15 ವರ್ಷದ ಕನ್ನಡದ ಆಟಗಾರ್ತಿ ಉಮಾ ಕಾಶ್ವಿಗೆ ದಿಲ್ಲಿ ಕ್ಯಾಪಿಟಲ್ಸ್ ನಲ್ಲಿ ಅವಕಾಶ
ಉಮಾ ಕಾಶ್ವಿ | Photo Credit : X
ಕೊಚ್ಚಿಯ ಗ್ರ್ಯಾಂಡ್ ಹಯಾಟ್ ನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ 2027ರ (WPL) ಹರಾಜಿನಲ್ಲಿ ಕರ್ನಾಟಕದ ಹದಿಹರೆಯದ ಆಟಗಾರ್ತಿ ಉಮಾ ಕಾಶ್ವಿ ಟೂರ್ನಿಯಲ್ಲಿ ಖರೀದಿಯಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ‘ದಿಲ್ಲಿ ಕ್ಯಾಪಿಟಲ್ಸ್’ ತಂಡವು ಅವರನ್ನು 10 ಲಕ್ಷ ರೂ.ಗೆ ಖರೀದಿಸಿದೆ.
ಭಾರತೀಯ ಕ್ರಿಕೆಟ್ ನಲ್ಲಿ ನಿರೀಕ್ಷೆಯೇ ಇರದ ಹೊತ್ತಿಗೆ ದೊಡ್ಡ ಸಾಧನೆಗಳು ಹುಟ್ಟಿಕೊಳ್ಳುತ್ತವೆ. 2025ರ ಬಹುಪಾಲು ಅವಧಿಯಲ್ಲಿ ವೈಭವ್ ಸೂರ್ಯವಂಶಿ ತಮ್ಮ ಅದ್ಭುತ ಏಳಿಗೆಯ ಮೂಲಕ ಎಲ್ಲರ ಗಮನ ಸೆಳೆದಿದ್ದರು. ಕೇವಲ 15ನೇ ವಯಸ್ಸಿನಲ್ಲೇ ಅವರು ಹಿರಿಯರ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ್ದಾರೆ. ಈ ಯುವ ಬ್ಯಾಟರ್ ದೊಡ್ಡ ಕನಸುಗಳ ಬೆನ್ನತ್ತಿರುವ ಹೊತ್ತಲ್ಲೇ ಮತ್ತೊಬ್ಬ ಹದಿಹರೆಯದ ಆಟಗಾರ್ತಿ ಭಾರತೀಯ ಕ್ರಿಕೆಟ್ ನಲ್ಲಿ ತಮ್ಮದೇ ಆದ ಸ್ಥಾನ ಕಂಡುಕೊಳ್ಳುವತ್ತ ಹೆಜ್ಜೆ ಇಡುತ್ತಿದ್ದಾರೆ.
ಅಕ್ಟೋಬರ್ 28 ಉಮಾ ಕಾಶ್ವಿ ಅವರ ಪಾಲಿಗೆ ವಿಶೇಷ ದಿನ. ಕೊಚ್ಚಿಯ ಗ್ರ್ಯಾಂಡ್ ಹಯಾಟ್ ನಲ್ಲಿ ವುಮೆನ್ಸ್ ಪ್ರೀಮಿಯರ್ ಲೀಗ್ 2027ರ (WPL) ಹರಾಜಿನಲ್ಲಿ ಕರ್ನಾಟಕದ ಈ ಹದಿಹರೆಯದ ಆಟಗಾರ್ತಿ ಟೂರ್ನಿಯಲ್ಲಿ ಖರೀದಿಯಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ‘ದಿಲ್ಲಿ ಕ್ಯಾಪಿಟಲ್ಸ್’ ತಂಡವು ಅವರನ್ನು 10 ಲಕ್ಷ ರೂ.ಗೆ ಖರೀದಿಸಿದೆ. ಇದು ಅವರ ಕ್ರಿಕೆಟ್ ಪಯಣದಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆದಿದೆ.
15 ವರ್ಷ 202 ದಿನಗಳ ವಯಸ್ಸಿನಲ್ಲಿ ಕಾಶ್ವಿ ಅವರು ದಿಯಾ ಯಾದವ್ ಅವರ ದಾಖಲೆ ಮುರಿದರು. ಕಳೆದ ವರ್ಷ WPL ಹರಾಜಿನಲ್ಲಿ ಖರೀದಿಸಲಾದ ಅತ್ಯಂತ ಕಿರಿಯ ಆಟಗಾರ್ತಿ ಎಂಬ ದಾಖಲೆ ದಿಯಾ ಅವರ ಹೆಸರಿನಲ್ಲಿತ್ತು. ಈ ಸಾಧನೆಯು ಕಾಶ್ವಿ ಅವರನ್ನು ಎಲ್ಲರ ಗಮನ ಸೆಳೆಯುವಂತೆ ಮಾಡಿದೆ. ಆದರೆ, ಈ ಹಂತ ತಲುಪಲು ಅವರು ವರ್ಷಗಳ ಕಾಲ ಶ್ರಮಿಸಿದ್ದಾರೆ.
ಆದರೆ, WPLನಲ್ಲಿ ಪದಾರ್ಪಣೆ ಮಾಡಲು ಇನ್ನೂ ಸ್ವಲ್ಪ ಸಮಯ ಕಾಯಬೇಕಾಗಬಹುದು. ಕಾಶ್ವಿ ಅವರು ಭಾರತದ ‘ಅಂಡರ್ 19 ವಿಶ್ವಕಪ್’ ತಂಡದ ಯೋಜನೆಯ ಭಾಗವಾಗಿದ್ದಾರೆ. ಈ ಟೂರ್ನಿಯು ಬಾಂಗ್ಲಾದೇಶ ಮತ್ತು ನೇಪಾಳದಲ್ಲಿ ನಡೆಯಲಿದ್ದು, ಇದರ ವೇಳಾಪಟ್ಟಿ WPL ನಡೆಯುವ ಅವಧಿಯೊಂದಿಗೇ ಹೊಂದಿಕೆಯಾಗುತ್ತದೆ.
ಬೆಂಗಳೂರಿನ ನೈಸ್ ಕ್ರಿಕೆಟ್ ಅರೆನಾದಲ್ಲಿ ಕಾಶ್ವಿ ತರಬೇತಿ ಪಡೆಯುತ್ತಿದ್ದಾರೆ. ಆದರೆ, ದಿಲ್ಲಿ ಕ್ಯಾಪಿಟಲ್ಸ್ ತಂಡ ಕಾಶ್ವಿ ಅವರ ಹೆಸರನ್ನು ಘೋಷಿಸಿದಾಗ ಅವರ ಕೋಚ್ ಅರ್ಜುನ್ ದೇವ್ ಅವರೂ ಆಶ್ಚರ್ಯಚಕಿತರಾದರು. “ಎಲ್ಲರಿಗೂ ಇದು ಅಚ್ಚರಿಯ ವಿಷಯವಾಗಿತ್ತು. ಅವರು ‘ಅಂಡರ್ 19 ವಿಶ್ವಕಪ್’ ತಂಡದ ಭಾಗವಾಗಿರುವುದರಿಂದ ಬಹುಶಃ WPL ಆಡಲು ಲಭ್ಯವಿರುವುದಿಲ್ಲ. ಆದರೆ, ಸಂತೋಷದಾಯಕ ಅಚ್ಚರಿ ಸಿಗುವುದು ಒಳ್ಳೆಯದೇ” ಎಂದು ಅರ್ಜುನ್ ಹೇಳಿದ್ದಾರೆ.
ಕಾಶ್ವಿ ಅವರ ಕ್ರಿಕೆಟ್ ಪಯಣವು ಅವರು ಸುಮಾರು ಏಳೂವರೆ ವರ್ಷದವರಿದ್ದಾಗ ತಮ್ಮ ಮನೆಯ ಸಮೀಪವಿದ್ದ ಅಕಾಡೆಮಿಯೊಂದರಲ್ಲಿ ತರಬೇತಿ ಪಡೆಯುವುದರೊಂದಿಗೆ ಆರಂಭವಾಗಿತ್ತು. ಆರಂಭಿಕ ದಿನಗಳ ತರಬೇತಿಯು ಸ್ಥಳೀಯ ಪಂದ್ಯಾವಳಿಗಳಿಂದ ತೊಡಗಿ ಕರ್ನಾಟಕದ ವಯೋಮಿತಿ ತಂಡಗಳವರೆಗೆ ಅವರನ್ನು ಕರೆದೊಯ್ಯುವ ಭದ್ರ ಬುನಾದಿ ಹಾಕಿಕೊಟ್ಟಿತು.
12ನೇ ವಯಸ್ಸಿನಲ್ಲೇ ಅವರು ಬೆಂಗಳೂರಿನಲ್ಲಿ ನಡೆದ ಜೂನಿಯರ್ ಕ್ಲಬ್ ಮಟ್ಟದ ಅಂತರ್ಶಾಲಾ ಪಂದ್ಯಾವಳಿಯಲ್ಲಿ ಔಟಾಗದೆ 217 ರನ್ಗಳನ್ನು ಗಳಿಸಿದರು. ಇದು ಗಮನ ಸೆಳೆಯುವಂತಹ ಅದ್ಭುತ ಪ್ರದರ್ಶನವಾಗಿತ್ತು. ಇದಕ್ಕೂ ಮೊದಲೇ ಒಂಬತ್ತನೇ ವಯಸ್ಸಿನಲ್ಲಿ ‘ಇಂಡಿಯಾ ನಿಪ್ಪಾನ್ ಕಪ್’ನಲ್ಲಿ ಅವರಿಗೆ ಯುವ ಪ್ರತಿಭಾ ಪುರಸ್ಕಾರ ಲಭಿಸಿತ್ತು. ಅಲ್ಲಿ ಅವರು ಭಾರತೀಯ ಅಂತರರಾಷ್ಟ್ರೀಯ ಆಟಗಾರ್ತಿಯರಾದ ವೇದಾ ಕೃಷ್ಣಮೂರ್ತಿ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ ಮತ್ತು ಶ್ರೇಯಾಂಕಾ ಪಾಟೀಲ್ ಅವರೊಂದಿಗೆ ಡ್ರೆಸ್ಸಿಂಗ್ ರೂಮ್ ಹಂಚಿಕೊಂಡಿದ್ದರು. ಕ್ರಿಕೆಟ್ ಲೋಕದಲ್ಲಿ ತಮ್ಮ ಸ್ಥಾನ ಹುಡುಕುತ್ತಿದ್ದ ಯುವ ಆಟಗಾರ್ತಿಗೆ ಈ ಅನುಭವವು ಭವಿಷ್ಯದಲ್ಲಿ ತಲುಪಬಹುದಾದ ಉನ್ನತ ಮಟ್ಟದ ಪರಿಚಯವಾಗಿತ್ತು.
“ಕಾಶ್ವಿ ಚಿಕ್ಕ ವಯಸ್ಸಿನಲ್ಲೇ ವಿಶೇಷ ಪ್ರತಿಭೆ ಹೊಂದಿರುವುದು ನಮಗೆ ತಿಳಿದಿತ್ತು. 8–9 ವರ್ಷ ವಯಸ್ಸಿನಲ್ಲೇ ಸ್ಥಳೀಯ ಪಂದ್ಯಾವಳಿಗಳಲ್ಲಿ ಹಿರಿಯ ಆಟಗಾರರ ಜೊತೆಗೆ ಆಡುತ್ತಿದ್ದರು. ಆಗಲೇ ಅವರ ಅಸಾಧಾರಣ ಪ್ರತಿಭೆ ಎಲ್ಲರಿಗೂ ತಿಳಿದಿತ್ತು” ಎಂದು ಅರ್ಜುನ್ ಹೇಳುತ್ತಾರೆ.
ಕಾಶ್ವಿ ಜವಾಬ್ದಾರಿ ವಹಿಸಿಕೊಳ್ಳುವುದರಲ್ಲೂ ಮುಂದು. ಕರ್ನಾಟಕದ 15ರೊಳಗಿನ ತಂಡದ ನಾಯಕತ್ವ ವಹಿಸಿದ್ದಾರೆ. ಕರ್ನಾಟಕದ ಮಹಿಳಾ ಟಿ20 ಟೂರ್ನಿಯಾದ ಮಹಾರಾಣಿ ಟ್ರೋಫಿಯಲ್ಲಿ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಮುನ್ನಡೆಸಿದ್ದಾರೆ. ಹಿರಿಯ ದೇಶೀಯ ಕ್ರಿಕೆಟಿಗರ ವಿರುದ್ಧ ಆಡುವ ಅವಕಾಶವು ಉನ್ನತ ಮಟ್ಟದ ಕ್ರಿಕೆಟ್ ನ ಬೇಡಿಕೆಗಳನ್ನು ಅರ್ಥಮಾಡಿಕೊಳ್ಳಲು ಅವರಿಗೆ ಸಹಾಯ ಮಾಡಿದೆ. 2025ರ ಟೂರ್ನಿಯಲ್ಲಿ ಮೈಸೂರು ವಾರಿಯರ್ಸ್ ವಿರುದ್ಧ 42 ಎಸೆತಗಳಲ್ಲಿ 48 ರನ್ ಗಳಿಸುವ ಮೂಲಕ ಅವರು ತಮ್ಮ ಬ್ಯಾಟಿಂಗ್ ಸಾಮರ್ಥ್ಯದ ಝಲಕ್ ತೋರಿಸಿದ್ದಾರೆ. ಕರ್ನಾಟಕದ 19ರೊಳಗಿನ ಟಿ20 ತಂಡದಲ್ಲೂ ಆಡಿದ್ದಾರೆ. ಮಹಿಳೆಯರ 19 ವರ್ಷದೊಳಗಿನವರ ಏಕದಿನ ಟ್ರೋಫಿಯಲ್ಲಿ ಸೆಮಿಫೈನಲ್ ತಲುಪಿದ ತಂಡದ ಭಾಗವಾಗಿದ್ದರು. ಜೂನ್ ಮತ್ತು ಜುಲೈ 2026ರಲ್ಲಿ ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ಕಾಶ್ವಿ ಭಾರತದ 19ರೊಳಗಿನವರ ತಂಡವನ್ನು ಪ್ರತಿನಿಧಿಸಿದ್ದಾರೆ. ಅಲ್ಲಿ ಮೂರು ಟಿ20 ಪಂದ್ಯಗಳಲ್ಲಿ ನಾಲ್ಕು ವಿಕೆಟ್ಗಳು ಮತ್ತು ಎರಡು ಏಕದಿನ ಪಂದ್ಯಗಳಲ್ಲಿ ಎರಡು ವಿಕೆಟ್ಗಳನ್ನು ಪಡೆದಿದ್ದರು. ಹೀಗಾಗಿ, ಬಲಗೈ ಆಫ್ಸ್ಪಿನ್ನರ್ ಆಗಿರುವ ಅವರು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮೂಲಕವೂ ತಂಡಕ್ಕೆ ಕೊಡುಗೆ ನೀಡಬಲ್ಲರು ಎಂಬುದಕ್ಕೆ ಇದು ಸಾಕ್ಷಿಯಾಯಿತು.
2025–26ರ ಮಹಿಳೆಯರ ಅಂಡರ್ 15 ಏಕದಿನ ಟ್ರೋಫಿಯಲ್ಲಿ ಕರ್ನಾಟಕದ ಈ ಯುವ ಆಟಗಾರ್ತಿ 172ರ ಸರಾಸರಿಯಲ್ಲಿ ಒಟ್ಟು 516 ರನ್ ಗಳಿಸಿದ್ದಾರೆ. ಮೂರು ಶತಕಗಳು ಮತ್ತು ಒಂದು ಅರ್ಧಶತಕ ಸಿಡಿಸಿದ್ದರು. ಟೂರ್ನಿಯುದ್ದಕ್ಕೂ ಸ್ಥಿರ ಪ್ರದರ್ಶನ ನೀಡಿದ್ದಾರೆ.
ಭರವಸೆಯ ಆಟಗಾರ್ತಿಯಾಗಿದ್ದರೂ, ಮುಂದಿನ ಹಂತದ ಬೆಳವಣಿಗೆಯು ಅವರು ತಮ್ಮನ್ನು ಇನ್ನಷ್ಟು ಸವಾಲಿಗೆ ಒಡ್ಡಿಕೊಳ್ಳುವ ಇಚ್ಛಾಶಕ್ತಿಯನ್ನು ಅವಲಂಬಿಸಿರುತ್ತದೆ. ಏಕೆಂದರೆ, ಕ್ರಿಕೆಟ್ ನ ಸೂಕ್ಷ್ಮ ಅಂಶಗಳನ್ನು ಇನ್ನೂ ಕಲಿಯುತ್ತಿರುವ ಹದಿಹರೆಯದ ಆಟಗಾರ್ತಿಗೆ ಹಿರಿಯರ ಮಟ್ಟದ ಕ್ರಿಕೆಟ್ ನಲ್ಲಿ ಆಡುವುದು ಸವಾಲೊಡ್ಡಬಹುದು.
ದಿಲ್ಲಿ ಕ್ಯಾಪಿಟಲ್ಸ್ ಇತ್ತೀಚಿನ ಋತುಗಳಲ್ಲಿ ಯುವ ಭಾರತೀಯ ಪ್ರತಿಭೆಗಳನ್ನೇ ಆಯ್ಕೆ ಮಾಡಿದೆ. ನಿಕಿ ಪ್ರಸಾದ್ ಮತ್ತು ಶಫಾಲಿ ವರ್ಮಾ ಅವರಂತಹ ಆಟಗಾರ್ತಿಯರು ಚಿಕ್ಕ ವಯಸ್ಸಿನಲ್ಲೇ ಸಿಗುವ ಅವಕಾಶಗಳು ದೊಡ್ಡ ಹಂತಗಳಿಗೆ ಮೆಟ್ಟಿಲಾಗಬಹುದು ಎಂಬುದನ್ನು ತೋರಿಸಿಕೊಟ್ಟಿದ್ದಾರೆ. ಕಾಶ್ವಿಗೆ ಕ್ಯಾಪಿಟಲ್ಸ್ ಸೇರುವ ಅವಕಾಶ ಸಿಕ್ಕರೆ, ಹಿರಿಯ ಆಟಗಾರ್ತಿಯರ ಜೊತೆಗೆ ಪಂದ್ಯಗಳನ್ನು ಆಡುವುದು, ತಯಾರಿ, ಪಂದ್ಯದ ಅರಿವು ಮತ್ತು ಒತ್ತಡ ನಿಭಾಯಿಸುವಲ್ಲಿ ಅಮೂಲ್ಯ ಪಾಠ ಸಿಗಬಹುದು. ವಿಶೇಷವಾಗಿ ಅಂಡರ್ 19 ವಿಶ್ವಕಪ್ ನಲ್ಲಿ ಭಾರತವನ್ನು ಪ್ರತಿನಿಧಿಸುವ ಅವಕಾಶ ಸಿಕ್ಕರೆ, ಅವರ ಪ್ರದರ್ಶನ ಹಿರಿಯರ ಕ್ರಿಕೆಟ್ಗೆ ಪದಾರ್ಪಣೆ ಮಾಡಲು ನೆರವಾಗಬಹುದು.
15ನೇ ವಯಸ್ಸಿನಲ್ಲೇ ಭಾರತ ತಂಡಕ್ಕೆ ಪದಾರ್ಪಣೆ ಮಾಡಿದ ರಿಚಾ ಘೋಷ್ ಮತ್ತು ಶಫಾಲಿ ವರ್ಮಾ ಅವರ ಹಾದಿಯಲ್ಲಿ ಕಾಶ್ವಿ ಮುಂದುವರಿಯಬಹುದು.