×
Ad

ವಿಜಯನಗರ | ಫೆ.10ರಂದು ಜಂತುಹುಳು ನಿವಾರಣಾ ದಿನಾಚರಣೆ : ಡಿಸಿ ಕವಿತಾ ಎಸ್. ಮನ್ನಿಕೇರಿ

Update: 2026-01-28 23:03 IST

ವಿಜಯನಗರ (ಹೊಸಪೇಟೆ) : ಜಿಲ್ಲೆಯ ಮಕ್ಕಳನ್ನು ಜಂತು ಹುಳು ರಹಿತ ಹಾಗೂ ಆರೋಗ್ಯವಂತರನ್ನಾಗಿಸುವ ಉದ್ದೇಶದಿಂದ ಫೆ.10ರಂದು ಜಂತುಹುಳು ನಿವಾರಣಾ ದಿನಾಚರಣೆ ಹಾಗೂ ಫೆ.16ರಂದು ಮಾಪ್‌ಅಪ್ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದ್ದು, ಈ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಅವರು ಹೇಳಿದರು.

ನಗರದ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ಬುಧವಾರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ವತಿಯಿಂದ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ರಾಷ್ಟ್ರೀಯ ಜಂತುಹುಳು ನಿವಾರಣಾ ದಿನಾಚರಣೆ ನಿಮಿತ್ತ ಏರ್ಪಡಿಸಿದ್ದ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜಂತುಹುಳು ನಿವಾರಣಾ ದಿನಾಚರಣೆಯ ಅಂಗವಾಗಿ 1 ರಿಂದ 19 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಉಚಿತವಾಗಿ ಜಂತುಹುಳು ನಿವಾರಣಾ ಮಾತ್ರೆಗಳನ್ನು ವಿತರಿಸಲಾಗುವುದು. ಹೀಗಾಗಿ ಸಮರ್ಪಕ ಔಷಧ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು. ದಾಸ್ತಾನಿರುವ ಔಷಧಿಗಳನ್ನು ಅಗತ್ಯಕ್ಕೆ ಅನುಗುಣವಾಗಿ ಜಿಲ್ಲೆಯ ಎಲ್ಲಾ ತಾಲೂಕು ಆಸ್ಪತ್ರೆಗಳು ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಿಗೆ ನಿಗದಿತ ಸಮಯಕ್ಕೆ ತಲುಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ಅಂಗನವಾಡಿಗಳಿಗೆ ದಾಖಲಾಗದ ಹಾಗೂ ಶಾಲೆಯಿಂದ ಹೊರಗುಳಿದ ಮಕ್ಕಳಿಗೂ ಜಂತುಹುಳು ನಿವಾರಣಾ ಮಾತ್ರೆ ನೀಡುವ ವ್ಯವಸ್ಥೆ ಮಾಡಬೇಕು ಎಂದು ಅವರು ತಿಳಿಸಿದರು.

ಈ ಸಂದರ್ಭದಲ್ಲಿ ಕುಷ್ಠರೋಗ ನಿವಾರಣೆ ಕುರಿತ ಜಾಗೃತಿ ಪೋಸ್ಟರ್‌ನ್ನು ಜಿಲ್ಲಾಧಿಕಾರಿಗಳು ಬಿಡುಗಡೆಗೊಳಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನೊಂಗ್ಜಾಯ್ ಮೊಹಮ್ಮದ್ ಅಲಿ ಅಕ್ರಮ್ ಷಾ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶಂಕರ ನಾಯ್ಕ್, ಆರ್‌ಸಿಎಚ್ ಅಧಿಕಾರಿ ಜಂಬಯ್ಯ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News