ವಿಜಯಪುರ: ಸಚಿವ ವಿಜಯಾನಂದ ಕಾಶಪ್ಪನವರ್ ವಿರುದ್ಧ ಅವಹೇಳನಕಾರಿ ಪೋಸ್ಟ್ ಆರೋಪ; ಶಾಲೆಯ ಸಹ ಶಿಕ್ಷಕ ಸೇವೆಯಿಂದ ಅಮಾನತು
ವಿಜಯಾನಂದ ಕಾಶಪ್ಪನವರ್ | ಆನಂದ ಕೆಂಭಾವಿ
ವಿಜಯಪುರ: ರಾಜ್ಯ ಸರ್ಕಾರದ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ವಿಜಯಾನಂದ ಕಾಶಪ್ಪನವರ್ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ನಿಂದನಾತ್ಮಕ ಸಂದೇಶ ಹಂಚಿಕೊಂಡ ಆರೋಪದ ಮೇರೆಗೆ ಸರ್ಕಾರಿ ಶಾಲೆಯ ಸಹ ಶಿಕ್ಷಕರೊಬ್ಬರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಸೇವೆಯಿಂದ ಅಮಾನತುಗೊಳಿಸಲಾಗಿದೆ.
ಅಮಾನತುಗೊಂಡ ಶಿಕ್ಷಕನನ್ನು ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಹಿರೇಮಸಳಿ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯ ಸಹ ಶಿಕ್ಷಕ ಆನಂದ ಕೆಂಭಾವಿ ಎಂದು ಗುರುತಿಸಲಾಗಿದೆ.
ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ನೂತನ ಸಚಿವರಾಗಿ ವಿಜಯಾನಂದ ಕಾಶಪ್ಪನವರ ಪ್ರಮಾಣ ವಚನ ಸ್ವೀಕರಿಸುವಾಗಿನ ಫೋಟೊವನ್ನು ಬಳಸಿಕೊಂಡು, "ಸಚಿವರಿಗೆ ಕನ್ನಡದಲ್ಲಿ ಮಾತನಾಡಲು ಬರುವುದಿಲ್ಲ" ಎಂಬಿತ್ಯಾದಿ ಅವಹೇಳನಕಾರಿ ಹಾಗೂ ನಿಂದನಾತ್ಮಕ ಸಂದೇಶಗಳನ್ನು ಶಿಕ್ಷಕ ಕೆಂಭಾವಿ ವಾಟ್ಸಾಪ್ ಆಪ್ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದರು ಎಂದು ತಿಳಿದು ಬಂದಿದೆ.
ಗ್ರಾಮಸ್ಥರ ಆಕ್ರೋಶ ಹಾಗೂ ದೂರು:
ಶಿಕ್ಷಕನ ಈ ನಡೆಗೆ ಹಿರೇಮಸಳಿ ಗ್ರಾಮಸ್ಥರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಜವಾಬ್ದಾರಿಯುತ ಹುದ್ದೆಯಲ್ಲಿದ್ದುಕೊಂಡು ಇಂತಹ ನಿಂದನಾತ್ಮಕ ಪೋಸ್ಟ್ ಹಾಕಿದ ಶಿಕ್ಷಕನ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಇಂಡಿ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ (BEO) ಮನವಿ ಸಲ್ಲಿಸಿದ್ದರು.
ಅಮಾನತು ಆದೇಶ: ಗ್ರಾಮಸ್ಥರ ದೂರಿನ ಮೇರೆಗೆ ಇಂಡಿ ಬಿಇಒ ಅವರು ನೀಡಿದ ಶಿಫಾರಸ್ಸು ವರದಿಯನ್ನು ಆಧರಿಸಿ, ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ (DDPI) ಮಂಜುನಾಥ ಗುಳೇದಗುಡ್ಡ ಅವರು ಸಹ ಶಿಕ್ಷಕ ಆನಂದ ಕೆಂಭಾವಿ ಅವರನ್ನು ಸೇವೆಯಿಂದ ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ.