×
Ad

Harapanahalli | ಅರಣ್ಯ ಇಲಾಖೆ ಕ್ರಮ ಖಂಡಿಸಿ ಮೇ 18ರಂದು ರೈತ ಸಂಘದಿಂದ ಪ್ರತಿಭಟನೆ

Update: 2026-05-16 19:45 IST

ಹರಪನಹಳ್ಳಿ: ತಾಲೂಕಿನ ಕಡತಿ, ಕಂಡೀಕೆರೆ, ಕಂಡಿಕೇರಿ ತಾಂಡ, ವಟ್ಲಹಳ್ಳಿ ಪ್ರದೇಶಗಳ ಸುಮಾರು 400 ಎಕರೆ ಜಮೀನಿನಲ್ಲಿ ಬೆಳೆದಿದ್ದ ಬೆಳೆಗಳನ್ನು ಅರಣ್ಯ ಇಲಾಖೆ ಅಧಿಕಾರಿಗಳು ನಾಶಪಡಿಸಿ, 200ಕ್ಕೂ ಅಧಿಕ ರೈತ ಕುಟುಂಬಗಳನ್ನು ಒಕ್ಕಲೆಬ್ಬಿಸಲು ಮುಂದಾಗಿರುವುದು ಖಂಡನೀಯ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಾಧ್ಯಕ್ಷ ಬಿ.ವಿ. ಗೌಡ್ರು ಆಕ್ರೋಶ ವ್ಯಕ್ತಪಡಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಒಂದೆಡೆ ಅರಣ್ಯ ವಾಸಿಗಳನ್ನು ಒಕ್ಕಲೆಬ್ಬಿಸಬೇಡಿ ಎಂದು ಸರ್ಕಾರ ಹೇಳುತ್ತಿದ್ದರೆ, ಮತ್ತೊಂದೆಡೆ ಅರಣ್ಯ ಇಲಾಖೆ ಮೂಲಕ ರೈತರ ಮೇಲೆ ಗದಾಪ್ರಹಾರ ನಡೆಸಲಾಗುತ್ತಿದೆ” ಎಂದು ಆರೋಪಿಸಿದರು.

ಈ ಕ್ರಮವನ್ನು ಖಂಡಿಸಿ ಮೇ 18ರಂದು ತಾಲೂಕಿನ ಅಲಗಿಲವಾಡ ಕ್ರಾಸ್‌ನಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದ್ದು, ಪ್ರತಿಭಟನೆಗೆ ಕೋಡಿಹಳ್ಳಿ ಚಂದ್ರಶೇಖರ್ ನೇತೃತ್ವ ವಹಿಸಲಿದ್ದಾರೆ ಎಂದು ತಿಳಿಸಿದರು.

ಪ್ರತಿಭಟನೆ ಸ್ಥಳಕ್ಕೆ ಜಿಲ್ಲಾಧಿಕಾರಿ ಹಾಗೂ ಅರಣ್ಯ ಇಲಾಖೆಯ ಡಿಎಫ್ಒ ಸೇರಿದಂತೆ ಸಂಬಂಧಿತ ಅಧಿಕಾರಿಗಳು ಬಂದು ರೈತರ ಮನವಿ ಸ್ವೀಕರಿಸಬೇಕು. ಇಲ್ಲವಾದರೆ ಉಗ್ರ ಹೋರಾಟ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.

ರೈತ ಸಂಘದ ಮುಖಂಡ ಶೇಖರ್ ನಾಯ್ಕ್ ಮಾತನಾಡಿ, ರೈತರು ದಶಕಗಳಿಂದ ಕೃಷಿ ನಡೆಸುತ್ತಿದ್ದ ಭೂಮಿಯನ್ನು ಏಕಾಏಕಿ ಅರಣ್ಯ ಇಲಾಖೆಗೆ ಸೇರಿದ ಜಾಗ ಎಂದು ಘೋಷಿಸಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ. ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲಾಗುವುದು ಎಂದರು.

ಕರ್ನಾಟಕ ರಾಜ್ಯ ರೈತರ ಅಭಿಮಾನಿ ಸಂಘ ರಾಜ್ಯಾಧ್ಯಕ್ಷ ಶಿರಗಾನಹಳ್ಳಿ ವಿಶ್ವನಾಥ್ ಮಾತನಾಡಿ, ತಾಂಡಾ ನಿವಾಸಿಗಳನ್ನು ಒಕ್ಕಲೆಬ್ಬಿಸಲು ಅರಣ್ಯ ಇಲಾಖೆ ಮುಂದಾಗಿರುವುದು ಖಂಡನೀಯ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಜಿಲ್ಲಾ ಉಪಾಧ್ಯಕ್ಷ ಸುರೇಶ್, ಹರಿಹರ ತಾಲೂಕು ಉಪಾಧ್ಯಕ್ಷ ಸಂತೋಷ್, ಜಿಲ್ಲಾ ರೈತ ಮುಖಂಡ ತಾಯಣ್ಣ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News