ಹೂವಿನಹಡಗಲಿ | ಎಸೆಸೆಲ್ಸಿ ಫಲಿತಾಂಶ ಸುಧಾರಣೆಗೆ ‘ಮಿಷನ್ 40+’ ಯೋಜನೆ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಿ : ಮಂಗಳಾ ಕೆ.
ಎರಡು ದಿನಗಳ ತರಬೇತಿ ಕಾರ್ಯಾಗಾರ
ಹೂವಿನಹಡಗಲಿ: 2026-27ನೇ ಸಾಲಿನ ಎಸೆಸೆಲ್ಸಿ ಪರೀಕ್ಷೆಯ ಫಲಿತಾಂಶವನ್ನು ಉತ್ತಮಪಡಿಸುವ ಉದ್ದೇಶದಿಂದ ಕಲ್ಯಾಣ ಕರ್ನಾಟಕ ಶಾಲಾ ಶಿಕ್ಷಣ ಇಲಾಖೆ ‘ಮಿಷನ್ 40+’ ಯೋಜನೆಯನ್ನು ಜಾರಿಗೆ ತಂದಿದ್ದು, ಶಿಕ್ಷಕರು ಇದನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಮಂಗಳಾ ಕೆ. ಹೇಳಿದರು.
ಪಟ್ಟಣದ ಜಿ.ಪಿ.ಜಿ. ಪ್ರೌಢಶಾಲೆಯಲ್ಲಿ ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಭಾಷಾ ಹಾಗೂ ಐಚ್ಛಿಕ ವಿಷಯಗಳ ಶಿಕ್ಷಕರಿಗಾಗಿ ಆಯೋಜಿಸಿದ್ದ ಎರಡು ದಿನಗಳ ತರಬೇತಿ ಕಾರ್ಯಾಗಾರದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಈ ಬಾರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳ ಪೈಕಿ ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗಳು ಕನಿಷ್ಠ 40 ಅಂಕಗಳನ್ನು ಗಳಿಸುವಂತೆ ಸಿದ್ಧಗೊಳಿಸುವುದು ಇಲಾಖೆಯ ಉದ್ದೇಶವಾಗಿದೆ. ಆರು ವಿಷಯಗಳಲ್ಲಿನ ಸುಲಭ ಪಾಠಗಳನ್ನು ಕಲಿತರೂ ಕನಿಷ್ಠ ಉತ್ತೀರ್ಣರಾಗಲು ಸಾಧ್ಯವಾಗುವಂತೆ ಯೋಜನೆ ರೂಪಿಸಲಾಗಿದೆ. ಈ ಗುರಿ ಸಾಧಿಸುವ ನಿಟ್ಟಿನಲ್ಲಿ ಇಲಾಖೆ ಕಾರ್ಯಪ್ರವೃತ್ತವಾಗಿದೆ. ಮುಖ್ಯಶಿಕ್ಷಕರು ಹಾಗೂ ಶಿಕ್ಷಕರು ಈ ಯೋಜನೆಯನ್ನು ಗಂಭೀರವಾಗಿ ಪರಿಗಣಿಸಿ ಕಾರ್ಯನಿರ್ವಹಿಸಬೇಕು ಎಂದು ತಿಳಿಸಿದರು.
ಕ್ಷೇತ್ರ ಸಮನ್ವಯಾಧಿಕಾರಿ ಎ. ಕೋಟೆಪ್ಪ ಮಾತನಾಡಿ, ಭಾಷಾ ಹಾಗೂ ಐಚ್ಛಿಕ ವಿಷಯಗಳ ಆರು ವಿಷಯಗಳ ಸಂಪನ್ಮೂಲ ಶಿಕ್ಷಕರು ಸೂಕ್ತ ತರಬೇತಿ ನೀಡಲಿದ್ದಾರೆ. ಶಿಕ್ಷಕರು ಇದಕ್ಕೆ ಪ್ರಥಮ ಆದ್ಯತೆ ನೀಡಿ, ಪರೀಕ್ಷಾ ಫಲಿತಾಂಶ ಹೆಚ್ಚಳಕ್ಕೆ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದರು.
ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿ. ಹನುಮಂತಪ್ಪ ಮಾತನಾಡಿ, ನಿಧಾನಗತಿಯ ಕಲಿಕೆಯ ವಿದ್ಯಾರ್ಥಿಗಳಿಗೆ ಪುನರಾವರ್ತನೆ ಮೂಲಕ ಬೋಧನೆ ಮಾಡಬೇಕು. ‘ಖಚಿತ ಅಂಕಗಳು’, ‘ವಿಷಯಾಧಾರಿತ ಅಂಕಗಳು’ ಹಾಗೂ ‘ಸುಲಭ ಅಂಕಗಳು’ ಎಂಬ ಮೂರು ಹಂತಗಳಲ್ಲಿ ಸರಳೀಕೃತ ವಿಧಾನವನ್ನು ಅನುಸರಿಸಿ, ಆಸಕ್ತಿಯಿಂದ ಕಲಿಸಬೇಕು ಎಂದು ಹೇಳಿದರು.
ಎಸೆಸೆಲ್ಸಿ ತಾಲೂಕು ನೋಡಲ್ ಅಧಿಕಾರಿ ಹಣ್ಣಿ ನರೇಶ್ ಉಪಸ್ಥಿತರಿದ್ದರು.
ಕನ್ನಡ ವಿಷಯದಲ್ಲಿ ಮಂಜುನಾಥ್ ಮತ್ತು ಸಿ. ಸೋಮೇಶಪ್ಪ, ಇಂಗ್ಲಿಷ್‌ನಲ್ಲಿ ಸಹದೇವಪ್ಪ ನಿಗದಿ ಮತ್ತು ಎಂ. ಶೇಕ್ ಅಹಮದ್, ಹಿಂದಿಯಲ್ಲಿ ಸಣ್ಣಹಾಲೇಶ ಮತ್ತು ಎಲ್. ಖಾದರ್ ಬಾಷಾ, ಗಣಿತದಲ್ಲಿ ವೀರೇಶ್ ರೇವಡಿ ಮತ್ತು ಕೋರಿ ವಿಶ್ವನಾಥ, ವಿಜ್ಞಾನದಲ್ಲಿ ಬಸವನಗೌಡ ಮತ್ತು ನಿಂಗಪ್ಪ ಕೆ., ಸಮಾಜ ವಿಜ್ಞಾನದಲ್ಲಿ ಅನ್ನದಾನ ಸ್ವಾಮಿ ಮತ್ತು ಜಿ.ಎಸ್.ಎಂ. ಕೊಟ್ರೇಶ್ ಅವರು ವಿಷಯ ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿ ನೀಡಿದರು.
ತಾಲೂಕಿನ ಸರ್ಕಾರಿ, ಅನುದಾನಿತ, ಅನುದಾನರಹಿತ ಹಾಗೂ ಮೊರಾರ್ಜಿ ವಸತಿ ಪ್ರೌಢಶಾಲೆಗಳ ಸುಮಾರು 300 ಮುಖ್ಯಶಿಕ್ಷಕರು ಮತ್ತು ಶಿಕ್ಷಕರು ತರಬೇತಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಂಡರು.