Vijayanagara | ಸಾಮಾಜಿಕ ಕಳಕಳಿಯ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಿ : ನಾಗರಾಜ
ಕನಕದಾಸರ ಜಯಂತಿ ಆಚರಣೆ
ಕೊಟ್ಟೂರು (ವಿಜಯನಗರ): ಪಟ್ಟಣದ ತಾಲೂಕು ಕಚೇರಿಯ ಮಹಾತ್ಮ ಗಾಂಧೀಜಿ ಸಭಾಂಗಣದಲ್ಲಿ ಭಕ್ತಶ್ರೇಷ್ಠ ಕನಕದಾಸರ ಜಯಂತಿಯನ್ನು ಆಚರಿಸಲಾಯಿತು. ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ ಅವರು ಕನಕದಾಸರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಉಪನ್ಯಾಸ ನೀಡಿದ ಹಂಪಿ ವಿಶ್ವವಿದ್ಯಾಲಯದಲ್ಲಿ ಪಿಎಚ್‌ಡಿ ಅಧ್ಯಯನ ಮಾಡುತ್ತಿರುವ ಮಗ್ಗದ ನಾಗರಾಜ ಮಾತನಾಡಿ, ವಚನ ಸಾಹಿತ್ಯ ಹಾಗೂ ದಾಸ ಸಾಹಿತ್ಯ ವಿಶ್ವ ಸಾಹಿತ್ಯಕ್ಕೆ ಕನ್ನಡದ ಮಹತ್ವದ ಕೊಡುಗೆಗಳಾಗಿವೆ. ಎರಡೂ ಸಾಹಿತ್ಯ ಪರಂಪರೆಗಳಲ್ಲಿ ಭಕ್ತಿಗೆ ಶ್ರೇಷ್ಠ ಸ್ಥಾನವಿದೆ. ವಚನಕಾರರು ಹರಭಕ್ತರಾದರೆ, ದಾಸ ಸಾಹಿತ್ಯಕಾರರು ಹರಿಭಕ್ತರಾಗಿದ್ದಾರೆ. ದಾಸ ಸಾಹಿತ್ಯದ ಬಹುತೇಕ ಕವಿಗಳು ಮೇಲ್ವರ್ಗಕ್ಕೆ ಸೇರಿದವರಾಗಿದ್ದರೆ, ಕನಕದಾಸರು ಶೂದ್ರ ಸಮುದಾಯದಿಂದ ಬಂದವರಾಗಿದ್ದರು. ತಮ್ಮ ಕೀರ್ತನೆಗಳ ಮೂಲಕ ಸಮಾಜದಲ್ಲಿನ ಅಂದಿನ ಮೌಢ್ಯ ಹಾಗೂ ಜಾತಿ ವ್ಯವಸ್ಥೆಯನ್ನು ವಿಡಂಬಿಸಿ, ಅವುಗಳನ್ನು ತಿದ್ದಲು ಪ್ರಯತ್ನಿಸಿದರು ಎಂದು ಹೇಳಿದರು.
ಕನಕದಾಸರು ಇಂದಿನ ಹಾವೇರಿ ಜಿಲ್ಲೆಯ ಬಾಡ ಗ್ರಾಮದಲ್ಲಿ ಬೀರಪ್ಪ ನಾಯಕ ಮತ್ತು ಬಚ್ಚಮ್ಮ ದಂಪತಿಯ ಮಗನಾಗಿ ಜನಿಸಿದರು. ಆರಂಭದಲ್ಲಿ ದಂಡನಾಯಕರಾಗಿ ಸೇವೆ ಸಲ್ಲಿಸಿದ ಅವರು, ಬಳಿಕ ಆಧ್ಯಾತ್ಮ ಹಾಗೂ ಹರಿಭಕ್ತಿಯ ಕಡೆಗೆ ಒಲವು ಬೆಳೆಸಿಕೊಂಡರು. ವ್ಯಾಸರಾಯರ ಮೆಚ್ಚಿನ ಶಿಷ್ಯರಾಗಿ ಬೆಳೆದ ಅವರು ದಾಸಕೂಟದ ಪ್ರಮುಖ ಪ್ರತಿನಿಧಿಯಾಗಿದ್ದರು. ಕೀರ್ತನೆಗಳ ಜೊತೆಗೆ ‘ಮೋಹನ ತರಂಗಿಣಿ’, ‘ನಳಚರಿತ್ರೆ’, ‘ರಾಮಧಾನ್ಯ ಚರಿತೆ’ ಹಾಗೂ ‘ಹರಿಭಕ್ತಿಸಾರ’ ಕೃತಿಗಳನ್ನು ರಚಿಸುವ ಮೂಲಕ ತಮ್ಮ ಸಾಹಿತ್ಯ ಪ್ರೌಢಿಮೆಯನ್ನು ಮೆರೆದಿದ್ದಾರೆ ಎಂದು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಗ್ರೇಡ್-2 ತಹಶೀಲ್ದಾರ್ ಎಂ. ಪ್ರತಿಭಾ ಮಾತನಾಡಿ, ಕನಕದಾಸರು ತಮ್ಮ ಕೀರ್ತನೆಗಳ ಮೂಲಕ ಸಾರಿದ ಸಾಮಾಜಿಕ ಕಳಕಳಿಯ ಸಂದೇಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಅವರಿಗೆ ಗೌರವ ಸಲ್ಲಿಸಬೇಕು. ಆಗ ಮಾತ್ರ ಜಯಂತಿ ಆಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದರು.
ಸಾಹಿತಿಗಳಾದ ಉಜ್ಜಿನಿ ರುದ್ರಪ್ಪ ಹಾಗೂ ತಾಲೂಕು ಕುರುಬ ಸಂಘದ ಅಧ್ಯಕ್ಷ ಮೂಗಣ್ಣ ಮಾತನಾಡಿದರು.
ಕಾರ್ಯಕ್ರಮದಲ್ಲಿ ಮುಖಂಡರಾದ ಗುಡಿಯಾರ ಮಲ್ಲಿಕಾರ್ಜುನ, ಲೋಕಣ್ಣ, ಮಾನಸ ರಾಜಣ್ಣ, ನಾಗಪ್ಪ, ಬಸಣ್ಣ, ಗಜೇಂದ್ರ, ಶಿರಸ್ತೇದಾರ್ ಎಸ್. ರೇಖಾ, ಶಿಕ್ಷಣ ಇಲಾಖೆಯ ಸಿಆರ್‌ಪಿ ರವಿಕುಮಾರ್, ಕೊಟ್ರೇಶ್, ಗಿರಿಜ ಬಣಕಾರ್, ಕಂದಾಯ ನಿರೀಕ್ಷಕ ಡಿ. ಶಿವಕುಮಾರ್, ಗ್ರಾಮ ಆಡಳಿತ ಅಧಿಕಾರಿ ಹರೀಶ್, ರಮೇಶ್, ಶಾರದ, ಮಂಗಳ ವಾಲಿ, ವನಜಾಕ್ಷಿ, ಸುಧಾ ಜೈನರ್, ಬಸಮ್ಮ ಹೊಸಮನಿ ಸೇರಿದಂತೆ ಕಚೇರಿ ಸಿಬ್ಬಂದಿ ಹಾಗೂ ಇತರರು ಭಾಗವಹಿಸಿದ್ದರು.
ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಸಾಧಕರಾದ ಶಾರದ ಬೂದಾಳ, ನಿಲವಂಜಿ ಚನ್ನಮ್ಮ, ಡಾ. ಉದಯಕುಮಾರ್ ಹಾಗೂ ಗುರುಬಸವರಾಜ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿ. ಮ. ಗುರುಬಸವರಾಜ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.