ವಿಜಯಪುರ ಪೊಲೀಸರ ಭರ್ಜರಿ ಕಾರ್ಯಾಚರಣೆ | ಹೊಲದಲ್ಲಿ ಬೆಳೆದಿದ್ದ 1.1 ಕೋಟಿ ರೂ. ಮೌಲ್ಯದ ಗಾಂಜಾ ಜಪ್ತಿ; ಓರ್ವ ಆರೋಪಿ ಬಂಧನ
ವಿಜಯಪುರ : ವಿಜಯಪುರ ಜಿಲ್ಲಾ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಬಸವನ ಬಾಗೇವಾಡಿ ತಾಲೂಕಿನ ದಿಂಡವಾರ ಗ್ರಾಮದ ಹೊಲವೊಂದರಲ್ಲಿ ತೊಗರಿ ಬೆಳೆಯ ಮರೆಯಲ್ಲಿ ಅಕ್ರಮವಾಗಿ ಬೆಳೆಯಲಾಗಿದ್ದ 1.1 ಕೋಟಿ ರೂ. ಮೌಲ್ಯದ 200 ಕೆ.ಜಿ.ಗೂ ಅಧಿಕ ಗಾಂಜಾವನ್ನು ವಶಪಡಿಸಿಕೊಂಡು, ಓರ್ವ ಆರೋಪಿಯನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ತಿಳಿಸಿದರು.
ನಗರದಲ್ಲಿ ರವಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ವಿವರಣೆ ನೀಡಿದ ಅವರು, ಬಂಧಿತ ಆರೋಪಿಯನ್ನು ಶಿವಶಂಕರ್ ಶರಣಪ್ಪ ಜೀರ್ ಎಂದು ಗುರುತಿಸಲಾಗಿದೆ. ಆರೋಪಿಯು ತನ್ನ ಜಮೀನಿನಲ್ಲಿ ತೊಗರಿ ಬೆಳೆ ಬಿತ್ತನೆ ಮಾಡಿ, ಅದರ ಮಧ್ಯದಲ್ಲಿ 500ಕ್ಕೂ ಹೆಚ್ಚು ಗಾಂಜಾ ಗಿಡಗಳನ್ನು ಅಕ್ರಮವಾಗಿ ಬೆಳೆದಿರುವ ಬಗ್ಗೆ ಖಚಿತ ಮಾಹಿತಿ ಪಡೆದ ಬಸವನ ಬಾಗೇವಾಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ ಹಾಗೂ ಗುರುಶಾಂತ ದಾಶ್ಯಾಳ ನೇತೃತ್ವದ ಪೊಲೀಸ್ ತಂಡ ಈ ಕಾರ್ಯಾಚರಣೆ ನಡೆಸಿದೆ ಎಂದರು.
ದಿಂಡವಾರ ಗ್ರಾಮದಲ್ಲಿ ಗಾಂಜಾ ಬೆಳೆದಿರುವ ಕುರಿತು ಬೀಟ್ ಪೊಲೀಸ್ ಸಿಬ್ಬಂದಿಗೆ ಖಚಿತ ಮಾಹಿತಿ ಲಭಿಸಿತ್ತು. ಇದರ ಆಧಾರದ ಮೇಲೆ ಎನ್ಡಿಪಿಎಸ್ ಕಾಯ್ದೆ ನಿಯಮಗಳ ಪ್ರಕಾರ ದಾಳಿ ಪ್ರಕ್ರಿಯೆ ಕೈಗೊಂಡು ಅಕ್ರಮ ಗಾಂಜಾ ಬೆಳೆಯನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ತಿಳಿಸಿದರು.
ಈ ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಬಸವನ ಬಾಗೇವಾಡಿ ಡಿವೈಎಸ್ಪಿ ಚಂದ್ರಕಾಂತ ನಂದರೆಡ್ಡಿ, ಗುರುಶಾಂತ ದಾಶ್ಯಾಳ ಹಾಗೂ ಇವರನ್ನೊಳಗೊಂಡ ಪೊಲೀಸ್ ತಂಡದ ಕಾರ್ಯವನ್ನು ಶ್ಲಾಘಿಸಿರುವ ಎಸ್.ಪಿ., ಎಲ್ಲ ಅಧಿಕಾರಿ ಹಾಗೂ ಸಿಬ್ಬಂದಿಗಳ ಕಾರ್ಯಕ್ಕೆ ಬಹುಮಾನ ಘೋಷಿಸಿರುವುದಾಗಿ ಹೇಳಿದರು.
ಮಾದಕ ದ್ರವ್ಯಗಳ ಮಾರಾಟ ಜಾಲವನ್ನೇ ಸಂಪೂರ್ಣವಾಗಿ ಮಟ್ಟ ಹಾಕುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಗಂಭೀರ ಹೆಜ್ಜೆ ಇರಿಸಿದೆ. ಎಲ್ಲ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬೀಟ್ ಸಿಬ್ಬಂದಿಗಳ ಮುಖಾಂತರ ಮಾದಕ ದ್ರವ್ಯಗಳ ತಯಾರಿಕೆ, ಮಾರಾಟ ಹಾಗೂ ಬಳಕೆ ಬಗ್ಗೆ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ಎಸ್.ಪಿ. ತಿಳಿಸಿದರು.
ವಿಜಯಪುರ ಜಿಲ್ಲೆಯಲ್ಲಿ ಮಾದಕ ವಸ್ತುಗಳ ತಯಾರಿಕೆ, ಮಾರಾಟ ಹಾಗೂ ಬಳಕೆಯ ಬಗ್ಗೆ ಸಾರ್ವಜನಿಕರ ಬಳಿ ಯಾವುದೇ ಮಾಹಿತಿ ಇದ್ದರೆ ಅದನ್ನು ತಕ್ಷಣ ಇಲಾಖೆಗೆ ಒದಗಿಸುವಂತೆ ಮನವಿ ಮಾಡಿದರು. ಮಾಹಿತಿ ನೀಡಿದವರ ಹೆಸರನ್ನು ಸಂಪೂರ್ಣವಾಗಿ ಗೌಪ್ಯವಾಗಿಡಲಾಗುವುದು ಹಾಗೂ ಇಲಾಖೆಯಿಂದ ಯೋಗ್ಯ ಬಹುಮಾನ ನೀಡಲಾಗುವುದು ಎಂದು ತಿಳಿಸಿದರು.