ಬಿಹಾರ ಚುನಾವಣೆಯಲ್ಲಿ ಸೋಲಿಗೆ ಕಾರಣಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸಂಶೋಧನಾ ತಂಡ ಅಧ್ಯಯನ: ಸಚಿವ ಎಂ.ಬಿ. ಪಾಟೀಲ್
ವಿಜಯಪುರ : ಬಿಹಾರ್ ಚುನಾವಣೆಯಲ್ಲಿ ಹೀನಾಯ ಸೋಲಿಗೆ ಕಾರಣಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಸಂಶೋಧನಾ ತಂಡ ಅಧ್ಯಯನ ನಡೆಸುತ್ತಿದೆ. ಚುನಾವಣಾ ಪೂರ್ವದಲ್ಲಿಯೇ ಸರ್ಕಾರಿ ಹಣವನ್ನೇ ಜನರ ಖಾತೆಗೆ ಜಮಾವಣೆ ಮಾಡಿದ್ದು ಸಹ ಸೋಲಿಗೆ ಕಾರಣ ಎಂದು ವಿಶ್ಲೇಷಿಸಬಹುದಾಗಿದೆ ಎಂದು ಸಚಿವ ಡಾ.ಎಂ.ಬಿ. ಪಾಟೀಲ್ ಹೇಳಿದರು.
ನಗರದಲ್ಲಿ ರವಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತಗಳ್ಳತನ ಮೊದಲಾದ ಗಂಭೀರ ಆರೋಪಗಳ ಬಗ್ಗೆ ತನಿಖೆ ಮಾಡಲು ಆಸಕ್ತಿ ತೋರದ ಚುನಾವಣಾ ಆಯೋಗದ ನಡವಳಿಕೆಗಳಿಂದ ಕೇಂದ್ರ ಸರ್ಕಾರ ಚುನಾವಣಾ ಆಯೋಗವನ್ನು ದುರಪಯೋಗಪಡಿಸಿಕೊಳ್ಳುತ್ತಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ. ಲೋಕಸಭೆ ಪ್ರತಿಪಕ್ಷ ನಾಯಕರಾಗಿರುವ ರಾಹುಲ್ ಗಾಂಧಿ ಅವರ ಆರೋಪಕ್ಕೆ ಸಂಬಂದಿಸಿದಂತೆ ತನಿಖೆ ನಡೆಸಬೇಕಾದ ಚುನಾವಣಾ ಆಯೋಗ ಅವರಿಗೆ ಅಫಿಡಿವಿಟ್ ಕೇಳಿದೆ. ಸಂವಿಧಾನಬದ್ಧವಾಗಿ ಪ್ರತಿಜ್ಞೆ ಸ್ವೀಕರಿಸಿಯೇ ಅವರು ಸಂಸದರಾಗಿದ್ದಾರೆ. ಪ್ರತಿಜ್ಞೆ ಸ್ವೀಕರಿಸಿಯೇ ಲೋಕಸಭೆ ಪ್ರತಿಪಕ್ಷ ನಾಯಕರಾಗಿದ್ದಾರೆ. ಚುನಾವಣಾ ಆಯೋಗ ಸಂವಿಧಾನಕ್ಕಿಂತ ದೊಡ್ಡದಲ್ಲ. ಅಫಿಡಿವೇಟ್ ಸಲ್ಲಿಸುವ ನಿಯಮಾವಳಿ ಇಲ್ಲ, ಹೀಗಾಗಿ ಸಲ್ಲಿಸಿಲ್ಲ ಎಂದರು.
ಗಂಭೀರವಾದ ಆರೋಪಗಳ ಬಗ್ಗೆ ಚುನಾವಣಾ ಆಯೋಗ ತನಿಖೆ ನಡೆಸಬೇಕಾಗಿರುವುದು ಅಗತ್ಯವಾಗಿದೆ ಎಂದರು.
ಮುಖ್ಯಮಂತ್ರಿ ಸಿದ್ಧರಾಮಯ್ಯ ಪ್ರಧಾನಮಂತ್ರಿಗಳನ್ನು ಭೇಟಿ ಮಾಡಿ ವಿಶೇಷವಾಗಿ ಕಬ್ಬು ಬೆಳೆಗಾರರ ಬಗ್ಗೆ ಚರ್ಚಿಸಲಿದ್ದಾರೆ. ಕೇಂದ್ರ ರೂಪಿಸಿರುವ ಎಫ್ಆರ್‌ಪಿ ದರದಿಂದ ರೈತರಿಗೆ ಅನ್ಯಾಯವಾಗುತ್ತದೆ. ಕಬ್ಬು ಕಟಾವು, ಸಾಗಾಣಿಕೆ ವೆಚ್ಚ ಸೇರಿ 3500 ರೂ. ನಿಗದಿ ಮಾಡಿರುವುದರಿಂದ ರೈತರಿಗೆ ತೊಂದರೆಯಾಗುತ್ತದೆ. ಇದರ ಪರಿಷ್ಕರಣೆ ಮೊದಲಾದ ಮಹತ್ವದ ವಿಷಯಗಳ ಬಗ್ಗೆ ಚರ್ಚೆ ನಡೆಸಲಿದ್ದಾರೆ ಎಂದರು.