Vijayapura | ಪೊಲೀಸ್ ಕಾನ್ಸ್‌ಟೇಬಲ್ ಪರೀಕ್ಷೆ ವೇಳೆ ಗೊಂದಲ; ತಿಕೋಟಾದಲ್ಲಿ ಅಭ್ಯರ್ಥಿಗಳ ಆಕ್ರೋಶ, ಪ್ರತಿಭಟನೆ
ವಿಜಯಪುರ : ಬಿಗಿ ಭದ್ರತೆಯಲ್ಲಿ ನಡೆದ ಸಿವಿಲ್ ಪೊಲೀಸ್ ಕಾನ್ಸ್‌ಟೇಬಲ್ ಹುದ್ದೆಯ ಆಯ್ಕೆ ಪರೀಕ್ಷೆಯಲ್ಲಿ ಗೊಂದಲ ಉಂಟಾಗಿದೆ. ವಿಜಯಪುರ ಜಿಲ್ಲೆಯ ತಿಕೋಟಾ ಪಟ್ಟಣದ ಶ್ರೀ ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಪ್ರಶ್ನೆ ಪತ್ರಿಕೆ ಹಾಗೂ ಒಎಂಆರ್ (OMR) ಶೀಟ್ ನಡುವೆ ವ್ಯತ್ಯಾಸ ಕಂಡುಬಂದಿದ್ದರಿಂದ ಅಭ್ಯರ್ಥಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದಾರೆ.
ಶಾರದಾಂಬಾ ಶಿಕ್ಷಣ ಸಂಸ್ಥೆಯ ಪರೀಕ್ಷಾ ಕೇಂದ್ರದಲ್ಲಿ ಅಭ್ಯರ್ಥಿಗಳಿಗೆ ವಿತರಿಸಲಾದ ಪ್ರಶ್ನೆ ಪತ್ರಿಕೆ ಮತ್ತು ಒಎಂಆರ್ ಶೀಟ್‌ಗಳ ನಡುವೆ ಹೊಂದಾಣಿಕೆಯಾಗದೇ ವ್ಯತ್ಯಾಸವಾಗಿರುವುದು ಈ ಗೊಂದಲಕ್ಕೆ ಮುಖ್ಯ ಕಾರಣವಾಗಿದೆ ಎನ್ನಲಾಗಿದೆ. ಅಲ್ಲದೆ, ಬೆಳಿಗ್ಗೆ 10:30ಕ್ಕೆ ನೀಡಬೇಕಿದ್ದ ಪ್ರಶ್ನೆ ಪತ್ರಿಕೆಯನ್ನು ಅರ್ಧ ಗಂಟೆ ತಡವಾಗಿ ಅಂದರೆ 11:00 ಗಂಟೆಗೆ ವಿತರಿಸಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಇದರಿಂದ ಆಕ್ರೋಶಗೊಂಡ ಅಭ್ಯರ್ಥಿಗಳು ಪರೀಕ್ಷಾ ಕೇಂದ್ರದ ಗೇಟ್ ಅನ್ನು ತಳ್ಳಿ ಒಳಗಡೆ ನುಗ್ಗಲು ಯತ್ನಿಸಿದರು. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಮತ್ತು ಪೊಲೀಸರ ನಡುವೆ ತೀವ್ರ ವಾಗ್ವಾದ ನಡೆದು, ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು. ಪರಿಸ್ಥಿತಿಯನ್ನು ಹತೋಟಿಗೆ ತರಲು ಮತ್ತು ಅಭ್ಯರ್ಥಿಗಳನ್ನು ಚದುರಿಸಲು ಪೊಲೀಸರು ಲಾಠಿ ಬೀಸಿದರು.
ಅಭ್ಯರ್ಥಿಗಳ ಅಳಲು ಮತ್ತು ಆಗ್ರಹ:
"ನಾವು ಐದು ನಿಮಿಷ ತಡವಾಗಿ ಬಂದರೂ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವುದಿಲ್ಲ. ಆದರೆ ಪರೀಕ್ಷಾ ಮಂಡಳಿಯವರೇ ಅರ್ಧ ಗಂಟೆ ತಡವಾಗಿ ಪ್ರಶ್ನೆ ಪತ್ರಿಕೆ ನೀಡಿದ್ದಾರೆ. ನಾವು ವರ್ಷಗಟ್ಟಲೆ ಪಟ್ಟ ಶ್ರಮಕ್ಕೆ ಬೆಲೆಯೇ ಇಲ್ಲವೇ? ಓಎಂಆರ್ ಕೊಡುವುದು ವಿಳಂಬವಾಗಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಪರೀಕ್ಷೆ ಸರಿಯಾಗಿ ಬರೆಯಲು ಸಾಧ್ಯವಾಗದೇ ನಮಗೆ ತೀವ್ರ ಅನ್ಯಾಯವಾಗಿದೆ" ಎಂದು ಆಕ್ರೋಶ ಹೊರಹಾಕಿದ ಅಭ್ಯರ್ಥಿಗಳು, ಈ ಪರೀಕ್ಷೆಯನ್ನು ರದ್ದುಗೊಳಿಸಿ ಮರು ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ.
ಅಧಿಕಾರಿಗಳ ಭೇಟಿ:
ಘಟನಾ ಸ್ಥಳಕ್ಕೆ ಜಿಲ್ಲಾಧಿಕಾರಿ ಡಾ. ಕೆ. ಆನಂದ್ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಸೇರಿದಂತೆ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆದರೆ ಈ ಘಟನೆ ಕುರಿತು ಅಧಿಕಾರಿಗಳು ಇದುವರೆಗೂ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.