ಮತದಾರರ ಹಕ್ಕು ಕಸಿಯಲು ಬಿಡಲ್ಲ; ಮುಖ್ಯ ಚುನಾವಣಾ ಆಯುಕ್ತ ರಾಜೀನಾಮೆ ನೀಡಲಿ : ಪ್ರಕಾಶ್ ರಾಜ್
ವಿಜಯಪುರ : ಪಶ್ಚಿಮ ಬಂಗಾಳದಂತೆ ಅಮಾಯಕರು ಮತದಾನದ ಹಕ್ಕು ಕಳೆದುಕೊಂಡಂತೆ ಕರ್ನಾಟಕದ ಮತದಾರರು ತಮ್ಮ ಹಕ್ಕು ಕಳೆದುಕೊಳ್ಳಲು ನಾನು ಬಿಡಲ್ಲ. ಚುನಾವಣಾ ಆಯೋಗದ ಮುಖ್ಯ ಆಯುಕ್ತ ಜ್ಞಾನೇಶಕುಮಾರ್ ರಾಜೀನಾಮೆ ನೀಡುವವರೆಗೂ ನಾವು ಬಿಡಲ್ಲ ಎಂದು ನಟ, ಪ್ರಗತಿಪರ ಚಿಂತಕ ಪ್ರಕಾಶ ರಾಜ್ ಹೇಳಿದರು.
ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದ ಮುಂಭಾಗದಲ್ಲಿ ಮತ ಕಾವಲು ಸಮಿತಿ ನೇತೃತ್ವದಲ್ಲಿ ನಡೆದ ಎಸ್.ಐ.ಆರ್. ಗೊಂದಲ ಕುರಿತಾದ ಬಹಿರಂಗ ಅಧಿವೇಶನದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಗಣೇಶನ ಉತ್ಸವ ಮೂರ್ತಿ ವಿಸರ್ಜನೆಯಾಗಿದೆ, ಈಗ ಚುನಾವಣಾ ಮುಖ್ಯ ಆಯುಕ್ತರ ವಿಸರ್ಜನೆಯಾಗಬೇಕಿದೆ ಎಂದರು.
ಕಾಂಗ್ರೆಸ್ ಆದಿಯಾಗಿ ಯಾವ ಪಕ್ಷವನ್ನೂ ನಂಬಬೇಡಿ. ನಿಮ್ಮ ಹಕ್ಕುಗಳ ಉಳಿವಿಗಾಗಿ ಹಾಗೂ ಸ್ವಾತಂತ್ರ್ಯ ಉಳಿಸಿಕೊಳ್ಳಲು ಸ್ವಾತಂತ್ರ್ಯ ಹೋರಾಟದ ಮಾದರಿಯಲ್ಲಿ ಮತ್ತೊಂದು ಶಾಂತಿಯುತ ಹೋರಾಟಕ್ಕೆ ಮುನ್ನುಡಿ ಬರೆಯಬೇಕಿದೆ. ಈ ಹೋರಾಟ ಪ್ರಜೆಗಳ ಹೋರಾಟ, ಯಾವ ಪಕ್ಷವೂ ಈ ಹೋರಾಟವನ್ನು ಹೈಜಾಕ್ ಮಾಡಬಾರದು ಎಂದರು.
ಅಲ್ಪಸಂಖ್ಯಾತರ ಹಾಗೂ ಹಿಂದುಳಿದ ವರ್ಗದವರ, ಅದರಲ್ಲೂ ತಮ್ಮ ಪಕ್ಷಕ್ಕೆ ಬಾರದೇ ಇರುವ ಮತಗಳನ್ನೇ ಟಾರ್ಗೆಟ್ ಮಾಡಿ ಅವರ ಹೆಸರುಗಳನ್ನು ಡಿಲೀಟ್ ಮಾಡುವ ವ್ಯವಸ್ಥಿತ ಹುನ್ನಾರ ಮನುಸ್ಮೃತಿ ಹೇರುವ ಷಡ್ಯಂತ್ರದ ಭಾಗ ಎಂದು ಆರೋಪಿಸಿದರು.
ಮತ ಕಾವಲು ಸಮಿತಿಯ ಪ್ರಮುಖ ಭೋಗೇಶ ಸೊಲ್ಲಾಪೂರ ಮಾತನಾದರು.
ಈ ಸಂದರ್ಭದಲ್ಲಿ ಸಮಾಜ ಸೇವಕ ಅಬ್ದುಲ್ ಹಮೀದ್ ಮುಶ್ರೀಫ್, ನ್ಯಾಯವಾದಿ ಮುಖ್ತಿಯಾರ್ ದಖನಿ, ಸಮಾಜ ಸೇವಕಿ ಇಸಾಬೆಲ್ಲಾ ಕ್ಸೇವಿಯರ್, ಅಬ್ದುಲ್ ಖದೀರ್, ಚೆನ್ನು ಕಟ್ಟಮನಿ, ಮಲ್ಲಿಕಾರ್ಜುನ ಬಟಗಿ, ಅಕ್ರಂ ಮಾಶ್ಯಾಳಕರ, ಫಯಾಜ್ ಕಲಾದಗಿ, ಸುರೇಶ ಬಿಜಾಪೂರ ಮುಂತಾದವರು ಉಪಸ್ಥಿತರಿದ್ದರು.