×
Ad

ಸಹಕಾರಿ ಮಂಡಳಿಯಿಂದ ಮಹಾರಾಷ್ಚ್ರದ ಡಿಸಿಎಂ ಸ್ಥಾನದವರೆಗೆ: ಸಿಎಂ ಆಗದೆಯೇ ನಿರ್ಗಮಿಸಿದ ಬಾರಾಮತಿಯ 'ದಾದಾ' ಅಜಿತ್ ಪವಾರ್

Update: 2026-01-28 13:24 IST

ಅಜಿತ್ ಪವಾರ್ (Photo: PTI)

ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಅಜಿತ್ ಪವಾರ್ ಅವರು ಪ್ರಯಾಣಿಸುತ್ತಿದ್ದ ವಿಶೇಷ ವಿಮಾನವು ಬುಧವಾರ ಮಹಾರಾಷ್ಟ್ರದ ಪುಣೆ ಜಿಲ್ಲೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಲ್ಯಾಂಡಿಂಗ್ ವೇಳೆ ಪತನಕ್ಕೀಡಾಗಿದೆ. ಈ ಘಟನೆಯಲ್ಲಿ ಅಜಿತ್ ಪವಾರ್ ಸೇರಿ ಐವರು ಮೃತಪಟ್ಟಿದ್ದಾರೆ. ತುರ್ತು ಲ್ಯಾಂಡಿಂಗ್ ಗೆ ಪ್ರಯತ್ನಿಸುತ್ತಿದ್ದಾಗ ಈ ಅಪಘಾತ ಸಂಭವಿಸಿದೆ ಎಂದು ವರದಿಯಾಗಿದೆ.

ಹಲವಾರು ಬಾರಿ ಡಿಸಿಎಂ ಆದರೂ ಸಿಎಂ ಆಗುವ ಕನಸು ನನಸಾಗದೆಯೇ ಅಜಿತ್ ಪವಾರ್ ಅವರು ನಿರ್ಗಮಿಸಿದ್ದಾರೆ

1959 ಜುಲೈ 22ರಂದು ಜನಿಸಿದ ಅಜಿತ್ ಪವಾರ್ ಅವರ ಅಮ್ಮ ಆಶಾತಾಯಿ ಪವಾರ್, ತಂದೆ ಅನಂತರಾವ್ ಪವಾರ್. ಡಿಯೋಲಾಲಿ ಪ್ರವರ ನಗರದಲ್ಲಿ ಶಾಲಾ ಶಿಕ್ಷಣ ಪಡೆದ ಅವರು ತಂದೆಯ ಮರಣದ ನಂತರ ತಮ್ಮ ಕುಟುಂಬಕ್ಕೆ ಸಹಾಯ ಮಾಡಲು ಕಾಲೇಜು ಬಿಡಬೇಕಾಗಿ ಬಂತು. ಆಗ ಕಾಂಗ್ರೆಸ್ ಪಕ್ಷದ ನಾಯಕರಾಗಿದ್ದ ಚಿಕ್ಕಪ್ಪ ಶರದ್ ಪವಾರ್ ಅವರ ರಾಜಕೀಯ ಪ್ರಯಾಣದ ಜತೆ ಹೆಜ್ಜೆಯಿಟ್ಟ ಅಜಿತ್, 1982 ರಲ್ಲಿ ಸಹಕಾರಿ ಸಕ್ಕರೆ ಕಾರ್ಖಾನೆಯ ಮಂಡಳಿಗೆ ಆಯ್ಕೆಯಾದರು. 1991ರಲ್ಲಿ ಪುಣೆ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷರಾಗಿ ಆಯ್ಕೆಯಾಗಿ 16 ವರ್ಷಗಳ ಕಾಲ ಆ ಹುದ್ದೆಯಲ್ಲಿ ಮುಂದುವರೆದರು.

►ರಾಜಕೀಯ ಪಯಣ

ರಾಜ್ಯ ರಾಜಕೀಯಕ್ಕೆ ಬರುವ ಮೊದಲು ಅಜಿತ್ ಪವಾರ್ 1991 ರಲ್ಲಿ ಮೊದಲ ಬಾರಿಗೆ ಬಾರಾಮತಿ ಸಂಸದೀಯ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾದರು. ನಂತರ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ಗಾಗಿ ಆ ಸ್ಥಾನವನ್ನು ಬಿಟ್ಟುಕೊಟ್ಟರು. ಹಾಗೆ ಶರದ್ ಪವಾರ್ ಅವರು ಪಿ.ವಿ. ನರಸಿಂಹ ರಾವ್ ನೇತೃತ್ವದ ಅವರ ಸರ್ಕಾರದಲ್ಲಿ ರಕ್ಷಣಾ ಸಚಿವರಾದರು. ಅಜಿತ್ ಬಾರಾಮತಿ ವಿಧಾನಸಭಾ ಕ್ಷೇತ್ರದಿಂದ ಏಳು ಬಾರಿ ಮಹಾರಾಷ್ಟ್ರ ವಿಧಾನಸಭೆಗೆ ಆಯ್ಕೆಯಾದರು. 1991 ರ ಉಪಚುನಾವಣೆಯಲ್ಲಿ ಗೆದ್ದ ಅವರು 1995, 1999, 2004, 2009 ಮತ್ತು 2014 ರಲ್ಲಿ ಸತತ ಐದು ಅವಧಿಗೆ ಅದನ್ನು ಉಳಿಸಿಕೊಂಡರು. 1991 ರಿಂದ 1992 ರವರೆಗೆ ಸಿಎಂ ಸುಧಾಕರ ರಾವ್ ನಾಯಕ್ ಅವರ ಸರ್ಕಾರದಲ್ಲಿ ಕೃಷಿ ಮತ್ತು ವಿದ್ಯುತ್ ರಾಜ್ಯ ಸಚಿವರಾಗಿದ್ದರು

1992 ರಲ್ಲಿ ಶರದ್ ಪವಾರ್ ಮಹಾರಾಷ್ಚ್ರದ ಮುಖ್ಯಮಂತ್ರಿಯಾದಾಗ ಅಜಿತ್ ಅವರು ಮಣ್ಣು ಸಂರಕ್ಷಣೆ, ವಿದ್ಯುತ್ ಮತ್ತು ಯೋಜನಾ ರಾಜ್ಯ ಸಚಿವರಾದರು. 1999 ರಲ್ಲಿ INC-NCP ಸಮ್ಮಿಶ್ರ ಸರ್ಕಾರದಲ್ಲಿ ಕ್ಯಾಬಿನೆಟ್ ಸಚಿವರಾದರು. ನೀರಾವರಿ ಇಲಾಖೆಯ ಜವಾಬ್ದಾರಿ ಅವರಿಗೆ ನೀಡಲಾಗಿತ್ತು. 2003 ರಲ್ಲಿ ಸುಶೀಲ್ ಕುಮಾರ್ ಶಿಂಧೆ ಅವರ ಸಂಪುಟದ ಭಾಗವಾಗಿ ಅವರಿಗೆ ಹೆಚ್ಚುವರಿಯಾಗಿ ಗ್ರಾಮೀಣಾಭಿವೃದ್ಧಿ ಖಾತೆಯನ್ನು ನೀಡಲಾಯಿತು. 2004 ರ ವಿಧಾನಸಭಾ ಚುನಾವಣೆಯಲ್ಲಿ INC-NCP ಒಕ್ಕೂಟ ಗೆದ್ದ ನಂತರ ಅವರು ವಿಲಾಸ್ ರಾವ್ ದೇಶ್ಮುಖ್ ಮತ್ತು ನಂತರ ಅಶೋಕ್ ಚವಾಣ್ ಅವರ ಸಂಪುಟಗಳಲ್ಲಿ ಜಲಸಂಪನ್ಮೂಲ ಸಚಿವರಾಗಿದ್ದರು.

► ಬಾರಾಮತಿಯ ದಾದಾ

(Photo: PTI)

 

ಅಜಿತ್ ಪವಾರ್ ಅವರನ್ನು ಜನರು ಕರೆಯುತ್ತಿದ್ದದ್ದು "ಅಜಿತ್ ದಾದಾ" ಎಂದು. ಮಹಾರಾಷ್ಟ್ರದಲ್ಲಿ ದೀರ್ಘಕಾಲದಿಂದ ಸತತವಾಗಿ ಉಪಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದ ಹೆಗ್ಗಳಿಕೆ ಇವರದ್ದು .

2024 ರ ರಾಜ್ಯ ಚುನಾವಣೆಯಲ್ಲಿ ಎಂಟನೇ ಬಾರಿಗೆ ವಿಧಾನಸಭಾ ಸ್ಥಾನವನ್ನು ಗೆದ್ದು ಬಾರಾಮತಿ ಪ್ರದೇಶದಲ್ಲಿ ಪ್ರಭಾವಿಯಾಗಿಯೇ ಉಳಿದವರು ಅಜಿತ್ ಪವಾರ್. NDA ಯಲ್ಲಿ ವಿಭಜನೆಯ ಹೊರತಾಗಿಯೂ ಅಜಿತ್ ಪವಾರ್ ಅವರ ರಾಜಕೀಯ ಭದ್ರಕೋಟೆಯಾಗಿತ್ತು ಬಾರಾಮತಿ.

ಶಿಸ್ತಿನ ದಿನಚರಿ, ದೀರ್ಘ ಕೆಲಸದ ಸಮಯ ಮತ್ತು ನೇರ ರಾಜಕೀಯ ಶೈಲಿಗೆ ಹೆಸರುವಾಸಿಯಾಗಿದ್ದ ಅಜಿತ್ ಪವಾರ್ ಅವರಿಗೆ ರೈತರು, ಸಹಕಾರಿ ನಾಯಕರು ಮತ್ತು ವಿಶೇಷವಾಗಿ ಪಶ್ಚಿಮ ಮಹಾರಾಷ್ಟ್ರದಲ್ಲಿ ಪಕ್ಷದ ಕಾರ್ಯಕರ್ತರ ಅಪಾರ ಬೆಂಬಲವಿತ್ತು. ಕಳೆದ ಮೂರು ದಶಕಗಳಲ್ಲಿ ಮಹಾರಾಷ್ಟ್ರದ ರಾಜಕೀಯ ಮತ್ತು ಸಾಮಾಜಿಕ ಬೆಳವಣಿಗೆಗಳಲ್ಲಿ ಅಜಿತ್ ಪವಾರ್ ಅವರ ಪಾತ್ರ , ಪ್ರಭಾವ ಎದ್ದು ಕಂಡಿದೆ. ರಾಜ್ಯ ರಾಜಕೀಯದ ಪ್ರಮುಖ ವ್ಯಕ್ತಿಯಾಗಿದ್ದ ಪವಾರ್, ಅಧಿಕಾರದಲ್ಲಿಲ್ಲದಿದ್ದರೂ ಸಹ, ಪ್ರತಿದಿನ 16–17 ಗಂಟೆಗಳ ಕಾಲ ನಿಯಮಿತ ಜನತಾ ದರ್ಬಾರ್‌ಗಳ ಮೂಲಕ ಜನರ ಸಮಸ್ಯೆಗಳನ್ನು ಪರಿಹರಿಸಲು ಮೀಸಲಿಡುತ್ತಿದ್ದರು.

► ಆರಂಭಿಕ ಜೀವನ ಮತ್ತು ರಾಜಕೀಯ ಪ್ರವೇಶ

ಅಜಿತ್ ಪವಾರ್ ರಾಜಕೀಯ ಹಿನ್ನೆಲೆಯಿಂದ ಬಂದವರು. ಅಜಿತ್ ಪವಾರ್ ಅವರ ಚಿಕ್ಕಪ್ಪ NCP ಹಿರಿಯ ನಾಯಕ ಶರದ್ ಪವಾರ್. ಸುಪ್ರಿಯಾ ಸುಳೆ ಅವರ ಸೋದರಸಂಬಂಧಿ. ಚುನಾವಣಾ ರಾಜಕೀಯಕ್ಕೆ ಪ್ರವೇಶಿಸುವ ಮೊದಲು, ಅಜಿತ್ ಪವಾರ್ ಸಹಕಾರಿ ಸಂಸ್ಥೆಗಳ ಮೂಲಕ ತಮ್ಮ ಪ್ರಭಾವವನ್ನು ಬೆಳೆಸಿಕೊಂಡರು. ಹಾಲು ಒಕ್ಕೂಟಗಳು, ಸಕ್ಕರೆ ಕಾರ್ಖಾನೆಗಳು, ಸಹಕಾರಿ ಸಂಘಗಳು ಮತ್ತು ಬ್ಯಾಂಕುಗಳೊಂದಿಗೆ ನಿಕಟವಾಗಿ ಕೆಲಸ ಮಾಡಿದ ಅವರಿಗೆ ರೈತರು ಮತ್ತು ಗ್ರಾಮೀಣ ಸಮುದಾಯಗಳ ಬೆಂಬಲ ಇದೆ.

1991ರಲ್ಲಿ, ಅವರ ವೃತ್ತಿಜೀವನವು ಸಕ್ರಿಯ ರಾಜಕೀಯದ ಕಡೆಗೆ ಬದಲಾಯಿತು. ಅಂದಿನಿಂದ, ಅವರು ಸಂಸದ, ಶಾಸಕ, ವಿವಿಧ ಪ್ರಮುಖ ಸರ್ಕಾರಿ ಇಲಾಖೆಗಳ ರಾಜ್ಯ ಸಚಿವರು ಮತ್ತು ಮಹಾರಾಷ್ಟ್ರದ ಉಪಮುಖ್ಯಮಂತ್ರಿ ಸೇರಿದಂತೆ ಹಲವಾರು ಪ್ರಮುಖ ಹುದ್ದೆಗಳನ್ನು ಅಲಂಕರಿಸಿದ್ದಾರೆ.

►ರಾಜಕೀಯ ಪ್ರಯಾಣ ಮತ್ತು ಪ್ರಮುಖ ಸಚಿವ ಸ್ಥಾನಗಳು

1991 ರಲ್ಲಿ ಮೊದಲ ಬಾರಿಗೆ ಶಾಸಕರಾಗಿ ಆಯ್ಕೆಯಾದ ಪವಾರ್, ಬಹಳ ಬೇಗನೇ ರಾಜ್ಯ ರಾಜಕೀಯದಲ್ಲಿ ಅತ್ಯಂತ ಶಕ್ತಿಶಾಲಿ ನಾಯಕರಲ್ಲಿ ಒಬ್ಬರಾದರು. ಅವರು ನೀರಾವರಿ, ಹಣಕಾಸು, ಇಂಧನ ಮತ್ತು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ ಪ್ರಮುಖ ಇಲಾಖೆಗಳ ಜವಾಬ್ದಾರಿ ಹೊಂದಿದ್ದರು .

ಕೃಷಿ ಮತ್ತು ವಿದ್ಯುತ್ ಖಾತೆ ರಾಜ್ಯ ಸಚಿವ (ಜೂನ್ 1991 - ನವೆಂಬರ್ 1992): ರಾಜ್ಯ ಸಚಿವರಾಗಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ಅವರು ಕೃಷಿ ಮತ್ತು ವಿದ್ಯುತ್ ಕ್ಷೇತ್ರಗಳ ಉಸ್ತುವಾರಿ ವಹಿಸಿಕೊಂಡರು. ಇದು ಮಹಾರಾಷ್ಟ್ರ ಸಚಿವ ಸಂಪುಟಕ್ಕೆ ಅವರ ಪ್ರವೇಶವನ್ನು ಸುಲಭವಾಗಿಸಿತು.

ನೀರು ಸರಬರಾಜು, ವಿದ್ಯುತ್ ಮತ್ತು ಯೋಜನೆ ಖಾತೆ ರಾಜ್ಯ ಸಚಿವ (ನವೆಂಬರ್ 1992 - ಫೆಬ್ರವರಿ 1993): ನೀರು ಸರಬರಾಜು, ವಿದ್ಯುತ್ ಮತ್ತು ರಾಜ್ಯ ಯೋಜನೆಗಳಂತಹ ಪ್ರಮುಖ ಕ್ಷೇತ್ರಗಳನ್ನು ನಿರ್ವಹಿಸಿದರು.

ನೀರಾವರಿ (ಕೃಷ್ಣ ಕಣಿವೆ ಮತ್ತು ಕೊಂಕಣ್), ಮತ್ತು ತೋಟಗಾರಿಕೆ (ಅಕ್ಟೋಬರ್ 1999 - ಜುಲೈ 2004): 1999 ರಲ್ಲಿ, ಪವಾರ್ ಅವರಿಗೆ ಕೃಷ್ಣ ಕಣಿವೆ ಮತ್ತು ಕೊಂಕಣ ಪ್ರದೇಶಗಳಲ್ಲಿನ ಪ್ರಮುಖ ನೀರಾವರಿ ಯೋಜನೆಗಳ ಉಸ್ತುವಾರಿಯನ್ನು ನೀಡಲಾಯಿತು. ಈ ಅವಧಿಯಲ್ಲಿ ಅವರು ತೋಟಗಾರಿಕೆ ಇಲಾಖೆಯನ್ನು ಸಹ ನೋಡಿಕೊಂಡರು.

ಗ್ರಾಮೀಣಾಭಿವೃದ್ಧಿ, ನೀರು ಸರಬರಾಜು ಮತ್ತು ನೈರ್ಮಲ್ಯ ಮತ್ತು ನೀರಾವರಿ ಸಚಿವರು (ಜುಲೈ 2004 - ನವೆಂಬರ್ 2004): ಅವರ ಪಾತ್ರವು ನಂತರ ಗ್ರಾಮೀಣಾಭಿವೃದ್ಧಿಗೆ ವಿಸ್ತರಿಸಿತು. ಅಲ್ಲಿ ಅವರು ನೀರು ಸರಬರಾಜು, ನೈರ್ಮಲ್ಯ ಮತ್ತು ನೀರಾವರಿ ಯೋಜನೆಗಳ ನಿರಂತರ ಮೇಲ್ವಿಚಾರಣೆಯಲ್ಲಿ ಕೆಲಸ ಮಾಡಿದರು.

ಜಲಸಂಪನ್ಮೂಲ ಮತ್ತು ನೈರ್ಮಲ್ಯ ಸಚಿವರು (ನವೆಂಬರ್ 2004 - ನವೆಂಬರ್ 2009): ಈ ಹಂತವು ಅವರ ವೃತ್ತಿಜೀವನದ ಪ್ರಮುಖ ಭಾಗವಾಯಿತು. ಅಜಿತ್ ಪವಾರ್ ರಾಜ್ಯಾದ್ಯಂತ ನೀರಿನ ನಿರ್ವಹಣೆ ಮತ್ತು ನೈರ್ಮಲ್ಯವನ್ನು ಸುಧಾರಿಸಲು ಹಲವಾರು ಉಪಕ್ರಮಗಳ ನೇತೃತ್ವ ವಹಿಸಿದರು.

ಜಲಸಂಪನ್ಮೂಲ ಮತ್ತು ಇಂಧನ ಸಚಿವ (ನವೆಂಬರ್ 2009 - ನವೆಂಬರ್ 2010): ಜಲಸಂಪನ್ಮೂಲ ಮತ್ತು ಇಂಧನ ವಲಯ ಎರಡರ ಜವಾಬ್ದಾರಿಯನ್ನು ವಹಿಸಿಕೊಂಡ ಅಜಿತ್, ಪ್ರಮುಖ ಮೂಲಸೌಕರ್ಯ ಕ್ಷೇತ್ರಗಳಲ್ಲಿ ತಮ್ಮ ಪ್ರಭಾವವನ್ನು ಬಲಪಡಿಸಿಕೊಂಡರು.

►ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ಪವಾರ್

(Photo: PTI)

ಪವಾರ್ ಅವರನ್ನು ಮೊದಲು 2010 ರಲ್ಲಿ ಮಹಾರಾಷ್ಟ್ರದ ಉಪಮುಖ್ಯಮಂತ್ರಿಯಾಗಿ ನೇಮಿಸಲಾಯಿತು. ನಂತರ ಅವರು ವಿವಿಧ ಮೈತ್ರಿಕೂಟಗಳಲ್ಲಿ ಹಲವು ಬಾರಿ ಈ ಹುದ್ದೆಯನ್ನು ಅಲಂಕರಿಸಿದರು.

ಉಪಮುಖ್ಯಮಂತ್ರಿ (ನವೆಂಬರ್ 2010 - ಸೆಪ್ಟೆಂಬರ್ 2012): ಹಣಕಾಸು, ಯೋಜನೆ ಮತ್ತು ಇಂಧನ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳನ್ನು ನಿರ್ವಹಿಸಿದರು

ಉಪಮುಖ್ಯಮಂತ್ರಿ (ಡಿಸೆಂಬರ್ 2012 - ಸೆಪ್ಟೆಂಬರ್ 2014): ಮುಂದಿನ ಅವಧಿಯಲ್ಲಿ ಅವರು ಅದೇ ಸ್ಥಾನದಲ್ಲಿ ಮುಂದುವರೆದರು, ರಾಜ್ಯದ ಹಣಕಾಸು, ಅಭಿವೃದ್ಧಿ ಯೋಜನೆ ಮತ್ತು ವಿದ್ಯುತ್ ವಲಯವನ್ನು ನಿರ್ವಹಿಸುವತ್ತ ಗಮನ ಹರಿಸಿದರು.

ಅಜಿತ್ ಪವಾರ್ ಮಹಾರಾಷ್ಟ್ರದ ಮುಖ್ಯಮಂತ್ರಿಗಳಾದ ವಿಲಾಸ್ ರಾವ್ ದೇಶ್ಮುಖ್, ಅಶೋಕ್ ಚವಾಣ್, ಪೃಥ್ವಿರಾಜ್ ಚವಾಣ್, ಉದ್ಧವ್ ಠಾಕ್ರೆ ಮತ್ತು ಇತ್ತೀಚೆಗೆ ದೇವೇಂದ್ರ ಫಡ್ನವೀಸ್ ಅವರ ಸಂಪುಟದಲ್ಲಿ ಜಲಸಂಪನ್ಮೂಲ, ವಿದ್ಯುತ್ ಮತ್ತು ಗ್ರಾಮೀಣಾಭಿವೃದ್ಧಿ ಸೇರಿದಂತೆ ರಾಜ್ಯದ ಬಹುತೇಕ ಎಲ್ಲಾ ಪ್ರಮುಖ ಸಚಿವ ಖಾತೆಗಳನ್ನು ನಿರ್ವಹಿಸಿದರು. ಅಜಿತ್ ಪವಾರ್ ಅವರು ದಿಟ್ಟ ರಾಜಕಾರಣಿ ಆಗಿದ್ದರೂ ಆಗಾಗ್ಗೆ ವಿವಾದಾತ್ಮಕ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು. 2019 ನವೆಂಬರ್ ನಲ್ಲಿ ಮಹಾರಾಷ್ಚ್ರದ ರಾಜಕೀಯದಲ್ಲಿ ನಡೆದ ನಾಟಕೀಯ ನಡೆಯಲ್ಲಿ, ಅವರು ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಈ ಪ್ರಯೋಗವು ಕೇವಲ 80 ಗಂಟೆಗಳ ಕಾಲ ನಡೆಯಿತು. ನಂತರ ಅವರು ತಮ್ಮ ಚಿಕ್ಕಪ್ಪ ಶರದ್ ಪವಾರ್ ನೇತೃತ್ವದ ಪಕ್ಷಕ್ಕೆ ಮರಳಿದರು. ಜುಲೈ 2023 ರಲ್ಲಿ NCP ಪಕ್ಷವನ್ನು ವಿಭಜಿಸಿದ ಅವರು ಏಕನಾಥ್ ಶಿಂಧೆ ನೇತೃತ್ವದ ಸರ್ಕಾರವನ್ನು ಸೇರಿದರು. ಇದು ಅವರ ಚಿಕ್ಕಪ್ಪ ಮತ್ತು ರಾಜಕೀಯ ಮಾರ್ಗದರ್ಶಕ ಶರದ್ ಪವಾರ್ ಅವರ 25 ವರ್ಷಗಳ ನಾಯಕತ್ವವನ್ನು ನೇರವಾಗಿ ಪ್ರಶ್ನಿಸುವ ನಡೆಯಾಗಿತ್ತು. ಹೆಚ್ಚಿನ ಶಾಸಕರು ಅಜಿತ್ ಪವಾರ್ ಜೊತೆ ನಿಂತಿದ್ದರಿಂದ ಅವರದ್ದೇ ನಿಜವಾದ NCP ಎಂದಾಯಿತು. ಹಾಗಾಗಿ ತಮ್ಮನ್ನು ರಾಜಕೀಯವಾಗಿ ಬೆಳೆಸಿದ ಚಿಕ್ಕಪ್ಪನ ಪಕ್ಷವನ್ನೇ ಅವರು ತಮ್ಮ ಹಿಡಿತಕ್ಕೆ ತೆಗೆದುಕೊಂಡುಬಿಟ್ಟರು. ಚಿಕ್ಕಪ್ಪನ ಪುತ್ರಿ ಸುಪ್ರಿಯಾ ಸುಳೇ ಚಿಕ್ಕಪ್ಪನ ಉತ್ತರಾಧಿಕಾರಿಯಾಗಲು ಪ್ರಯತ್ನಿಸುತ್ತಿರುವುದೂ ಅಜಿತ್ ಗೆ ಅಸಮಾಧಾನ ತಂದಿತ್ತು. ಕೊನೆಗೆ ಇಡೀ ಪಕ್ಷವೇ ಅವರದಾಯಿತು.

ಅಜಿತ್ ಪವಾರ್ ವಿರುದ್ಧ ಭ್ರಷ್ಟಾಚಾರದ ಹಲವು ಆರೋಪಗಳಿದ್ದವು. ಆ ಕುರಿತು ಈ ಡಿ, ಐಟಿ ಇತ್ಯಾದಿಗಳಿಂದ ತನಿಖೆ ನಡೆಯುತ್ತಿತ್ತು. ಆ ಪೈಕಿ ಎಪ್ಪತ್ತು ಸಾವಿರ ಕೋಟಿಯ ನೀರಾವರಿ ಹಗರಣ ಬಹಳ ದೊಡ್ಡದು. ಅದಲ್ಲದೆ ಇಪ್ಪತ್ತೈದು ಸಾವಿರ ಕೋಟಿಯ MSCB ಬ್ಯಾಂಕ್ ಹಗರಣವೂ ಇದೆ. ಬೇನಾಮಿ ಆಸ್ತಿ ಆರೋಪವೂ ಅವರ ವಿರುದ್ಧ ಇತ್ತು. ಆದರೆ ಅದರಲ್ಲಿ ಅವರು ಖುಲಾಸೆಯಾಗಿದ್ದರು.

ಜೂನ್ 2023 ರಲ್ಲಿ ಭೋಪಾಲ್ ನಲ್ಲಿ ಮಾತನಾಡುತ್ತಾ ಪ್ರಧಾನಿ ಮೋದಿ ಅವರು ಎನ್ ಸಿ ಪಿ ಪಕ್ಷ ಎಪ್ಪತ್ತು ಸಾವಿರ ಕೋಟಿ ಭ್ರಷ್ಟಾಚಾರ ಮಾಡಿದೆ , ಅದರ ನಾವು ಅವರನ್ನು ಬಿಡಲ್ಲ ಎಂದು ಆರೋಪಿಸಿದ್ದರು. ಆದರೆ ಅದಾಗಿ ನಾಲ್ಕೈದು ದಿನಗಳಲ್ಲೇ ಅಜಿತ್ ಪವಾರ್ ಅವರು ಮಹಾರಾಷ್ಟ್ರದಲ್ಲಿ ಎನ್ ಡಿ ಎ ಮೈತ್ರಿಕೂಟ ಸೇರಿ ಡಿಸಿಎಂ ಆದರು.

ಆರೋಪಗಳ ಹೊರತಾಗಿಯೂ, ಅಜಿತ್ ಪವಾರ್ ಅವರ ಕಾರ್ಯನಿರ್ವಹಣೆ ಮತ್ತು ಆಡಳಿತದ ಮೇಲಿನ ಅವರ ದೃಢವಾದ ಹಿಡಿತವನ್ನು ಮಹಾರಾಷ್ಟ್ರ ರಾಜಕಾರಣದಲ್ಲಿ ಕಾಣಬಹುದು. ಆದರೆ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಬೇಕೆಂಬ ಅವರ ಕನಸು ಮಾತ್ರ ಕನಸಾಗಿಯೇ ಉಳಿಯಿತು.

ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್. ಇವರಿಗೆ ಜಯ್ ಮತ್ತು ಪಾರ್ಥ್ ಎಂಬ ಇಬ್ಬರು ಗಂಡು ಮಕ್ಕಳಿದ್ದಾರೆ.

►2023 ರ NCP ವಿಭಜನೆ

2023 ಜುಲೈನಲ್ಲಿ ಅಜಿತ್ ಪವಾರ್ NCP ಯನ್ನು ವಿಭಜಿಸಿ, ಶಾಸಕರ ದೊಡ್ಡ ಗುಂಪಿನ ಬೆಂಬಲದೊಂದಿಗೆ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರವನ್ನು ಸೇರಿದರು. ಅವರು ಏಕನಾಥ್ ಶಿಂಧೆ ಮತ್ತು ದೇವೇಂದ್ರ ಫಡ್ನವಿಸ್ ಅವರೊಂದಿಗೆ ಉಪಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಕ್ರಮವು ಔಪಚಾರಿಕವಾಗಿ ಎನ್ ಸಿಪಿ ಯನ್ನು ಎರಡು ಬಣಗಳಾಗಿ ವಿಭಜಿಸಿದ್ದು ಮಾತ್ರವಲ್ಲದೆ ಪವಾರ್ ಕುಟುಂಬದೊಳಗಿನ ದಶಕಗಳ ರಾಜಕೀಯ ಒಗ್ಗಟ್ಟನ್ನು ಕೊನೆಗೊಳಿಸಿತು.

 (Photo: PTI)


ನಂತರ ಚುನಾವಣಾ ಆಯೋಗವು ಅಜಿತ್ ಪವಾರ್ ಬಣವನ್ನು ಅಧಿಕೃತ NCP ಎಂದು ಗುರುತಿಸಿ ಅದಕ್ಕೆ ಪಕ್ಷದ ಹೆಸರು ಮತ್ತು ಚಿಹ್ನೆಯನ್ನು ನೀಡಿತು. ಇತ್ತ ಶರದ್ ಪವಾರ್ ಅವರ ಗುಂಪು NCP (SP) ಆಗಿ ಮುಂದುವರೆಯಿತು.

2024 ರ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ, ಅಜಿತ್ ಪವಾರ್ ಆಡಳಿತ ಮೈತ್ರಿಕೂಟದೊಳಗೆ ತಮ್ಮ ಸ್ಥಾನವನ್ನು ಬಲಪಡಿಸಿಕೊಂಡರು. ಬಿಜೆಪಿ ನೇತೃತ್ವದ ಮಹಾಯುತಿಯ ಭಾಗವಾಗಿ ಸ್ಪರ್ಧಿಸಿದ ಅವರ ಪಕ್ಷವು ಅದು ಸ್ಪರ್ಧಿಸಿದ 59 ಸ್ಥಾನಗಳಲ್ಲಿ 41 ಸ್ಥಾನಗಳನ್ನು ಗೆದ್ದು, ಸುಮಾರು 9% ಮತಗಳನ್ನು ಗಳಿಸಿತು.

ಚುನಾವಣೆಯ ನಂತರ ಅಜಿತ್ ಪವಾರ್ ಮಹಾಯುತಿ ಸರ್ಕಾರದಲ್ಲಿ ಪ್ರಮುಖ ಪಾಲುದಾರರಾಗಿ ಮುಂದುವರೆದರು. ಆದರೂ ರಾಜಕೀಯ ಸ್ಥಾನೀಕರಣ ಮತ್ತು ಚುನಾವಣಾ ತಂತ್ರದ ಬಗ್ಗೆ ಬಿಜೆಪಿಯೊಂದಿಗಿನ ಉದ್ವಿಗ್ನತೆಗಳು ಹೊರಹೊಮ್ಮಿದವು. ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿನ ಹಿನ್ನಡೆಯು ಎರಡು ಎನ್‌ಸಿಪಿ ಬಣಗಳ ನಡುವಿನ ಸಂಭಾವ್ಯ ಹೊಂದಾಣಿಕೆಯ ಊಹಾಪೋಹಗಳನ್ನು ಹೆಚ್ಚಿಸಿದೆ.

►ಅಜಿತ್ ಪವಾರ್ ವಿರುದ್ಧದ ಆರೋಪ, ವಿವಾದಗಳು

ಪವಾರ್ ಅವರ ವೃತ್ತಿಜೀವನವು ವಿವಾದಗಳಿಂದ ಮುಕ್ತವಾಗಿರಲಿಲ್ಲ. ಅವರು 70,000 ಕೋಟಿ ರೂ. ನೀರಾವರಿ ಹಗರಣ ಮತ್ತು ಮಹಾರಾಷ್ಟ್ರ ರಾಜ್ಯ ಸಹಕಾರಿ ಬ್ಯಾಂಕ್ ಪ್ರಕರಣಕ್ಕೆ ಸಂಬಂಧಿಸಿದ ಆರೋಪಗಳನ್ನು ಎದುರಿಸಿದರು. ತಾನು ಯಾವುದೇ ತಪ್ಪು ಮಾಡಿಲ್ಲ ಎಂದು ಅವರು ಆರೋಪ ನಿರಾಕರಿಸಿದ್ದರು. ಕಾನೂನು ಹೋರಾಟದಲ್ಲಿ ಅವರಿಗೆ ಕ್ವೀನ್ ಚಿಟ್ ಸಿಕ್ಕಿತ್ತು.

ಅಜಿತ್ ಪವಾರ್ ಅವರ ಹೇಳಿಕೆಯೂ ವಿವಾದವಾಗಿದ್ದುಂಟು. 2013ರಲ್ಲಿ ಜಮೀನೀಗೆ ನೀರು ಬಿಡುವಂತೆ 55 ದಿನಗಳಿಂದ ಉಪವಾಸ ಸತ್ಯಾಗ್ರಹ ನಡೆಸುತ್ತಿದ್ದ ರೈತರಲ್ಲಿ ಅವರು "ಅಣೆಕಟ್ಟಿನಲ್ಲಿ ನೀರಿಲ್ಲದಿದ್ದರೆ, ನಾವು ಹೇಗೆ ನೀರು ಬಿಡೋಕೆ ಆಗುತ್ತದೆ. ನಾವು ಅದರಲ್ಲಿ ಮೂತ್ರ ಮಾಡಬೇಕೆ?"ಎಂದು ಕೇಳಿದ್ದರು. ಬರಗಾಲದ ಸಮಯದಲ್ಲಿ ರೈತರನ್ನು ಅವಮಾನಿಸಿದ್ದ ಈ ಹೇಳಿಕೆಗೆ ಭಾರೀ ವಿರೋಧ ವ್ಯಕ್ತವಾದಾಗ ಪವಾರ್ ಕ್ಷಮೆ ಕೇಳಿದ್ದರು.

ರಾಜ್ಯದಲ್ಲಿ ವಿದ್ಯುತ್ ಕೊರತೆ ಬಗ್ಗೆಯೂ ಅವರಾಡಿದ ಮಾತು ವಿವಾದವಾಗಿತ್ತು. ರಾತ್ರಿ ಹೊತ್ತಲ್ಲಿ ಲೈಟ್ ಆಫ್ ಆಗಿರುವ ಕಾರಣ ಹೆಚ್ಚು ಮಕ್ಕಳು ಹುಟ್ಟುತ್ತಿದ್ದಾರೆ ಎಂದು ನಾನು ಗಮನಿಸಿದ್ದೇನೆ. ಅಲ್ಲಿ ಬೇರೇನೂ ಕೆಲಸ ಇರುವುದಿಲ್ಲ ಎಂದಿದ್ದರು ಅಜಿತ್ ಪವಾರ್.

►ಪವರ್ ಫುಲ್ ಕುಟುಂಬ

ಮಹಾರಾಷ್ಟ್ರದ ಅತ್ಯಂತ ಪ್ರಸಿದ್ಧ ರಾಜಕೀಯ ಕುಟುಂಬವಾಗಿದೆ ಪವಾರ್ ಕುಟುಂಬ. ದಶಕಗಳಿಂದ, ಈ ಕುಟುಂಬದ ಸದಸ್ಯರು ಪ್ರಾದೇಶಿಕ ಮತ್ತು ರಾಷ್ಟ್ರೀಯ ರಾಜಕೀಯದಲ್ಲಿ ವಿಶೇಷವಾಗಿ ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷ (NCP) ಮೂಲಕ ಬಲವಾದ ಅಸ್ತಿತ್ವವನ್ನು ನಿರ್ಮಿಸಿಕೊಂಡರು. ಪವಾರ್ ಕುಟುಂಬದ ಮೂಲ ಬೇರು ಇರುವುದು ಬಾರಾಮತಿಯಲ್ಲಿ. ಈ ಕುಟುಂಬದ ಪ್ರಮುಖ ಸದಸ್ಯರು

ಶರದ್ ಪವಾರ್ - ಅನುಭವಿ ನಾಯಕ, ನ್ಯಾಷನಲಿಸ್ಟ್ ಕಾಂಗ್ರೆಸ್ ಪಕ್ಷದ (NCP) ಸ್ಥಾಪಕ ಮತ್ತು ಮಾಜಿ ಕೇಂದ್ರ ಸಚಿವ.

ಅನಂತರಾವ್ ಪವಾರ್ - ಶರದ್ ಪವಾರ್ ಅವರ ಸಹೋದರ ಮತ್ತು ಅಜಿತ್ ಪವಾರ್ ಅವರ ಅಪ್ಪ.

ಅಜಿತ್ ಪವಾರ್: ರಾಜಕಾರಣಿ, ಮಹಾರಾಷ್ಟ್ರದ ಉಪಮುಖ್ಯಮಂತ್ರಿ

►ಅಜಿತ್ ಪವಾರ್ ಕುಟುಂಬ

ಸುನೇತ್ರಾ ಪವಾರ್-ಅಜಿತ್ ಪವಾರ್ ಪತ್ನಿ,ಸಾಮಾಜಿಕ ಕಾರ್ಯ ಮತ್ತು ಸಮುದಾಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ.

ಪಾರ್ಥ್ ಪವಾರ್ - ಪುತ್ರ, ರಾಜಕೀಯದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. 2019 ರಲ್ಲಿ ಮಾವಲ್‌ನಿಂದ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಸೋತಿದ್ದರು

ಜಯ್ ಪವಾರ್ - ಪುತ್ರ, ಕುಟುಂಬ ಮತ್ತು ವ್ಯವಹಾರ ವ್ಯವಹಾರಗಳಲ್ಲಿ ತೊಡಗಿಸಿಕೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ರಶ್ಮಿ ಕಾಸರಗೋಡು

contributor

Similar News