×
Ad

ಭಾರತ - ಯುರೋಪ್ ಮುಕ್ತ ವ್ಯಾಪಾರ ಒಪ್ಪಂದವು ಔಷಧ ವಲಯಕ್ಕೆ ನೆರವಾಗಲಿದೆಯೆ?

Update: 2026-01-28 17:33 IST

Photo Credit : PTI

ಭಾರತ- ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದಡಿ ಸುಂಕಗಳನ್ನು ತೆಗೆದು ಹಾಕಿರುವ ಕಾರಣದಿಂದ ಸುಧಾರಿತ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಅನುವು ಮಾಡಿಕೊಡುತ್ತದೆ. ಆದರೆ ದ್ವಿತೀಯ ದರ್ಜೆಯ ಬಳಕೆ ಮಾಡಿದ ವಸ್ತುಗಳು ಮಾರುಕಟ್ಟೆಗೆ ಪ್ರವೇಶಿಸುವ ಅಪಾಯ ನೈಜವಾಗಿದೆ.

ಭಾರತ ಮತ್ತು ಯುರೋಪ್ ಮುಕ್ತ ವ್ಯಾಪಾರ ಒಪ್ಪಂದವು ಔಷಧಗಳ ಮೇಲಿನ ಸುಂಕವನ್ನು ಕಡಿಮೆ ಮಾಡುವ ಜೊತೆಗೆ ಭಾರತದ ವೈದ್ಯಕೀಯ ಸಾಧನಗಳು ಮತ್ತು ತಂತ್ರಜ್ಞಾನ ಮಾರುಕಟ್ಟೆಗೆ ಯುರೋಪ್ ಪ್ರವೇಶದ ಪ್ರಮಾಣವನ್ನು ಹೆಚ್ಚಿಸಿದೆ. ಯುರೋಪ್ ಒಕ್ಕೂಟದ 572.3 ಶತಕೋಟಿ ಡಾಲರ್ ನ ಫಾರ್ಮಾ ಮತ್ತು ವೈದ್ಯಕೀಯ ತಂತ್ರಜ್ಞಾನದ ಮಾರುಕಟ್ಟೆಗೆ ಭಾರತಕ್ಕೆ ಪ್ರವೇಶ ಸಿಗಲಿದೆ. ಆ ಮೂಲಕ ವ್ಯಾಪಾರವನ್ನು ಗಮನಾರ್ಹವಾಗಿ ಹೆಚ್ಚಿಸುವ ಅವಕಾಶ ದೊರೆತಿದೆ. ಆದರೆ, ಜೆನೆರಿಕ್ಸ್ ಮತ್ತು ವೈದ್ಯಕೀಯ ತಂತ್ರಜ್ಞಾನದಲ್ಲಿ ರಫ್ತು ಸ್ಪರ್ಧಾತ್ಮಕತೆಯನ್ನು ಪುನಃಸ್ಥಾಪಿಸಲು ಪ್ರಯತ್ನಿಸಿದರೂ, ಬೌದ್ಧಿಕ ಆಸ್ತಿ ನಿಯಮಗಳಿಗೆ ಸಂಬಂಧಿಸಿ ಯುರೋಪ್ ನಿಂದ ಒತ್ತಡವಿದೆ.

ಭಾರತೀಯ ಆರೋಗ್ಯ ಸೇವಾ ಕ್ಷೇತ್ರವು ಯುರೋಪ್ ನಿಂದ ಆಮದು ಮಾಡಿಕೊಳ್ಳುವ ಉನ್ನತ ಮಟ್ಟದ ವೈದ್ಯಕೀಯ, ಶಸ್ತ್ರಚಿಕಿತ್ಸಾ ಮತ್ತು ರೋಗ ನಿರ್ಣಯ ಸಾಧನಗಳ ಮೇಲೆ ಬಹಳ ಅವಲಂಬಿಸಿದೆ. ಭಾರತ- ಯುರೋಪ್ ಮುಕ್ತ ವ್ಯಾಪಾರ ಒಪ್ಪಂದದಡಿ ಸುಂಕಗಳನ್ನು ತೆಗೆದು ಹಾಕಿರುವ ಕಾರಣದಿಂದ ಆಸ್ಪತ್ರೆಗಳಿಗೆ ಖರೀದಿ ವೆಚ್ಚವನ್ನು ಬಹಳ ಕಡಿಮೆ ಮಾಡುತ್ತದೆ. ಸುಧಾರಿತ ತಂತ್ರಜ್ಞಾನಗಳ ವ್ಯಾಪಕ ಅಳವಡಿಕೆಗೆ ಅನುವು ಮಾಡಿಕೊಡುತ್ತದೆ. ಇದರಿಂದ ಚಿಕಿತ್ಸಾತ್ಮಕವಾಗಿ ಸುಧಾರಣೆ ತರಬಹುದು ಮತ್ತು ಅಂತಿಮವಾಗಿ ರೋಗಿಗಳಿಗೆ ಅತ್ಯಾಧುನಿಕ ಚಿಕಿತ್ಸೆಗಳು ಕೈಗೆಟಕುವ ದರದಲ್ಲಿ ಸಿಗಬಹುದು ಮತ್ತು ಉನ್ನತ ಗುಣಮಟ್ಟದ ಚಿಕಿತ್ಸೆಯನ್ನು ಪಡೆಯಬಹುದು ಎನ್ನುತ್ತಾರೆ ಎಫ್ಐಸಿಸಿ ಆರೋಗ್ಯಸೇವೆ ಸಮಿತಿಯ ಉಪಾಧ್ಯಕ್ಷರಾಗಿರುವ ಡಾ ಧರ್ಮಿಂದರ್ ನಗರ್.

ಮುಕ್ತ ವ್ಯಾಪಾರ ಒಪ್ಪಂದದ ಲಾಭವೇನು?

ಮುಕ್ತ ವ್ಯಾಪಾರ ಒಪ್ಪಂದದಿಂದ ಯುರೋಪಿಯನ್ ಕಂಪನಿಗಳು ಭಾರತದಲ್ಲಿ ಉನ್ನತ ಮಟ್ಟದ ವೈದ್ಯಕೀಯ ಸಾಧನಗಳು ಮತ್ತು ತಂತ್ರಜ್ಞಾನಗಳ ಮಾರುಕಟ್ಟೆಗೆ ಸುಲಭವಾದ ಪ್ರವೇಶವನ್ನು ಪಡೆದಿವೆ. ಈ ಒಪ್ಪಂದದ ನಂತರ ಯುರೋಪಿಯನ್ ಒಕ್ಕೂಟದ ಫಾರ್ಮಾ ಉತ್ಪನ್ನಗಳು ಮತ್ತು ಶೇ 90ರಷ್ಟು ಆಪ್ಟಿಕಲ್, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳ ಮೇಲೆ ಸುಂಕವನ್ನು ತೆಗೆದು ಹಾಕಲಾದಗಿದೆ. ಹೀಗಾಗಿ ಆರೋಗ್ಯಸೇವಾ ವೆಚ್ಚ ಕಡಿಮೆಯಾಗಲಿದೆ ಮತ್ತು ವ್ಯಾಪಾರ ಹೆಚ್ಚಾಗಲಿದೆ. ಯುರೋಪ್ ಫಾರ್ಮಾ ಉತ್ಪನ್ನಗಳ ಮೇಲಿದ್ದ ಶೇ 11ರಷ್ಟು ಸುಂಕವನ್ನು ಸಂಪೂರ್ಣವಾಗಿ ತೆಗೆದು ಹಾಕಲಾಗಿದೆ. ಹೀಗಾಗಿ ಶೇ 90ರಷ್ಟು ಆಪ್ಟಿಕಲ್, ವೈದ್ಯಕೀಯ ಮತ್ತು ಶಸ್ತ್ರಚಿಕಿತ್ಸಾ ಉಪಕರಣಗಳು ಭಾರತದಲ್ಲಿ ಸುಂಕ ರಹಿತವಾಗಿ ಮಾರಾಟವಾಗಲಿದೆ. ಹೀಗಾಗಿ ಅತ್ಯಾಧುನಿಕ ವೈದ್ಯಕೀಯ ಉಪಕರಣಗಳ ಮೇಲಿನ ವೆಚ್ಚ ಕಡಿತಗೊಳ್ಳಲಿದೆ.

ಭಾರತದ ಸಂಶೋಧನಾ ಆಧರಿತ ಫಾರ್ಮಾಸ್ಯುಟಿಕಲ್ ಕ್ಷೇತ್ರದಲ್ಲಿ ಯುರೋಪಿಯನ್ ಕಂಪನಿಗಳು ಹೂಡಿಕೆ ಮಾಡಲು ಒಪ್ಪಂದ ಪ್ರೋತ್ಸಾಹ ನೀಡುತ್ತದೆ. ಈ ಒಪ್ಪಂದದಲ್ಲಿ ಯುರೋಪ್ ತನ್ನ ಮಾರುಕಟ್ಟೆಯನ್ನು ವಿಸ್ತರಿಸಲು ಬಯಸಿದೆ ಮತ್ತು ಬೌದ್ಧಿಕ ಆಸ್ತಿಯನ್ನು ಸಂರಕ್ಷಿಸಲು ಬಯಸಿದೆ. ಭಾರತ ತನ್ನ ವಿಸ್ತೃತ ಜೆನೆರಿಕ್ ಮಾರುಕಟ್ಟೆ ಸೇರಿದಂತೆ ವೈದ್ಯಕೀಯ ವೆಚ್ಚ ಕೈಗೆಟಕುವಂತೆ ಮಾಡಲು ಪ್ರಯತ್ನಿಸಲಿದೆ.

ಆದರೆ ಈ ಒಪ್ಪಂದದ ಬಗ್ಗೆ ಎಚ್ಚರಿಕೆ ಏಕೆ ಅಗತ್ಯ?

ಆದರೆ, ಇಂಡಿಯನ್ ಮೆಡಿಕಲ್ ಅಸೋಸಿಯೇಶನ್ ನ ಮಾಜಿ ರಾಷ್ಟ್ರೀಯ ಅಧ್ಯಕ್ಷರಾದ ಡಾ. ವಿನಯ್ ಅಗರ್ವಾಲ್ ಕಾದು ನೋಡಬೇಕು ಎಂದು ಅಭಿಪ್ರಾಯವ್ಯಕ್ತಪಡಿಸಿದ್ದಾರೆ. “ಭಾರತೀಯ ದೃಷ್ಟಿಕೋನದಲ್ಲಿ ಒಪ್ಪಂದವನ್ನು ಗಮನಿಸಬೇಕು. ಕೆಲವು ಪ್ರಕರಣಗಳಲ್ಲಿ ವೈದ್ಯಕೀಯ ಸಾಧನೆಗಳ ಆಮದು ಪ್ರೋತ್ಸಾಹಿಸುವುದು ಸರಿ. ಆದರೆ ದ್ವಿತೀಯ ದರ್ಜೆಯ ಬಳಕೆ ಮಾಡಿದ ವಸ್ತುಗಳು ಮಾರುಕಟ್ಟೆಗೆ ಪ್ರವೇಶಿಸುವ ಅಪಾಯ ನೈಜವಾಗಿದೆ. ಭಾರತ ತನ್ನ ಶೇ 70ರಿಂದ 90ರಷ್ಟು ವೈದ್ಯಕೀಯ ಸಾಧನಗಳನ್ನು ಆಮದು ಮಾಡಿಕೊಳ್ಳುತ್ತದೆ. ಯುರೋಪ್ ನಲ್ಲಿ ಅವುಗಳಿಗೆ ನಿಯಂತ್ರಕರ ಪ್ರಮಾಣಪತ್ರಗಳು ಇರಬಹುದು. ಆದರೆ ಅವುಗಳಲ್ಲಿ ಬಹುತೇಕ ದೇಶೀ ನಿಯಂತ್ರಣಗಳನ್ನು ಅನುಸರಿಸುತ್ತಿಲ್ಲ. ರೂ 30,000 ಕೋಟಿ ವೈದ್ಯಕೀಯ ಸಾಧನಗಳಿಗೆ ಸ್ಥಳೀಯ ನಿಯಂತ್ರಣ ಅಥವಾ ಗುಣಮಟ್ಟ ಪರೀಕ್ಷೆ ಇರುವುದಿಲ್ಲ” ಎಂದು ಅವರು ಅಭಿಪ್ರಾಯಪಟ್ಟರು.

ಅವರ ಪ್ರಕಾರ, 23 ಸಾಧನಗಳಿಗೆ ಮಾತ್ರ ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯಡಿ (ಡಿಸಿಎ) ಆರೋಗ್ಯ ಸಚಿವಾಲಯದ ಕೇಂದ್ರ ಪರವಾನಗಿ ಪ್ರಾಧಿಕಾರ ಮತ್ತು ರಾಜ್ಯ ಪರವಾನಗಿ ಪ್ರಾಧಿಕಾರಗಳ ನಿಯಂತ್ರಣವಿದೆ. ಸಾಧನಗಳು ಎಂಜಿನಿಯರಿಂಗ್ ಉತ್ಪನ್ನಗಳಾಗಿರುತ್ತವೆ. ಅವು ಔಷಧ ಅಥವಾ ಗುಳಿಗೆಗಳಲ್ಲ. ಹೀಗಾಗಿ ವೈದ್ಯಕೀಯ ಸಾಧನಗಳಿಗೆ ವ್ಯಾಖ್ಯಾನಿಸಲಾದ ನಿಯಂತ್ರಣ ಚೌಕಟ್ಟಿನ ಕೊರತೆಯಿದೆ.

“ಭಾರತದಲ್ಲಿ ಬುಹುತೇಕ ಇಂಪ್ಲಾಟೇಬಲ್ ಸಾಧನಗಳಿಗೆ ನಿಯಂತ್ರಣಗಳಿಲ್ಲ. ಅಂದರೆ ಪೇಸ್ಮೇಕರ್ಗಳು, ಡಿಫೈಬ್ರಿಲೇಟರ್ಗಳು, ಗ್ಲುಕೋಸ್ ಮಾನಿಟರ್ಗಳಿಗೆ ನಿಯಂತ್ರಣಗಳಿಲ್ಲ. ವೈದ್ಯಕೀಯ ಸಾಧನಗಳ ನಿಯಂತ್ರಣಕ್ಕೆ ಪ್ರತ್ಯೇಕವಾದ ಶಾಸನದ ತುರ್ತು ಅಗತ್ಯವಿದೆ. ಈಗಿನ 2019ರ ಔಷಧ ಮತ್ತು ಕಾಸ್ಮೆಟಿಕ್ಸ್ ಕಾಯ್ದೆಯ ತಿದ್ದುಪಡಿಯಲ್ಲಿ ವೈದ್ಯಕೀಯ ಸಾಧನಗಳನ್ನು ಸೇರಿಸಲಾಗಿಲ್ಲ. ಶೇ 80ರಷ್ಟು ಉತ್ಪನ್ನಗಳು ಆಮದು ಆಗುತ್ತಿರುವ ಕಾರಣದಿಂದ ಪ್ರತ್ಯೇಕ ಶಾಸನ ತಂದರೆ ದೇಶೀ ಮತ್ತು ವಿದೇಶಿ ತಂತ್ರಜ್ಞಾನ ಕಂಪನಿಗಳಿಗೆ ಸಮಾನವಾದ ಸ್ಪರ್ಧೆಗೆ ಅವಕಾಶ ಸಿಗುತ್ತದೆ” ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಯುರೋಪ್- ಭಾರತ ಒಪ್ಪಂದದಿಂದ ದೇಶೀ ಉತ್ಪಾದನೆಯನ್ನು ನಿಧಾನಗೊಳಿಸಬಹುದು. ಫಾರ್ಮಾ ಉತ್ಪನ್ನಗಳಿಗೆ ದೇಶಿ ಮಾರುಕಟ್ಟೆ ತೆರೆಯುವುದರಿಂದ ಯುರೋಪ್ಗೆ ಲಾಭವಾಗಬಹುದು. ಆದರೆ ಭಾರತದ ಔಷಧ ಉದ್ಯಮದ ಮೇಲೆ ಪರಿಣಾಮ ಬೀರಲಿದೆ. ಪೇಟೆಂಟ್ ಕಾನೂನುಗಳ ವಿಚಾರಕ್ಕೆ ಬಂದಲ್ಲಿ ಭಾರತದಲ್ಲಿ ಪ್ರಕ್ರಿಯೆ-ನಿರ್ದಿಷ್ಟ ಪೇಟೆಂಟ್ಗಳಿದ್ದರೆ, ಯುರೋಪ್ ನಲ್ಲಿ ಉತ್ಪನ್ನ- ನಿರ್ದಿಷ್ಟ ಪೇಟೆಂಟ್ ಗಳಿವೆ. ನಾವು ಭಾರತದ ಪೇಟೆಂಟ್ ಕಾನೂನಿಗೆ ಬದ್ಧರಾಗಿರಬೇಕು ಎಂದು ಅವರು ಹೇಳಿದ್ದಾರೆ.

ಜೆನೆರಿಕ್ ಉದ್ಯಮಕ್ಕೆ ಒಪ್ಪಂದ ಲಾಭದಾಯಕವೆ?

ತನ್ನ ವ್ಯಾಪಕ ಜೆನೆರಿಕ್ ವೈದ್ಯಕೀಯ ಕ್ಷೇತ್ರವನ್ನು ರಕ್ಷಿಸಲು ಭಾರತ ಯುರೋಪ್ ನ ಕಠಿಣ ಬೌದ್ಧಿಕ ಆಸ್ತಿ ಹಕ್ಕುಗಳು ಮತ್ತು ಡೇಟಾ ಪ್ರತ್ಯೇಕತೆಯ ಬೇಡಿಕೆಯನ್ನು ನಿರಾಕರಿಸುತ್ತಾ ಬಂದಿದೆ. ಈ ಒಪ್ಪಂದದ ಅಡಿಯಲ್ಲಿ ಫಾರ್ಮಾಸ್ಯುಟಿಕಲ್ಸ್ ಮೇಲೆ ಗಮನಾರ್ಹ ಪರಿಣಾಮ ಬೀರುವುದಿಲ್ಲ. ತೆರಿಗೆ ಮುಖ್ಯವಾಗಿ ಶೂನ್ಯವಾಗಿರುವುದು ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಹಿಂದೆ ಶೇ 18ರಷ್ಟು ಮೌಲ್ಯಾಧರಿತ ತೆರಿಗೆ ಇತ್ತು. ಅದನ್ನು ಮರಳಿ ಕ್ಲೇಮ್ ಮಾಡಬಹುದಾಗಿತ್ತು. ಯುರೋಪ್ ನಿಂದ ಆಮದು ಮಾಡುವ ಉತ್ಪನ್ನಗಳಿಗೆ ಶೇ 11ರಿಂದ 0% ತೆರಿಗೆ ಇಳಿಕೆಯಿಂದಲೂ ಭಾರತದ ಉದ್ಯಮಕ್ಕೆ ಹೆಚ್ಚು ಲಾಭ ತರುವುದಿಲ್ಲ. ಏಕೆಂದರೆ ಬಹುತೇಕ ಆಮದು ಉತ್ಪನ್ನಗಳು ಬ್ರಾಂಡೆಡ್ ಔಷಧಿಗಳಾಗಿರುತ್ತವೆ” ಎಂದು ಉದ್ಯಮ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

ವೈದ್ಯಕೀಯ ಸಾಧನಗಳ ಮಟ್ಟಿಗೆ ಉತ್ತಮ

ಮುಕ್ತ ವ್ಯಾಪಾರ ಒಪ್ಪಂದವು ವೈದ್ಯಕೀಯ ಉಪಕರಣಗಳು ಮತ್ತು ಫಾರ್ಮಾಸ್ಯುಟಿಕಲ್ ಉತ್ಪನ್ನಗಳ ವೆಚ್ಚವನ್ನು ಕಡಿಮೆ ಮಾಡುವ ಕಾರಣ ಭಾರತೀಯ ರೋಗಿಗಳಿಗೆ ವೆಚ್ಚ ಕಡಿಮೆಯಾಗುತ್ತದೆ. ಇಮೇಜಿಂಗ್ ಯಂತ್ರಗಳಾದ ಸಿಟಿ, ಎಂಆರ್ಐ, ಅಲ್ಟ್ರಾಸೌಂಡ್ ಮತ್ತು ಪಿಇಟಿ ಸಿಟಿ ಸ್ಕ್ಯಾನರ್ಗಳನ್ನು ಯುರೋಪ್ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತದೆ. ಉಭಯಪಕ್ಷೀಯ ಸುಂಕಗಳು ಕಡಿಮೆಯಾಗುವುದರಿಂದ ಈ ಉತ್ಪನ್ನಗಳ ಆಮದು ಅಗ್ಗವಾಗಲಿವೆ. ಅದೇ ಸಮಯದಲ್ಲಿ ಭಾರತದಿಂದ ಯುರೋಪ್ಗೆ ವೈದ್ಯಕೀಯ ಸಾಧನಗಳು ಮತ್ತು ಉಪಕರಣಗಳನ್ನು ರಫ್ತು ಮಾಡಲು ಬಾಗಿಲು ತೆರೆಯುತ್ತದೆ ಎಂದು ಉದ್ಯಮ ತಜ್ಞರಾದ ಡಾ ಹರ್ಷ್ ಮಹಾಜನ್ ಅಭಿಪ್ರಾಯಪಟ್ಟಿದ್ದಾರೆ.

ಆದರೆ ಎರಡೂ ದೇಶಗಳು ನೀಡುವ ಪ್ರಮಾಣಪತ್ರಗಳಿಗೆ ಎರಡೂ ದೇಶಗಳು ಒಪ್ಪಿಕೊಳ್ಳುವಂತಹ ವಿಚಾರವನ್ನು ಒಪ್ಪಂದದಲ್ಲಿ ಸೇರಿಸುವ ಅಗತ್ಯವಿದೆ. ಭಾರತದಲ್ಲಿ ಮತ್ತು ಯುರೋಪ್ ನಲ್ಲಿ ಪ್ರಮಾಣಪತ್ರಕ್ಕಾಗಿ ದೀರ್ಘ ಕಾಲ ಕಾಯುವ ಸಂದರ್ಭಗಳು ಬರಬಾರದು. ಹೀಗಾದಲ್ಲಿ ಭಾರತದಲ್ಲಿ ಹೈ-ಟೆಕ್ ದುಬಾರಿ ಉಪಕರಣಗಳನ್ನು ಯುರೋಪ್ ಗಿಂತ ಕಡಿಮೆ ವೆಚ್ಚದಲ್ಲಿ ಉತ್ಪಾದಿಸಲು ಸಾಧ್ಯವಾಗಬಹುದು. ಭಾರತೀಯ ಸಣ್ಣ ಮತ್ತು ಮಧ್ಯಮ ಉದ್ಯಮದ ಕ್ಷೇತ್ರಗಳ ಹಿತಾಸಕ್ತಿಯನ್ನು ಕಾಪಾಡುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.

ಭಾರತೀಯ ವೈದ್ಯಕೀಯ ಸಾಧನ ಉದ್ಯಮದ ಫೋರಂ ಸಂಯೋಜಕರಾದ ರಾಜೀವ್ ನಾಥ್ ಅವರೂ ಇಂತಹುದೇ ಕಳವಳ ವ್ಯಕ್ತಪಡಿಸಿದರು. “ಭಾರತೀಯ ವೈದ್ಯಕೀಯ ಸಾಧನ ತಯಾರಕರಿಗೆ ಸಮಾನ ಸ್ಪರ್ಧೆಗೆ ಅವಕಾಶವಿರಬೇಕು. ನ್ಯಾಯಯುತ ನಿಯಂತ್ರಣ ವ್ಯವಸ್ಥೆ ಮತ್ತು ತೃತೀಯ ದೇಶಗಳಿಂದ ಆಮದುಗಳ ವಿರುದ್ಧ ರಕ್ಷಣೆ ನೀಡಿದಲ್ಲಿ ಈ ಒಪ್ಪಂದವು ಅತ್ಯುನ್ನತ ಸಹಯೋಗಕ್ಕೆ ಕಾರಣವಾಗಬಹುದು ಮತ್ತು ದೇಶಿ ತಯಾರಿಕೆಯನ್ನೂ ಹೆಚ್ಚಿಸಬಹುದು. ಜಾಗತಿಕವಾಗಿ ಅಗ್ರ 5 ವೈದ್ಯಕೀಯ ತಂತ್ರಜ್ಞಾನ ವಲಯವಾಗುವ ಭಾರತದ ಆಶಯವೂ ಈಡೇರಬಹುದು. ಸಾಮಾನ್ಯ ಐಎಸ್ಒ ಮಾನದಂಡಗಳ ಆಧಾರದ ಮೇಲೆ ಪರಸ್ಪರ ಗುರುತಿಸುವಿಕೆ ಒಪ್ಪಂದ ಅಥವಾ MRA ಅಡಿಯಲ್ಲಿ ಗುಣಮಟ್ಟ, ಪಾರದರ್ಶಕತೆ ಮತ್ತು ರೋಗಿಗಳ ಸುರಕ್ಷತೆ ಜೊತೆಗೆ ಪರಸ್ಪರ ಬೆಳವಣಿಗೆ ಗುರಿಯಾಗಿರಬೇಕು” ಎಂದು ರಾಜೀವ್ ನಾಥ್ ಹೇಳಿದ್ದಾರೆ.

ಸಣ್ಣ ಆಸ್ಪತ್ರೆಗಳಿಗೆ ನೆರವಾಗುವುದೆ?

ಪುಣೆ ಮೂಲದ ಹೃದಯ ತಜ್ಞ ಡಾ ವಿಜಯ್ ನಟರಾಜನ್ ಹೇಳುವ ಪ್ರಕಾರ, “ಈ ಒಪ್ಪಂದದಿಂದ ಸಣ್ಣ ಆಸ್ಪತ್ರೆಗಳನ್ನು ತೆರೆಯುವ ಮತ್ತು ನಡೆಸುವ ಬಂಡವಾಳ ವೆಚ್ಚವನ್ನು ಗಣನೀಯವಾಗಿ ಕಡಿಮೆ ಮಾಡುತ್ತದೆ. ಸಣ್ಣ ವ್ಯವಸ್ಥೆಯಲ್ಲಿ ದೊಡ್ಡ ಕಾರ್ಪೋರೇಶನ್ಗಳ ವಿರುದ್ಧ ಸ್ಪರ್ಧಿಸಲು ನೆರವಾಗಲಿದೆ. ಬೌದ್ಧಿಕ ಆಸ್ತಿ ಮತ್ತು ಡಾಟಾ ಪ್ರತ್ಯೇಕತೆಯಲ್ಲಿ ಕಠಿಣ ನಿಯಂತ್ರಣಗಳನ್ನು ತಪ್ಪಿಸುವುದರಿಂದ ನಮ್ಮ ಜನೆರಿಕ್ ಔಷಧ ಮಾರುಕಟ್ಟೆಯನ್ನು ಸಂರಕ್ಷಿಸಬಹುದು. ಜೊತೆಗೆ ಸರ್ಕಾರದ ಯೋಜನೆಗಳಾದ ಜನ್ಔಷಧಿ ಮತ್ತು ಆಯುಷ್ಮಾನ್ ಭಾರತ್ಗೆ ನೆರವಾಗಬಹುದು. ಯುರೋಪ್ ಗೆ ಹೆಚ್ಚಿನ ರಫ್ತು ಕಾರಣದಿಂದ ನಮ್ಮ ಔಷಧ ಕಂಪನಿಗಳಿಗೆ ನೆರವಾಗಬಹುದು. ಆರೋಗ್ಯಸೇವೆ ಉದ್ಯಮದಲ್ಲಿ ಅಮೆರಿಕದ ಸಾರ್ವಭೌಮತೆ ತಪ್ಪಿ ಹೋಗಲಿದೆ.”

ಕೃಪೆ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News