ಮಾನವ ಹಕ್ಕುಗಳ ರಕ್ಷಣೆ ಪ್ರತಿಯೊಬ್ಬರ ಹೊಣೆ: ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ
ವಿಜಯನಗರ: ಮಾನವ ಹಕ್ಕುಗಳಿಂದ ಪ್ರತಿಯೊಬ್ಬರ ಸರ್ವತೋಮುಖ ಅಭಿವೃದ್ಧಿ ಮತ್ತು ಮಾನವನ ಅಸ್ತಿತ್ವ ಸಾಧ್ಯವಾಗಿದೆ. ಇವುಗಳ ಸಂರಕ್ಷಣೆ ಎಲ್ಲರ ಹೊಣೆಯಾಗಿದೆ ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ಹೇಳಿದರು.
ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ವತಿಯಿಂದ ಏರ್ಪಡಿಸಿದ್ದ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕವಿತಾ ಎಸ್.ಮನ್ನಿಕೇರಿ, ಮಾನವ ಹಕ್ಕುಗಳ ದಿನಾಚರಣೆಯನ್ನು ಪ್ರತಿ ವರ್ಷ ಡಿಸೆಂಬರ್ 10ರಂದು ವಿಶ್ವದಾದ್ಯಂತ ಆಚರಿಸಲಾಗುತ್ತದೆ, ಇದು 1948ರಲ್ಲಿ ವಿಶ್ವಸಂಸ್ಥೆಯು ಅಂಗೀಕರಿಸಿದ ಮಾನವ ಹಕ್ಕುಗಳ ಸಾರ್ವತ್ರಿಕ ಘೋಷಣೆಯನ್ನು ಸ್ಮರಿಸುತ್ತದೆ. ಪ್ರತಿಯೊಬ್ಬ ವ್ಯಕ್ತಿಯ ಘನತೆ, ಸಮಾನತೆ ಮತ್ತು ಸ್ವಾತಂತ್ರ್ಯವನ್ನು ಖಾತ್ರಿಪಡಿಸುವ ಈ ಹೆಗ್ಗುರುತು ದಾಖಲೆಯ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದು ಇದರ ಉದ್ದೇಶವಾಗಿದೆ ಎಂದು ಹೇಳಿದರು.
ಹಂಪಿ ವಿಶ್ವವಿದ್ಯಾಲಯದ ಕನ್ನಡ ಪ್ರಾಧ್ಯಪಕರಾದ ವೆಂಕಟಗಿರಿ ತಳವಾಯಿ ಮಾತನಾಡಿ, ಮಾನವ ಹಕ್ಕುಗಳು ಉಲ್ಲಂಘನೆಯಾದಲ್ಲಿ ಸಂವಿಧಾನಾತ್ಮಕವಾಗಿ ಪರಿಹಾರ ಕಂಡುಕೊಳ್ಳಬಹುದು. ಅಂಬೇಡ್ಕರ್ ಅವರು ಭಾರತ ದೇಶಕ್ಕೆ ಅತಿ ದೊಡ್ಡ ಸಂವಿಧಾನದಲ್ಲಿ ಮೂಲಭೂತ ಹಕ್ಕುಗಳನ್ನು ನೀಡುವ ಮೂಲಕ ಪ್ರತಿಯೊಬ್ಬರ ಅಭಿವೃದ್ದಿ ಹಾಗೂ ಅಸ್ತಿತ್ವಕ್ಕೆ ಕಾರಣವಾಗಿದ್ದಾರೆ. ಎರಡು ಮಹಾಯದ್ದಗಳ ನಂತರದಲ್ಲಿ ವಿಶ್ವ ಮಾನವ ಹಕ್ಕುಗಳ ಆಯೋಗ ಸ್ಥಾಪನೆಯಾಯಿತು. ಮಾನವ ಹಕ್ಕುಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಇದು ಕಾರ್ಯನಿರ್ವಹಿಸುತ್ತಿದೆ. ಪ್ರತಿಯೊಬ್ಬರು ಶಿಕ್ಷಣಕ್ಕೆ ಹೆಚ್ಚಿನ ಮಹತ್ವವನ್ನು ನೀಡಬೇಕು ಎಂದು ಹೇಳಿದರು.
ಈ ವೇಳೆ ಅಪರ ಜಿಲ್ಲಾಧಿಕಾರಿ ಇ.ಬಾಲಕೃಷ್ಣಪ್ಪ, ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಕೆ.ತಿಮ್ಮಪ್ಪ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಸಿದ್ದಲಿಂಗೇಶ ರಂಗಣ್ಣನವರ್, ಹೊಸಪೇಟೆ ಬಿಇಒ ಶೇಖರಪ್ಪ ಹೊರಪೇಟೆ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.