Vijayanagara | ಕೂಲಿ ಕಾರ್ಮಿಕರ ಜೊತೆ ಶ್ರಮದಾನ ನಡೆಸಿದ ಶಾಸಕ ಡಾ.ಶ್ರೀನಿವಾಸ್
ವಿಜಯನಗರ/ಕೂಡ್ಲಿಗಿ: ಶಾಸಕ ಡಾ. ಶ್ರೀನಿವಾಸ್ ಎನ್.ಟಿ. ಅವರು ಶನಿವಾರ ಆಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಂಚಮಲ್ಲನಹಳ್ಳಿಯಲ್ಲಿ ನಡೆಯುತ್ತಿದ್ದ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎಂಎನ್‌ಆರ್‌ಇಜಿಎಸ್) ಕಾಮಗಾರಿ ಸ್ಥಳಕ್ಕೆ ಭೇಟಿ ನೀಡಿ, ಕೂಲಿ ಕಾರ್ಮಿಕರೊಂದಿಗೆ ಶ್ರಮದಾನ ಮಾಡಿದರು.
ನಂತರ ಕಾರ್ಮಿಕರೊಂದಿಗೆ ಮಣ್ಣಿನ ಮೇಲೆಯೇ ಕುಳಿತು ಮಧ್ಯಾಹ್ನದ ಊಟ ಸೇವಿಸುವ ಮೂಲಕ ಅವರೊಂದಿಗೆ ಆತ್ಮೀಯತೆ ಮೆರೆದರು. ಇದೇ ವೇಳೆ ಕಾರ್ಮಿಕರ ಸಮಸ್ಯೆಗಳನ್ನು ಆಲಿಸಿ, ಅವುಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಸ್ವಗ್ರಾಮದಲ್ಲೇ ಉದ್ಯೋಗ ಕಲ್ಪಿಸಿ ಬಡ ಕುಟುಂಬಗಳಿಗೆ ಆರ್ಥಿಕ ಬಲ ನೀಡುವುದು ಎಂಎನ್‌ಆರ್‌ಇಜಿಎಸ್ ಯೋಜನೆಯ ಉದ್ದೇಶವಾಗಿದೆ. ಕೆಲಸಕ್ಕಾಗಿ ಜನರು ಗುಳೆ ಹೋಗುವುದನ್ನು ತಡೆಯಲು ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಶ್ರೀನಿವಾಸ್ ಹೇಳಿದರು.
ಕೂಡ್ಲಿಗಿಯಂತಹ ಹಿಂದುಳಿದ ಕ್ಷೇತ್ರದಲ್ಲಿ ಉದ್ಯೋಗ, ಆರೋಗ್ಯ ಹಾಗೂ ಮೂಲಸೌಕರ್ಯ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತಿದೆ. ನಕಲಿ ಔಷಧಗಳ ಬಗ್ಗೆ ಸಾರ್ವಜನಿಕರು ಎಚ್ಚರಿಕೆ ವಹಿಸಬೇಕು. ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಮತ್ತಷ್ಟು ಸಬಲೀಕರಣಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಕಾರ್ಮಿಕರ ಆರೋಗ್ಯ ತಪಾಸಣೆ ನಡೆಸಿದರು. ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ನರಸಪ್ಪ, ಪಿಡಿಒ ವಿನಯ್ ಕುಮಾರ್, ಮಾಜಿ ಸದಸ್ಯ ಕೆ.ಎಂ. ಶಶಿಧರ ಸ್ವಾಮಿ ಸೇರಿದಂತೆ ಅಧಿಕಾರಿಗಳು, ಮುಖಂಡರು ಹಾಗೂ ಕಾರ್ಮಿಕರು ಉಪಸ್ಥಿತರಿದ್ದರು.