Vijayanagara | ಸೆ.5ರಂದು ಕೂಡ್ಲಿಗಿಯಲ್ಲಿ ರಾಜ್ಯಮಟ್ಟದ ‘ಪ್ರಜಾಸೇವೆ’ಗೆ ಚಾಲನೆ
ಕವಿತಾ ಎಸ್.ಮನ್ನಿಕೇರಿ
ವಿಜಯನಗರ (ಹೊಸಪೇಟೆ) : ಸಾರ್ವಜನಿಕರ ಕುಂದುಕೊರತೆಗಳನ್ನು ಆಲಿಸಿ, ಸಕಾಲದಲ್ಲಿ ಸೂಕ್ತ ಪರಿಹಾರ ಒದಗಿಸುವ ಉದ್ದೇಶದಿಂದ ಪ್ರತ್ಯೇಕ ಪ್ರಜಾಸೇವೆ ಇಲಾಖೆ ಸ್ಥಾಪಿಸಲಾಗಿದ್ದು, ಸೆ.5ರಂದು ಕೂಡ್ಲಿಗಿ ಪಟ್ಟಣದಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜ್ಯಮಟ್ಟದ ‘ಪ್ರಜಾಸೇವೆ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ.
ಕೂಡ್ಲಿಗಿ ಪಟ್ಟಣದ ಶಾಸಕರ ಕಚೇರಿ ಮುಂಭಾಗದ ಆವರಣದಲ್ಲಿ ಸೆ.5ರಂದು ಬೆಳಗ್ಗೆ 10 ಗಂಟೆಗೆ ಕಾರ್ಯಕ್ರಮ ಆರಂಭವಾಗಲಿದೆ. ಈ ಸಂದರ್ಭದಲ್ಲಿ ವಿವಿಧ ಇಲಾಖೆಗಳ ಪ್ರತ್ಯೇಕ ಕೌಂಟರ್‌ಗಳ ಮೂಲಕ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ನೋಂದಾಯಿಸಲಾಗುವುದು. ಸಾರ್ವಜನಿಕರು ತಮ್ಮ ಕುಂದುಕೊರತೆಗಳ ಕುರಿತು ಅಹವಾಲು ಸಲ್ಲಿಸಿ ಪರಿಹಾರ ಪಡೆಯಬಹುದಾಗಿದೆ.
ಪ್ರಜಾಸೇವೆ ಇಲಾಖೆಯ ನಿರ್ದೇಶನದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲೂ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸ್ಥಳೀಯ ಶಾಸಕರ ನೇತೃತ್ವದಲ್ಲಿ ಪ್ರತಿ ತಿಂಗಳ ಎಲ್ಲಾ ಶನಿವಾರಗಳಂದು ಪ್ರಜಾಸೇವೆ ಅಭಿಯಾನ ಆಯೋಜಿಸಲಾಗುವುದು ಎಂದು ಜಿಲ್ಲಾಧಿಕಾರಿ ಕವಿತಾ ಎಸ್.ಮನ್ನಿಕೇರಿ ತಿಳಿಸಿದ್ದಾರೆ.