Vijayanagara | ಆಸ್ಪತ್ರೆಗಳಲ್ಲಿ ಲಸಿಕೆ ಕೊರತೆಯಾದರೆ ಕಠಿಣ ಕ್ರಮ : ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಎಚ್ಚರಿಕೆ
ವಿಜಯನಗರ(ಹೊಸಪೇಟೆ) : ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ನಾಯಿ ಕಡಿತ ಮತ್ತು ಹಾವು ಕಡಿತ ನಿರೋಧಕ ಲಸಿಕೆಗಳು ಕಡ್ಡಾಯವಾಗಿ ಲಭ್ಯವಿರಬೇಕು. ಲಸಿಕೆ ಕೊರತೆಯಿಂದ ಚಿಕಿತ್ಸೆ ವಿಳಂಬವಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಶಿಸ್ತುಕ್ರಮ ಕೈಗೊಳ್ಳಲಾಗುವುದು ಎಂದು ಕವಿತಾ ಎಸ್. ಮನ್ನಿಕೇರಿ ಎಚ್ಚರಿಕೆ ನೀಡಿದರು.
ನಗರದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ನಡೆದ ಅಂತರ ಇಲಾಖೆ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲಾ ಆಸ್ಪತ್ರೆಯಿಂದ ಗ್ರಾಮೀಣ ಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರಗಳವರೆಗೆ ಆಂಟಿ ರೇಬೀಸ್ ಹಾಗೂ ಆಂಟಿ ಸ್ನೇಕ್ ವೆನಮ್ ಲಸಿಕೆಗಳ ಹೆಚ್ಚುವರಿ ದಾಸ್ತಾನು ಇರಬೇಕು ಎಂದು ಸೂಚಿಸಿದರು.
ನಾಯಿ ಅಥವಾ ಹಾವು ಕಡಿತವಾದ ತಕ್ಷಣ ಸಮಯ ವ್ಯರ್ಥ ಮಾಡದೇ ಸಮೀಪದ ಆಸ್ಪತ್ರೆಗೆ ತೆರಳಿ ಪ್ರಥಮ ಚಿಕಿತ್ಸೆ ಪಡೆಯಬೇಕು. ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳು, ಸಮುದಾಯ ಆರೋಗ್ಯ ಕೇಂದ್ರಗಳು ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಉಚಿತ ಚಿಕಿತ್ಸೆ ದೊರೆಯಲಿದೆ ಎಂದು ಹೇಳಿದರು.
ಸಾರ್ವಜನಿಕರು ಮೂಢನಂಬಿಕೆಗಳಿಗೆ ಒಳಗಾಗಿ ನಾಟಿ ಔಷಧಿಗಳ ಮೊರೆ ಹೋಗಬಾರದು. “ಗೋಲ್ಡನ್ ಅವರ್” ಅವಧಿಯಲ್ಲೇ ಚಿಕಿತ್ಸೆ ಪಡೆಯುವುದರಿಂದ ಜೀವ ಉಳಿಸಬಹುದು ಎಂದು ಮನವಿ ಮಾಡಿದರು.
ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಬೀದಿನಾಯಿಗಳ ನಿಯಂತ್ರಣಕ್ಕಾಗಿ ಸ್ಥಳೀಯ ಸಂಸ್ಥೆಗಳು ರೇಬೀಸ್ ನಿರೋಧಕ ಲಸಿಕೆ ಹಾಗೂ ಸಂತಾನಹರಣ ಕಾರ್ಯ ತಕ್ಷಣ ಕೈಗೊಳ್ಳಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಿದರು. ಆಶಾ ಕಾರ್ಯಕರ್ತೆಯರ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದರು.
ಈ ವೇಳೆ ಡಾ. ಎಲ್.ಆರ್. ಶಂಕರ್ ನಾಯ್ಕ್ ಮಾತನಾಡಿ, ಜಿಲ್ಲೆಯಲ್ಲಿ ಲಸಿಕೆಗಳ ಸಮರ್ಪಕ ದಾಸ್ತಾನು ಇದ್ದು ಯಾವುದೇ ಕೊರತೆ ಇಲ್ಲ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಈ ಸಾಲಿನಲ್ಲಿ ಹೊಸಪೇಟೆ ತಾಲೂಕಿನಲ್ಲಿ 1490, ಹೂವಿನಹಡಗಲಿಯಲ್ಲಿ 662, ಹಗರಿಬೊಮ್ಮನಹಳ್ಳಿಯಲ್ಲಿ 606, ಹರಪನಹಳ್ಳಿಯಲ್ಲಿ 654, ಕೂಡ್ಲಿಗಿಯಲ್ಲಿ 294 ಹಾಗೂ ಕೊಟ್ಟೂರಿನಲ್ಲಿ 77 ಸೇರಿದಂತೆ ಒಟ್ಟು 3783 ನಾಯಿ ಕಡಿತ ಪ್ರಕರಣಗಳು ದಾಖಲಾಗಿವೆ ಎಂದು ಮಾಹಿತಿ ನೀಡಿದರು.
ಹರಪನಹಳ್ಳಿ ಮತ್ತು ಹೊಸಪೇಟೆ ತಾಲೂಕುಗಳಲ್ಲಿ ತಲಾ ಇಬ್ಬರು ರೇಬೀಸ್‌ನಿಂದ ಮೃತಪಟ್ಟಿದ್ದಾರೆ. ಇದೇ ವೇಳೆ ಜಿಲ್ಲೆಯಾದ್ಯಂತ ಒಟ್ಟು 99 ಹಾವು ಕಡಿತ ಪ್ರಕರಣಗಳು ದಾಖಲಾಗಿದ್ದು, ಚಿಕಿತ್ಸೆ ಫಲಿಸದೆ 7 ಜನ ಮೃತಪಟ್ಟಿದ್ದಾರೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ನೋಂಗ್ಜಯ್ ಮುಹಮ್ಮದ್ ಅಲಿ ಅಕ್ರಂ ಷಾ, ಡಾ.ಜಂಬಯ್ಯ, ರವಿ, ಷಣ್ಮುಖ ನಾಯ್ಕ ಸೇರಿದಂತೆ ವಿವಿಧ ತಾಲೂಕುಗಳ ಆರೋಗ್ಯಾಧಿಕಾರಿಗಳು ಉಪಸ್ಥಿತರಿದ್ದರು.