Photo Credit : thehindu.com

ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಶೇ. 100ರಷ್ಟು ಎಥನಾಲ್ ಹೊಂದಿರುವ (E100) ಇಂಧನವನ್ನು ವಾಹನಗಳಲ್ಲಿ ಬಳಸಲು ಅನುಮತಿ ನೀಡುವ ಉದ್ದೇಶದಿಂದ ಕೇಂದ್ರೀಯ ಮೋಟಾರು ವಾಹನಗಳ ನಿಯಮಗಳು, 1989ಕ್ಕೆ ತಿದ್ದುಪಡಿ ತಂದಿದೆ. ಈ ಕ್ರಮವು ಪೆಟ್ರೋಲ್, ವಿವಿಧ ಪ್ರಮಾಣದ ಎಥನಾಲ್ ಮಿಶ್ರಿತ ಇಂಧನ ಅಥವಾ ಸಂಪೂರ್ಣ ಎಥನಾಲ್‌ ನಲ್ಲಿ ಚಲಿಸಬಲ್ಲ ‘ಫ್ಲೆಕ್ಸ್-ಫ್ಯುಯೆಲ್’ (ಹೊಂದಿಕೊಳ್ಳುವ ಇಂಧನ) ವಾಹನಗಳ ಬಳಕೆಗೆ ಅವಕಾಶ ಕಲ್ಪಿಸಲಿದೆ.

ಈ ತಿದ್ದುಪಡಿಗಳ ಮೂಲಕ ಮೋಟಾರು ವಾಹನಗಳ ಹೊರಸೂಸುವಿಕೆ ಮಾನದಂಡಗಳು ಮತ್ತು ಸಂಬಂಧಿತ ಅಗತ್ಯಗಳನ್ನು ನಿರ್ದಿಷ್ಟಪಡಿಸುವ ನಿಯಮ 115 ಹಾಗೂ ಹೊರಸೂಸುವಿಕೆ ಪರೀಕ್ಷೆಗೆ ಸಂಬಂಧಿಸಿದ ಹೆಚ್ಚುವರಿ ನಿಬಂಧನೆಗಳನ್ನು ಒಳಗೊಂಡಿರುವ ನಿಯಮ 115E ಅನ್ನು ಮಾರ್ಪಡಿಸಲಾಗಿದೆ.

►ಸರ್ಕಾರ ಏನೇನು ಬದಲಾಯಿಸಿದೆ?

ನಿಯಮ 115ರ ಅಡಿಯಲ್ಲಿನ ಹಲವು ಕೋಷ್ಟಕಗಳಲ್ಲಿ E85 ಜೊತೆಗೆ E100 ಇಂಧನವನ್ನೂ ಸೇರ್ಪಡೆಗೊಳಿಸಿರುವುದು ಪ್ರಮುಖ ಬದಲಾವಣೆಯಾಗಿದೆ. E85 ಇಂಧನದಲ್ಲಿ ಶೇ. 85ರಷ್ಟು ಎಥನಾಲ್ ಇರುತ್ತದೆ. E100 ಇಂಧನವು ಅನ್ವಯವಾಗುವ ನಿಯಮಾವಳಿಗಳಿಗೆ ಒಳಪಟ್ಟು ಸಂಪೂರ್ಣವಾಗಿ ಎಥನಾಲ್ನಿಂದ ಕೂಡಿರುತ್ತದೆ.

ಮೂಲ ಉಪಕರಣ ತಯಾರಕರು (OEM) ವಿನ್ಯಾಸಗೊಳಿಸಿದ ಫ್ಲೆಕ್ಸ್-ಫ್ಯುಯೆಲ್ ವಾಹನಗಳಲ್ಲಿ ಮಾತ್ರ E85 ಅಥವಾ E100 ಇಂಧನವನ್ನು ಬಳಸಬಹುದು ಎಂಬ ಸ್ಪಷ್ಟೀಕರಣವನ್ನೂ ತಿದ್ದುಪಡಿಯಲ್ಲಿ ಸೇರಿಸಲಾಗಿದೆ.

►ಸದ್ಯ ಇರುವ ವಾಹನಗಳು E85 ಅಥವಾ E100ಗೆ ಬದಲಾಯಿಸಬೇಕೇ?

ಇಲ್ಲ. ವಾಹನ ಸವಾರರ ಆತಂಕ ನಿವಾರಿಸಲು ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಸಚಿವಾಲಯ, ವಾಹನವೊಂದು E10 ಅಥವಾ E20 ಇಂಧನಕ್ಕೆ ಹೊಂದಿಕೊಳ್ಳುತ್ತದೆ ಎಂದ ಮಾತ್ರಕ್ಕೆ ಅದು E85 ಇಂಧನಕ್ಕೂ ಸೂಕ್ತವಾಗಿದೆ ಎಂದರ್ಥವಲ್ಲ ಎಂದು ಸ್ಪಷ್ಟಪಡಿಸಿದೆ. ಈಗಿರುವ ವಾಹನಗಳ ಮಾಲೀಕರು ತಕ್ಷಣ ಅಥವಾ ಭವಿಷ್ಯದಲ್ಲಿ E85 ಇಂಧನಕ್ಕೆ ಬದಲಾಯಿಸುವುದು ಅಥವಾ ತಮ್ಮ ವಾಹನಗಳನ್ನು ಅದಕ್ಕೆ ಅನುಗುಣವಾಗಿ ಮಾರ್ಪಡಿಸುವುದು ಕಡ್ಡಾಯವಲ್ಲ ಎಂದು ಅಧಿಸೂಚನೆ ತಿಳಿಸಿದೆ.

ಇಂಧನ ಬಂಕ್ ಗಳಲ್ಲಿ ಇಂಧನ ಆಯ್ಕೆ ಮಾಡುವಾಗ ವಾಹನದ ಮೇಲಿರುವ ಇಂಧನ ಹೊಂದಾಣಿಕೆಯ ಸ್ಟಿಕ್ಕರ್ ಪರಿಶೀಲಿಸಬೇಕು. ಜೊತೆಗೆ, ವಾಹನದ ಮಾಲೀಕರ ಕೈಪಿಡಿಯಲ್ಲಿ ತಯಾರಕರು ನೀಡಿರುವ ಮಾರ್ಗದರ್ಶನವನ್ನು ಅನುಸರಿಸಬೇಕು ಎಂದು ಸಚಿವಾಲಯ ಸಲಹೆ ನೀಡಿದೆ.

►E100 ವಾಹನಗಳ ಬಳಕೆಗೆ ತಿದ್ದುಪಡಿ ಹೇಗೆ ನೆರವಾಗಲಿದೆ?

ಈ ತಿದ್ದುಪಡಿಗಳು ವಾಹನಗಳ ಅನುಮೋದನೆ ಮತ್ತು ಪ್ರಮಾಣೀಕರಣ ಪ್ರಕ್ರಿಯೆಯನ್ನು ಸುಗಮಗೊಳಿಸುವ ನಿರೀಕ್ಷೆಯಿದೆ. ಭಾರತೀಯ ಆಟೋಮೋಟಿವ್ ಸಂಶೋಧನಾ ಸಂಸ್ಥೆ (ARAI) ಸೇರಿದಂತೆ ಅಧಿಕೃತ ಸಂಸ್ಥೆಗಳು ವಾಹನಗಳು ಮತ್ತು ಅವುಗಳ ಬಿಡಿಭಾಗಗಳನ್ನು ಸಾರ್ವಜನಿಕ ರಸ್ತೆಗಳಲ್ಲಿ ಮಾರಾಟ ಮಾಡಲು ಅಥವಾ ಬಳಸಲು ಅನುಮೋದನೆ ನೀಡುವ ಮೊದಲು, ಅವು ತಾಂತ್ರಿಕ, ಸುರಕ್ಷತೆ ಮತ್ತು ಪರಿಸರ ಮಾನದಂಡಗಳನ್ನು ಪೂರೈಸುತ್ತವೆಯೇ ಎಂಬುದನ್ನು ಪರಿಶೀಲಿಸುತ್ತವೆ.

ಈ ಬದಲಾವಣೆಗಳು E100 ಇಂಧನದಲ್ಲಿ ಚಲಿಸುವ ವಾಹನಗಳಿಗೆ ಮಾದರಿ ಅನುಮೋದನೆ ಪಡೆಯಲು ನೆರವಾಗಲಿವೆ. ಇದರಿಂದ ಅಂತಹ ವಾಹನಗಳ ಮಾರುಕಟ್ಟೆ ಪ್ರವೇಶ ಮತ್ತು ಗ್ರಾಹಕರ ಬಳಕೆ ಹೆಚ್ಚಲು ಬೆಂಬಲ ದೊರೆಯುವ ನಿರೀಕ್ಷೆಯಿದೆ.

ಇಂಧನ ವರ್ಗೀಕರಣದಲ್ಲೂ ತಿದ್ದುಪಡಿ ಮಾಡಲಾಗಿದೆ. ಈ ಹಿಂದೆ ಇದ್ದ E10 ಉಲ್ಲೇಖದ ಬದಲಿಗೆ ಶೇ 20ರಷ್ಟು ಎಥನಾಲ್ ಮಿಶ್ರಿತ ಪೆಟ್ರೋಲ್ (E20) ಉಲ್ಲೇಖವನ್ನು ಸೇರಿಸಲಾಗಿದೆ.

►ಎಥನಾಲ್ ಮಿಶ್ರಿತ ಪೆಟ್ರೋಲ್ ಕಾರ್ಯಕ್ರಮದ ಪ್ರಸ್ತುತ ಸ್ಥಿತಿ ಏನು?

ರಾಷ್ಟ್ರೀಯ ಜೈವಿಕ ಇಂಧನ ನೀತಿ, 2018ರ ಅಡಿಯಲ್ಲಿ 2030ರ ವೇಳೆಗೆ ಸಾಧಿಸಲು ಉದ್ದೇಶಿಸಿದ್ದ ಶೇ 20ರಷ್ಟು ಎಥನಾಲ್ ಮಿಶ್ರಣದ (E20) ಗುರಿಯನ್ನು ಭಾರತವು ಐದು ವರ್ಷ ಮುಂಚಿತವಾಗಿ, ಅಂದರೆ 2025ರಲ್ಲೇ ಸಾಧಿಸಿದೆ.

2026ರ ಎಪ್ರಿಲ್ನಿಂದ ಎಲ್ಲ ಭಾರತ್ ಸ್ಟೇಜ್-VI (BS-VI) ವಾಹನಗಳು E20 ಹೊರಸೂಸುವಿಕೆ ಮಾನದಂಡಗಳನ್ನು ಸಂಪೂರ್ಣವಾಗಿ ಪೂರೈಸುವುದು ಕಡ್ಡಾಯವಾಗಿದೆ. ಅಲ್ಲದೆ, ದೇಶಾದ್ಯಂತ ಮಾರಾಟವಾಗುವ ಎಲ್ಲ ಪೆಟ್ರೋಲ್‌ ನಲ್ಲೂ ಶೇ 20ರಷ್ಟು ಎಥನಾಲ್ ಇರಬೇಕೆಂದು ಕಡ್ಡಾಯಗೊಳಿಸಲಾಗಿದೆ.

ಸರ್ಕಾರದ ನೀತಿ ಈಗ E20 ಮಿಶ್ರಣವನ್ನು ಮೀರಿ ಮುಂದುವರಿಯುತ್ತಿದೆ. E85 ಮತ್ತು E100 ವಾಹನಗಳ ಬಳಕೆಗೆ ಅಗತ್ಯವಾದ ನಿಯಂತ್ರಣ ಚೌಕಟ್ಟನ್ನು ರೂಪಿಸಲಾಗಿದೆ. ಆದರೆ, ಈ ಇಂಧನಗಳಿಗೆ ಹೊಂದಿಕೊಳ್ಳುವ ಫ್ಲೆಕ್ಸ್-ಫ್ಯುಯೆಲ್ ವಾಹನಗಳ ಜೊತೆಗೆ ಪ್ರತ್ಯೇಕ ಇಂಧನ ಸಂಗ್ರಹಣೆ ಮತ್ತು ವಿತರಣಾ ಮೂಲಸೌಕರ್ಯವೂ ಅಗತ್ಯವಿದೆ.

►ಗ್ರಾಹಕರ ಕಾಳಜಿ ಮತ್ತು ಆತಂಕಗಳೇನು?

ವಾಹನಗಳ ಹೊಂದಾಣಿಕೆ ಗ್ರಾಹಕರ ಪ್ರಮುಖ ಕಳವಳವಾಗಿದೆ. ಹಳೆಯ ವಾಹನಗಳು ಅಥವಾ E20 ಇಂಧನಕ್ಕೆ ಹೊಂದಿಕೊಳ್ಳದ ವಾಹನಗಳನ್ನು ಹೊಂದಿರುವವರು, E20 ಬಳಕೆಯಿಂದ ಬಿಡಿಭಾಗಗಳು ಹಾಳಾಗಬಹುದೇ, ನಿರ್ವಹಣಾ ವೆಚ್ಚ ಹೆಚ್ಚಾಗಬಹುದೇ ಅಥವಾ ಕಡಿಮೆ ಎಥನಾಲ್ ಹೊಂದಿರುವ ಪೆಟ್ರೋಲ್ ಲಭ್ಯವಾಗದೆ ತೊಂದರೆಯಾಗಬಹುದೇ ಎಂಬ ಪ್ರಶ್ನೆಗಳನ್ನು ಎತ್ತುತ್ತಿದ್ದಾರೆ.

ವಾಹನದ ಮೈಲೇಜ್ ಮೇಲೆ E20 ಉಂಟುಮಾಡುವ ಪರಿಣಾಮದ ಬಗ್ಗೆಯೂ ಗ್ರಾಹಕರು ಆತಂಕ ವ್ಯಕ್ತಪಡಿಸಿದ್ದಾರೆ. ಎಥನಾಲ್ ನ ಇಂಧನ ಸಾಮರ್ಥ್ಯ ಪೆಟ್ರೋಲ್ಗಿಂತ ಕಡಿಮೆ ಇರುವುದರಿಂದ ಮೈಲೇಜ್ ಕಡಿಮೆಯಾಗಬಹುದು. ಮೈಲೇಜ್ ನಲ್ಲಿ ಶೇ. 5ರಷ್ಟು ಕುಸಿತವಾಗಬಹುದು ಎಂದು ಸರ್ಕಾರ ಅಂದಾಜಿಸಿದ್ದರೂ, ವಾಸ್ತವದಲ್ಲಿ ನಷ್ಟ ಇದಕ್ಕಿಂತ ಹೆಚ್ಚಾಗಿದೆ ಎಂದು ಕೆಲವು ಗ್ರಾಹಕರು ಹೇಳುತ್ತಿದ್ದಾರೆ.

ಎಥನಾಲ್ ತೇವಾಂಶವನ್ನು ಹೀರಿಕೊಳ್ಳುವ ಗುಣ ಹೊಂದಿರುವುದರಿಂದ ಮಳೆಗಾಲದಲ್ಲಿ ಇಂಧನ ಕಲುಷಿತಗೊಳ್ಳುವ ಅಪಾಯ ಹೆಚ್ಚಬಹುದು. ಹೀಗಾಗಿ, ಹೆಚ್ಚಿನ ಪ್ರಮಾಣದ ಎಥನಾಲ್ ಮಿಶ್ರಿತ ಇಂಧನಗಳಿಗೆ ಪ್ರತ್ಯೇಕ ಸಂಗ್ರಹಣೆ ಮತ್ತು ವಿತರಣಾ ವ್ಯವಸ್ಥೆ ಅಗತ್ಯವಿದೆ ಎಂದು ವ್ಯಾಪಾರಿಗಳು ಎಚ್ಚರಿಸಿದ್ದಾರೆ. ಈ ಎಲ್ಲ ಆತಂಕಗಳ ಹಿನ್ನೆಲೆಯಲ್ಲಿ ನೀತಿಯ ಪರಿಣಾಮಗಳ ಕುರಿತು ಪಾರದರ್ಶಕ ಮೌಲ್ಯಮಾಪನ ನಡೆಸಬೇಕೆಂಬ ಒತ್ತಾಯವೂ ಕೇಳಿಬಂದಿದೆ.

ಎಥನಾಲ್ ಮಿಶ್ರಣದಿಂದ ಚಿಲ್ಲರೆ ಇಂಧನದ ಬೆಲೆ ಏಕೆ ಕಡಿಮೆಯಾಗಿಲ್ಲ ಎಂಬ ಪ್ರಶ್ನೆಯನ್ನೂ ಸಾರ್ವಜನಿಕರು ಎತ್ತಿದ್ದಾರೆ. ಇದಕ್ಕೆ ಉತ್ತರಿಸಿರುವ ಸರ್ಕಾರ, ಜೋಳದಂತಹ ಕಚ್ಚಾ ವಸ್ತುಗಳನ್ನು ಸಂಗ್ರಹಿಸುವ ವೆಚ್ಚ ಲೀಟರ್‌ ಗೆ 71.86 ರೂ. ಆಗಿದ್ದು, ಕಚ್ಚಾ ತೈಲದ ಬೆಲೆಗಿಂತ ಹೆಚ್ಚಾಗಿದೆ ಎಂದು ತಿಳಿಸಿದೆ. ಕಚ್ಚಾ ತೈಲದ ಪ್ರತಿ ಬ್ಯಾರೆಲ್ಗೆ 70 ಡಾಲರ್ ವೆಚ್ಚವಾಗುತ್ತದೆ. ಇದು ಪ್ರತಿ ಲೀಟರ್‌ ಗೆ ಸುಮಾರು 37ರಿಂದ 40 ರೂ. ಆಗುತ್ತದೆ ಎಂದು ಸರ್ಕಾರ ವಿವರಿಸಿದೆ.

ಎಥನಾಲ್ ಮಿಶ್ರಣಕ್ಕೆ ಹೆಚ್ಚಿನ ಆದ್ಯತೆ ನೀಡುವುದರಿಂದ ವಾಹನಗಳ ವಿದ್ಯುದೀಕರಣದ (EV) ಕಡೆಗಿನ ಗಮನ ಬೇರೆಡೆಗೆ ಸರಿಯಬಹುದು ಎಂದು ತಜ್ಞರು ವಾದಿಸುತ್ತಾರೆ. ದೀರ್ಘಾವಧಿಯಲ್ಲಿ ಮಾಲಿನ್ಯವನ್ನು ಗಣನೀಯವಾಗಿ ಕಡಿಮೆ ಮಾಡಲು ವಿದ್ಯುತ್ ವಾಹನಗಳು ಹೆಚ್ಚು ಸ್ಪಷ್ಟವಾದ ಮಾರ್ಗವಾಗಿವೆ ಎಂಬುದು ಅವರ ಅಭಿಪ್ರಾಯ.

“ಭವಿಷ್ಯವು ಎಲೆಕ್ಟ್ರಿಕ್ ವಾಹನಗಳದ್ದಾಗಿದೆ. ಇತರ ತಂತ್ರಜ್ಞಾನಗಳು ಮಧ್ಯಂತರ ಪರಿಹಾರಗಳಷ್ಟೇ. ವಿದ್ಯುದೀಕರಣವು ಹೆಚ್ಚು ಸ್ವಚ್ಛವಾದ ಆಯ್ಕೆಯಾಗಿದ್ದು, ಎಥನಾಲ್ ಉತ್ಪಾದನೆಗೆ ಸಂಬಂಧಿಸಿದ ಮಾಲಿನ್ಯವನ್ನು ತಪ್ಪಿಸಲು ನೆರವಾಗುತ್ತದೆ. ಇದರಿಂದ ಸಾರ್ವಜನಿಕ ಆರೋಗ್ಯ ಮತ್ತು ಪರಿಸರಕ್ಕೂ ಪ್ರಯೋಜನವಾಗಲಿದೆ. ವಿದ್ಯುತ್ ಉತ್ಪಾದನಾ ಜಾಲ ಸುಧಾರಿಸಿದಂತೆ, ದೀರ್ಘಾವಧಿಯಲ್ಲಿ ವಿದ್ಯುದೀಕರಣವೇ ಸೂಕ್ತ ಆಯ್ಕೆಯಾಗಲಿದೆ. ಜಾಗತಿಕ ಸಂಶೋಧನೆಗಳೂ ಈ ಕ್ಷೇತ್ರದತ್ತ ಹೆಚ್ಚು ಗಮನ ಹರಿಸುತ್ತಿವೆ” ಎಂದು ಕ್ಲೀನ್ ಟ್ರಾನ್ಸ್ಪೋರ್ಟೇಶನ್ ಇಂಟರ್ನ್ಯಾಷನಲ್ ಕೌನ್ಸಿಲ್ ನ (ICCT) ವ್ಯವಸ್ಥಾಪಕ ನಿರ್ದೇಶಕ ಅಮಿತ್ ಭಟ್ ಹೇಳಿದ್ದಾರೆ.

ಸೌಜನ್ಯ: thehindu.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor