ಹೂವಿನ ಹಡಗಲಿ: ಭಾರತದ ಸಂವಿಧಾನವು ನಮ್ಮ ಬಲವಾಗಿದ್ದು, ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುವ ಶ್ರೇಷ್ಠ ಗ್ರಂಥವಾಗಿದೆ ಎಂದು ಸಮಾಜ ವಿಜ್ಞಾನ ಶಿಕ್ಷಕ ಆನಂದ್ ಜಿ. ಹೇಳಿದರು.

ಪಟ್ಟಣದ ಸರ್ಕಾರಿ ಅನುದಾನಿತ ತುಂಗಭದ್ರಾ ಪ್ರೌಢಶಾಲೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಮತದಾರರ ಸಾಕ್ಷರತಾ ಕ್ಲಬ್ ವತಿಯಿಂದ ಆಯೋಜಿಸಿದ್ದ ಸಂವಿಧಾನ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವಿಶ್ವದಲ್ಲಿಯೇ ಭಾರತ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದೆ. ಸಂವಿಧಾನವು ನಾಗರಿಕರ ಹಕ್ಕುಗಳಿಗೆ ಭದ್ರ ಬುನಾದಿಯಾಗಿದ್ದು, ಪ್ರಜಾಪ್ರಭುತ್ವದ ಜೀವಾಳವಾಗಿದೆ. ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ್ ಅವರು ರಚಿಸಿದ ಸಂವಿಧಾನವು ದೇಶವನ್ನು ಸಮಗ್ರ ಪ್ರಗತಿಯತ್ತ ಮುನ್ನಡೆಸುವ ದೊಡ್ಡ ಶಕ್ತಿಯಾಗಿದೆ ಎಂದು ಹೇಳಿದರು.

ಸಾಮಾನ್ಯ ಜನರ ಬದುಕು ಹಸನಾಗಬೇಕು ಎಂಬ ಆಶಯದೊಂದಿಗೆ ಡಾ. ಬಿ.ಆರ್. ಅಂಬೇಡ್ಕರ್ ಅವರು ಸಂವಿಧಾನವನ್ನು ರಚಿಸಿದ್ದಾರೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲರಿಗೂ ಮತದಾನದ ಹಕ್ಕಿದೆ. ಪ್ರಜಾಪ್ರಭುತ್ವ ವ್ಯವಸ್ಥೆ ಹಾಗೂ ಮತದಾನದ ಮಹತ್ವದ ಕುರಿತು ಯುವಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ಮುಖ್ಯಗುರು ಸುರೇಶ ಅಂಗಡಿ ಮಾತನಾಡಿ, ಲಡಾಯಿ ಪ್ರಕಾಶನದ ವಾಣಿ ಪೆರಿಯೋಡಿ ಅವರು ಬರೆದಿರುವ ‘ಮಕ್ಕಳಿಗಾಗಿ ಸಂವಿಧಾನ’ ಪುಸ್ತಕದ ಕುರಿತು ಉಪಯುಕ್ತ ಮಾಹಿತಿ ನೀಡಿದರು.

ಶಿಕ್ಷಕರಾದ ದ್ವಾರಕೀಶ್ ರೆಡ್ಡಿ, ಎಸ್. ಸ್ವಾಮಿನಾಥ, ರಾಮಸ್ವಾಮಿ, ಬಸಪ್ಪ ಕೆ., ಪ್ರತಿಮಾ ಎನ್., ಸಂಗಮೇಶ ಎಸ್., ಸಂತೋಷ ಕುಮಾರ್ ಎಸ್. ಸೇರಿದಂತೆ ಇತರರು ಉಪಸ್ಥಿತರಿದ್ದರು.

ಮತದಾರರ ದಿನಾಚರಣೆ ಅಂಗವಾಗಿ ನಡೆದ ಪ್ರಬಂಧ ರಚನೆ ಹಾಗೂ ರಸಪ್ರಶ್ನೆ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಶಿಕ್ಷಕರಾದ ಸಹದೇವಪ್ಪ ನಿಗದಿ, ಗಂಗಾಧರ ಹಾಗೂ ಮಂಜುನಾಥ ಅವರು ‘ಸಂವಿಧಾನ ಓದು’ ಪುಸ್ತಕಗಳನ್ನು ವಿತರಿಸಿದರು.

ಹತ್ತನೇ ತರಗತಿ ವಿದ್ಯಾರ್ಥಿನಿ ವಿಜಯಲಕ್ಷ್ಮಿ ಅವರ ನೇತೃತ್ವದಲ್ಲಿ ವಿದ್ಯಾರ್ಥಿಗಳು ಸಂವಿಧಾನದ ಪ್ರಸ್ತಾವನೆಯನ್ನು ಸಾಮೂಹಿಕವಾಗಿ ವಾಚಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಮಹಮ್ಮದ್ ಗೌಸ್, ವಿಜಯನಗರ/ವಾರ್ತಾಭಾರತಿ

ವಿಜಯನಗರ ಜಿಲ್ಲಾ ವರದಿಗಾರರು

ಮಹಮ್ಮದ್ ಗೌಸ್ ಅವರು ಕಳೆದ ಆರು ವರ್ಷಗಳಿಂದ ಬಳ್ಳಾರಿ ಹಾಗೂ ವಿಜಯನಗರ ಜಿಲ್ಲೆಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿವಿಧ ಮಾಧ್ಯಮ ಚಟುವಟಿಕೆಗಳಲ್ಲಿ ಅನುಭವ ಹೊಂದಿರುವ ಇವರು, ಪ್ರಸ್ತುತ ವಾರ್ತಾಭಾರತಿ ಪತ್ರಿಕೆಯ ವಿಜಯನಗರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ