ಹರಪನಹಳ್ಳಿ | ಗೃಹ ರಕ್ಷಕರ ಸೇವೆ ಶ್ಲಾಘನೀಯ : ಕೆ.ಉಚ್ಚೆಂಗೆಪ್ಪ
ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮ
ಹರಪನಹಳ್ಳಿ: ಪ್ರಕೃತಿ ವಿಕೋಪ ಸೇರಿದಂತೆ ತುರ್ತು ಸಂದರ್ಭಗಳಲ್ಲಿ ಜನರ ರಕ್ಷಣೆಗೆ ಸದಾ ಮುಂಚೂಣಿಯಲ್ಲಿ ನಿಂತು ಸೇವೆ ಸಲ್ಲಿಸುತ್ತಿರುವ ಗೃಹ ರಕ್ಷಕ ದಳದ ಕಾರ್ಯ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಯ ಗೌರವ ಅಧ್ಯಕ್ಷ ಕೆ. ಉಚ್ಚೆಂಗೆಪ್ಪ ಹೇಳಿದರು.
ನಗರದ ಗೃಹ ರಕ್ಷಕ ದಳದ ಕಚೇರಿ ಆವರಣದಲ್ಲಿ ಶುಕ್ರವಾರ ಜರುಗಿದ ಅಖಿಲ ಭಾರತ ಗೃಹ ರಕ್ಷಕ ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಸಂಚಾರ ವ್ಯವಸ್ಥೆ ಸೇರಿದಂತೆ ಹಲವು ಕರ್ತವ್ಯಗಳಲ್ಲಿ ಗೃಹ ರಕ್ಷಕರು ಪೊಲೀಸರಷ್ಟೇ ಸಮರ್ಥವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕರ್ತವ್ಯ ನಿಷ್ಠೆ, ಶಿಸ್ತು ಹಾಗೂ ಬದ್ಧತೆಯಿಂದ ಕೆಲಸ ಮಾಡುತ್ತಿರುವ ಗೃಹ ರಕ್ಷಕರಿಗೆ ಇತರೆ ಇಲಾಖೆಗಳಂತೆ ಸೌಲಭ್ಯಗಳು ದೊರಕಬೇಕು. ಅವರ ಸೇವೆಗೆ ತಕ್ಕ ವೇತನ ನೀಡುವ ಜೊತೆಗೆ ಸರ್ಕಾರ ಖಾಯಂ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಮಿತಿಯ ತಾಲೂಕು ಅಧ್ಯಕ್ಷ ಎ. ನಾಗೇಂದ್ರಪ್ಪ, ಅಖಿಲ ಭಾರತ ಗೃಹ ರಕ್ಷಕ ದಳದ ಘಟಕದ ಅಧಿಕಾರಿ ಪೂಜಾರ್ ವಾಗೀಶ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ತಾಲೂಕು ಅಬಕಾರಿ ಇಲಾಖೆಯ ಪರುಶುರಾಮ ವಿ. ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಹಿರಿಯ ಪಿ.ಎಲ್.ಸಿ ಮಲ್ಲಿಕಾರ್ಜುನಯ್ಯ, ಎಂ.ಮಾಲತೇಶ್, ಎ.ಎಸ್.ಎಲ್. ಗೃಹರಕ್ಷಕ ಕೆ.ಸುಭಾಷ್, ಕೆ.ಕೋಟೇಪ್ಪ, ಕೆ.ಬಸವರಾಜ್, ಕೆ.ನಿಂಗರಾಜ್, ರಾಮಚಂದ್ರಪ್ಪ ಸೇರಿದಂತೆ ಅನೇಕರು ಮಾತನಾಡಿದರು.
ತಾಲೂಕಿನ ಗೃಹ ರಕ್ಷಕ ದಳದ ಹೆಚ್. ಬಸವರಾಜ, ಗುಡ್ಡಪ್ಪ, ಡಿ.ಸುಬಾನ್, ಎಂ.ಡಿ.ರಫೀ, ಮಹಮ್ಮದ್ ಷರೀಪ್, ಕೆ.ದುರುಗಪ್ಪ, ಹೆಚ್. ಅಣ್ಣಪ್ಪ, ಜಿ.ಮಲ್ಲಿಕಾರ್ಜುನ, ಎಸ್. ಹಾಲಸ್ವಾಮಿ, ಗುರುರಾಜ್, ಅನಾಸ್, ಮಹಾಂತೇಶ್, ರಾಜಶೇಖರ್, ದುರುಗೋಜೀರಾವ್, ವೀರೇಶ್, ವೀರೇಶಚಾರಿ, ಹಳೇಮನಿ ವೀರೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.