×
Ad

ಹೊಸಪೇಟೆ | ಡಾನ್ ಬಾಸ್ಕೋ ಸಂಸ್ಥೆಯಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

Update: 2026-03-10 23:55 IST

ಹೊಸಪೇಟೆ : ಉದಾರವಾಗಿ ನೀಡಿ – ಮಹಿಳೆಯರಿಗೆ ಲಾಭ, ಸಮಾಜಕ್ಕೆ Give to Gain” ಎಂಬ ಆಶಯದೊಂದಿಗೆ ಡಾನ್ ಬಾಸ್ಕೋ ಸಂಸ್ಥೆ ಹಾಗೂ ತರುಣಿ ಮಹಿಳಾ ಅಭಿವೃದ್ದಿ ಸಂಸ್ಥೆ ಸಹಯೋಗದಲ್ಲಿ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಮಂಗಳವಾರ ನಗರದ ಡಾನ್ ಬಾಸ್ಕೋ ಸಂಸ್ಥೆಯ ಆವರಣದಲ್ಲಿ ಆಚರಿಸಲಾಯಿತು.

ಕಾರ್ಯಕ್ರಮವನ್ನು ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ತ್ರಿವೇಣಿ ಆರ್ ಪತ್ತಾರ್ ಅವರು ಜ್ಯೋತಿ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಡಾನ್ ಬಾಸ್ಕೋ ಸಂಸ್ಥೆಯ ನಿರ್ದೇಶಕರಾದ ಫಾ.ರೋಶನ್ ವಹಿಸಿದ್ದರು.

ಉದ್ಘಾಟನಾ ಭಾಷಣದಲ್ಲಿ ತ್ರಿವೇಣಿ ಆರ್ ಪತ್ತಾರ್ ಅವರು ಮಾತನಾಡಿ, ಮಹಿಳೆಯರು ಸಬಲೀಕರಣ ಹೊಂದಿ ಸಮಾಜದ ಎಲ್ಲಾ ಕ್ಷೇತ್ರಗಳಲ್ಲಿಯೂ ಸಕ್ರಿಯವಾಗಿ ತೊಡಗಿಸಿಕೊಂಡು ತಮ್ಮ ಸಾಮರ್ಥ್ಯ ಪ್ರದರ್ಶಿಸಬೇಕು ಎಂದರು. ಹೆಣ್ಣುಮಕ್ಕಳಿಗೂ ಸಮಾನ ಹಕ್ಕುಗಳಿದ್ದು ಅವರಿಗೆ ಉತ್ತಮ ಶಿಕ್ಷಣ ನೀಡುವುದು ಅತ್ಯಂತ ಅಗತ್ಯ ಎಂದು ತಿಳಿಸಿದರು.

ಮಕ್ಕಳ ಕಲ್ಯಾಣ ಸಮಿತಿಯ ಸದಸ್ಯ ಚಟ್ಲ ವೆಂಕಟೇಶ್ ಮಾತನಾಡಿ, ಮಹಿಳೆಯರು ಶೈಕ್ಷಣಿಕ, ಸಾಮಾಜಿಕ ಹಾಗೂ ಆರ್ಥಿಕವಾಗಿ ಬೆಳೆಯಲು ಹೆಚ್ಚಿನ ಅವಕಾಶಗಳನ್ನು ಒದಗಿಸಬೇಕು. ಉಳಿತಾಯದ ಮೂಲಕ ಕುಟುಂಬದ ಆರ್ಥಿಕ ಸ್ಥಿತಿಯನ್ನು ಬಲಪಡಿಸಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು ಎಂದು ಸಲಹೆ ನೀಡಿದರು.

ಮುಖ್ಯ ಭಾಷಣಕಾರರಾದ ವಕೀಲರು ಹಾಗೂ ಸಮಾಜಸೇವಕಿ ಭಾಗ್ಯಲಕ್ಷ್ಮಿ ಭರದೆ ಮಾತನಾಡಿ, ಡಾನ್ ಬಾಸ್ಕೋ ಸಂಸ್ಥೆ ಕಳೆದ 30 ವರ್ಷಗಳಿಂದ ಮಹಿಳಾ ದಿನಾಚರಣೆ ಆಚರಿಸುತ್ತಾ ಮಹಿಳೆಯರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಹಲವು ಕಾರ್ಯಕ್ರಮಗಳನ್ನು ನಡೆಸುತ್ತಿದೆ ಎಂದು ಹೇಳಿದರು.

ಸಮಾಜಸೇವಕಿ ರಶ್ಮಿ ರಾಜಶೇಖರ್ ಹಿಟ್ನಾಲ್ ಮಾತನಾಡಿ, ಇಂದಿನ ದಿನಗಳಲ್ಲಿ ಮಹಿಳೆಯರು ಆಟೋ ಚಾಲನೆಯಿಂದ ವಿಮಾನ ಚಾಲನೆವರೆಗೆ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಪ್ರತಿಭೆಯನ್ನು ತೋರಿಸುತ್ತಿದ್ದಾರೆ ಎಂದು ಹೇಳಿದರು. ಮಹಿಳೆಯರಿಗೆ ಶಿಕ್ಷಣ ಬಹುಮುಖ್ಯವಾಗಿದ್ದು ಮಕ್ಕಳಿಗೆ ಹಬ್ಬ-ಹರಿದಿನಗಳ ಮಹತ್ವ ತಿಳಿಸಬೇಕು ಎಂದು ಹೇಳಿದರು.

ಸಮಾಜಸೇವಕಿ ರೂಪಾ ಲಾಡ್ ಮಾತನಾಡಿ, ಹಿಂದಿನ ಕಾಲದಲ್ಲಿ ಮಹಿಳೆಯರಿಗೆ ಸಮಾಜದಲ್ಲಿ ಹೊರಗೆ ಬರಲು ಅವಕಾಶ ಕಡಿಮೆ ಇತ್ತು. ಆದರೆ ಇಂದಿನ ದಿನಗಳಲ್ಲಿ ಮಹಿಳೆಯರು ತಮ್ಮ ಸಾಧನೆಯ ಮೂಲಕ ಉನ್ನತ ಸ್ಥಾನಗಳನ್ನು ಗಳಿಸುತ್ತಿದ್ದಾರೆ ಎಂದು ಹೇಳಿದರು.

ವಿಜಯನಗರ ಜಿಲ್ಲಾ ಕಾಂಗ್ರೆಸ್ ಮಹಿಳಾ ಘಟಕದ ಕಾರ್ಯದರ್ಶಿ ಕವಿತಾ ಈಶ್ವರ್ ಸಿಂಗ್ ಮಾತನಾಡಿ, ಮಹಿಳೆ ಆಬಲೆಯಲ್ಲ ಸಬಲೆ ಎಂದು ಹೇಳಿದರು. 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಮೊಬೈಲ್ ನೀಡುವುದು ತಪ್ಪು ಎಂದು ತಿಳಿಸಿ, ಮಕ್ಕಳ ಬೆಳವಣಿಗೆಯ ಬಗ್ಗೆ ಪೋಷಕರು ಹೆಚ್ಚು ಗಮನ ಹರಿಸಬೇಕು ಎಂದು ಸಲಹೆ ನೀಡಿದರು.

ಈ ಸಂದರ್ಭದಲ್ಲಿ ಸಮಾಜ ಕಾರ್ಯ ವಿಭಾಗದ ನಿರ್ದೇಶಕರಾದ ಫಾದರ್ ಫ್ರಾನ್ಸಿಸ್, ಡಾನ್ ಬಾಸ್ಕೋ ಐಸಿಐಸಿ ಶಾಲೆಯ ಪ್ರಿನ್ಸಿಪಲ್ ಫಾದರ್ ಸಜಿ ಜಾರ್ಜ್, ಸಂಸ್ಥೆಯ ಆಡಳಿತಾಧಿಕಾರಿ ಮೈಕಲ್ ಫಾದರ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News