Vijayapura: ನಿವೃತ್ತ ಶಿಕ್ಷಕನ ಕೊಲೆ: ಮಗಳು ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು
ಸಿದ್ದಪ್ಪ ಬಸಣ್ಣ ಅಂಜುಟಗಿ
ವಿಜಯಪುರ: ನಿವೃತ್ತ ಶಿಕ್ಷಕರೊಬ್ಬರನ್ನು ಹೊಡೆದು ಕೊಲೆಗೈದಿರುವ ಘಟನೆ ಜಿಲ್ಲೆಯ ಇಂಡಿ ತಾಲೂಕಿನ ಚವಡಿಹಾಳ ರಸ್ತೆ ಬಳಿ ನಡೆದಿದೆ.
ಇಂಡಿ ತಾಲೂಕಿನ ಸಿದ್ದಪ್ಪ ಬಸಣ್ಣ ಅಂಜುಟಗಿ (62) ಕೊಲೆಯಾದವರು. ಇವರ ಮೃತದೇಹ ಬೆಡ್ ಶೀಟ್ ಹಾಗೂ ತಲೆದಿಂಬಿನ ಕವರ್ ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಇಂಡಿ-ಚವಡಿಹಾಳ ರಸ್ತೆ ಬದಿಯಲ್ಲಿ ರವಿವಾರ ಪತ್ತೆಯಾಗಿದೆ.
ಈ ಬಗ್ಗೆ ಸಿದ್ದಪ್ಪರ ಹಿರಿಯ ಪುತ್ರಿ ಪ್ರಿಯಾಂಕಾ (30), ಆಕೆಯ ಪ್ರಿಯಕರ ಭೀಮಾಜಿ ಅಲಿಯಾಸ್ ಸಂತೋಷ್ ಗಣಪತಿ ಸಿಂಧೆ (ವಿಜಯಪುರ) ಹಾಗೂ ಇತರರ ವಿರುದ್ಧ ಕೊಲೆ ಪ್ರಕರಣ ದಾಖಲಾಗಿದೆ.
ಪ್ರಿಯಾಂಕಾ | ಭೀಮಾಜಿ
ಅಕ್ರಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದ ಹಾಗೂ ಪಿಂಚಣಿ ನೀಡಿಲ್ಲ ಎಂಬ ಕಾರಣಕ್ಕೆ ಮಗಳೇ ತಂದೆಯನ್ನು ಪ್ರಿಯಕರನ ಜೊತೆಗೂಡಿ ಕೊಲೆ ಮಾಡಿದ್ದಾಳೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪ್ರಕರಣದ ಹಿನ್ನೆಲೆ:
ಸುಮಾರು ಎರಡು ವರ್ಷಗಳ ಹಿಂದೆ ಶಿಕ್ಷಕ ವೃತ್ತಿಯಿಂದ ನಿವೃತ್ತರಾಗಿದ್ದ ಸಿದ್ದಪ್ಪರಿಗೆ ಇಬ್ಬರು ಹೆಣ್ಣುಮಕ್ಕಳಿದ್ದಾರೆ. ಹಿರಿಯ ಮಗಳು ಪ್ರಿಯಾಂಕಾಳ ಪತಿ ಸುರೇಶ ಮಸಳಿ ಕೋವಿಡ್ ಸಮಯದಲ್ಲಿ ಮೃತಪಟ್ಟಿದ್ದರು. ಬಳಿಕ ಪ್ರಿಯಾಂಕಾ, ವಿಜಯಪುರದ ಭೀಮಾಜಿ ಅಲಿಯಾಸ್ ಸಂತೋಷ್ ಜೊತೆ ಅಕ್ರಮ ಸಂಬಂಧ ಹೊಂದಿದ್ದರೆನ್ನಲಾಗಿದೆ. ಇದಕ್ಕೆ ತಂದೆ ವಿರೋಧ ವ್ಯಕ್ತಪಡಿಸುತ್ತಿದ್ದರು. ಇದಲ್ಲದೆ ಪಿಂಚಣಿ ಹಣ ತನಗೆ ನೀಡುತ್ತಿಲ್ಲ ಎಂದು ಆಕ್ಷೇಪಿಸಿ ಪ್ರಿಯಾಂಕಾ ಆಗಾಗ್ಗೆ ತಂದೆಯ ಜೊತೆ ಜಗಳವಾಡುತ್ತಿದ್ದಳು. ಈ ಎರಡು ಕಾರಣಕ್ಕೆ ಸಿದ್ದಪ್ಪರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸ್ ದೂರಿನಲ್ಲಿ ಆರೋಪಿಸಲಾಗಿದೆ.
ಬೆಡ್ಶೀಟ್ನಲ್ಲಿ ಮೃತದೇಹ ಸುತ್ತಿ ಎಸೆದ ಆರೋಪಿಗಳು:
ಆಗಸ್ಟ್ 15ರ ರಾತ್ರಿ 11ರಿಂದ ಆಗಸ್ಟ್ 16ರ ಬೆಳಗ್ಗೆ 6ರ ನಡುವಿನ ಅವಧಿಯಲ್ಲಿ ಸಿದ್ದಪ್ಪರ ಕೊಲೆ ಮಾಡಲಾಗಿದೆ. ಅವರ ಮೃತದೇಹ ಬೆಡ್ ಶೀಟ್ ಹಾಗೂ ತಲೆದಿಂಬಿನ ಕವರ್ ನಲ್ಲಿ ಸುತ್ತಿದ ಸ್ಥಿತಿಯಲ್ಲಿ ಇಂಡಿ-ಚವಡಿಹಾಳ ರಸ್ತೆಯ ಪೂಜಾರಿ ವಸ್ತಿ ಸಮೀಪದ ಜಮೀನಿನ ರಸ್ತೆಬದಿಯಲ್ಲಿ ಆ.16ರಂದು ಪತ್ತೆಯಾಗಿದೆ.
ಈ ಬಗ್ಗೆ ಸಿದ್ದಪ್ಪರ ಕಿರಿಯ ಪುತ್ರಿ ನಿಖಿತಾ ನೀಡಿದ ದೂರಿನಂತೆ ಇಂಡಿ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗಾಗಿ ತನಿಖೆ ಚುರುಕುಗೊಳಿಸಿದ್ದಾರೆ.