Vijayanagara | ಕಿರುಕುಳ ಆರೋಪ: ಆತ್ಮಹತ್ಯೆಗೆ ಯತ್ನಿಸಿದ್ದ ಕೃಷಿ ಸೊಸೈಟಿ ಕಾರ್ಯದರ್ಶಿ ಚಿಕಿತ್ಸೆ ಫಲಿಸದೆ ಮೃತ್ಯು
ಹೊಸಪೇಟೆ/ವಿಜಯನಗರ: ಸೊಸೈಟಿ ಅಧ್ಯಕ್ಷರು ಹಾಗೂ ನಿರ್ದೇಶಕರು ನೀಡುತ್ತಿದ್ದರೆನ್ನಲಾದ ಕಿರುಕುಳದಿಂದ ಮನನೊಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ವಿವಿದ್ದೋದೇಶ ಕೃಷಿ ಗ್ರಾಮೀಣ ಸೊಸೈಟಿಯ ಕಾರ್ಯದರ್ಶಿಯೊಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿರುವ ಘಟನೆ ಹೊಸಪೇಟೆಯಲ್ಲಿ ನಡೆದಿದೆ.
ಮೃತರನ್ನು ಜಿ. ನಿಂಗಪ್ಪ (55) ಎಂದು ಗುರುತಿಸಲಾಗಿದೆ. ಅವರು ಹೊಸಪೇಟೆ ನಗರದ ಚಿತ್ತವಾಡ್ಗಿಯಲ್ಲಿರುವ ವಿವಿದ್ದೋದೇಶ ಕೃಷಿ ಗ್ರಾಮೀಣ ಸೊಸೈಟಿಯಲ್ಲಿ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸೊಸೈಟಿಯ ಅಧ್ಯಕ್ಷ ಸತೀಶ್ ಹಾಗೂ ನಿರ್ದೇಶಕ ವಡ್ಡಿನ ಸೀನಪ್ಪ ಅವರು ಲೆಕ್ಕಪತ್ರದ ವಿಚಾರದಲ್ಲಿ ನಿಂಗಪ್ಪ ಅವರಿಗೆ ಪದೇಪದೇ ಕಿರಿಕಿರಿ ಹಾಗೂ ಒತ್ತಡ ಹೇರುತ್ತಿದ್ದರು ಎಂಬ ಆರೋಪ ಕೇಳಿಬಂದಿದೆ. ಸೊಸೈಟಿಯ ಹಣಕಾಸು ವ್ಯವಹಾರಗಳು ಮತ್ತು ಲೆಕ್ಕಪತ್ರಗಳ ಕುರಿತು ನಿರಂತರವಾಗಿ ಪ್ರಶ್ನಿಸಿ ಒತ್ತಡ ಹೇರುತ್ತಿದ್ದರಿಂದ ನಿಂಗಪ್ಪ ಮಾನಸಿಕವಾಗಿ ನೊಂದಿದ್ದರು ಎನ್ನಲಾಗಿದೆ.
ಈ ನಡುವೆ ಕಿರುಕುಳದಿಂದ ಮನನೊಂದು ನಿಂಗಪ್ಪ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದ್ದು, ಕೂಡಲೇ ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಚಿತ್ತವಾಡ್ಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ. ನಿಂಗಪ್ಪ ಅವರ ಸಾವಿಗೆ ನಿಜವಾದ ಕಾರಣವೇನು ಹಾಗೂ ಸೊಸೈಟಿ ಅಧ್ಯಕ್ಷರು ಮತ್ತು ನಿರ್ದೇಶಕರಿಂದ ಯಾವುದೇ ರೀತಿಯ ಒತ್ತಡ ಅಥವಾ ಕಿರುಕುಳ ನಡೆದಿತ್ತೇ ಎಂಬ ಬಗ್ಗೆ ತನಿಖೆ ನಡೆಸಲಾಗುತ್ತಿದೆ.
ನಿಂಗಪ್ಪ ಅವರ ಸಾವಿನಿಂದ ಕುಟುಂಬಸ್ಥರು ಹಾಗೂ ಸ್ಥಳೀಯರಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಪ್ರಕರಣದ ಸಮಗ್ರ ತನಿಖೆ ನಡೆಸಿ ಆರೋಪಗಳು ಸಾಬೀತಾದಲ್ಲಿ ಸಂಬಂಧಪಟ್ಟವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಹಾಗೂ ರೈತ ಮುಖಂಡರು ಒತ್ತಾಯಿಸಿದ್ದಾರೆ.
ಸ್ಥಳೀಯರಾದ ಸಂತೋಷ್ ಕೆ.ಎಂ. ಮಾತನಾಡಿ, ನಿಂಗಪ್ಪ ಅವರು ಸೊಸೈಟಿಯಲ್ಲಿ ಪ್ರಾಮಾಣಿಕವಾಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಲೆಕ್ಕಪತ್ರದ ವಿಚಾರದಲ್ಲಿ ಪದೇಪದೇ ಕಿರಿಕಿರಿ ಹಾಗೂ ಒತ್ತಡ ಹೇರಲಾಗುತ್ತಿತ್ತು ಎಂಬ ಆರೋಪವಿದ್ದು, ಸಾವಿನ ಹಿಂದಿರುವ ಸತ್ಯವನ್ನು ಪೊಲೀಸರು ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು ಎಂದು ಆಗ್ರಹಿಸಿದರು.
ರೈತ ಸಂಘದ ಮುಖಂಡ ಸಣ್ಣಕ್ಕಿ ರುದ್ರಪ್ಪ ಮಾತನಾಡಿ, ಸೊಸೈಟಿಯ ಲೆಕ್ಕಪತ್ರ ಕೇಳುವುದು ಸದಸ್ಯರು ಹಾಗೂ ನಿರ್ದೇಶಕರ ಹಕ್ಕು. ಆದರೆ ಅದನ್ನು ಮುಂದಿಟ್ಟುಕೊಂಡು ವೈಯಕ್ತಿಕವಾಗಿ ಒತ್ತಡ ಅಥವಾ ಕಿರುಕುಳ ನೀಡುವುದು ಸರಿಯಲ್ಲ. ನಿಂಗಪ್ಪ ಅವರ ಸಾವಿಗೆ ಇಂತಹ ಒತ್ತಡವೇ ಕಾರಣವಾಗಿದೆಯೇ ಎಂಬುದನ್ನು ಸಮಗ್ರವಾಗಿ ತನಿಖೆ ನಡೆಸಿ, ಆರೋಪಗಳು ಸಾಬೀತಾದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಮೃತ ನಿಂಗಪ್ಪ ಅವರ ಪುತ್ರ ಶಶಿಕಿರಣ್ ಮಾತನಾಡಿ, ತಂದೆಯವರು ವಿಷ ಸೇವಿಸಿರುವ ಮಾಹಿತಿ ತಿಳಿದ ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೆಲಕಾಲ ಚಿಕಿತ್ಸೆ ನೀಡಿದ ಬಳಿಕ ಅವರು ಸ್ಪಂದಿಸಿದ್ದರು. ಆದರೆ ನಂತರ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಸೊಸೈಟಿ ಅಧ್ಯಕ್ಷರು ಹಾಗೂ ನಿರ್ದೇಶಕರ ಒತ್ತಡದಿಂದಲೇ ಈ ರೀತಿಯ ಕಠಿಣ ನಿರ್ಧಾರ ಕೈಗೊಂಡಿರುವುದಾಗಿ ತಂದೆಯವರು ತಿಳಿಸಿದ್ದರು. ಈ ಕುರಿತು ಪೊಲೀಸರು ಸಮಗ್ರ ತನಿಖೆ ನಡೆಸಿ ನ್ಯಾಯ ಒದಗಿಸಬೇಕು ಎಂದು ಮನವಿ ಮಾಡಿದರು.