×
Ad

"ಸುಭಾಷ್ ಚಂದ್ರ ಬೋಸ್‌ರಿಂದ ಪವಾರ್‌ ವರೆಗೆ" | ವಿಮಾನ ದುರಂತದಲ್ಲಿ ಪ್ರಾಣ ಕಳೆದುಕೊಂಡ ಭಾರತೀಯ ಪ್ರಮುಖರು ಯಾರ್ಯಾರು? ಇಲ್ಲಿದೆ ವಿವರ...

Update: 2026-01-28 14:06 IST

 ವಿಜಯ್ ರೂಪಾನಿ‌ / ವೈ ಎಸ್ ರಾಜಶೇಖರ ರೆಡ್ಡಿ / ಮಾಧವರಾವ್ ಸಿಂಧಿಯಾ (Photo: PTI, thehindu.com)

ಅಜಿತ್ ಪವಾರ್ ಅವರು ವಿಮಾನ ಅಪಘಾತಗಳಲ್ಲಿ ಸಾವನ್ನಪ್ಪಿದ ಹಲವಾರು ಉನ್ನತ ಭಾರತೀಯ ರಾಜಕಾರಣಿಗಳು ಮತ್ತು ಪ್ರಮುಖರ ಸಾಲಿಗೆ ಸೇರಿದ್ದಾರೆ. ಅಂತಹ ವೈಮಾನಿಕ ದುರಂತದಲ್ಲಿ ಸಾವನ್ನಪ್ಪಿದವರ ಪಟ್ಟಿ ಇಲ್ಲಿದೆ.

ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್‌ ಪವಾರ್‌ ಅವರು ಪ್ರಯಾಣಿಸುತ್ತಿದ್ದ ವಿಮಾನವು ಬುಧವಾರ ಬಾರಾಮತಿಯಲ್ಲಿ ಲ್ಯಾಂಡಿಂಗ್ ವೇಳೆ ಪತನಗೊಂಡಿದ್ದು, ಘಡನೆಯಲ್ಲಿ ಅಜಿತ್‌ ಪವಾರ್‌ ಸಹಿತ ಐವರು ಮೃತಪಟ್ಟಿದ್ದಾರೆ. ಜಿಲ್ಲಾ ಪಂಚಾಯತ್‌ ಚುನಾವಣೆ ಹಿನ್ನೆಲೆ, ಪ್ರಚಾರಕ್ಕಾಗಿ ತೆರಳಿದ್ದ ವೇಳೆ ಈ ಅವಘಡ ಸಂಭವಿಸಿದೆ.

ಅಜಿತ್ ಪವಾರ್ ಅವರು ವಿಮಾನಾಪಘಾತಗಳಲ್ಲಿ ಸಾವನ್ನಪ್ಪಿದ ಹಲವಾರು ಉನ್ನತ ಭಾರತೀಯ ರಾಜಕಾರಣಿಗಳು ಮತ್ತು ಪ್ರಮುಖರ ಸಾಲಿಗೆ ಸೇರಿದ್ದಾರೆ. ಅಂತಹ ವೈಮಾನಿಕ ದುರಂತದಲ್ಲಿ ಸಾವನ್ನಪ್ಪಿದವರ ಪಟ್ಟಿ ಇಲ್ಲಿದೆ

ವೈಮಾನಿಕ ಅಪಘಾತದಲ್ಲಿ ಸಾವನ್ನಪ್ಪಿದ್ದ ರಾಜಕಾರಣಿಗಳು: 

► ವಿಜಯ್ ರೂಪಾನಿ (2025)

(Photo: PTI)

ಗುಜರಾತ್‌ನ ಮಾಜಿ ಮುಖ್ಯಮಂತ್ರಿ ವಿಜಯ್ ರೂಪಾನಿ ಕಳೆದ ವರ್ಷ ಜೂನ್ 12ರಂದು ಲಂಡನ್‌ಗೆ ತೆರಳುತ್ತಿದ್ದಾಗ ಅಹಮದಾಬಾದ್‌ನಲ್ಲಿ ನಡೆದ ವಿಮಾನ ಅಪಘಾತದಲ್ಲಿ ನಿಧನರಾದರು. ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಪತನಗೊಂಡ ವಿಮಾನದಲ್ಲಿ ರೂಪಾನಿ ಸಮೇತ 241 ಮಂದಿ ಸಾವನ್ನಪ್ಪಿದ್ದರು.

ಸಿಡಿಎಸ್ ಜನರಲ್ ಬಿಪಿನ್ ರಾವತ್ (2021)

ಭಾರತದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು 2021 ಡಿಸೆಂಬರ್ 8ರಂದು ತಮಿಳುನಾಡಿನ ಕೂನೂರಿನಲ್ಲಿ ಹವಾಮಾನ ವೈಪರೀತ್ಯದಿಂದಾಗಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು. ಅವರ ಪತ್ನಿ ಮತ್ತು ಇತರ 11 ಮಂದಿ ಈ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಐಎಎಫ್ ತನಿಖೆಯ ಸಂದರ್ಭದಲ್ಲಿ ಮೋಡದ ಹೊದಿಕೆಗೆ ಸಂಬಂಧಿಸಿ ಪ್ರದೇಶವನ್ನು ಗುರುತಿಸಲು ಸಾಧ್ಯವಾಗದ ಮಾನವ ದೋಷದಿಂದ ಅಪಘಾತ ಸಂಬಂಧಿಸಿದೆ ಎಂದು ಹೇಳಲಾಗಿದೆ.

► ದೋರ್ಜಿ ಖಂಡು (2011)

ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ದೋರ್ಜಿ ಖಂಡು ಮತ್ತು ಇತರ ನಾಲ್ವರು 2011ರ ಎಪ್ರಿಲ್ 30ರಂದು ತವಾಂಗ್‌ನಿಂದ ಇಟಾ ನಗರಕ್ಕೆ ಸಾಗುತ್ತಿದ್ದ ವೇಳೆ ಹೆಲಿಕಾಪ್ಟರ್ ಅಪಘಾತಕ್ಕೀಡಾಗಿತ್ತು. ರಾಜ್ಯದ ಪಶ್ಚಿಮ ಕಾಮೆಂಗ್ ಜಿಲ್ಲೆಯಲ್ಲಿ ನಡೆದ ಅಪಘಾತದಲ್ಲಿ ದೋರ್ಜಿ ಖಂಡು ಸಾವನ್ನಪ್ಪಿದ್ದರು.

► ವೈ ಎಸ್ ರಾಜಶೇಖರ ರೆಡ್ಡಿ (2009)

(Photo: PTI)

ವೈಎಸ್‌ಆರ್ ಎಂದೇ ಖ್ಯಾತಿಗಳಿಸಿದ್ದ ಆಂಧ್ರಪ್ರದೇಶದ ಆಗಿನ ಮುಖ್ಯಮಂತ್ರಿ ವೈ ಎಸ್ ರಾಜಶೇಖರ ರೆಡ್ಡಿ 2009 ಸೆಪ್ಟೆಂಬರ್ 2ರಂದು ನಿಧನರಾಗಿದ್ದರು. ಅವರು ಪ್ರಯಾಣಿಸುತ್ತಿದ್ದ ಬೆಲ್ 430 ಹೆಲಿಕಾಪ್ಟರ್ ಹವಾಮಾನ ವೈಪರೀತ್ಯದಿಂದಾಗಿ ದಟ್ಟ ನಲ್ಲಮಲ ಕಾಡಿನಲ್ಲಿ ಅಪಘಾತಕ್ಕೀಡಾದ ಕಾರಣ ಸಾವನ್ನಪ್ಪಿದ್ದರು.

► ಒಪಿ ಜಿಂದಾಲ್ ಮತ್ತು ಸುರೇಂದರ್ ಸಿಂಗ್ (2005)

ಕೈಗಾರಿಕಾ ಮತ್ತು ಹರಿಯಾಣ ಸಚಿವ ಓಂ ಪ್ರಕಾಶ್ ಜಿಂದಾಲ್ 2005ರಲ್ಲಿ ಕೃಚಿ ಸಚಿವ ಸುರೇಂದರ್ ಸಿಂಗ್ ಅವರೊಂದಿಗೆ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದರು. ದಿಲ್ಲಿಯಿಂದ ಚಂಡೀಗಢಕ್ಕೆ ತೆರಳುತ್ತಿದ್ದಾಗ ಅವರ ಹೆಲಿಕಾಪ್ಟರ್ ಉತ್ತರ ಪ್ರದೇಶದ ಸಹರಾನ್‌ಪುರದಲ್ಲಿ ಅಪಘಾತಕ್ಕೀಡಾಗಿತ್ತು.

► ಸೌಂದರ್ಯ (2004)

(Photo: news18.com)

ದಕ್ಷಿಣ ಭಾರತದ ಪ್ರಸಿದ್ಧ ನಟಿ ಸೌಂದರ್ಯ (ಕೆಎಸ್ ಸೌಮ್ಯ) 2004ರ ಎಪ್ರಿಲ್ 17ರಂದು ರಾಜಕೀಯ ಪ್ರಚಾರಕ್ಕೆಂದು ಬೆಂಗಳೂರಿನಿಂದ ಕರೀಂನಗರಕ್ಕೆ ತನ್ನ ಸಹೋದರನೊಂದಿಗೆ ಪ್ರಯಾಣಿಸುತ್ತಿದ್ದಾಗ ಅಪಘಾತ ಸಂಭವಿಸಿತ್ತು.

► ಸಿಪ್ರಿಯನ್ ಸಂಗ್ಮಾ (2004)

ಮೇಘಾಲಯದ ಗ್ರಾಮೀಣಾಭಿವೃದ್ಧಿ ಸಚಿವ ಸಿಪ್ರಿಯನ್ ಸಂಗ್ಮಾ 2004ರ ಸೆಪ್ಟೆಂಬರ್ 22ರಂದು ಗುವಾಹಟಿಯಿಂದ ಶಿಲ್ಲಾಂಗ್‌ಗೆ ಪವನ್ ಹನ್ಸ್ ಹೆಲಿಕಾಪ್ಟರ್‌ನಲ್ಲಿ ಹೋಗುತ್ತಿದ್ದಾಗ ಅಪಘಾತದಲ್ಲಿ ಸಾವನ್ನಪ್ಪಿದ್ದರು. ಸಂಗ್ಮಾ ಜೊತೆಗೆ ಇದ್ದ ಇತರ ಒಂಭತ್ತು ಮಂದಿ ಮೃತಪಟ್ಟಿದ್ದರು.

► ಜಿಎಂಸಿ ಬಾಲಯೋಗಿ (2002)

ಲೋಕಸಭಾ ಸ್ಪೀಕರ್ ಮತ್ತು ತೆಲುಗು ದೇಶಂ ಪಕ್ಷದ ನಾಯಕ ಜಿಎಂಸಿ ಬಾಲಯೋಗಿ 2003 ಮಾರ್ಚ್ 3ರಂದು ಆಂಧ್ರಪ್ರದೇಶದ ಕೃಷ್ಣ ಜಿಲ್ಲೆಯಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅವರ ಹೆಲಿಕಾಪ್ಟರ್ ಕೈಕಲೂರು ಬಳಿ ಕೊಳಕ್ಕೆ ಅಪ್ಪಳಿಸಿ ದುರ್ಘಟಣೆ ಸಂಭವಿಸಿತ್ತು.

ಮಾಧವರಾವ್ ಸಿಂಧಿಯಾ (2001) 



(Photo: PTI)

 

ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ನಾಗರಿಕ ವಿಮಾನಯಾಣ ಸಚಿವ ಮಾಧವರಾವ್ ಸಿಂಧಿಯಾ 2001ರ ಸೆಪ್ಟೆಂಬರ್ 30ರಂದು ಕಾನ್ಪುರದಲ್ಲಿ ರಾಜಕೀಯ ರ್‍ಯಾಲಿಯೊಂದರಲ್ಲಿ ಭಾಗವಹಿಸಲು ಹೋಗುವಾಗ ಕೆಟ್ಟ ಹವಾಮಾನದಿಂದ ಮೈನ್‌ಪುರಿ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಸಾವನ್ನಪ್ಪಿದ್ದರು.

► ಎನ್‌ವಿ ಎನ್‌ ಸೋಮು (1997)

ತಮಿಳುನಾಡಿನ ರಾಜಕಾರಣಿ ಮತ್ತು ಡಿಎಂಕೆ ಸಂಸದ ಮತ್ತು ರಕ್ಷಣಾ ರಾಜ್ಯ ಸಚಿವರಾಗಿದ್ದರು. ಅವರು 1997 ನವೆಂಬರ್ 14ರಂದು ಅರುಣಾಚಲ ಪ್ರದೇಶದಲ್ಲಿ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನರಾದರು.

► ಸಂಜಯ್ ಗಾಂಧಿ (1980)

ಕಾಂಗ್ರೆಸ್ ನಾಯಕ ಮತ್ತು ಆಗಿನ ಪ್ರಧಾನಿ ಇಂದಿರಾ ಗಾಂಧಿಯವರ ಪುತ್ರ ಸಂಜಯ್ ಗಾಂಧಿ 1980ರ ಜೂನ್ 23ರಂದು ಸಫ್ದರ್ಜಂಗ್ ವಿಮಾನ ನಿಲ್ದಾಣದ ಬಳಿ ದಿಲ್ಲಿ ಫ್ಲೈಯಿಂಗ್ ಕ್ಲಬ್ ವಿಮಾನದಲ್ಲಿ ನಡೆದ ವಿಮಾನ ದುರಂತದಲ್ಲಿ ಮೃತಪಟ್ಟಿದ್ದಾರೆ.

► ಸುರೇಂದ್ರ ಮೋಹನ್ ಕುಮಾರಮಂಗಲಂ (1973)

ಸುರೇಂದ್ರ ಮೋಹನ್ ಕುಮಾರಮಂಗಲಂ ಕಮ್ಯುನಿಸ್ಟ್ ಸಿದ್ಧಾಂತ ಮತ್ತು ಕಲ್ಲಿದ್ದಲು ಉದ್ಯಮದ ರಾಷ್ಟ್ರೀಕರಣದಲ್ಲಿ ಪ್ರಮುಖ ಪಾತ್ರವಹಿಸಿದವರು. 1973ರಲ್ಲಿ ಹೊಸದಿಲ್ಲಿಯಲ್ಲಿ ಇಂಡಿಯನ್‌ ಏರ್‌ಲೈನ್ಸ್ ವಿಮಾನ 440 ಅಪಘಾತದ ಸಂಭವಿಸಿದಾಗ ಸಾವನ್ನಪ್ಪಿದರು.

► ಸುಭಾಷ್ ಚಂದ್ರ ಬೋಸ್ (1945)

ಎರಡನೇ ಮಹಾಯುದ್ಧವು ಜಪಾನ್ ಶರಣಾಗತಿಯೊಂದಿಗೆ ಕೊನೆಗೊಂಡ ಕೆಲವು ದಿನಗಳ ನಂತರ ಆಗ್ನೇಯ ಏಷ್ಯಾದಿಂದ ಪಲಾಯನ ಮಾಡುವಾಗ ವಿಮಾನ ಅಪಘಾತದ ಪರಿಣಾಮವಾಗಿ 1945 ಆಗಸ್ಟ್ 18ರಂದು ಸುಭಾಚ್ ಚಂದ್ರ ಬೋಸ್ ತೈವಾನ್‌ನ ಜಪಾನೀಯ ಆಸ್ಪತ್ರೆಯಲ್ಲಿ ಸುಟ್ಟ ಗಾಯಗಳಿಂದ ನಿಧನರಾದರು ಎಂದು ವರದಿಯಾಗಿದೆ.

ವಿಮಾನ ಅಪಘಾತದಲ್ಲಿ ಅದೃಷ್ಟವಶಾತ್ ಬದುಕುಳಿದವರು

 - ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ 1977 ನವೆಂಬರ್‌ನಲ್ಲಿ ವಿಶೇಷ ವಿಮಾನ ಅಪಘಾತವಾದಾಗ ಅದೃಷ್ಟವಶಾತ್ ಬದುಕುಳಿದಿದ್ದರು.

 - ಕಾಂಗ್ರೆಸ್ ನಾಯಕರಾದ ಅಹಮದ್ ಪಟೇಲ್ ಮತ್ತು ಕೇಂದ್ರ ಸಚಿವರಾಗಿದ್ದ ಪೃಥ್ವಿರಾಜ್ ಚವಣ್ ಮತ್ತು ಕುಮಾರಿ ಸೆಲ್ಜಾ 2004ರಲ್ಲಿ ಗುಜರಾತ್‌ನಲ್ಲಿ ವೈಮಾನಿಕ ಅಪಘಾತದಿಂದ ಪಾರಾಗಿದ್ದರು.

- ಹತ್ತು ವರ್ಷಗಳ ಹಿಂದೆ ಆಗಿನ ಪಂಜಾಬ್ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಮತ್ತು ಸಚಿವ ಪ್ರತಾಪ್ ಸಿಂಗ್ ಬಜ್ವಾ ಹೆಲಿಕಾಪ್ಟರ್ ಅಪಘಾತದಿಂದ ಪಾರಾಗಿದ್ದರು.

- ಪಂಜಾಬ್‌ನ ಮಾಜಿ ಉಪ ಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಅವರ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದಾಗ ಬದುಕುಳಿದಿದ್ದರು.

- ಬಿಜೆಪಿ ಅಧ್ಯಕ್ಷರಾಗಿದ್ದಾಗ ರಾಜ್‌ನಾಥ್ ಸಿಂಗ್ ಮತ್ತು ಆಗಿನ ಬಿಜೆಪಿ ಉಪಾಧ್ಯಕ್ಷ ಮುಕ್ತಾರ್ ಅಬ್ಬಾಸ್ ನಖ್ವಿ ಅವರೂ ಉತ್ತರ ಪ್ರದೇಶದ ರಾಂಪುರಕ್ಕೆ ಪ್ರಯಾಣ ಮಾಡುತ್ತಿದ್ದಾಗ ವೈಮಾನಿಕ ಅಪಘಾತ ತಪ್ಪಿಸಿಕೊಂಡಿದ್ದರು.

-2001ರಲ್ಲಿ ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಅವರ ಹೆಲಿಕಾಪ್ಟರ್ ಚುರು ಜಿಲ್ಲೆಯಲ್ಲಿ ಮರಕ್ಕೆ ಢಿಕ್ಕಿ ಹೊಡೆದರೂ ಪಾರಾಗಿದ್ದರು.

ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನಾವಿಸ್ 2-3 ಬಾರಿ ವೈಮಾನಿಕ ದುರಂತದಿಂದ ಪಾರಾಗಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News