Vijayanagara | ಯುವಕನ ಭೀಕರ ಕೊಲೆ : ದೇಹವನ್ನು ತುಂಡರಿಸಿ ಚೀಲದಲ್ಲಿ ಎಸೆದ ದುಷ್ಕರ್ಮಿಗಳು
PC | AI
ಹೂವಿನಹಡಗಲಿ : ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಬೀರಬ್ಬಿ ಗ್ರಾಮದಲ್ಲಿ ಯುವಕನೊಬ್ಬನನ್ನು ಭೀಕರವಾಗಿ ಕೊಲೆ ಮಾಡಿ, ದೇಹದ ಭಾಗಗಳನ್ನು ತುಂಡರಿಸಿ ಪ್ಲಾಸ್ಟಿಕ್ ಚೀಲದಲ್ಲಿ ತುಂಬಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ಬೀರಬ್ಬಿ ಗ್ರಾಮದ ಬೀರೇಶ (25) ಎಂದು ಗುರುತಿಸಲಾಗಿದೆ. ಕಳೆದ ಸುಮಾರು 15 ದಿನಗಳಿಂದ ಅವರು ಕಾಣೆಯಾಗಿದ್ದರು. ಕುಟುಂಬಸ್ಥರು ಹಲವು ಕಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಸಿಕ್ಕಿರಲಿಲ್ಲ. ನಿನ್ನೆ ಸಂಜೆ ಬೀರೇಶನ ಮನೆಯ ಹಿಂಭಾಗದಲ್ಲಿ ದುರ್ವಾಸನೆ ಬರುತ್ತಿರುವುದನ್ನು ಗಮನಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರು ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಚೀಲದಲ್ಲಿ ತುಂಬಲಾಗಿದ್ದ ಮಾನವ ಮೃತದೇಹ ಪತ್ತೆಯಾಯಿತು. ನಂತರ ಅದು ಕಾಣೆಯಾಗಿದ್ದ ಬೀರೇಶನದ್ದೇ ಎಂದು ದೃಢಪಟ್ಟಿದೆ ಎಂದು ತಿಳಿದು ಬಂದಿದೆ.
ದುಷ್ಕರ್ಮಿಗಳು ಬೀರೇಶನನ್ನು ಕೊಲೆ ಮಾಡಿದ ಬಳಿಕ ದೇಹವನ್ನು ತುಂಡರಿಸಿ ಮನೆಯ ಹಿಂಭಾಗದಲ್ಲೇ ಎಸೆದಿರುವುದು ತಿಳಿದುಬಂದಿದೆ. ಮೃತದೇಹ ಹಲವು ದಿನಗಳಾಗಿರುವುದರಿಂದ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ. ಘಟನೆಯ ಮಾಹಿತಿ ತಿಳಿದು ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಾಹ್ನವಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಹಗರಿಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ಪತ್ತೆಹಚ್ಚಲು ವಿಶೇಷ ತಂಡ ರಚಿಸಿ ತನಿಖೆ ಆರಂಭಿಸಲಾಗಿದೆ.
ಈ ಭೀಕರ ಘಟನೆ ಹಿನ್ನೆಲೆಯಲ್ಲಿ ಬೀರಬ್ಬಿ ಗ್ರಾಮ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.