ಸಾಮಾಜಿಕ, ಆರ್ಥಿಕ ಅಸಮಾನತೆ ಇದ್ದಾಗ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿಲ್ಲ : ಶಿವಸುಂದರ್
ವಿಜಯನಗರ: ದೇಶದಲ್ಲಿ ಸಾಮಾಜಿಕ, ಆರ್ಥಿಕ ಅಸಮಾನತೆ ಮುಂದುವರಿದಷ್ಟು ಕಾಲ ರಾಜಕೀಯ ಪ್ರಜಾತಂತ್ರಕ್ಕೆ ಮೌಲ್ಯವಿರುವುದಿಲ್ಲ. ರಾಜಕೀಯದಲ್ಲಿ ಭಕ್ತಿ ಎನ್ನುವುದು ಸರ್ವಾಧಿಕಾರತ್ವವನ್ನು ತರುತ್ತದೆ ಎಂದು ಚಿಂತಕರಾದ ಶಿವಸುಂದರ್ ಅವರು ಹೇಳಿದರು.
ಹಂಪಿ ಮಹಾ ವಿಶ್ವವಿದ್ಯಾಲಯದಲ್ಲಿ ಅಂಬೇಡ್ಕರ್ ಅವರ 69ನೇ ಮಹಾಪರಿನಿರ್ವಾಣ ಪ್ರಯುಕ್ತ ಹಮ್ಮಿಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಶಿವಸುಂದರ್, ಡಾ.ಬಿ.ಆರ್.ಅಂಬೇಡ್ಕರ್ ಅವರದ್ದು ಬಹುಮುಖ ವ್ಯಕ್ತಿತ್ವ. ಅವರನ್ನು ಯಾವುದೇ ಒಂದು ನಿಲುವಿಗೆ ಕಟ್ಟಿಹಾಕಲು ಸಾಧ್ಯವಿಲ್ಲ. ಅಂಬೇಡ್ಕರ್ ಅವರ ನಿಧನದ ನಂತರ ಅವರನ್ನು, ಅವರ ವಿಚಾರಗಳನ್ನು ಕಡೆಗಣಿಸುವ ಮೂಲಕ ವೈಚಾರಿಕತೆ, ವೈಜ್ಞಾನಿಕತೆಗಳಿಗೆ ಬ್ರಾಹ್ಮಣಶಾಹಿಗಳು ವಿದಾಯ ಹೇಳಿದ್ದರು. 1990ರ ದಶಕದಲ್ಲಿ ಜಾಗೃತ ದಲಿತ ಪ್ರಜ್ಞೆಯ ಭಾಗವಾಗಿ ಅವರು ಮತ್ತೆ ಚರ್ಚೆಗೆ ಬಂದರು. ಅಂಬೇಡ್ಕರ್ ಅವರು ಬೌದ್ಧ ಧರ್ಮವು ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ನಿಂತಿರುವುದನ್ನು ತಿಳಿಸಿಕೊಟ್ಟರು. ಇಂದು ಧರ್ಮಗಳು ಈ ಬಹುಜನ ಹಿತಾಯ ಬಹುಜನ ಸುಖಾಯ ತತ್ವದ ಮೇಲೆ ಪುನರ್ ರೂಪಿತವಾಗಬೇಕು ಎಂದು ಹೇಳಿದರು.
ಜಾತಿ ವ್ಯವಸ್ಥೆ ಮತ್ತು ಬಂಡವಾಳಶಾಹಿತ್ವ ದೇಶದಲ್ಲಿ ಸಾಮಾಜಿಕ ಅಸಮಾನತೆ, ಆರ್ಥಿಕ ಅಸಮಾನತೆಗಳಿಗೆ ಕಾರಣವಾಗುತ್ತಿವೆ. ಇದರಿಂದ ಪ್ರಜಾಪ್ರಭುತ್ವಗಳು ಸಾಮಾಜಿಕವಾಗಿ ಸಾಯುತ್ತಿವೆ ಮತ್ತು ಚುನಾವಣಾ ಪ್ರಜಾತಂತ್ರವನ್ನು ಟೊಳ್ಳು ಮಾಡುತ್ತಿದೆ. ಇದು ಜನರ ಬದುಕು ಅತಂತ್ರವಾಗಲು ಕಾರಣವಾಗುತ್ತಿದೆ ಎಂದು ತಿಳಿಸಿದರು.
ಕನ್ನಡ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಡಿ.ವಿ.ಪರಮಶಿವಮೂರ್ತಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಇತ್ತೀಚಿಗೆ ಯಾವ ಪಕ್ಷಗಳು ಕೂಡ ಸಮಾಜದ ಒಳತಿನ ಕಡೆಗೆ ಗಮನಹರಿಸುತ್ತಿಲ್ಲ. ಅಧಿಕಾರ ಹಂಚಿಕೆಯಲ್ಲೇ ಕಾಲ ಕಳೆಯುವುದರಿಂದ ಅಭಿವೃದ್ಧಿ ಕಾರ್ಯಗಳು ಸ್ಥಗಿತಗೊಳ್ಳುತ್ತಿವೆ. ಎಲ್ಲರು ಬದುಕಿನಲ್ಲಿ ಅಂಬೇಡ್ಕರ್ ಅವರ ವಿಚಾರಧಾರೆಗಳನ್ನು ಅಳವಡಿಸಿಕೊಳ್ಳುವುದರಿಂದ ಸಮಾಜ ಉತ್ತಮವಾಗಿ ರೂಪುಗೊಳ್ಳುತ್ತದೆ ಎಂದು ತಿಳಿಸಿದರು.
ದಲಿತ ಸಂಸ್ಕೃತಿ ಅಧ್ಯಯನ ಪೀಠದ ಸಂಚಾಲಕರಾದ ಡಾ. ಚಿನ್ನಸ್ವಾಮಿ ಸೋಸಲೆ ಅವರು ಮಾತನಾಡಿ, ಪ್ರಸ್ತುತ ದಿನಗಳಲ್ಲಿ ಅಂಬೇಡ್ಕರ್ ಬಯಸಿದ್ದ ಬ್ರಾತೃತ್ವ ಭಾರತ, ಮಾನವೀಯ ಭಾರತ, ಸರ್ವರಿಗೂ ಸಮಪಾಲು-ಸರ್ವರಿಗೂ ಸಮಬಾಳು ಭಾರತ ಎನ್ನುವ ಮಾನ್ಯತೆಯನ್ನು ಕಳೆದುಕೊಳ್ಳುತ್ತಿದೆ. ಸಾಂಪ್ರದಾಯಿಕ ಭಾರತ ತಲೆ ಎತ್ತುತ್ತಿದೆ. ಇದರ ಬಗ್ಗೆ ಮಾಧ್ಯಮಗಳು ಮಾತನಾಡುತ್ತಿಲ್ಲ. ಇದು ಇದೇ ರೀತಿ ಮುಂದುವರಿದರೆ ಸಂವಿಧಾನವನ್ನು ಮೀರಿದ ನಿಯಮಗಳು ಜಾರಿಗೆ ಬರಲಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ವಿರೂಪಾಕ್ಷಿ ಪೂಜಾರಹಳ್ಳಿ, ಸಿಂಡಿಕೇಟ್ ಸದಸ್ಯರಾದ ಸೋಮಶೇಖರ್ ಬಣ್ಣದ ಮನೆ, ಬಳ್ಳಾರಿ ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯರಾದ ಪೀರ್ ಭಾಷಾ, ವಿವಿಧ ವಿಭಾಗದ ಡೀನ್‌ಗಳು, ಪ್ರಾಧ್ಯಾಪಕರು, ಬೋಧಕೇತರ ಸಿಬ್ಬಂದಿಗಳು, ಸಂಶೋಧನಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.