ಹೊಸಪೇಟೆ/ವಿಜಯನಗರ: ಜಿಲ್ಲೆಯಲ್ಲಿ ಒಂದು ಎಕರೆಗಿಂತ ಕಡಿಮೆ ಹಾಗೂ ಎರಡು ಎಕರೆಗಿಂತ ಕಡಿಮೆ ಜಮೀನು ಹೊಂದಿರುವ ಸಣ್ಣ ಮತ್ತು ಅತಿ ಸಣ್ಣ ರೈತರ ಸಂಖ್ಯೆ 3,45,273 ಇದೆ ಎಂಬ ಮಾಹಿತಿ ಪಡೆದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರು, ಬರದಿಂದ ರೈತರಿಗೆ ಉಂಟಾಗಿರುವ ನಷ್ಟದ ನಿಖರ ಮಾಹಿತಿಯನ್ನು ನೀಡುವಂತೆ ಅಧಿಕಾರಿಗಳನ್ನು ಪ್ರಶ್ನಿಸಿದರು.

ಹೊಸಪೇಟೆಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಬರ ಪರಿಸ್ಥಿತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಂದ ನಷ್ಟದ ನಿಖರ ಅಂಕಿ-ಅಂಶ ಹಾಗೂ ಅಗತ್ಯ ಮಾಹಿತಿಯನ್ನು ಕೇಳಿದಾಗ ಸಮರ್ಪಕ ಉತ್ತರ ದೊರೆಯದ ಹಿನ್ನೆಲೆಯಲ್ಲಿ ಡಿಸಿಎಂ ಅವರು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

‘ಸಭೆಗೆ ಬರುವಾಗ ಎಲ್ಲಾ ಮಾಹಿತಿಗಳನ್ನು ತೆಗೆದುಕೊಂಡು ಬರಬೇಕೆಂಬ ಮಾಹಿತಿ ಇಲ್ಲವೇ ನಿಮಗೆ?’ ಎಂದು ಅಧಿಕಾರಿಗಳನ್ನು ಪ್ರಶ್ನಿಸಿದ ಅವರು, ರೈತರ ಬೆಳೆ ನಷ್ಟ ಹಾಗೂ ಬರ ಪರಿಸ್ಥಿತಿಗೆ ಸಂಬಂಧಿಸಿದಂತೆ ನಿಖರವಾದ ಅಂಕಿ-ಅಂಶಗಳೊಂದಿಗೆ ಸಭೆಗೆ ಹಾಜರಾಗುವಂತೆ ಸೂಚಿಸಿದರು.

ಕೃಷಿ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಒಂದೇ ರೀತಿಯ ಮಾಹಿತಿ ನೀಡುತ್ತಿರುವುದನ್ನು ಗಮನಿಸಿದ ಡಾ. ಪರಮೇಶ್ವರ್ ಅವರು, ‘ತೋಟಗಾರಿಕೆ ಇಲಾಖೆ ಹಾಗೂ ಕೃಷಿ ಇಲಾಖೆ ಎರಡೂ ಒಂದೇ ಮಾಹಿತಿಯನ್ನು ನೀಡುವುದಾದರೆ ಹೇಗೆ? ಇದನ್ನು ನಾನು ಒಪ್ಪುವುದಿಲ್ಲ. ಮಾಹಿತಿ ಪರಿಶೀಲಿಸಿ, ನಿಖರವಾದ ವಿವರಗಳನ್ನು ನೀಡಬೇಕು’ ಎಂದು ಸೂಚಿಸಿದರು.

ರೈತರ ಬೆಳೆ ನಷ್ಟ, ಹಿಡುವಳಿ ಪ್ರಮಾಣ, ನಷ್ಟಕ್ಕೊಳಗಾದ ಪ್ರದೇಶ ಹಾಗೂ ಪರಿಹಾರಕ್ಕೆ ಸಂಬಂಧಿಸಿದ ಮಾಹಿತಿಗಳು ಇಲಾಖಾವಾರು ಸಮನ್ವಯದೊಂದಿಗೆ ಇರಬೇಕು. ತಪ್ಪಾದ ಅಥವಾ ಅಪೂರ್ಣ ಮಾಹಿತಿ ನೀಡುವುದರಿಂದ ಸರ್ಕಾರದ ಮಟ್ಟದಲ್ಲಿ ಕೈಗೊಳ್ಳುವ ನಿರ್ಧಾರಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಇದೇ ವೇಳೆ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಸೂಚನೆ ನೀಡಿದ ಡಿಸಿಎಂ, ಸಭೆಗೆ ಅಧಿಕಾರಿಗಳು ಯಾವ ದಾಖಲೆಗಳು ಮತ್ತು ಮಾಹಿತಿಗಳನ್ನು ತಂದಿದ್ದಾರೆ ಎಂಬುದನ್ನು ಸಭೆ ಆರಂಭಕ್ಕೂ ಮುನ್ನವೇ ಪರಿಶೀಲಿಸಬೇಕು. ಅಗತ್ಯ ಮಾರ್ಗಸೂಚಿಗಳನ್ನು ಅಧಿಕಾರಿಗಳಿಗೆ ನೀಡಬೇಕು ಎಂದು ತಿಳಿಸಿದರು.

ಅಧಿಕಾರಿಗಳಿಂದ ನಿಖರ ಮಾಹಿತಿ ಪಡೆದು, ಬರದಿಂದ ರೈತರಿಗೆ ಆಗಿರುವ ನಷ್ಟದ ವಾಸ್ತವ ಚಿತ್ರಣವನ್ನು ಸರ್ಕಾರದ ಮುಂದಿಡಬೇಕು. ಈ ನಿಟ್ಟಿನಲ್ಲಿ ಇಲಾಖೆಗಳ ನಡುವೆ ಸಮನ್ವಯ ಅಗತ್ಯ ಎಂದು ಡಾ. ಪರಮೇಶ್ವರ್ ಸೂಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor