VIJAYANAGARA | ಹಂಪಿಯಲ್ಲಿ ಅಪರೂಪದ ಬ್ರೌನ್ ರಾಕ್ ಚಾಟ್ ಹಕ್ಕಿ ಪತ್ತೆ
ವಿಜಯನಗರ: ಹಂಪಿಯಲ್ಲಿ ಅಪರೂಪದ ಬ್ರೌನ್ ರಾಕ್ ಚಾಟ್(ಕಂದು ಬಂಡೆ ಸಿಳ್ಳಾರ) ಪಕ್ಷಿ ಪತ್ತೆಯಾಗಿದೆ.
ಸಾಮಾನ್ಯವಾಗಿ ಉತ್ತರ ಹಾಗೂ ಮಧ್ಯ ಭಾರತದ ಆವಾಸಸ್ಥಾನ ಹೊಂದಿರುವ ಬ್ರೌನ್ ರಾಕ್ ಚಾಟ್ ಇತ್ತೀಚೆಗೆ ಕರ್ನಾಟಕದ ಎರಡು ಸ್ಥಳಗಳಲ್ಲಿ ಕಾಣಿಸಿಕೊಂಡಿತ್ತು. ಇದೀಗ ಹಂಪಿಯಲ್ಲಿ ಪಕ್ಷಿ ಪ್ರೇಮಿಗಳಿಗೆ ಗೋಚರಿಸಿ ಅಚ್ಚರಿ ಮೂಡಿಸಿದೆ.
ಪಂಪಯ್ಯಸ್ವಾಮಿ ಮಳಿಮಠ ಮಾರ್ಗದರ್ಶನದಲ್ಲಿ ಕೊಲ್ಕತ್ತಾ ತಂಡವು ಹಂಪಿಯಲ್ಲಿ ಪಕ್ಷಿ ವೀಕ್ಷಣೆಯಲ್ಲಿ ತೊಡಗಿದ್ದಾಗ ಅಚ್ಯುತರಾಯ ದೇಗುಲ ಸ್ಮಾರಕಗಳ ಮೇಲೆ ಬ್ರೌನ್ ರಾಕ್ ಚಾಟ್ ಓಡಾಡುವುದನ್ನು ಕಂಡು ಸಬ್ಯಸಾಚಿ ರಾಯ್ ತಮ್ಮ ಕ್ಯಾಮರಾದಲ್ಲಿ ಸೆರೆ ಹಿಡಿದಿದ್ದಾರೆ.
ಬ್ರೌನ್ ರಾಕ್ ಚಾಟ್ ಸದಾ ಹಳೆಯ ಕಟ್ಟಡ ಸ್ಮಾರಕಗಳ ಮೇಲೆ ಉಳಿದುಕೊಂಡಿರುತ್ತವೆ. ಇದಕ್ಕೂ ಮೊದಲು ಈ ಪಕ್ಷಿಯನ್ನು ಪರಿಸರ ಪ್ರೇಮಿ ಪಂಪಯ್ಯಸ್ವಾಮಿ ಮಳಿಮಠ ಅವರು ಕೊಪ್ಪಳ ಜಿಲ್ಲೆಯ ಇಟಗಿ ಮಹಾದೇವ ದೇಗುಲದ ಬಳಿ ಪತ್ತೆ ಹಚ್ಚಿದ್ದರು.
ಇದರ ವೈಜ್ಞಾನಿಕ ಹೆಸರು Oenanthe fusca. ಇದು ಸುಮಾರು 17 ಸೆ.ಮೀ. ಉದ್ದವಿರುತ್ತದೆ. ಸಾಮಾನ್ಯ 'ಇಂಡಿಯನ್ ರಾಬಿನ್' ಪಕ್ಷಿಗಿಂತ ಸ್ವಲ್ಪ ದೊಡ್ಡದಾಗಿರುತ್ತದೆ. ಸಂಪೂರ್ಣ ಕಂದು ಬಣ್ಣದ ದೇಹ, ರೆಕ್ಕೆ ಮತ್ತು ಬಾಲದ ಭಾಗಗಳು ಸ್ವಲ್ಪ ಗಾಢವಾಗಿರುತ್ತವೆ. ಇವು ಹೆಚ್ಚಾಗಿ ಹಳೆಯ ಕೋಟೆಗಳು, ಪಾಳುಬಿದ್ದ ಕಟ್ಟಡಗಳು, ಬಂಡೆಗಳ ನಡುವೆ ಮತ್ತು ಕಲ್ಲುಗಣಿಗಳಲ್ಲಿ ವಾಸಿಸುತ್ತವೆ. ನೆಲದ ಮೇಲೆ ಕಂಡುಬರುವ ಸಣ್ಣಪುಟ್ಟ ಕೀಟಗಳೇ ಇವುಗಳ ನೆಚ್ಚಿನ ಆಹಾರ.