ವಿಜಯನಗರ | ವ್ಯಾಸನತಾಂಡದಲ್ಲಿ ಮೂಲಭೂತ ಸೌಲಭ್ಯಗಳಿಗೆ ಕ್ರಮ ಕೈಗೊಳ್ಳಿ: ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ
ವಿಜಯನಗರ/ ಹರಪನಹಳ್ಳಿ: ವ್ಯಾಸನತಾಂಡಕ್ಕೆ ಸ್ವಚ್ಛತೆ, ಸಮರ್ಪಕ ಕುಡಿಯುವ ನೀರು ಪೂರೈಕೆ ಸೇರಿದಂತೆ ಮೂಲಭೂತ ಸೌಲಭ್ಯಗಳನ್ನು ಒದಗಿಸಲು ಕ್ರಮ ಕೈಗೊಳ್ಳಬೇಕು ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವತ್ತ ಅಧಿಕಾರಿಗಳು ವಿಶೇಷ ಗಮನ ಹರಿಸಬೇಕು ಎಂದು ಶಾಸಕಿ ಎಂ.ಪಿ.ಲತಾ ಮಲ್ಲಿಕಾರ್ಜುನ ಸೂಚಿಸಿದರು.
ತಾಲೂಕಿನ ವ್ಯಾಸನತಾಂಡ ಮತ್ತು ಹಲುವಾಗಲು ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.
ಗ್ರಾಮೀಣ ಭಾಗಗಳಿಗೆ ಸುಗಮ ಸಂಚಾರ ಸೌಲಭ್ಯ ಕಲ್ಪಿಸುವ ಉದ್ದೇಶದಿಂದ ಈ ರಸ್ತೆ ನಿರ್ಮಿಸಲಾಗುತ್ತಿದೆ. ವ್ಯಾಸನತಾಂಡದಿಂದ ವ್ಯಾಸನತಾಂಡ ಕ್ರಾಸ್‌ವರೆಗೆ ರಸ್ತೆ ಹಾಳಾಗಿರುವುದರಿಂದ, ಅದನ್ನು ಸಿಸಿ ರಸ್ತೆಯಾಗಿ ಅಭಿವೃದ್ಧಿಪಡಿಸುವ ಕಾಮಗಾರಿ ಕೆಲವೇ ದಿನಗಳಲ್ಲಿ ಪ್ರಾರಂಭವಾಗಲಿದೆ ಎಂದು ಹೇಳಿದರು.
ಕೆ.ಕಲ್ಲಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಲ್ಲಾ ಹಳ್ಳಿಗಳಲ್ಲೂ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಬೇಸಿಗೆ ಆರಂಭವಾಗುತ್ತಿರುವ ಹಿನ್ನೆಲೆ ಎಲ್ಲಿಯೂ ಕುಡಿಯುವ ನೀರಿನ ಸಮಸ್ಯೆ ಎದುರಾಗಬಾರದು. ಪ್ರತಿಯೊಂದು ಹಳ್ಳಿಯಲ್ಲೂ ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡುವಂತೆ ಪಿಡಿಒಗೆ ಅವರು ಸೂಚನೆ ನೀಡಿದರು.
ಇದೇ ವೇಳೆ ತಾಲೂಕಿನ ಹಲುವಾಗಲು ಗ್ರಾಮದಿಂದ ಕುಂಚೂರು ಕೆರೆ ತಾಂಡದವರೆಗೆ ಅಂದಾಜು 75 ಲಕ್ಷ ರೂ. ವೆಚ್ಚದಲ್ಲಿ ಸಿಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಲಾಯಿತು.
ಈ ಸಂದರ್ಭದಲ್ಲಿ ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ವಿ. ಅಂಜಿನಪ್ಪ, ಗ್ಯಾರಂಟಿ ಸಮಿತಿ ಅಧ್ಯಕ್ಷ ಉದಯ್ ಶಂಕರ್, ಪ್ರಚಾರ ಸಮಿತಿ ಅಧ್ಯಕ್ಷ ಕೃಷ್ಣ ನಾಯ್ಕ್, ಮತ್ತೂರು ಬಸವರಾಜ್, ನೀಲಗುಂದ ಸಹಕಾರ ಸಂಘದ ನಿರ್ದೇಶಕ ತಿರುಪತಿ ನಾಯ್ಕ್, ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ಸಂತೋಷ್ ನಾಯ್ಕ್, ಬಸವರಾಜ್ ನಾಯ್ಕ್, ಷಣ್ಮುಖ ನಾಯ್ಕ್, ಕೊಟ್ರೇಶ್ ನಾಯ್ಕ್, ಲ್ಯಾಂಡ್ ಆರ್ಮಿ ಎಇಇ ಶಂಕರ್ ನಾಯ್ಕ್, ನೂತನ ಸೇರಿದಂತೆ ಇತರರು ಉಪಸ್ಥಿತರಿದ್ದರು.