ವಿಜಯನಗರ | ಕೊಟ್ಟೂರು ತಾಲೂಕು ಕಚೇರಿ ಬಳಿ ಚಿರತೆ ಪ್ರತ್ಯಕ್ಷ !
ವಿಜಯನಗರ : ಜಿಲ್ಲೆಯ ಕೊಟ್ಟೂರು ಪಟ್ಟಣದಲ್ಲಿ ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ತಾಲೂಕು ಕಚೇರಿ ಸಿಬ್ಬಂದಿ ಹಾಗೂ ಸ್ಥಳೀಯರಲ್ಲಿ ಆತಂಕ ಉಂಟಾದ ಘಟನೆ ಮಂಗಳವಾರ ಬೆಳಿಗ್ಗೆ ನಡೆದಿದೆ.
ಪಟ್ಟಣದ ತಾಲೂಕು ಕಾರ್ಯಾಲಯದ ಪ್ರವೇಶ ದ್ವಾರಗಳ ಬಳಿ ಬೆಳಿಗ್ಗೆ ಸುಮಾರು 6 ಗಂಟೆ ಸುಮಾರಿಗೆ ಚಿರತೆ ಕಂಡುಬಂದಿದೆ ಎಂದು ಕೆಲವರು ಹೇಳಿದ್ದರಿಂದ ಈ ವಿಷಯ ಚರ್ಚೆಗೆ ಗ್ರಾಸವಾಯಿತು.
ಈ ಮಾಹಿತಿ ತಿಳಿದ ತಕ್ಷಣ ಸ್ಥಳಕ್ಕೆ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಎಂ.ನಸರುಲ್ಲಾ, ಎಂಜಿನಿಯರ್ ಪ್ರಭು ಬಿರಾದಾರ್ ಹಾಗೂ ಆರೋಗ್ಯ ನಿರೀಕ್ಷಕಿ ಅನುಷಾ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಈ ಕುರಿತು ಅರಣ್ಯ ಇಲಾಖೆಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಈ ಕುರಿತು ಮಾತನಾಡಿದ ಮುಖ್ಯಾಧಿಕಾರಿ ಎಂ. ನಸರುಲ್ಲಾ, ಚಿರತೆ ಕಂಡುಬಂದಿದೆ ಎಂಬ ವದಂತಿಯ ಹಿನ್ನೆಲೆಯಲ್ಲಿ ಆ ಪ್ರದೇಶದ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಲಾಗಿದೆ. ಆದರೆ ಯಾವುದೇ ರೀತಿಯ ಚಿರತೆ ಕಾಣಿಸಿಕೊಂಡಿರುವ ಸುಳಿವು ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.
ಆದರೂ ಮುನ್ನೆಚ್ಚರಿಕೆಯಾಗಿ ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ವಿಷಯವನ್ನು ತರಲಾಗಿದೆ ಎಂದು ಅವರು ಹೇಳಿದರು.