಿ.ಪರಮೇಶ್ವರ್ ಭರವಸೆ
"ಕುಡಿಯುವ ನೀರು, ಜಾನುವಾರುಗಳಿಗೆ ಮೇವು, ಸ್ಥಳೀಯ ಉದ್ಯೋಗಕ್ಕೆ ಆದ್ಯತೆ"
ವಿಜಯನಗರ: ಬರದ ಪರಿಸ್ಥಿತಿಯಲ್ಲಿ ಗ್ರಾಮೀಣ ಜನರು ಉದ್ಯೋಗ ಅರಸಿ ಊರು ತೊರೆದು ಗುಳೆ ಹೋಗುವ ಸ್ಥಿತಿ ನಿರ್ಮಾಣವಾಗಬಾರದು. ಸ್ಥಳೀಯವಾಗಿಯೇ ಉದ್ಯೋಗ ಕಲ್ಪಿಸಿ, ಕೂಲಿ ಹಣವನ್ನು ಕಾಲಮಿತಿಯಲ್ಲಿ ಪಾವತಿಸುವ ವ್ಯವಸ್ಥೆ ಮಾಡಬೇಕು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಹೊಸಪೇಟೆ ತಾಲೂಕಿನ ತಲೆಬಸಾಪುರ ತಾಂಡಕ್ಕೆ ಭೇಟಿ ನೀಡಿದ ಡಿಸಿಎಂ, ವಿಬಿ-ಜಿ ರಾಮ್-ಜಿ ಯೋಜನೆಯಡಿ ಸ್ಥಳೀಯರಿಗೆ ಉದ್ಯೋಗ ಕಲ್ಪಿಸಿರುವ ಕಾಮಗಾರಿ ಸ್ಥಳಗಳನ್ನು ವೀಕ್ಷಿಸಿದರು. ಬಳಿಕ ಕಾರ್ಮಿಕರು ಹಾಗೂ ಅಧಿಕಾರಿಗಳೊಂದಿಗೆ ಮಾತನಾಡಿ, ಸ್ಥಳೀಯವಾಗಿ ಉದ್ಯೋಗ ಸೃಷ್ಟಿಸುವುದರ ಜೊತೆಗೆ ಕೂಲಿ ಹಣವನ್ನು ಸಕಾಲದಲ್ಲಿ ಪಾವತಿಸುವಂತೆ ಸೂಚಿಸಿದರು.
ಗ್ರಾಮಗಳಲ್ಲಿ ಕುಡಿಯುವ ನೀರಿನ ತೊಂದರೆ ಉಂಟಾಗದಂತೆ ತಕ್ಷಣ ಕ್ರಮ ಕೈಗೊಳ್ಳಬೇಕು. ಜಾನುವಾರುಗಳಿಗೆ ಮೇವು ಕೊರತೆಯಾಗದಂತೆ ಅಗತ್ಯವಿದ್ದಲ್ಲಿ ಮೇವು ತರಿಸುವುದು, ಮೇವು ಬ್ಯಾಂಕ್‌ಗಳನ್ನು ಸ್ಥಾಪಿಸುವುದು ಸೇರಿದಂತೆ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಬರದ ಹಿನ್ನೆಲೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗದಿದ್ದರೆ ಜನರು ಕಬ್ಬು ಕಡಿಯಲು, ಕಾಫಿ ತೋಟಗಳಲ್ಲಿ ಅಥವಾ ಇತರ ಕಡೆ ಕೂಲಿ ಅರಸಿ ಊರು ಬಿಟ್ಟು ಹೋಗುವ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಅಂತಹ ಸ್ಥಿತಿ ಬರಬಾರದು ಎಂಬುದು ನಮ್ಮ ಸರ್ಕಾರದ ಉದ್ದೇಶ ಎಂದು ಡಿಸಿಎಂ ಜಿ. ಪರಮೇಶ್ವರ ಹೇಳಿದರು.
‘ನೀವು ಊರು ಬಿಟ್ಟು ಹೋಗಬೇಡಿ. ಇಲ್ಲೇ ಕೆಲಸ ಕೊಡುತ್ತೇವೆ. ಮಳೆ ಇಲ್ಲದ ಕಾರಣಕ್ಕೆ ಕೆಲಸ ಇಲ್ಲದಂತಾಗಬಾರದು. ಸರ್ಕಾರದ ಯೋಜನೆಯ ಉದ್ದೇಶವೇ ನಿಮಗೆ ಇಲ್ಲಿಯೇ ಉದ್ಯೋಗ ಕಲ್ಪಿಸುವುದು’ ಎಂದು ಕಾರ್ಮಿಕರಿಗೆ ಭರವಸೆ ನೀಡಿದರು.
ತಲೆಬಸಾಪುರ ತಾಂಡ ಸೇರಿದಂತೆ ಲಂಬಾಣಿ ಸಮುದಾಯದ ಜನರು ಉದ್ಯೋಗಕ್ಕಾಗಿ ಗುಳೆ ಹೋಗುತ್ತಿರುವುದನ್ನು ಉಲ್ಲೇಖಿಸಿದ ಅವರು, ಲಂಬಾಣಿ ಸಮುದಾಯದವರು ಊರು ಬಿಟ್ಟು ಹೋಗಬಾರದು. ಊರಲ್ಲೇ ಉಳಿದು ಕೆಲಸ ಮಾಡುವಂತೆ ಅಗತ್ಯ ಉದ್ಯೋಗ ಸೃಷ್ಟಿಸಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಮಗಾರಿ ಸ್ಥಳದಲ್ಲಿ ಕಾರ್ಮಿಕರೊಂದಿಗೆ ಮಾತನಾಡಿದಾಗ ಮೂರು–ನಾಲ್ಕು ವಾರಗಳಿಂದ ಹಾಗೂ ಕೆಲವರಿಗೆ ತಿಂಗಳಿನಿಂದ ಕೂಲಿ ಹಣ ಪಾವತಿಯಾಗದಿರುವುದು ಉಪಮುಖ್ಯಮಂತ್ರಿ ಜಿ. ಪರಮೇಶ್ವರ ಅವರ ಗಮನಕ್ಕೆ ಬಂತು. ಇದಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳನ್ನು ಸ್ಥಳದಲ್ಲೇ ತರಾಟೆಗೆ ತೆಗೆದುಕೊಂಡರು.
ಜನರು ಕೆಲಸ ಮಾಡಿದ ಬಳಿಕ ಹಣಕ್ಕಾಗಿ ತಿಂಗಳುಗಳ ಕಾಲ ಕಾಯಬೇಕಾದರೆ ಅವರು ಊಟ ಮಾಡುವುದು ಹೇಗೆ? ಕುಟುಂಬ ನಡೆಸುವುದು ಹೇಗೆ? ಹಣ ಸಿಗದಿದ್ದರೆ ಸಹಜವಾಗಿಯೇ ಬೇರೆ ಊರಿಗೆ ಕೂಲಿ ಹುಡುಕಿಕೊಂಡು ಹೋಗುತ್ತಾರೆ. ಅದು ಆಗಬಾರದು ಎಂದು ಹೇಳಿದರು.
ಬಾಕಿ ಇರುವ ಕೂಲಿ ಹಣವನ್ನು ತಕ್ಷಣ ಬಿಡುಗಡೆ ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದ ಅವರು, ಈ ಕುರಿತು ಸಂಬಂಧಪಟ್ಟವರೊಂದಿಗೆ ತಾವು ಮಾತನಾಡುವುದಾಗಿ ತಿಳಿಸಿದರು. ವಾರವಾರ ಕೂಲಿ ಹಣ ಕೊಡಬೇಕು. ಕಾರ್ಮಿಕರು ಮಾಡಿದ ಕೆಲಸಕ್ಕೆ ಸರಿಯಾದ ಸಮಯಕ್ಕೆ ಹಣ ಪಾವತಿಸಬೇಕು. ಹಣ ಕೊಡದಿದ್ದರೆ ತಕ್ಷಣ ಕ್ರಮ ಕೈಗೊಳ್ಳಿ ಎಂದು ಸಿಇಒ ಸೇರಿದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಕೂಲಿ ಪಾವತಿಯಲ್ಲಿ ವಿಳಂಬಕ್ಕೆ ಕಾರಣವೇನು ಎಂಬುದನ್ನು ತಕ್ಷಣ ಪರಿಶೀಲಿಸಿ, ಬಾಕಿ ಹಣ ಬಿಡುಗಡೆ ಮಾಡುವಂತೆ ಸೂಚಿಸಿದ ಜಿ. ಪರಮೇಶ್ವರ ಅವರು, ಯೋಜನೆಯ ಅನುಷ್ಠಾನ ಕೇವಲ ದಾಖಲೆಗಳಲ್ಲಿ ಉಳಿಯಬಾರದು ಎಂದು ಹೇಳಿದರು.
ಬರದ ಸಮಯದಲ್ಲಿ ಜನರಿಗೆ ಕೆಲಸ ನೀಡುವುದೇ ನಮ್ಮ ಸರ್ಕಾರದ ಆದ್ಯತೆ. ಆದರೆ, ಕೆಲಸ ಮಾಡಿದವರಿಗೆ ಕೂಲಿ ನೀಡುವುದು ತಡವಾದರೆ ಯೋಜನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗುತ್ತದೆ. ಆದ್ದರಿಂದ ಕೂಲಿ ಪಾವತಿಯನ್ನು ನಿರಂತರವಾಗಿ ಮೇಲ್ವಿಚಾರಣೆ ಮಾಡಬೇಕು ಎಂದು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸಂವಾದದ ವೇಳೆ ಅನ್ನಭಾಗ್ಯ ಮತ್ತು ಗೃಹಲಕ್ಷ್ಮಿ ಯೋಜನೆಗಳ ಸೌಲಭ್ಯಗಳ ಕುರಿತು ಡಾ. ಪರಮೇಶ್ವರ ಅವರು ಮಾಹಿತಿ ಪಡೆದುಕೊಂಡರು. ಗೃಹಲಕ್ಷ್ಮಿ ಯೋಜನೆಯಡಿ 2,000 ರೂ. ಹಣ ಬಾರದ ಮಹಿಳೆಯರ ವಿವರಗಳನ್ನು ಪರಿಶೀಲಿಸಿ, ತಾಂತ್ರಿಕ ಅಥವಾ ದಾಖಲೆ ಸಮಸ್ಯೆಗಳಿಂದ ಹಣ ಸ್ಥಗಿತಗೊಂಡಿದ್ದರೆ ಅವುಗಳನ್ನು ಸರಿಪಡಿಸಿ ಅರ್ಹ ಫಲಾನುಭವಿಗಳಿಗೆ ಸೌಲಭ್ಯ ತಲುಪಿಸಬೇಕು ಎಂದು ಸೂಚಿಸಿದರು.
ಮೃತಪಟ್ಟವರ ಹೆಸರು, ಒಂದೇ ಫಲಾನುಭವಿಯ ಹೆಸರಿನಲ್ಲಿ ಎರಡು ಬಾರಿ ದಾಖಲಾಗಿರುವುದು ಸೇರಿದಂತೆ ಕೆಲವು ದೋಷಗಳನ್ನು ಸರಿಪಡಿಸುವ ಪ್ರಕ್ರಿಯೆಯಿಂದ ಕೆಲವೆಡೆ ವಿಳಂಬವಾಗಿದೆ. ಅನ್ನಭಾಗ್ಯ ಯೋಜನೆಯಲ್ಲಿ ಅಕ್ಕಿ ನೀಡಲಾಗುತ್ತಿದ್ದು, ಅರ್ಹರಿಗೆ ಸರ್ಕಾರದ ಯಾವುದೇ ಸೌಲಭ್ಯ ತಪ್ಪದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.