×
Ad

ರಾಜ್ಯದ ವಿವಿಧ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ 4,682.8 ಕೋಟಿ ರೂ. ಬಾಕಿ

Update: 2026-01-28 08:10 IST

ಬೆಂಗಳೂರು : ರಾಜ್ಯದ ಬೆಳಗಾವಿ ಸೇರಿದಂತೆ ವಿವಿಧೆಡೆ ಕಾರ್ಯಾಚರಿಸುತ್ತಿರುವ ಸಕ್ಕರೆ ಕಾರ್ಖಾನೆಗಳು 2025-26ನೇ ಸಾಲಿನ ಹಂಗಾಮಿನಲ್ಲಿ ಕಬ್ಬು ಬೆಳೆಗಾರರಿಗೆ ಒಟ್ಟು 4,682.8 ಕೋಟಿ ರೂ.ಯಷ್ಟು ಬಾಕಿ ಉಳಿಸಿಕೊಂಡಿವೆ.

ಬೆಂಗಳೂರಿನಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನದಲ್ಲಿ ರಾಜ್ಯದ ಖಾಸಗಿ ಮತ್ತು ಸಹಕಾರಿ ಸಕ್ಕರೆ ಕಾರ್ಖಾನೆಗಳಿಂದ ರೈತರಿಗೆ ಬರಬೇಕಾದ ಕಬ್ಬಿನ ಬಾಕಿ ಹಣದ ಕುರಿತು ವಿಧಾನ ಪರಿಷತ್ ಸದಸ್ಯ ಡಾ ಎಂ.ಜಿ.ಮುಳೆ ಅವರು ಕೇಳಿದ್ದ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿರುವ ಸಕ್ಕರೆ ಸಚಿವ ಶಿವಾನಂದ ಪಾಟೀಲ್ ಅವರು, ವಿಧಾನಸಭೆ ಅಧಿವೇಶನಕ್ಕೆ ಕೋಟ್ಯಂತರ ರೂ. ಬಾಕಿ ಉಳಿಸಿಕೊಂಡಿರುವ ಸಕ್ಕರೆ ಕಾರ್ಖಾನೆಗಳ ಮಾಹಿತಿ ಒದಗಿಸಿದ್ದಾರೆ.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ, ಎಸ್.ಆರ್.

ಪಾಟೀಲ್, ಶಾಮನೂರು ಶಿವಶಂಕರಪ್ಪ, ಮುರುಗೇಶ್ ನಿರಾಣಿ, ಬಸನಗೌಡ ಪಾಟೀಲ್ ಯತ್ನಾಳ ಸೇರಿದಂತೆ ರಾಜಕೀಯ ಪ್ರಭಾವಿಗಳ ಕುಟುಂಬ ಸದಸ್ಯರ ಒಡೆತನದಲ್ಲಿರುವ ಸಹಕಾರಿ ಸಕ್ಕರೆ ಕಾರ್ಖಾನೆಗಳು ಈ ಪಟ್ಟಿಯಲ್ಲಿರುವುದು ಉತ್ತರದಿಂದ ಗೊತ್ತಾಗಿದೆ.

2025-26ನೇ ಹಂಗಾಮಿನಲ್ಲಿ 81 ಸಕ್ಕರೆ ಕಾರ್ಖಾನೆಗಳು ಕಾರ್ಯನಿರತವಾಗಿದೆ. 2026ರ ಜನವರಿ 15ಕ್ಕೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕ್ಕರೆ ಕಾರ್ಖಾನೆಗಳು ಪಾವತಿಸಬೇಕಾದ ಕಬ್ಬು ಬಿಲ್ ಮೊತ್ತ 16,609.01 ಕೋಟಿ ರೂ.ಗಳಾಗಿವೆ. ಈ ಪೈಕಿ 10,935.58 ಕೋಟಿ ರೂ.ಗಳು ಪಾವತಿಯಾಗಿದೆ. ಇನ್ನೂ 4,682.8 ಕೋಟಿ ರೂ. ಪಾವತಿಸಲು ಬಾಕಿ ಇದೆ ಎಂದು ಸಚಿವ ಶಿವಾನಂದ ಪಾಟೀಲ್ ಅವರು ಉತ್ತರಿಸಿದ್ದಾರೆ.

ಬಾಕಿ ಉಳಿಸಿಕೊಂಡಿರುವ ಪಟ್ಟಿಯಲ್ಲಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರು ಅಧ್ಯಕ್ಷರಾಗಿರುವ ಸಿದ್ಧಸಿರಿ ಎಥನಾಲ್ ಪವರ್ ಯುನಿಟ್ 100.97 ಕೋಟಿ ರೂ.ಯಷ್ಟು ಬಾಕಿ ಉಳಿಸಿಕೊಂಡಿರುವುದು ಉತ್ತರದಿಂದ ತಿಳಿದು ಬಂದಿದೆ.

ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರು ನಿರ್ದೇಶಕರಾಗಿರುವ ಹರ್ಷ ಷುಗರ್ಸ್ ಲಿಮಿಟೆಡ್ 54.36 ಕೋಟಿ ರೂ., ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಒಡೆತನದಲ್ಲಿರುವ ಸತೀಶ್ ಷುಗರ್ಸ್ ಲಿಮಿಟೆಡ್, 65.07 ಕೋಟಿ ರೂ.ಗಳನ್ನು ಕಬ್ಬು ಬೆಳೆಗಾರರಿಗೆ ಪಾವತಿಸಲು ಬಾಕಿ ಇರಿಸಿಕೊಂಡಿದೆ. ಬೆಳಗಾವಿಯಲ್ಲಿರುವ ಒಟ್ಟು 29 ಸಕ್ಕರೆ ಕಾರ್ಖಾನೆಗಳಿಂದ 1,769.3 ಕೋಟಿ ರೂ.ನಷ್ಟು ಬಾಕಿ ಉಳಿಸಿಕೊಂಡಿರುವುದು ಉತ್ತರದಿಂದ ತಿಳಿದು ಬಂದಿದೆ.

ರಮೇಶ್ ಜಾರಕಿಹೊಳಿ ಅವರ ಒಡೆತನದ ಸೌಭಾಗ್ಯ ಲಕ್ಷ್ಮೀ ಷುಗರ್ಸ್ ಲಿಮಿಟೆಡ್ 26.77 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಬಾಗಲಕೋಟೆ ಜಿಲ್ಲೆಯ ಲ್ಲಿರುವ ಸಕ್ಕರೆ ಕಾರ್ಖಾನೆಗಳು 1,382.26 ಕೋಟಿ ರೂ. ಬಾಕಿ ಉಳಿಸಿಕೊಂಡಿವೆ. ಈ ಪೈಕಿ ಕಾಂಗ್ರೆಸ್ ಮುಖಂಡ ಹಾಗೂ ಮಾಜಿ ಸಚಿವ ಎಸ್.ಆರ್.ಪಾಟೀಲ್ ಅವರು ನಿರ್ದೇಶಕರಾಗಿರುವ ಬೀಳಗಿ ಷುಗರ್ಸ್ ಲಿಮಿಟೆಡ್ 201.13 ಕೋಟಿ ರೂ. ಮತ್ತು 49.55 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಮುರುಗೇಶ್ ನಿರಾಣಿ ಕುಟುಂಬದ ಒಡೆತನದಲ್ಲಿರುವ ನಿರಾಣಿ ಷುಗರ್ಸ್ 168.4 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಬೀಳಗಿ ಷುಗರ್ ಮಿಲ್ 49.55 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಕಲ್ಲಾಪುರದಲ್ಲಿರುವ ನಿರಾಣಿ ಅವರ ಕುಟುಂಬ ಸದಸ್ಯರ ಮತ್ತೊಂದು ಸಮೂಹ ಎಂಆರ್‌ಎನ್ ಕೇನ್ ಪವರ್ 64.41 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ಮಂಡ್ಯದಲ್ಲಿರುವ ಎಂಆರ್‌ಎನ್ ಕೇನ್ ಪವರ್ ಬಯೋ ರಿಫೈನರೀಸ್ 2.27 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಬೀದರ್ ಜಿಲ್ಲೆಯಲ್ಲಿ ಈಶ್ವರ್ ಖಂಡ್ರೆ ಸೋದರ ಸಂಬಂಧಿ ಮಾಜಿ ಶಾಸಕ ಪ್ರಕಾಶ್ ಖಂಡ್ರೆ ಅವರು ವ್ಯವಸ್ಥಾಪಕ ನಿರ್ದೇಶಕರಾಗಿರುವ ಭಾಲ್ಕೇಶ್ವರ ಷುಗರ್ಸ್ ಲಿಮಿಟೆಡ್ 50.90 ಕೋಟಿ ರೂ. ಬಾಕಿ ಉಳಿಸಿಕೊಂಡಿದ್ದಾರೆ. ಬೀದರ್ ಜಿಲ್ಲೆಯಲ್ಲಿರುವ ಒಟ್ಟಾರೆ 5 ಸಕ್ಕರೆ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರಿಗೆ 249.62 ಕೋಟಿ ರೂ. ಬಾಕಿ ಬರಬೇಕಾಗಿದೆ.

ಶಾಮನೂರು ಶಿವಶಂಕರಪ್ಪ ಅವರ ಪುತ್ರರು ನಿರ್ದೇಶಕರಾಗಿರುವ ದಾವಣಗೆರೆ ಷುಗರ್ಸ್ ಲಿಮಿಟೆಡ್ 16.93 ಕೋಟಿ ರೂ.ಯಷ್ಟು ಬಾಕಿ ಉಳಿಸಿಕೊಂಡಿದೆ. ಬಿಜೆಪಿ ಮಾಜಿ ಸಂಸದ ಮತ್ತು ಮಾಜಿ ಕೇಂದ್ರ ಸಚಿವ ಜಿ.ಎಂ.ಸಿದ್ದೇಶ್ವರ ಅವರ ಕುಟುಂಬದ ಒಡೆತನದಲ್ಲಿ ಹಾವೇರಿಯಲ್ಲಿರುವ ಜಿ.ಎಂ.ಷುಗರ್ಸ್ ಲಿಮಿಟೆಡ್‌ನಿಂದ 20.35 ಕೋಟಿ ರೂ. ಮತ್ತು ಹಾವೇರಿಯ ರಟ್ಟಿಹಳ್ಳಿಯಲ್ಲಿರುವ ಜಿ.ಎಂ.ಷುಗರ್ಸ್ ಲಿಮಿಟೆಡ್‌ನಿಂದ 31.13 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ.

ಕಲಬುರಗಿಯಲ್ಲಿರುವ ಬಿಜೆಪಿಯ ಉಚ್ಛಾಟಿತ ಶಾಸಕ ಬಸನಗೌಡ ಪಾಟೀಲ್ ಅಧ್ಯಕ್ಷರಾಗಿರುವ ಸಿದ್ಧಸಿರಿ ಎಥನಾಲ್ ಪವರ್ ಯುನಿಟ್ 100.97 ಕೋಟಿ ರೂ.ಯಷ್ಟು ಬಾಕಿ ಉಳಿಸಿಕೊಂಡಿದೆ. ಈ ಕಂಪೆನಿಯು ಸೇರಿದಂತೆ ಕಲಬುರಗಿಯಲ್ಲಿ ಒಟ್ಟು 5 ಸಕ್ಕರೆ ಕಾರ್ಖಾನೆಗಳಿಂದ ಒಟ್ಟಾರೆ 386.04 ಕೋಟಿ ರೂ. ಬಾಕಿ ಇರುವುದು ಗೊತ್ತಾಗಿದೆ.

ಮಂಡ್ಯ ಜಿಲ್ಲೆಯಲ್ಲಿ ಒಟ್ಟು 5 ಸಕ್ಕರೆ ಕಾರ್ಖಾನೆಗಳಿಂದ 12.68 ಕೋಟಿ ರೂ.ಯಷ್ಟು ಬಾಕಿ ಉಳಿಸಿಕೊಂಡಿವೆ.

ವಿಜಯಪುರದಲ್ಲಿರುವ 10 ಸಕ್ಕರೆ ಕಾರ್ಖಾನೆಗಳಿಂದ 608.95 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ವಿಜಯನಗರ ಜಿಲ್ಲೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರ ಕುಟುಂಬ ಸದಸ್ಯರು ನಿರ್ದೇಶಕರಾಗಿರುವ ಶಾಮನೂರು ಷುಗರ್ಸ್ 25.27 ಕೋಟಿ ರೂ. ಬಾಕಿ ಉಳಿಸಿಕೊಂಡಿದೆ. ವಿಜಯನಗರ ಜಿಲ್ಲೆಯಲ್ಲಿರುವ ಮತ್ತೊಂದು ಮೈಲಾರ್ ಷುಗರ್ಸ್ 20.22 ಕೋಟಿ ಬಾಕಿ ಉಳಿಸಿಕೊಂಡಿದೆ.

ಪ್ರಸ್ತುತ 2025-26ನೇ ಹಂಗಾಮು ನವೆಂಬರ್ 2025ರಿಂದ ಪ್ರಾರಂಭವಾಗಿದೆ. ಇದು ಪ್ರಸ್ತುತ ಚಾಲ್ತಿಯಲ್ಲಿರುತ್ತದೆ. ಕಾರ್ಖಾನೆಗಳು ಕಬ್ಬು ಸರಬರಾಜು ಮಾಡಿದ ರೈತರಿಗೆ ಸಕಾಲದಲ್ಲಿ ಕಬ್ಬಿನ ಬಿಲ್ ಪಾವತಿಸದೇ ಇರುವುದರಿಂದ 2025ರ ಡಿಸೆಂಬರ್ 19ರಿಂದ 20 ಮತ್ತು 2026ರ ಜನವರಿ 21ರಂದು ಕಬ್ಬು (ನಿಯಂತ್ರಣ ) ಆದೇಶ 1966ರ ಕಲಂ 3(8)ರ ಅಡಿಯಲ್ಲಿ ಶಾಸನಬದ್ಧ ನೋಟೀಸ್ ಜಾರಿಗೊಳಿಸಿದೆ. ಪ್ರಸ್ತುತ ಹಂಗಾಮು ಚಾಲ್ತಿಯಲ್ಲಿರುವುದರಿಂದ ರೈತರಿಗೆ ಕಬ್ಬು ಬಿಲ್ ಪಾವತಿಸಲು ಕಾರ್ಖಾನೆಗಳಿಗೆ ಅವಕಾಶವಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಜಿ. ಮಹಾಂತೇಶ್

contributor

Similar News