Vijayanagara | ಅನಾಥಾಶ್ರಮದ ಹಿರಿಯರಿಗೆ ಉತ್ತಮ ಸೌಲಭ್ಯ ಕಲ್ಪಿಸುವುದು ಎಲ್ಲರ ಜವಾಬ್ದಾರಿ: ಉದಯಕುಮಾರ
ಕೊಟ್ಟೂರು (ವಿಜಯನಗರ): ಅನಾಥಾಶ್ರಮದಲ್ಲಿ ವಾಸಿಸುವ ಹಿರಿಯರಿಗೆ ಉತ್ತಮ ಆರೋಗ್ಯ, ಸ್ವಚ್ಛ ಪರಿಸರ ಹಾಗೂ ಅಗತ್ಯ ಮೂಲಸೌಕರ್ಯಗಳನ್ನು ಒದಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಫುಡ್ ಇನ್ಸ್ಪೆಕ್ಟರ್ ಉದಯಕುಮಾರ ಹೇಳಿದರು.
ಪಟ್ಟಣದ ಉತ್ತಂಗಿ ಹಿರೇಮಠದ ರುದ್ರಮ್ಮ ಅನಾಥಾಶ್ರಮದ ಸ್ವಚ್ಛತೆ ಹಾಗೂ ಅಲ್ಲಿನ ವಾತಾವರಣದ ಬಗ್ಗೆ ವಿಶೇಷ ಗಮನಹರಿಸುವ ಅಗತ್ಯವಿದೆ. ಅನಾಥಾಶ್ರಮದ ಆವರಣ, ಅಡುಗೆಮನೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ಹಾಗೂ ವಾಸದ ಕೊಠಡಿಗಳನ್ನು ನಿಯಮಿತವಾಗಿ ಸ್ವಚ್ಛವಾಗಿಟ್ಟುಕೊಳ್ಳಬೇಕು. ಸ್ವಚ್ಛ ಪರಿಸರದಿಂದ ಹಿರಿಯರ ಆರೋಗ್ಯ ಕಾಪಾಡುವುದರ ಜತೆಗೆ ಅವರಿಗೆ ನೆಮ್ಮದಿಯ ಜೀವನ ಕಲ್ಪಿಸಲು ಸಾಧ್ಯವಾಗುತ್ತದೆ ಎಂದರು.
ಅನಾಥಾಶ್ರಮದ ನಿರ್ವಹಣಾ ಮಂಡಳಿಯವರು ಸ್ವಚ್ಛತೆಗೆ ನಿರಂತರ ಆದ್ಯತೆ ನೀಡಬೇಕು. ಸಾರ್ವಜನಿಕರು, ದಾನಿಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಅನಾಥಾಶ್ರಮದ ಅಭಿವೃದ್ಧಿಗೆ ಕೈಜೋಡಿಸುವ ಮೂಲಕ ಮಾನವೀಯತೆ ಮೆರೆಯಬೇಕು. ಅನಾಥ ಅಜ್ಜ-ಅಜ್ಜಿಯರಿಗೆ ಪ್ರೀತಿ, ಕಾಳಜಿ, ಉತ್ತಮ ವಾತಾವರಣ ಹಾಗೂ ಅಗತ್ಯ ಸೌಲಭ್ಯಗಳನ್ನು ಒದಗಿಸುವುದು ಸಮಾಜದ ಪ್ರತಿಯೊಬ್ಬರ ಕರ್ತವ್ಯವಾಗಿದೆ ಎಂದು ತಿಳಿಸಿದರು.
ಹಿರಿಯರ ಮುಖದಲ್ಲಿ ನಗು ಮೂಡಿಸುವುದೇ ನಿಜವಾದ ಸೇವೆ. ಅವರ ಬದುಕಿನಲ್ಲಿ ಪ್ರೀತಿ, ಕಾಳಜಿ ಹಾಗೂ ನೆಮ್ಮದಿಯನ್ನು ತುಂಬಲು ಪ್ರತಿಯೊಬ್ಬರೂ ಮುಂದಾಗಬೇಕು ಎಂದು ಉದಯಕುಮಾರ ಕರೆ ನೀಡಿದರು.
ಈ ಸಂದರ್ಭದಲ್ಲಿ ಪತ್ರಕರ್ತ ದಾದಾಪೀರ್ ಕೊಟ್ಟೂರು, ಉದಯಕುಮಾರ ಹಾಗೂ ವಾಹನ ಚಾಲಕರು ಉಪಸ್ಥಿತರಿದ್ದರು.