ಕಾರ್ಮಿಕರ ಗೃಹ ಭಾಗ್ಯ ಯೋಜನೆಯಡಿ 442.54 ಕೋ.ರೂ. ಲೂಟಿ: ಆರೋಪ
► ಬಿಜೆಪಿ ಅಧಿಕಾರಾವಧಿಯಲ್ಲಿ ಕಾರ್ಮಿಕರ ಹೆಸರಿನಲ್ಲಿ ಗೋಲ್ಮಾಲ್ ► ಆರ್ ಟಿಐನಿಂದ ಬಹಿರಂಗ
ಕಲಬುರಗಿ: ರಾಜ್ಯದಲ್ಲಿ ಬಿಜೆಪಿ ಅಧಿಕಾರದಲ್ಲಿದ್ದ 2022-23ನೇ ಸಾಲಿನಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ಜಾರಿಗೊಳಿಸಿರುವ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಫಲಾನುಭವಿಗಳ ಪಟ್ಟಿಯನ್ನೇ ಪಡೆಯದೆ ಕೊಳಗೇರಿ ಅಭಿವೃದ್ಧಿ ಮಂಡಳಿಗೆ ಎರಡು ಕಂತುಗಳಲ್ಲಿ 433.80 ಕೋಟಿ ರೂ. ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ 8.74 ಕೋಟಿ ಬಿಡುಗಡೆ ಮಾಡುವ ಮೂಲಕ ಒಟ್ಟು 442.54 ಕೋಟಿ ಹಣ ಲೂಟಿ ಮಾಡಲಾಗಿದೆ ಎನ್ನುವ ಆರೋಪ ಕೇಳಿಬಂದಿದೆ.
2019ರ ನವೆಂಬರ್ನಲ್ಲಿ ಮಂಡಳಿಯ ಕಾರ್ಮಿಕರ ಗೃಹ ಭಾಗ್ಯ ಯೋಜನೆಯ ಅನುಷ್ಠಾನಕ್ಕಾಗಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 5,128 ಫಲಾನುಭವಿಗಳ ಪಟ್ಟಿಯನ್ನು ಪಡೆದುಕೊಂಡು, ಮಂಡಳಿಗೆ 76 ಕೋಟಿ ರೂ. ಬಿಡುಗಡೆ ಮಾಡಲಾಗಿತ್ತು. ಅದರಂತೆಯೇ ಈ ಯೋಜನೆಯನ್ನು ಇತರ ಜಿಲ್ಲೆಗಳಿಗೆ ವಿಸ್ತರಿಸುವಂತೆ ಕೋರಿ ಒಟ್ಟಾರೆ 433.80 ಕೋಟಿ ರೂ. ಪ್ರಸ್ತಾವಿಸಲಾಗಿತ್ತು. ಮನವಿ ಮಾಡಿದ ಕೇವಲ ಎರಡು ತಿಂಗಳಲ್ಲೇ (2022ರ ಆಗಸ್ಟ್ ಹಾಗೂ ಸೆಪ್ಟಂಬರ್ನಲ್ಲಿ) ಒಟ್ಟು 21,690 ಫಲಾನುಭವಿಗಳ ಯಾವುದೇ ಅರ್ಹರ ಪಟ್ಟಿಯನ್ನು ಪಡೆಯದೇ ಪ್ರತೀ ಫಲಾನುಭವಿಗೆ 2 ಲಕ್ಷ ದರದಂತೆ 2 ಕಂತುಗಳಾಗಿ ಸುಮಾರು 433.80 ಕೋಟಿ ರೂ. ಬಿಡುಗಡೆ ಮಾಡಿರುವುದು ಕಾರ್ಮಿಕರ ಕಲ್ಯಾಣ ಕಾರ್ಯನಿರ್ವಹಣಾ ಲೆಕ್ಕಪರಿಶೋಧನೆಯಿಂದ ಗೊತ್ತಾಗಿದೆ.
ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಉತ್ತರಕನ್ನಡದ ಯಲ್ಲಾಪುರ-ಮುಂಡಗೋಡ ಮತಕ್ಷೇತ್ರದ ಶಾಸಕ ಶಿವರಾಮ ಹೆಬ್ಬಾರ್ ಅವರು ಕಾರ್ಮಿಕ ಸಚಿವರಾಗಿದ್ದ ವೇಳೆಯೇ ಈ ಬೃಹತ್ ಮಟ್ಟದ ಹಣ ವರ್ಗಾವಣೆಯಾಗಿದೆ.
ಕಾರ್ಮಿಕ ಸಚಿವರ ಸ್ವಂತ ಜಿಲ್ಲೆಗೆ 48 ಕೋಟಿ ರೂ. ಬಿಡುಗಡೆ: 2022ರಲ್ಲಿ ಕಾರ್ಮಿಕ ಸಚಿವರಾಗಿದ್ದ ಶಿವರಾಮ ಹೆಬ್ಬಾರ್ ಅವರ ಸ್ವಂತ ಜಿಲ್ಲೆಯ ಆಡಳಿತ ಕಚೇರಿಯಾಗಿರುವ ಕಾರವಾರಕ್ಕೆ 2,423 ಅರ್ಹ ಕಟ್ಟಡ ಕಾರ್ಮಿಕರ ಮನೆ ನಿರ್ಮಾಣಕ್ಕೆಂದು ಕೊಳಗೇರಿ ಅಭಿವೃದ್ಧಿ ಮಂಡಳಿಗೆ ರೂ.48.46 ಕೋಟಿ ಅನುದಾನವನ್ನು ಬಿಡುಗಡೆಗೊಳಿಸಲಾಗಿದೆ. ಇದು ಒಟ್ಟಾರೆ ಅನುದಾನದಲ್ಲಿ ಈ ಜಿಲ್ಲೆಗೆ ಹೆಚ್ಚಿನ ಹಣ ಬಿಡುಗಡೆ ಮಾಡಲಾಗಿದೆ. ಇನ್ನು ಮಂಡ್ಯದ 98 ಫಲಾನುಭವಿಗಳ ಮನೆ ನಿರ್ಮಾಣಕ್ಕೆಂದು 1.96 ಕೋಟಿ ರೂ. ಕಡಿಮೆ ಹಣ ಬಿಡುಗಡೆಗೊಳಿಸಲಾಗಿದೆ ಎಂದು ಆರ್ಟಿಐ ಮಾಹಿತಿಯಿಂದ ಹೊರಬಿದ್ದಿದೆ.
ಗೆಝೆಟ್ ತಿದ್ದುಪಡಿಗೊಳಿಸಿ ಒಂದೇ ತಿಂಗಳಲ್ಲೇ ಅನುದಾನ ಬಿಡುಗಡೆ: 2017ರ ವರ್ಷದ ಸರಕಾರದ ಗೆಝೆಟ್ ಅನ್ನು 2022ರ ಆಗಸ್ಟ್ ತಿಂಗಳಲ್ಲಿ ತಿದ್ದುಪಡಿ ಮಾಡಿಕೊಂಡ ಕೇವಲ ಒಂದೇ ತಿಂಗಳಲ್ಲೇ ಅಂದರೆ ಅದೇ ವರ್ಷದ ಸೆಪ್ಟಂಬರ್ನಲ್ಲಿ ಕೋಟ್ಯಂತರ ಹಣ ವರ್ಗಾವಣೆ ಮಾಡಲಾಗಿದೆ. 2017ರ ಸರಕಾರದ ಗೆಝೆಟ್ನಲ್ಲಿ ನಿಯಮ: 42 ಪ್ರಕಾರ, ಕಾರ್ಮಿಕರ ಗೃಹ ಭಾಗ್ಯ ಯೋಜನೆ ಪಡೆಯಬೇಕಾದರೆ ಕನಿಷ್ಠ 45 ವರ್ಷ ವಯಸ್ಸಿರಬೇಕು, 15 ವರ್ಷ ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡಿರಬೇಕು ಹಾಗೂ ಸರಕಾರದ ಯಾವುದೇ ವಸತಿ ಯೋಜನೆಯೊಂದಕ್ಕೆ ಆಯ್ಕೆಯಾಗಿರಬೇಕು ಎಂಬ ನಿಯಮಗಳಿದ್ದವು. ಆದರೆ ಆಗಿನ ಬಿಜೆಪಿ ಸರಕಾರ 2022ರ ಆಗಸ್ಟ್ ನಲ್ಲಿ ಗೆಝೆಟ್ ಅನ್ನು ತಿದ್ದುಪಡಿ ಮಾಡಿ, ಕನಿಷ್ಠ ವಯಸ್ಸು 18 ರಿಂದ 50ಕ್ಕೆ ನಿಗದಿಪಡಿಸಿ, ಅನುಭವದ ಅರ್ಹತೆ ತೆಗೆದು ಹಾಕಿತು. ಅಲ್ಲದೆ ಕಾರ್ಮಿಕ ಕುಟುಂಬದ ಗಂಡ, ಹೆಂಡತಿ ಅಥವಾ ಅವರಿಗೆ ಸಂಬಂಧಿ ಯಾರೇ ಇದ್ದರೂ ಅವರು ಗೃಹ ನಿರ್ಮಾಣಕ್ಕೆ ಮಂಜೂರಾತಿ ಕೋರಿದರೆ ಪರಿಗಣಿಸಬೇಕು ಎನ್ನುವಂತಹ ನಿಯಮಗಳು ಜಾರಿಮಾಡಿತು. ಇದರಿಂದ ಹಣ ವರ್ಗಾವಣೆಗೆ ಸುಗಮವಾಯಿತು.
ಕಾರ್ಮಿಕರ ಗೃಹ ಭಾಗ್ಯ ಯೋಜನೆಗೆ ಸಂಬಂಧಿಸಿದಂತೆ ಜಿಲ್ಲಾವಾರು ಬಿಡುಗಡೆಯಾದ ಅನುದಾನದ ವಿವರ, ಅನರ್ಹ ಅಥವಾ ಫಲಾನುಭವಿಗಳ ಪಟ್ಟಿ, ಆಯ್ಕೆಯಾದ ಅರ್ಹರ ದಾಖಲೆ ಪತ್ರಗಳು ಹೀಗೆ ಇತರ ಅಂಕಿಸಂಖ್ಯೆಗಳ ಬಗ್ಗೆ ಮಾಹಿತಿ ನೀಡುವಂತೆ ಆರ್ಟಿಐ ಕಾರ್ಯಕರ್ತ ಹಣಮಂತರಾಯ ಪೂಜಾರಿ ಎಂಬವರು ಕಾರ್ಮಿಕರ ಕಲ್ಯಾಣ ಮಂಡಳಿಗೆ ಪ್ರಶ್ನಿಸಿದ್ದಾರೆ. ಇದಕ್ಕೆ ಉತ್ತರಿಸಿದ ಮಂಡಳಿಯು, ಕೇವಲ ಜಿಲ್ಲಾವಾರು ಬಿಡುಗಡೆಯಾದ ಅನುದಾನದ ಬಗ್ಗೆಯಷ್ಟೇ 27 ಪುಟದ ಮಾಹಿತಿ ನೀಡಿದ್ದು, ಉಳಿದಂತೆ ಫಲಾನುಭವಿಗಳ ಪಟ್ಟಿ, ಅರ್ಹ, ಅನರ್ಹರ ಮತ್ತು ಇತರ ದಾಖಲೆಗಳ ಮಾಹಿತಿ ಇರುವುದಿಲ್ಲ ಎಂದು ಸ್ಪಷ್ಟನೆ ಕೊಟ್ಟು ಕೋಟ್ಯಂತರ ಅನುದಾನದ ವರ್ಗಾವಣೆಯ ಲೂಟಿಯಲ್ಲಿ ಸಿಲುಕಿಕೊಂಡಿದೆ.
ಈ ಕುರಿತು ಅರ್ಹ ಫಲಾನುಭವಿಗಳ ಪಟ್ಟಿ ನೀಡುವಂತೆ ಕಲಬುರಗಿ ಜಿಲ್ಲೆ ಸೇರಿದಂತೆ ರಾಜ್ಯದ ಇತರೆಡೆ ಕೇಳಿದರೂ ಸಂಬಂಧಿಸಿದ ದಾಖಲೆ ಪತ್ರಗಳು ಒದಗಿಸಿಲ್ಲದಿರುವುದು ದಾಖಲೆಗಳಿಂದ ತಿಳಿದುಬಂದಿದೆ.
-------------------------
ಕಟ್ಟಡ ಕಾರ್ಮಿಕ ಹೆಸರಲ್ಲಿ ನಡೆದ ಈ ಬಹುಕೋಟಿ ಹಗರಣ ಸರಕಾರ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿಂದ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು. ಲೂಟಿಯಾಗಿರುವ ಹಣ ವಾಪಸ್
ಮಂಡಳಿ ಖಾತೆಗೆ ಜಮೆ ಮಾಡಬೇಕು. ನಿರ್ಲಕ್ಷ್ಯ ವಹಿಸಿದರೆ ಹೈಕೋರ್ಟ್ ಮೊರೆ ಹೋಗಲಾಗುವುದು.
ಹಣಮಂತರಾಯ ಬಿ. ಪೂಜಾರಿ,
ಮಾಹಿತಿ ಹಕ್ಕು ಕಾರ್ಯಕರ್ತ, ಆಳಂದ
------------------------
ಮಾಜಿ ಸಿಎಂ ಬೊಮ್ಮಾಯಿ ಜಿಲ್ಲೆಯಲ್ಲಿ 8.74 ಕೋಟಿ ರೂ. ಗುಳುಂ!
2022ರಲ್ಲಿ ಸಿಎಂ ಆಗಿದ್ದ ಬಸವರಾಜ್ ಬೊಮ್ಮಾಯಿ ಅವರ ತವರು ಜಿಲ್ಲೆ ಹಾವೇರಿಗೆ ಇದೇ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಫಲಾನುಭವಿಗಳ ವಿವರಗಳನ್ನು ಪಡೆಯದೆ ಸ್ಲಂ ಬೋರ್ಡ್ ಜೊತೆಗೆ ರಾಜೀವ್ ಗಾಂಧಿ ಹೌಸಿಂಗ್ ಕಾರ್ಪೊರೇಷನ್ ಲಿಮಿಟೆಡ್ಗೆ ಸೆಪ್ಟೆಂಬರ್ ತಿಂಗಳಲ್ಲೇ 8.74 ಕೋಟಿ ರೂ. ಬಿಡುಗಡೆ ಮಾಡಿದೆ. ಹಾವೇರಿಯ ಶಿಗ್ಗಾಂವ, ಬಂಕಾಪುರ ಹಾಗೂ ಸವಣೂರ ತಾಲೂಕುಗಳಲ್ಲಿ ರಾಜೀವ ಗಾಂಧಿ ವಸತಿ ನಿಗಮದಲ್ಲಿ 437 ಮನೆ ನಿರ್ಮಾಣಕ್ಕೆ ಬಿಡುಗಡೆಯಾದ ಅನುದಾನವೂ ಫಲಾನುಭವಿಗಳಿಗೆ ತಲುಪಿಲ್ಲ ಎಂದು ಸಿಎಜಿ ವರದಿ ಬಹಿರಂಗಪಡಿಸಿದೆ.
----------------------------
2022ರಲ್ಲಿ ಕೊಳಗೇರಿ ಅಭಿವೃದ್ಧಿ ಮಂಡಳಿ ಹಾಗೂ ರಾಜೀವ್ ಗಾಂಧಿ ವಸತಿ ನಿಗಮಕ್ಕೆ ಹಣ ವರ್ಗಾವಣೆ ಆಗಿರುವುದು ನಿಜ. ಕಟ್ಟಡದ ಕೆಲಸಕ್ಕೆ ಅಡ್ವಾನ್ಸ್ ಕೊಡಿ ಎಂದು ಕೇಳಿದಾಗ ಕೊಟ್ಟಿದ್ದೇವೆ. ಆದರೆ ಅವರು ಫಲಾನುಭವಿಗಳ ಪಟ್ಟಿ ಕೊಟ್ಟಿಲ್ಲ.
ಎ.ಎಚ್.ಉಮೇಶ್, ಜಂಟಿ ಕಾರ್ಯದರ್ಶಿ,
ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ
ಕಾರ್ಮಿಕರ ಕಲ್ಯಾಣ ಮಂಡಳಿ ಬೆಂಗಳೂರು