×
Ad

ವಿಜಯನಗರ | ವಿಪತ್ತು ನಿರ್ವಹಣಾ ಪ್ರಾಧಿಕಾರದ ಮುಂಜಾಗ್ರತಾ ಕ್ರಮ ಪಾಲಿಸಿ : ಡಿಸಿ ಕವಿತಾ ಎಸ್.ಮನ್ನಿಕೇರಿ

Update: 2026-03-05 23:59 IST

ವಿಜಯನಗರ (ಹೊಸಪೇಟೆ): ಪೂರ್ವ ಮುಂಗಾರು ಅವಧಿಯಲ್ಲಿ ವಿಜಯನಗರ ಜಿಲ್ಲೆಯಾದ್ಯಂತ ಗುಡುಗು, ಸಿಡಿಲು ಹಾಗೂ ಗಾಳಿ ಮಳೆಯಿಂದ ಸಾಕಷ್ಟು ಸಾವು-ನೋವು ಸಂಭವಿಸುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಹಾಗೂ ವಿಶೇಷವಾಗಿ ರೈತರು ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮನವಿ ಮಾಡಿದರು.

ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ನಡೆದ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಭೆಗೆ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಪೂರ್ವ ಮುಂಗಾರು ಅವಧಿಯಲ್ಲಿ ಗುಡುಗು-ಸಿಡಿಲಿನ ಶಬ್ದ ಕೇಳಿಸಿದ ತಕ್ಷಣ ತೆರೆದ ಮೈದಾನ, ಗದ್ದೆ ಅಥವಾ ಗುಡ್ಡಗಾಡು ಪ್ರದೇಶದಲ್ಲಿದ್ದರೆ ಕೂಡಲೇ ಸುರಕ್ಷಿತ ಕಟ್ಟಡದ ಒಳಗೆ ಆಶ್ರಯ ಪಡೆಯಬೇಕು. ಒಂಟಿ ಮರ ಅಥವಾ ಎತ್ತರದ ಮರಗಳ ಕೆಳಗೆ ಆಶ್ರಯ ಪಡೆಯಬಾರದು. ಮೊಬೈಲ್, ಟಿವಿ, ಫ್ರಿಡ್ಜ್ ಸೇರಿದಂತೆ ವಿದ್ಯುತ್ ಉಪಕರಣಗಳ ಬಳಕೆಯನ್ನು ತಪ್ಪಿಸಬೇಕು. ಸಿಡಿಲಿನ ಮುನ್ಸೂಚನೆ ಪಡೆಯಲು ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ‘ದಾಮಿನಿ’ ಆಪ್ ಬಳಸುವುದು ಸೂಕ್ತ ಎಂದು ತಿಳಿಸಿದರು.

ರೈತರು ಗುಡುಗು-ಮಿಂಚು ಆರಂಭವಾದಾಗ ಜಾನುವಾರುಗಳನ್ನು ಮರಗಳ ಕೆಳಗೆ ಅಥವಾ ವಿದ್ಯುತ್ ಕಂಬಗಳಿಗೆ ಕಟ್ಟದೆ ಸುರಕ್ಷಿತವಾದ ಶೆಡ್ ಅಥವಾ ಕೊಟ್ಟಿಗೆಯಲ್ಲಿ ಕಟ್ಟಬೇಕು. ಮಳೆ ಬರುವ ಮುನ್ಸೂಚನೆ ಇದ್ದಾಗ ಹೊಲ-ಗದ್ದೆಗಳಲ್ಲಿ ಕೆಲಸ ಮಾಡುತ್ತಿದ್ದರೆ ತಕ್ಷಣ ನಿಲ್ಲಿಸಿ ಸುರಕ್ಷಿತ ಸ್ಥಳಕ್ಕೆ ತೆರಳಬೇಕು ಎಂದು ಸಲಹೆ ನೀಡಿದರು.

ಗಾಳಿ ಮಳೆಯಿಂದ ವಿದ್ಯುತ್ ತಂತಿಗಳು ತುಂಡಾಗಿ ಬೀಳುವ ಸಾಧ್ಯತೆ ಇರುವುದರಿಂದ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು. ಅಂತಹ ಘಟನೆ ಕಂಡುಬಂದಲ್ಲಿ ತಕ್ಷಣ ಜೆಸ್ಕಾಂ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು. ಮಳೆ ವೇಳೆ ವಾಹನ ಚಾಲನೆ ಮಾಡುವವರು ರಸ್ತೆ ಬದಿಯ ಮರಗಳ ಕೆಳಗೆ ವಾಹನ ನಿಲ್ಲಿಸದೆ ಸುರಕ್ಷಿತ ಸ್ಥಳದಲ್ಲಿ ನಿಲ್ಲಿಸಬೇಕು ಎಂದು ತಿಳಿಸಿದರು.

ಯಾವುದೇ ಆಕಸ್ಮಿಕ ಘಟನೆ ಸಂಭವಿಸಿದಲ್ಲಿ ತಕ್ಷಣ ಹತ್ತಿರದ ತಹಶೀಲ್ದಾರ್ ಕಚೇರಿ ಅಥವಾ ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಹಾಯವಾಣಿ ಸಂಖ್ಯೆ 1077 ಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ಹೇಳಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ನೋಂಗ್ಜಾಯ್ ಮಹ್ಮದ್ ಅಲಿ ಅಕ್ರಂ ಷಾ, ಅಪರ ಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಸಹಾಯಕ ಆಯುಕ್ತ ವಿವೇಕಾನಂದ ಸೇರಿದಂತೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News