ಅಸ್ತಿತ್ವದಲ್ಲಿರುವ ಪರ್ಯಾಯ ವಿದ್ಯುತ್ ಯೋಜನೆಗಳನ್ನು ಬಲಿಗೊಟ್ಟು ಅದಾನಿಯ ಉಷ್ಣವಿದ್ಯುತ್ ಸ್ಥಾವರಕ್ಕೆ ಒತ್ತು ನೀಡುತ್ತಿರುವ ರಾಜಸ್ಥಾನ
PC: x.com/Amarrrrz
ಹೊಸದಿಲ್ಲಿ : ರಾಜ್ಯ ವಿದ್ಯುತ್ ನಿಯಂತ್ರಣ ಆಯೋಗವು (ಆರ್‌ಇಆರ್‌ಸಿ) ಈ ಹಿಂದೆ ತಿರಸ್ಕರಿಸಿದ್ದರೂ ರಾಜಸ್ಥಾನದ ಬಿಜೆಪಿ ಸರಕಾರವು ಅದಾನಿ ಗ್ರೂಪ್‌ನ ಯೋಜನೆಗಳಿಗೆ ಹೊಂದಿಕೆಯಾಗುವಂತೆ 3,200 ಮೆ.ವ್ಯಾ. ಸಾಮರ್ಥ್ಯದ ಬೃಹತ್ ಕಲ್ಲಿದ್ದಲು ವಿದ್ಯುತ್ ಸ್ಥಾವರ ಸ್ಥಾಪನೆಗೆ ಮತ್ತೆ ಒತ್ತು ನೀಡುತ್ತಿರುವುದನ್ನು reporters-collective.in ತನ್ನ ತನಿಖಾ ವರದಿಯಲ್ಲಿ ಬಯಲಿಗೆಳೆದಿದೆ.
ಅಗ್ಗಮ್ ವಾಲಿಯಾ ಅವರ ತನಿಖಾ ವರದಿಯನ್ನು reporters-collective.in ಪ್ರಕಟಿಸಿದೆ. ಈ ಬಾರಿ ದೀರ್ಘಾವಧಿಯ ಉಷ್ಣ ವಿದ್ಯುತ್ ಸ್ಥಾವರಗಳ ಟೆಂಡರ್‌ಗೆ ಹೆಚ್ಚುವರಿ ಸಮರ್ಥನೆ ನೀಡಲು ಸರಕಾರವು ಅಸ್ತಿತ್ವದಲ್ಲಿರುವ ಕೆಲವು ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರಗಳನ್ನು ಅಕಾಲಿಕವಾಗಿ ಮುಚ್ಚುವುದನ್ನು ಪ್ರಸ್ತಾಪಿಸಿದೆ. ಈ ಪೈಕಿ ಕೆಲವು ಸ್ಥಾವರಗಳಲ್ಲಿ ಹೂಡಿಕೆ ಮಾಡುವ ಮೂಲಕ ಸರಕಾರವು ಅವುಗಳನ್ನು ನವೀಕರಿಸಿತ್ತು. ಸರಕಾರವು ಇತ್ತೀಚಿನವರೆಗೂ ಈ ಸ್ಥಾವರಗಳು ಚೆನ್ನಾಗಿ ಕಾರ್ಯ ನಿರ್ವಹಿಸುತ್ತಿವೆ ಹಾಗೂ 2030ರವರೆಗೆ ಮತ್ತು ಅದಕ್ಕೂ ಹೆಚ್ಚಿನ ಅವಧಿಗೆ ಕಾರ್ಯ ನಿರ್ವಹಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದೇ ಹೇಳಿಕೊಂಡು ಬಂದಿತ್ತು ಎಂದು ವರದಿಯು ಉಲ್ಲೇಖಿಸಿದೆ.
ನೂತನ 3,200 ಮೆ.ವ್ಯಾ. ಸಾಮರ್ಥ್ಯದ ಯೋಜನೆಯ ಅಗತ್ಯವನ್ನು ಸಮರ್ಥಿಸಿಕೊಳ್ಳಲು ರಾಜ್ಯ ಸರಕಾರವು ಅಸ್ತಿತ್ವದಲ್ಲಿರುವ ಉಷ್ಣ ವಿದ್ಯುತ್ ಸ್ಥಾವರಗಳ ಸಾಮರ್ಥ್ಯವನ್ನು ಜಂಟಿಯಾಗಿ ಹೆಚ್ಚಿಸಲು ಕೇಂದ್ರ ಸರಕಾರದ ಒಡೆತನದ ವಿದ್ಯುತ್ ಕಂಪೆನಿಗಳೊಂದಿಗೆ ತಾನು ಮಾಡಿಕೊಂಡಿರುವ ಒಪ್ಪಂದಗಳ ಬಗ್ಗೆಯೂ ಅನುಮಾನವನ್ನು ವ್ಯಕ್ತಪಡಿಸಿದೆ.
ನರೇಂದ್ರ ಮೋದಿ ಸರಕಾರವು ರಾಜ್ಯದಲ್ಲಿ ಕೈಗೆತ್ತಿಕೊಂಡಿರುವ ಪರಮಾಣು ವಿದ್ಯುತ್ ಯೋಜನೆಗಳ ಬಗ್ಗೆಯೂ ಅದು ಅನುಮಾನವನ್ನು ವ್ಯಕ್ತಪಡಿಸಿದೆ. ಕೇಂದ್ರ ಸರಕಾರವು ಸ್ಥಾಪಿಸುತ್ತಿರುವ ಪರಮಾಣು ವಿದ್ಯುತ್ ಸ್ಥಾವರವು ಸಕಾಲದಲ್ಲಿ ಕಾರ್ಯಾರಂಭಿಸುವ ಸಾಧ್ಯತೆಯಿಲ್ಲ ಎಂದು ಅದು ಆರ್‌ಇಆರ್‌ಸಿಗೆ ಪತ್ರ ಬರೆದಿದೆ. ರಾಜ್ಯವು ನವೀಕರಿಸಬಹುದಾದ ಇಂಧನ ಮೂಲಗಳನ್ನು ಅವಲಂಬಿಸಿರಲು ಸಾಧ್ಯವಿಲ್ಲ ಮತ್ತು ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸಲು ಹೊಸ ಕಲ್ಲಿದ್ದಲು ವಿದ್ಯುತ್ ಸ್ಥಾವರದ ಅಗತ್ಯವಿದೆ ಎಂದೂ ಹೇಳಿಕೊಂಡಿದೆ.
ಇದರ ಪರಿಣಾಮವಾಗಿ 2035ರ ವೇಳೆಗೆ ರಾಜ್ಯವು ವಿದ್ಯುತ್ ಕೊರತೆಯನ್ನು ಎದುರಿಸಲಿದೆ ಮತ್ತು ಹೊಸ ಕಲ್ಲಿದ್ದಲು ವಿದ್ಯುತ್ ಸ್ಥಾವರ ನಿರ್ಮಾಣದ ಮೂಲಕ ಮಾತ್ರ ಈ ಕೊರತೆಯನ್ನು ನೀಗಿಸಬಹುದು ಎಂದು ಸರಕಾರವು ವಾದಿಸಿದೆ. ಹೊಸ ಸ್ಥಾವರಕ್ಕಾಗಿ ರಾಜಸ್ಥಾನ ಸರಕಾರವು ನಿಗದಿಗೊಳಿಸಿರುವ ನಿಬಂಧನೆಗಳನ್ನು ಕವಾಯಿಯಲ್ಲಿ ಈಗಾಗಲೇ ಇರುವ ಅದಾನಿ ಪವರ್‌ನ 1,320 ಮೆ.ವ್ಯಾ. ವಿದ್ಯುತ್ ಸ್ಥಾವರದ ಸಾಮರ್ಥ್ಯವನ್ನು ನಿಖರವಾಗಿ 3,200 ಮೆ.ವ್ಯಾ.ಗಳಿಗೆ ವಿಸ್ತರಿಸುವ ಯೋಜನೆಗೆ ಹೊಂದಿಕೆಯಾಗುವಂತೆ ರೂಪಿಸಲಾಗಿದೆ.
ಆರ್‌ಇಆರ್‌ಸಿ ಮೊದಲ ಬಾರಿಗೆ ನ.18, 2025ರಂದು 3,200 ಮೆ.ವ್ಯಾ. ಸಾಮರ್ಥ್ಯದ ಕಲ್ಲಿದ್ದಲು ಆಧಾರಿತ ವಿದ್ಯುತ್ ಸ್ಥಾವರದ ಪ್ರಸ್ತಾವವನ್ನು ಕಟುವಾಗಿ ಟೀಕಿಸಿ ತಿರಸ್ಕರಿಸಿತ್ತು. ಸರಕಾರಿ ಸ್ವಾಮ್ಯದ ರಾಜಸ್ಥಾನ ಊರ್ಜಾ ವಿಕಾಸ ಮತ್ತು ಐಟಿ ಸರ್ವಿಸಸ್ ಲಿ. (ಆರ್‌ಯುವಿಐಟಿಎಲ್) ಈ ಪ್ರಸ್ತಾವವನ್ನು ಸಲ್ಲಿಸಿತ್ತು.
ಗಮನಾರ್ಹವಾಗಿ ಆರ್‌ಯುವಿಐಟಿಎಲ್ ಆರ್‌ಇಆರ್‌ಸಿಯಿಂದ ಕಡ್ಡಾಯ ಅನುಮತಿಯನ್ನು ಪಡೆದುಕೊಳ್ಳದೇ ಅ.1.2025ರಂದು ತರಾತುರಿಯಲ್ಲಿ 3,200 ಮೆ.ವ್ಯಾ. ಸಾಮರ್ಥ್ಯದ ಉಷ್ಣ ವಿದ್ಯುತ್ ಸ್ಥಾವರಕ್ಕಾಗಿ ಟೆಂಡರ್ ಪ್ರಕಟಿಸಿತ್ತು.