ಕಬ್ಬು ಬೆಳೆಗಾರರ ಸಮಸ್ಯೆ ಇತ್ಯರ್ಥಕ್ಕೆ ಸಚಿವ ಸಂಪುಟ ಸಭೆಯಲ್ಲಿ ಪ್ರಾಮಾಣಿಕ ಪ್ರಯತ್ನ: ಎಂ.ಬಿ.ಪಾಟೀಲ್ ಭರವಸೆ
ವಿಜಯಪುರದಲ್ಲಿ ಅಹೋರಾತ್ರಿ ಧರಣಿನಿರತ ಕಬ್ಬು ಬೆಳೆಗಾರರ ಅಹವಾಲು ಆಲಿಸಿದ ಸಚಿವರು
ವಿಜಯಪುರ: ನಾಳೆ ನಡೆಯಲಿರುವ ಸಚಿವ ಸಂಪುಟದಲ್ಲಿ ಕಬ್ಬು ಬೆಳೆಗಾರರ ಸಮಗ್ರ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರ ಗಮನಕ್ಕೆ ತಂದು ಸೂಕ್ತವಾಗಿ ನ್ಯಾಯ ದೊರಕಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಶ್ರಮಿಸಲಾಗುವುದು, ಪ್ರಧಾನಮಂತ್ರಿಯನ್ನು ಸಹ ಭೇಟಿ ಮಾಡಿ, ಈ ಬಗ್ಗೆ ಸೂಕ್ತ ತೀರ್ಮಾನ ಕೈಗೊಳ್ಳಲು ನಾವು ಬದ್ಧ ಎಂದು ಸಚಿವ ಡಾ.ಎಂ.ಬಿ. ಪಾಟೀಲ್ ಭರವಸೆ ನೀಡಿದರು.
ಸಕ್ಕರೆ ಕಾರ್ಖಾನೆಗಳಿಗೆ ಪೂರೈಕೆ ಮಾಡುವ ಪ್ರತಿ ಟನ್ ಕಬ್ಬಿಗೆ ಕನಿಷ್ಠ 3500 ರೂ. ದರ ನಿಗದಿಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ - ಹಸಿರು ಸೇನೆ, ವಿವಿಧ ರೈತಪರ, ಕನ್ನಡಪರ ಸಂಘಟನೆಗಳು ನಗರದ ಗಗನ್ ಮಹಲ್ ಉದ್ಯಾನವನದಲ್ಲಿ ಜಂಟಿಯಾಗಿ ನಡೆಸುತ್ತಿರುವ ಅಹೋರಾತ್ರಿ ಧರಣಿ ಸತ್ಯಾಗ್ರಹ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ರೈತರ ಅಹವಾಲು ಆಲಿಸಿದ ಬಳಿಕ ಮಾತನಾಡುತ್ತಿದ್ದರು.
ಕಳೆದ ಒಂಭತ್ತು ವರ್ಷಗಳಿಂದ ಸಕ್ಕರೆ ಬೆಲೆ ಪರಿಷ್ಕರಣೆ ಮಾಡಿದಿರುವುದು, ಎಥೆನಾಲ್ ಖರೀದಿಸುವಲ್ಲಿ ಕೇಂದ್ರ ಸರಕಾರದ ನಿರಾಸಕ್ತಿ ತೋರುತ್ತಿದೆ, ಈ ಎಲ್ಲ ನಿಯಮಾವಳಿಗಳು ಬದಲಾವಣೆಯಾಗಬೇಕು, ಈ ನಿಟ್ಟಿನಲ್ಲಿ ಕೇಂದ್ರ ಸರಕಾರವೂ ಸಹ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡಬೇಕಿದೆ. ಈ ವಿಷಯವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶೀಘ್ರದಲ್ಲೇ ಪ್ರಧಾನ ಮಂತ್ರಿ ಹಾಗೂ ಕೇಂದ್ರ ಸಕ್ಕರೆ ಸಚಿವ ಶಿವರಾಜ್ ಸಿಂಗ್ ಚವ್ಹಾಣ್ ಅವರನ್ನು ಭೇಟಿ ಮಾಡಲಿದ್ದಾರೆ ಎಂದು ಭರವಸೆ ನೀಡಿದರು.
ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕೇಂದ್ರ ಸರಕಾರದ ಕಣ್ಣು ತೆರೆಸುವ ಕೆಲಸ ಮಾಡಲಿ, ನಿಯೋಗದೊಂದಿಗೆ ಕೇಂದ್ರ ಸರಕಾರವನ್ನು ಭೇಟಿ ಮಾಡಿ ಈ ನಿಯಮಾವಳಿಗಳನ್ನು ಪರಿಷ್ಕರಣೆ ಮಾಡುವಂತೆ ಒತ್ತಾಯಿಸಬೇಕು. ಕೇಂದ್ರ ಹಾಗೂ ರಾಜ್ಯ ಸರಕಾರ ರೈತರಿಗೆ ಒಳ್ಳೆಯದು ಮಾಡಲು ಸಮನ್ವಯ ಸಾಧಿಸಬೇಕಾಗುತ್ತದೆ, ಕಬ್ಬು ಬೆಳೆಗೆ ಬೆಲೆ ನಿಗದಿ, ಎಥೆನಾಲ್ ಖರೀದಿ ಪ್ರಮಾಣ ಹೆಚ್ಚಳ ಮೊದಲಾದ ಮಹತ್ವದ ಕಾರ್ಯವನ್ನು ಕೇಂದ್ರ ಸರಕಾರ ಮಾಡಬೇಕಿದೆ, ನಾನು ಕೇಂದ್ರ ಸರಕಾರವನ್ನು ದೂರುತ್ತಿಲ್ಲ, ರೈತರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಮುಂದಾಗಬೇಕು ಎಂಬ ಒತ್ತಾಯ ಮಾಡುತ್ತಿರುವೆ ಎಂದು ಸಚಿವ ಎಂ.ಬಿ.ಪಾಟೀಲ್ ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸದಾ ರೈತಪರ, ಬಡವರ ಪರ. ಯಾವ ಸರಕಾರವೂ ಕಬ್ಬಿಗೆ ಬೆಂಬಲ ನೀಡಿರಲಿಲ್ಲ, ಈ ಹಿಂದೆ ನಮ್ಮ ಸರಕಾರದಲ್ಲಿ ಸಕ್ಕರೆ ಸಚಿವರಾಗಿದ್ದ ಪ್ರಕಾಶ ಹುಕ್ಕೇರಿ 350೦ ರೂ. ಬೆಂಬಲ ಬೆಲೆ ನೀಡಿದ್ದರು, ಇಡೀ ಸರಕಾರವೇ ಕಬ್ಬು ಬೆಳೆಗಾರರ ಪರವಾಗಿದೆ ಎಂದರು.
ರೈತ ಮುಖಂಡ ಪಂಚಪ್ಪ ಕಲಬುರ್ಗಿ ಮಾತನಾಡಿ, ಕೆಲವೊಂದು ಸಕ್ಕರೆ ಕಾರ್ಖಾನೆಗಳು ಲೋ ರಿಕವರಿ ಇರುವ ಕಬ್ಬನ್ನು ತೆಗೆದುಕೊಳ್ಳುತ್ತಿವೆ, ಉತ್ತಮ ಇಳುವರಿ ಹೊಂದಿದ ರೈತರಿಗೆ ಇದರಿಂದ ಅನ್ಯಾಯವಾಗುತ್ತಿದೆ, ಹೀಗಾಗಿ ಲೋ ರಿಕವರಿ ಇರುವ ಕಬ್ಬನ್ನು ಪಡೆಯದಂತೆ ಕಡ್ಡಾಯವಾಗಿ ನಿಷೇಧಿಸಬೇಕು, ಬಿಲ್ 14ದಿನದಲ್ಲಿ ಪಾವತಿಯಾಗಿಸುವ ತುರ್ತು ಪರಿಹಾರವನ್ನು ರಾಜ್ಯ ಸರ್ಕಾರ ಮಾಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಸಕ್ಕರೆ ಕಾರ್ಖಾನೆಗಳಿಂದ ಉತ್ಪಾದನೆಯಾಗುವ ಉಪ ಉತ್ಪನ್ನಗಳಿಂಧ ಸಂಗ್ರಹವಾಗುವ ತೆರಿಗೆ ಪ್ರಮಾಣದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರ ಸಮನ್ವಯತೆಯಿಂದ ಶೇ.10ರಷ್ಟು ಅಂದರೆ 400 ರೂ. ಸರ್ಕಾರವೇ ನೀಡಿದರೆ ರೈತರಿಗೆ ಅನುಕೂಲವಾಗಲಿದೆ ಎಂದು ಹೇಳಿದರು.
ಸಂಘಟನೆಯ ಜಿಲ್ಲಾಧ್ಯಕ್ಷ ಸಂಗಮೇಶ ಸಗರ ಮಾತನಾಡಿ, ಸಕ್ಕರೆ ಸಚಿವರು ನಮ್ಮ ಜಿಲ್ಲೆಯವರೇ ಆಗಿದ್ದರೂ ಸಹ ನಮ್ಮ ಸಮಸ್ಯೆಗಳ ಬಗ್ಗೆ ಕಾಳಜಿ ತೋರುತ್ತಿಲ್ಲ, ಸಕ್ಕರೆ ಕಾಯ್ದೆ ಪ್ರಕಾರ 15 ದಿನಗಳಲ್ಲಿ ಕಬ್ಬು ಬೆಳೆಗಾರರಿಗೆ ಬಿಲ್ ಪಾವತಿಯಾಗಬೇಕು, ಆದರೆ ಯಾವೊಂದು ಸಕ್ಕರೆ ಕಾರ್ಖಾನೆ ಈ ನಿಯಮ ಪಾಲಿಸಿಲ್ಲ, ವರ್ಷ ಕಳೆದರೂ ರೈತರಿಗೆ ಬಿಲ್ ಪಾವತಿಯಾಗಿಲ್ಲ, ಒಂದೇ ಒಂದು ಕಾರ್ಖಾನೆ 15 ದಿನದಲ್ಲಿ ಬಿಲ್ ಹಾಕಿದ್ದು ತೋರಿಸಿದರೆ ನಾನೇ ಎಲ್ಲರೂ ಹೇಳಿದಂತೆ ಕೇಳುವೆ, ಬಿಲ್ ಹಾಕಲು ವಿಳಂಬವಾದ ಬಗ್ಗೆ ಎಲ್ಲ ದಾಖಲೆಗಳು ಇವೆ, ಈ ಸಕ್ಕರೆ ಕಾರ್ಖಾನೆಗಳು ಸರ್ಕಾರಕ್ಕೆ ಮೋಸ ಮಾಡುತ್ತಿವೆ ಇನ್ನೂ ರೈತರಿಗೆ ಬಿಡುತ್ತಾರೆಯೇ ಎಂದು ಸಚಿವ ಡಾ.ಎಂ.ಬಿ. ಪಾಟೀಲ ಎದುರು ಪ್ರಶ್ನಿಸಿದರು.
ಕಾರ್ಮಿಕ ಹೋರಾಟಗಾರ ಅಪ್ಪಾಸಾಹೇಬ ಯರನಾಳ ಮಾತನಾಡಿದರು.
ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿದ ಮನಗೂಳಿ ಹಿರೇಮಠದ ಶ್ರೀ ಅಭಿನವ ಸಂಗನಬಸವ ಶಿವಾಚಾರ್ಯರು ಮಾತನಾಡಿದರು.
ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಬಿಜೆಪಿ ಜಿಲ್ಲಾಧ್ಯಕ್ಷ ಗುರುಲಿಂಗಪ್ಪ ಅಂಗಡಿ, ಉಮೇಶ ಕಾರಜೋಳ, ಪಂಚಪ್ಪ ಕಲಬುರ್ಗಿ, ಫಯಾಝ್ ಕಲಾದಗಿ, ರಾಹುಲ್ ಕುಬಕಡ್ಡಿ ಮತ್ತಿತರರ ಉಪಸ್ಥಿತರಿದ್ದರು.