ವಿಜಯಪುರ | ದಲಿತ ವ್ಯಕ್ತಿಯ ಸಜೀವ ದಹನಕ್ಕೆ ಯತ್ನ : ಪ್ರಕರಣ ದಾಖಲು

Update: 2024-03-22 07:09 GMT

ವಿಜಯಪುರ: ದಲಿತ ವ್ಯಕ್ತಿಯನ್ನು ಜೀವಂತವಾಗಿ ಬೆಂಕಿಯಲ್ಲಿ ಹಾಕಿ ಕೊಲ್ಲಲು ಯತ್ನಿಸಿದ ಘಟನೆ ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದಲ್ಲಿ ನಡೆದಿದೆ ಎಂದು ವರದಿಯಾಗಿದೆ.

ದಲಿತ ವ್ಯಕ್ತಿಯನ್ನು ಕಾರಜೋಳ ಗ್ರಾಮದ ದುಂಡಪ್ಪ (70) ಎಂದು ಗುರುತಿಸಲಾಗಿದೆ. ಕಬ್ಬಿನ ಬಣವೆಗೆ ಬೆಂಕಿ ಹಚ್ಚುವ ವಿಷಯವಾಗಿ ಇಬ್ಬರ ನಡುವೆ ಜಗಳವಾಗಿದ್ದು, ಈ ವೇಳೆ ದಲಿತ ವ್ಯಕ್ತಿಯನ್ನು ಜೀವಂತವಾಗಿ ಬಣವೆಗೆ ಹಾಕಿದ್ದ ಬೆಂಕಿಗೆ ಎಸೆದು ಕೊಲ್ಲಲು ಯತ್ನಿಸಿದ್ದಾರೆ ಎನ್ನಲಾಗಿದೆ. ಜೀವ ಭಯದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದರೂ ಕೂಡ ಎರಡನೇ ಬಾರಿ ಎಳೆದು ತಂದು ವ್ಯಕ್ತಿಯನ್ನು ಕೊಲ್ಲಲು ಯತ್ನಿಸಿದ್ದಾರೆ ಎಂದು ಹೇಳಲಾಗಿದೆ.

ದುಂಡಪ್ಪ ಅವರ ಬೆನ್ನು, ಬಲಗೈ ಎದೆಗೆ ಹಾಗೂ ಕತ್ತಿನ ಹಿಂಭಾಗದಲ್ಲಿ ಸುಟ್ಟ ಗಾಯಗಳಾಗಿದ್ದು, ವಿಜಯಪುರದ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡು ಇಬ್ಬರು ಆರೋಪಿಗಳನ್ನು ದಸ್ತಗಿರಿ ಮಾಡಿ ಉಳಿದವರಿಗಾಗಿ ಶೋಧ ಕಾರ್ಯ ಮಾಡುತ್ತಿದ್ದಾರೆ ಎಂದು ತಿಳಿದು ಬಂದಿದೆ.

ಈ ಪ್ರಕರಣವನ್ನು ಜಿಲ್ಲಾ ಪೋಲಿಸ್ ಅಧಿಕಾರಿಗಳು ಬಹಳ ಗಂಭೀರವಾಗಿ ಪರಿಣಿಸಿ, ದೌರ್ಜನ್ಯಕ್ಕೆ ಒಳಗಾದ ದಲಿತ ವ್ಯಕ್ತಿಯ ಕುಟುಂಬಕ್ಕೆ ರಕ್ಷಣೆ ಒದಗಿಸಿ ನ್ಯಾಯ ಕೊಡಿಸಬೇಕೆಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಹಾಗೂ ಜಿಲ್ಲೆಯ ಎಲ್ಲಾ ದಲಿತ ಸಂಘಟನೆಗಳು ಆಗ್ರಹಿಸಿವೆ.

Writer - ವಾರ್ತಾಭಾರತಿ

contributor

Editor - Thalhath

contributor

Byline - ವಾರ್ತಾಭಾರತಿ

contributor

Similar News