Vijayanagara | ಖಾಸಗಿ ಸ್ಲಂಗಳನ್ನು ಸ್ಲಂ ಬೋರ್ಡ್‌ಗೆ ಹಸ್ತಾಂತರಿಸಿ ಹಕ್ಕುಪತ್ರ ನೀಡಲು ಆಗ್ರಹ
ಹೊಸಪೇಟೆ/ವಿಜಯನಗರ: ಹೊಸಪೇಟೆ ನಗರದಲ್ಲಿರುವ ಖಾಸಗಿ ಮಾಲೀಕತ್ವದ ಕೊಳಚೆ ಪ್ರದೇಶಗಳನ್ನು ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಹಸ್ತಾಂತರಿಸಿ, ಅಲ್ಲಿನ ನಿವಾಸಿಗಳಿಗೆ ಹಕ್ಕುಪತ್ರ ನೀಡಬೇಕು ಎಂದು ಒತ್ತಾಯಿಸಿ ಸ್ಲಂ ಜನರ ಸಂಘಟನೆ ಕರ್ನಾಟಕ ವಿಜಯನಗರ ಜಿಲ್ಲಾ ಸಮಿತಿ ವತಿಯಿಂದ ಮಂಡಳಿ ಆಯುಕ್ತ ರಾಘವೇಂದ್ರ ಟಿ. ಅವರಿಗೆ ಮನವಿ ಸಲ್ಲಿಸಲಾಯಿತು.
ಆ.28ರಂದು ಬೆಂಗಳೂರಿನ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ಕೇಂದ್ರ ಕಚೇರಿಯಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಐಸಾಕ್ ಅಮೃತ್ ರಾಜ್ ನೇತೃತ್ವದ ನಿಯೋಗ ಆಯುಕ್ತರನ್ನು ಭೇಟಿ ಮಾಡಿ ವಿವಿಧ ಬೇಡಿಕೆಗಳ ಮನವಿ ಪತ್ರ ಸಲ್ಲಿಸಿತು.
ಹೊಸಪೇಟೆ ನಗರದಲ್ಲಿ ಒಟ್ಟು 60 ಘೋಷಿತ ಕೊಳಚೆ ಪ್ರದೇಶಗಳಿದ್ದು, ಅವುಗಳಲ್ಲಿ 25 ಸ್ಲಂಗಳು ಖಾಸಗಿ ಮಾಲೀಕತ್ವದಲ್ಲಿವೆ. ಈ ಪ್ರದೇಶಗಳು ಸ್ಲಂ ಬೋರ್ಡ್‌ಗೆ ಹಸ್ತಾಂತರವಾಗದಿರುವುದರಿಂದ ನಿವಾಸಿಗಳಿಗೆ ಹಕ್ಕುಪತ್ರ ಪಡೆಯಲು ಸಮಸ್ಯೆಯಾಗುತ್ತಿದೆ ಎಂದು ಸಂಘಟನೆ ತಿಳಿಸಿತು.
ಕಳೆದ 40–50 ವರ್ಷಗಳಿಂದ ಒಂದು ಲಕ್ಷಕ್ಕೂ ಅಧಿಕ ಸ್ಲಂ ನಿವಾಸಿಗಳು ಈ ಪ್ರದೇಶಗಳಲ್ಲಿ ವಾಸಿಸುತ್ತಿದ್ದು, ಸರ್ಕಾರದ ದಾಖಲೆ ಅಥವಾ ಹಕ್ಕುಪತ್ರವಿಲ್ಲದೆ ಅತಂತ್ರ ಸ್ಥಿತಿಯಲ್ಲಿ ಬದುಕುತ್ತಿದ್ದಾರೆ. ಸ್ಲಂ ನಿವಾಸಿಗಳಿಗೂ ಸ್ವಾಭಿಮಾನದಿಂದ ಬದುಕುವ ಹಕ್ಕಿದ್ದು, ನಗರದಲ್ಲಿ ತಮ್ಮ ಅಸ್ತಿತ್ವಕ್ಕೆ ಅಧಿಕೃತ ಮಾನ್ಯತೆ ದೊರೆಯಬೇಕು ಎಂದು ಮುಖಂಡರು ಆಗ್ರಹಿಸಿದರು.
ಮನವಿಗೆ ಸ್ಪಂದಿಸಿದ ಆಯುಕ್ತ ರಾಘವೇಂದ್ರ ಟಿ. ಅವರು ವಿಜಯನಗರ ಜಿಲ್ಲಾಧಿಕಾರಿಗಳಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಸ್ಲಂ ನಿವಾಸಿಗಳ ಸಮಸ್ಯೆಗಳ ಕುರಿತು ವಿವರಿಸಿದರು. ಸಮಸ್ಯೆಗಳಿಗೆ ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚಿಸಿದರು. ಅಲ್ಲದೆ, ಬೇಡಿಕೆಗಳನ್ನು ಪರಿಶೀಲಿಸಿ ಆದಷ್ಟು ಬೇಗ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆ ಹಂತ–1ರಡಿ ಸ್ಲಂ ಪ್ರದೇಶಗಳಲ್ಲಿ ನಿರ್ಮಾಣಗೊಂಡ ಮನೆಗಳ ಫಲಾನುಭವಿಗಳಿಗೆ ಬಾಕಿ ಇರುವ ಕಂತಿನ ಹಣ ಬಿಡುಗಡೆ ಮಾಡಬೇಕು. ಅರ್ಧಕ್ಕೆ ನಿಂತಿರುವ ಮನೆಗಳ ಕಾಮಗಾರಿ ಪೂರ್ಣಗೊಳಿಸಬೇಕು. ಎಲ್ಲ ಸ್ಲಂ ನಿವಾಸಿಗಳಿಗೆ ಹಕ್ಕುಪತ್ರ ವಿತರಿಸಿ ನೋಂದಣಿ ಪ್ರಕ್ರಿಯೆ ಚುರುಕುಗೊಳಿಸಬೇಕು. ಸ್ಲಂ ಪ್ರದೇಶಗಳ ಚಕ್ಕುಬಂದಿ ಗುರುತಿಸುವ ಕಾರ್ಯವನ್ನು ಶೀಘ್ರ ಪೂರ್ಣಗೊಳಿಸಿ ಹಕ್ಕುಪತ್ರ ವಿತರಿಸುವ ಕಾರ್ಯ ಆರಂಭಿಸಬೇಕು ಹಾಗೂ ವಿಜಯನಗರ ಜಿಲ್ಲಾ ಸ್ಲಂ ನಿವಾಸಿಗಳ ಕುಂದುಕೊರತೆ ಸಭೆಯನ್ನು ಶೀಘ್ರ ಕರೆಯಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘಟನೆಯ ರಾಜ್ಯಾಧ್ಯಕ್ಷ ಐಸಾಕ್ ಅಮೃತ್ ರಾಜ್, ವಿಜಯನಗರ ಜಿಲ್ಲಾ ಸಮಿತಿ ಅಧ್ಯಕ್ಷ ಎಚ್. ಶೇಷು, ಉಪಾಧ್ಯಕ್ಷ ತನ್ವೀರ್ ಅಹ್ಮದ್, ಪ್ರಧಾನ ಕಾರ್ಯದರ್ಶಿ ಎನ್. ವೆಂಕಟೇಶ್, ಸಂಘಟನಾ ಕಾರ್ಯದರ್ಶಿ ಗುತ್ತಿ ಕೈಲಾಸ್, ಬೆಂಗಳೂರು ನಗರ ಸಮಿತಿ ಕಾರ್ಯದರ್ಶಿ ಅನ್ಬು ಅರಸನ್ ಹಾಗೂ ಮುಖಂಡ ಶಿವಲಿಂಗ ಸೇರಿದಂತೆ ಹಲವರು ಉಪಸ್ಥಿತರಿದ್ದರು.