Photo Credit : indianexpress.com

ಜಿಯೋ ಪ್ಲಾಟ್‌ ಫಾರ್ಮ್ಸ್ (Jio Platforms) ಬುಧವಾರ (ಅಕ್ಟೋಬರ್ 28) 13.05 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯದೊಂದಿಗೆ ಷೇರು ಮಾರುಕಟ್ಟೆಗೆ ಪಾದಾರ್ಪಣೆ ಮಾಡಿದ್ದು, ಪ್ರವರ್ತಕರಾದ ಮುಕೇಶ್ ಅಂಬಾನಿ ಕುಟುಂಬದ ನಿವ್ವಳ ಆಸ್ತಿ ಮೌಲ್ಯವನ್ನು ಹೆಚ್ಚಿಸುವ ನಿರೀಕ್ಷೆಯಿದೆ. ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL), ಜಿಯೋ ಪ್ಲಾಟ್‌ ಫಾರ್ಮ್ಸ್ ಲಿಮಿಟೆಡ್ (JPL) ಮತ್ತು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ಲಿಮಿಟೆಡ್ (JFSL) ಕಂಪೆನಿಗಳಲ್ಲಿ ಪ್ರವರ್ತಕರ ನೇರ ಮತ್ತು ಪರೋಕ್ಷ ಷೇರುಗಳ ಒಟ್ಟು ಮೌಲ್ಯವು ಜಿಯೋ ಲಿಸ್ಟಿಂಗ್‌ ಗೆ ಮುನ್ನ ಇದ್ದ 8.73 ಲಕ್ಷ ಕೋಟಿ ರೂ.ಯಿಂದ ಈಗ 12.54 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ.

ಜಿಯೋ ಸಂಸ್ಥೆಯ ಮೌಲ್ಯವು ಈಗಾಗಲೇ ರಿಲಯನ್ಸ್ ಇಂಡಸ್ಟ್ರೀಸ್ ನ ಮಾರುಕಟ್ಟೆ ಮೌಲ್ಯದಲ್ಲಿ ಭಾಗಶಃ ಸೇರಿರುವುದರಿಂದ, ಪ್ರವರ್ತಕರ ಜಿಯೋ ಪ್ಲಾಟ್‌ ಫಾರ್ಮ್ಸ್ ಷೇರುಗಳನ್ನು ಅವರ ಪ್ರಸ್ತುತ ಆಸ್ತಿಗೆ ನೇರವಾಗಿ ಸೇರಿಸಲು ಸಾಧ್ಯವಿಲ್ಲ. ಇದು ದ್ವಿಗುಣ ಲೆಕ್ಕಾಚಾರಕ್ಕೆ ಕಾರಣವಾಗಬಹುದು ಎಂದು ಮಾರುಕಟ್ಟೆ ವಿಶ್ಲೇಷಕರು ಎಚ್ಚರಿಸಿದ್ದಾರೆ.

ರಿಲಯನ್ಸ್ ಇಂಡಸ್ಟ್ರೀಸ್ ನ 16 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಮತ್ತು ಅದರಲ್ಲಿ ಪ್ರವರ್ತಕ ಸಮೂಹ ಹೊಂದಿರುವ ಶೇ 50.44ರಷ್ಟು ಷೇರುಗಳನ್ನು ಆಧರಿಸಿ ಲೆಕ್ಕಹಾಕಿದರೆ, ರಿಲಯನ್ಸ್ ನಲ್ಲಿನ ಅವರ ಷೇರುಗಳ ಮೌಲ್ಯವು ಸುಮಾರು 8.07 ಲಕ್ಷ ಕೋಟಿ ರೂ. ಆಗುತ್ತದೆ. 1.37 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಲ್ಲಿ ಪ್ರವರ್ತಕ ಕಂಪೆನಿಗಳು ಹೊಂದಿರುವ ಶೇ 48ರಷ್ಟು ಷೇರುಗಳ ಮೌಲ್ಯ ಸುಮಾರು 65,760 ಕೋಟಿ ರೂ. ಅಥವಾ 0.66 ಲಕ್ಷ ಕೋಟಿ ರೂ. ಆಗಿದೆ.

ಷೇರು ಮಾರುಕಟ್ಟೆ ಪ್ರವೇಶದ ನಂತರ ಜಿಯೋ ಪ್ಲಾಟ್‌ ಫಾರ್ಮ್ಸ್ 12.53 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯವನ್ನು ಹೊಂದಿದೆ. ರಿಲಯನ್ಸ್ ಸಂಸ್ಥೆಯು ಜಿಯೋ ಪ್ಲಾಟ್‌ ಫಾರ್ಮ್ಸ್ ನಲ್ಲಿ ಶೇ 64.41ರಷ್ಟು ಷೇರುಗಳನ್ನು ಹೊಂದಿದ್ದು, ಇದರ ಮೌಲ್ಯ ಸುಮಾರು 8.07 ಲಕ್ಷ ಕೋಟಿ ರೂ. ಆಗಿದೆ. ರಿಲಯನ್ಸ್ ನಲ್ಲಿ ಪ್ರವರ್ತಕರ ಶೇ 50.44ರಷ್ಟು ಷೇರುಗಳನ್ನು ಆಧರಿಸಿ ಜಿಯೋ ಪ್ಲಾಟ್‌ ಫಾರ್ಮ್ಸ್ ನಲ್ಲಿ ಅಂಬಾನಿ ಕುಟುಂಬದ ಪರೋಕ್ಷ ಆರ್ಥಿಕ ಪಾಲುದಾರಿಕೆಯನ್ನು ಲೆಕ್ಕಹಾಕಿದರೆ, ಜಿಯೋ ಪ್ಲಾಟ್‌ ಫಾರ್ಮ್ಸ್ ನಲ್ಲಿನ ಅವರ ಪರೋಕ್ಷ ಪಾಲಿನ ಮೌಲ್ಯ ಸುಮಾರು 4.07 ಲಕ್ಷ ಕೋಟಿ ರೂ. ಆಗುತ್ತದೆ. ಇದರಿಂದಾಗಿ ಪ್ರವರ್ತಕರ ಒಟ್ಟು ಷೇರುಗಳ ಮೌಲ್ಯ 12.80 ಲಕ್ಷ ಕೋಟಿ ರೂ.ಗೆ ತಲುಪಬಹುದು.

ಡಾಲರ್ ಮೌಲ್ಯದಲ್ಲಿ ಲೆಕ್ಕಹಾಕಿದರೆ, ಅಂಬಾನಿ ಕುಟುಂಬದ ಒಟ್ಟು ಷೇರುಗಳ ಮೌಲ್ಯವು ಸುಮಾರು 121 ಬಿಲಿಯನ್ ಡಾಲರ್ ಆಗಲಿದೆ. ಇದು ಅದಾನಿ ಕುಟುಂಬದ 74.3 ಬಿಲಿಯನ್ ಡಾಲರ್, ಸಾವಿತ್ರಿ ಜಿಂದಾಲ್ ಅವರ 37.3 ಬಿಲಿಯನ್ ಡಾಲರ್ ಮತ್ತು ಶಿವ್ ನಾಡಾರ್ ಅವರ 30.5 ಬಿಲಿಯನ್ ಡಾಲರ್ ಆಸ್ತಿಗಿಂತ ಬಹುದೂರ ಮುಂದಿದೆ.

ಜಿಯೋ ಪ್ಲಾಟ್‌ ಫಾರ್ಮ್ಸ್ ನಲ್ಲಿ ಪ್ರವರ್ತಕರ ಪರೋಕ್ಷ ಆರ್ಥಿಕ ಪಾಲುದಾರಿಕೆಯು ಜಿಯೋ ಪ್ಲಾಟ್‌ ಫಾರ್ಮ್ಸ್ ನ ಒಟ್ಟು ಮೌಲ್ಯದ ಸುಮಾರು ಶೇ 32.50ರಷ್ಟಿದೆ.

"ಅದೇನೇ ಇದ್ದರೂ, ಅಂಬಾನಿ ಕುಟುಂಬಕ್ಕೆ ಜಿಯೋದಲ್ಲಿರುವ ಪರೋಕ್ಷ ಪಾಲಿನ ಅಂದಾಜು 4.07 ಲಕ್ಷ ಕೋಟಿ ರೂ. ಮೌಲ್ಯವನ್ನು ಅವರ ಒಟ್ಟು ಆಸ್ತಿಯನ್ನು ಲೆಕ್ಕಹಾಕಲು RIL ಹೊಂದಿರುವ ಪೂರ್ಣ ಮೌಲ್ಯಕ್ಕೆ ನೇರವಾಗಿ ಸೇರಿಸಲಾಗುವುದಿಲ್ಲ. ಏಕೆಂದರೆ RIL ಈಗಾಗಲೇ ಜಿಯೋ ಪ್ಲಾಟ್‌ ಫಾರ್ಮ್ಸ್ ನ ಮಾಲೀಕತ್ವ ಹೊಂದಿದ್ದು, ಆ ಉದ್ಯಮದ ಮೌಲ್ಯವು RILನ ಮಾರುಕಟ್ಟೆ ಬೆಲೆಯಲ್ಲಿ ಭಾಗಶಃ ಸೇರಿದೆ. ಹೀಗಾಗಿ, ಜಿಯೋದ ಪರೋಕ್ಷ ಷೇರುಗಳನ್ನು ಪ್ರತ್ಯೇಕವಾಗಿ ಸೇರಿಸುವುದರಿಂದ ಒಂದೇ ಆಸ್ತಿಯನ್ನು ದ್ವಿಗುಣವಾಗಿ ಲೆಕ್ಕಹಾಕಿದಂತಾಗುತ್ತದೆ" ಎಂದು ವಿಶ್ಲೇಷಕರೊಬ್ಬರು ತಿಳಿಸಿದ್ದಾರೆ.

ಈ ಲಿಸ್ಟಿಂಗ್ ಜಿಯೋ ಪ್ಲಾಟ್‌ ಫಾರ್ಮ್ಸ್ ಗೆ ಸ್ವತಂತ್ರ ಮಾರುಕಟ್ಟೆ ಮೌಲ್ಯವನ್ನು ಒದಗಿಸಲಿದ್ದು, ಹೂಡಿಕೆದಾರರು ಇದರ ಮೌಲ್ಯವನ್ನು RIL ಜೊತೆ ಹೋಲಿಕೆ ಮಾಡಲು ಅವಕಾಶ ನೀಡುತ್ತದೆ. ಇದು RILನ ಹೆಚ್ಚಿನ ಮೌಲ್ಯಮಾಪನಕ್ಕೆ ಕಾರಣವಾಗುತ್ತದೆಯೇ ಎಂಬುದು ಜಿಯೋದಲ್ಲಿರುವ ಅದರ ಷೇರುಗಳು, ಇತರ ಉದ್ಯಮಗಳು ಹಾಗೂ ಅದರ ಆಸ್ತಿ-ಪಾಸ್ತಿಗಳನ್ನು ಹೂಡಿಕೆದಾರರು ಹೇಗೆ ಮೌಲ್ಯಮಾಪನ ಮಾಡುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ.

ಪ್ರವರ್ತಕ ಕಂಪೆನಿಗಳು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನಲ್ಲಿ ಶೇ. 48ರಷ್ಟು ಷೇರುಗಳನ್ನು ಹೊಂದಿದ್ದು, ಇದರ ಮಾರುಕಟ್ಟೆ ಮೌಲ್ಯ 1.37 ಲಕ್ಷ ಕೋಟಿ ರೂ. ಆಗಿದೆ. ಈ ಆಧಾರದ ಮೇಲೆ, ಅವರ ಷೇರುಗಳ ಮೌಲ್ಯವು ಸುಮಾರು 65,760 ಕೋಟಿ ರೂ. ಅಥವಾ 0.66 ಲಕ್ಷ ಕೋಟಿ ರೂ. ಆಗುತ್ತದೆ.

►ಲಿಸ್ಟಿಂಗ್ ನಂತರ ಏನೆಲ್ಲ ಬದಲಾಗಬಹುದು?

ಅಂಬಾನಿ ಕುಟುಂಬದ ನಿವ್ವಳ ಆಸ್ತಿ ಮೌಲ್ಯದ ಮೇಲಾಗುವ ತಕ್ಷಣದ ಪರಿಣಾಮವು ಜಿಯೋ ಪ್ಲಾಟ್‌ ಫಾರ್ಮ್ಸ್ ಲಿಸ್ಟಿಂಗ್‌ ಗೆ ಮಾರುಕಟ್ಟೆ ನೀಡುವ ಪ್ರತಿಕ್ರಿಯೆ ಹಾಗೂ RIL ಮತ್ತು ಜಿಯೋ ಫೈನಾನ್ಷಿಯಲ್ ಸರ್ವಿಸಸ್ ನ ಷೇರು ಬೆಲೆಗಳಲ್ಲಿ ಉಂಟಾಗುವ ಬದಲಾವಣೆಗಳನ್ನು ಅವಲಂಬಿಸಿರುತ್ತದೆ.

16 ಲಕ್ಷ ಕೋಟಿ ರೂ. ಮಾರುಕಟ್ಟೆ ಮೌಲ್ಯ ಹೊಂದಿರುವ RILನಲ್ಲಿ ಶೇ 5ರಿಂದ 8ರಷ್ಟು ಸುಸ್ಥಿರ ಏರಿಕೆಯಾದರೆ, ಪ್ರವರ್ತಕರ ಶೇ 50.44ರಷ್ಟು ಷೇರುಗಳ ಮೌಲ್ಯವು ಸುಮಾರು 40,352 ಕೋಟಿ ರೂ.ಯಿಂದ 64,563 ಕೋಟಿ ರೂ.ವರೆಗೆ ಹೆಚ್ಚಾಗಬಹುದು (ಅವರ ಒಡೆತನ ಬದಲಾಗದೆ ಉಳಿದಿದೆ ಎಂದು ಭಾವಿಸಿದರೆ). ಇದು ವಿಶ್ಲೇಷಕರ ಪ್ರಕಾರ ಒಂದು ಕಾಲ್ಪನಿಕ ಸನ್ನಿವೇಶವಾಗಿದೆ.

ಇಲ್ಲಿ ಅಸ್ತಿತ್ವದಲ್ಲಿರುವ ಹೂಡಿಕೆಯ ಮೌಲ್ಯ ಮತ್ತು ಮಾರುಕಟ್ಟೆ ಬೆಲೆಯ ಬದಲಾವಣೆಯಿಂದ ಸೃಷ್ಟಿಯಾಗುವ ಹೆಚ್ಚುವರಿ ಸಂಪತ್ತಿನ ನಡುವಿನ ವ್ಯತ್ಯಾಸವನ್ನು ಅರ್ಥಮಾಡಿಕೊಳ್ಳುವುದು ಮುಖ್ಯವಾಗಿದೆ. ಜಿಯೋ ಪ್ಲಾಟ್‌ ಫಾರ್ಮ್ಸ್ ನ ಲಿಸ್ಟಿಂಗ್ ಮಾರುಕಟ್ಟೆಯಲ್ಲಿ ಉದ್ಯಮದ ಮೌಲ್ಯಮಾಪನವನ್ನು ಹೆಚ್ಚು ಪಾರದರ್ಶಕಗೊಳಿಸುತ್ತದೆ. ಆದರೆ ಅಂಬಾನಿ ಕುಟುಂಬದ ಆಸ್ತಿ ಮೌಲ್ಯದಲ್ಲಿ ಆಗುವ ನಿಜವಾದ ಬದಲಾವಣೆಯು ಮುಂದಿನ ಮಾರುಕಟ್ಟೆ ಚಲನೆಗಳು ಮತ್ತು ಅವರ ಇತರ ಹೂಡಿಕೆಗಳು ಹಾಗೂ ಹೊಣೆಗಾರಿಕೆಗಳ ಮೌಲ್ಯವನ್ನು ಆಧರಿಸಿರುತ್ತದೆ.

ಸೌಜನ್ಯ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor