×
Ad

ವಿಜಯನಗರ| ಜ.1ರಿಂದ 30ರವರೆಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ: ನ್ಯಾ.ಕೆ.ಎಂ.ರಾಜಶೇಖರ್

Update: 2025-12-27 23:05 IST

ವಿಜಯನಗರ: ಜನವರಿ 1 ರಿಂದ 30 ರವರೆಗೆ ವಿಜಯನಗರ ಜಿಲ್ಲೆಯಲ್ಲಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ಅಪಘಾತಗಳ ತಡೆಗೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ವಿಜಯನಗರ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ.ಎಂ.ರಾಜಶೇಖರ್‌ ಹೇಳಿದರು.

ನಗರದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಗಳ ಅನುಷ್ಠಾನ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಕೆ.ಎಂ.ರಾಜಶೇಖರ್‌, ಸಂಚಾರ ನಿಯಮಗಳ ಪಾಲನೆ ಇಲ್ಲದಿರುವುದರಿಂದ ಅಪಘಾತಗಳ ಸಂಖ್ಯೆ ಹೆಚ್ಚಾಗುತ್ತಿವೆ. ಅಪಘಾತಗಳನ್ನು ಕಡಿಮೆ ಮಾಡಲು ಜನರಲ್ಲಿ ಹಾಗೂ ವಿಶೇಷವಾಗಿ ಶಾಲಾ-ಕಾಲೇಜುಗಳ ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸುವ ಕಾರ್ಯಗಾರವನ್ನು ಮಾಡಬೇಕು ಎಂದು ತಿಳಿಸಿದರು.

ನ್ಯಾಯಾಂಗ ಇಲಾಖೆಯ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಡಿ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಪೊಲೀಸ್ ಇಲಾಖೆ ಹಾಗೂ ಸಾರಿಗೆ ಇಲಾಖೆ ಹಮ್ಮಿಕೊಳ್ಳಬೇಕು. ವಿವಿಧ ಇಲಾಖೆಯವರು ಇದಕ್ಕೆ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.

ಇತ್ತೀಚೆಗೆ ಖಾಸಗಿ ಹಾಗೂ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಬೆಂಕಿ ಅನಾಹುತಗಳಾಗುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಬಸ್‌ಗಳಲ್ಲಿ ಸುರಕ್ಷತಾ ಕ್ರಮ ಕೈಗೊಂಡಿರುವ ಕುರಿತು ಹಾಗೂ ಲಗೇಜ್ ಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಸೂಚಿಸಿದರು.

ರಾಜ್ಯದಲ್ಲಿ ಬರುವ ಜ.1 ರಿಂದ 30 ರವರೆಗೆ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡಿದ್ದು, ನಗರದ ಡಾ.ಪುನೀತ್ ರಾಜಕುಮಾರ್‌ ವೃತ್ತದಲ್ಲಿ ಜ.3ರಂದು ಜಾಗೃತಿ ಜಾಥಾಕ್ಕೆ ಚಾಲನೆ ನೀಡಲಿದ್ದು, ಜಾಗೃತಿ ಜಾಥಾವು ವೃತ್ತದಿಂದ ಆರಂಭಗೊಂಡು ಜಿಲ್ಲಾ ಕ್ರೀಡಾಂಗಣದವರೆಗೆ ಸಾಗಲಿದೆ ಎಂದು ತಿಳಿಸಿದರು.

ವಿಜಯನಗರ ಜಿಲ್ಲೆಯಲ್ಲಿ ಜ.1ರಿಂದ 31ರವರೆಗೆ ವ್ಯಾಪಕವಾಗಿ ರಸ್ತೆ ಸುರಕ್ಷತಾ ಕುರಿತು ಜಾಗೃತಿ ಮೂಡಿಸಲಾಗುವುದು. ನಂತರದಲ್ಲಿ ಸಂಚಾರ ನಿಯಮಗಳನ್ನು ಉಲ್ಲಂಘಿಸುವವರಿಗೆ ಹೆಚ್ಚಿನ ಪ್ರಮಾಣದಲ್ಲಿ ದಂಡ ಹಾಗೂ ಶಿಕ್ಷೆ ವಿಧಿಸುವುದು ಗ್ಯಾರಂಟಿ ಎಂದು ಹೇಳಿದರು.

ಹೆಚ್ಚುವರಿ ಮತ್ತು ಜಿಲ್ಲಾ ನ್ಯಾಯಾಧೀಶರಾದ ಡಿ.ಪಿ.ಕುಮಾರಸ್ವಾಮಿ ಮಾತನಾಡಿ, ಸಾರಿಗೆ ಸಂಸ್ಥೆಯ ಬಸ್ ಚಾಲಕರು ಬೇಕಾಬಿಟ್ಟಿಯಾಗಿ ಬಸ್‌ನ ಚಾಲನೆ ಮಾಡುತ್ತಾರೆ. ಇದರಿಂದ ಇನ್ನುಳಿದ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ತೊಂದರೆಯಾಗುತ್ತದೆ. ಬಸ್ ಚಾಲಕರಿಗೆ ಚಾಲನೆ ನಿಯಮ ಪಾಲಿಸಲು ತಿಳಿಸಿರಿ ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗೆ ಸೂಚಿಸಿದರು.

ಗೌರವಾನ್ವಿತ ಸಿಜೆಎಂ ಅಧ್ಯಕ್ಷರು ಮತ್ತು ಪ್ರಧಾನ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಬ್ರಮಣ್ಯ.ಎನ್ ಮಾತನಾಡಿ, ಜನರಲ್ಲಿ ರಸ್ತೆ ಸುರಕ್ಷತೆ ಕುರಿತು ಜಾಗೃತಿ ಮೂಡಿಸಬೇಕು. ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡಬೇಕು. ಈ ಉದ್ದೇಶದಿಂದ ಜ.3ರಂದು ಹಮ್ಮಿಕೊಂಡಿರುವ ರಸ್ತೆ ಸುರಕ್ಷತಾ ಜಾಗೃತಿ ಕಾರ್ಯಕ್ರಮಕ್ಕೆ ಎಲ್ಲಾ ಇಲಾಖೆಯವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ಗೌರವಾನಿತ್ವ ಅಪರ ಸಿವಿಲ್ ನ್ಯಾಯಾಧೀಶರಾದ ಚೈತ್ರ.ಜೆ ಮಾತನಾಡಿ, ನಗರದಲ್ಲಿ ಹಲವು ವಾಹನಗಳ ನಂಬರ್ ಪ್ಲೇಟ್‌ಗಳು ಸರಿಯಾಗಿ ಕಾಣುವುದಿಲ್ಲ, ಸಂಚಾರಿ ಇಲಾಖೆ ಪೊಲೀಸರು ಇಂತಹ ವಾಹನಗಳನ್ನು ಗುರುತಿಸಿ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದರು.

ಹೆಚ್ಚುವರಿ ಪೊಲೀಸ್ ಅಧೀಕ್ಷಕ ಜಿ.ಮಂಜುನಾಥ ಮಾತನಾಡಿ, ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆಗಾಗಿ ಹಾಗೂ ಅಪಘಾತಗಳ ಪ್ರಮಾಣ ಕಡಿಮೆ ಮಾಡಲು ಪೊಲೀಸ್ ಇಲಾಖೆಯು ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದರು.

ಹೊಸಪೇಟೆ ಸಂಚಾರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಹುಲಗಪ್ಪ ಮಾತನಾಡಿ, ರಸ್ತೆ ಸುರಕ್ಷತೆ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಲಾಗುತ್ತಿದೆ. ಶಾಲೆಗಳಲ್ಲಿ ಪ್ರಬಂಧ ಸ್ಪರ್ಧೆ, ಭಾಷಣ ಸ್ಪರ್ಧೆಗಳನ್ನು ಏರ್ಪಡಿಸಿ, ಮಕ್ಕಳಿಗೆ ಸಂಚಾರಿ ನಿಯಮಗಳ ಬಗ್ಗೆ ತಿಳಿಸಲಾಗುತ್ತಿದೆ ಎಂದು ಹೇಳಿದರು.

ಈ ವೇಳೆ ಅಪರ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರುತಿ ತೇಲಿ, ನಗರಸಭೆ ಪೌರಾಯುಕ್ತ ಶಿವಕುಮಾರ್‌, ವಕೀಲರಾದ ಈ.ಪುಷ್ಪಲತಾ, ಪಿ.ಶ್ರೀನಿವಾಸಮೂರ್ತಿ, ಪಟ್ಟಣ ಪೊಲೀಸ್ ಠಾಣೆ ಪಿ.ಐ ಲಖನ್ ಮಸಗುಪ್ಪಿ, ಪಿಎಸ್‌ಐ ಹೆಚ್.ನಾಗರತ್ನ, ಹಂಪಿ ಸಿಪಿಐ ಅ.ರಾಜೇಶ ಭಟಕುರ್ಕಿ, ಪಿ.ಯು.ಡಿಡಿ ನಾಗರಾಜ ಹವಾಲ್ದಾರ. ಕೆಕೆಆರ್‌ಟಿಸಿಯ ಡಿಟಿಒ ಆರ್.ಪಿ.ಭಜಂತ್ರಿ, ಡಾ.ದಿವ್ಯಶ್ರೀ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News