Photo Credit : X 


ಸ್ಟಾರ್‌ ಲಿಂಕ್ ಸಂಸ್ಥೆಯು 2025ರ ಜೂನ್ ನಲ್ಲೇ ಭಾರತದಲ್ಲಿ ಕಾರ್ಯನಿರ್ವಹಿಸಲು ಪರವಾನಗಿ ಪಡೆದುಕೊಂಡಿದೆ. ಆದರೆ, 16 ತಿಂಗಳು ಕಳೆದರೂ, ಅಕ್ಟೋಬರ್ ಅಂತ್ಯದ ವೇಳೆಗೆ ಯಾವುದೇ ಗ್ರಾಹಕರಿಗೆ ಇಂಟರ್ನೆಟ್ ಸಂಪರ್ಕವನ್ನು ನೀಡಲು ಅದಕ್ಕೆ ಸಾಧ್ಯವಾಗಿಲ್ಲ.

ಬ್ಲೂಮ್ ಬರ್ಗ್ ನ ಜೂನ್ ತಿಂಗಳ ವರದಿ ನಿಜವಾದರೆ, ಕೇಂದ್ರ ಗೃಹ ಸಚಿವಾಲಯದ ಆಡಳಿತಾತ್ಮಕ ಅನುಮತಿಯೇ ಈ ವಿಳಂಬಕ್ಕೆ ಪ್ರಮುಖ ಕಾರಣ. ಅಧಿಕೃತ ಪರವಾನಗಿಯೇ ಇಲ್ಲದ ಇರಾನ್ ನ ಯುದ್ಧಪೀಡಿತ ಪ್ರದೇಶಗಳಲ್ಲಿ ಸ್ಟಾರ್‌ ಲಿಂಕ್ ಸಾಧನಗಳು ಪತ್ತೆಯಾದ ನಂತರ, ಭದ್ರತಾ ತಪಾಸಣೆಯ ಅಂತಿಮ ಮಂಜೂರಾತಿಯನ್ನು ಗೃಹ ಸಚಿವಾಲಯ ತಡೆಹಿಡಿದಿದೆ. ಆದರೆ, ಈ ವರದಿಯನ್ನು ತಪ್ಪುದಾರಿಗೆಳೆಯುವಂಥದ್ದು ಎಂದು ಕರೆದಿರುವ ಸ್ಟಾರ್‌ ಲಿಂಕ್, ಭಾರತಕ್ಕಾಗಿ ವಿಶೇಷ ಮಾದರಿಯನ್ನು ರೂಪಿಸಿರುವುದಾಗಿ ತಿಳಿಸಿದೆ. ಇತ್ತೀಚೆಗೆ, ಅಕ್ಟೋಬರ್ ಆರಂಭದಲ್ಲಿ ಎಲಾನ್ ಮಸ್ಕ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ಮುಕೇಶ್ ಅಂಬಾನಿ ಅವರನ್ನು ದೂರಿದ್ದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಾತ್ರ ತಾವು ನಿಯಮಾವಳಿಗಳನ್ನು ಅನುಸರಿಸುತ್ತಿರುವುದಾಗಿ ಸ್ಪಷ್ಟಪಡಿಸಿದೆ.

ಒಂದು ವರ್ಗವು ಸ್ಟಾರ್‌ ಲಿಂಕ್ ಅನ್ನು ದೇಶದ ಭದ್ರತೆಗೆ ಸವಾಲೊಡ್ಡುವ ವಿದೇಶಿ ಬೆದರಿಕೆ ಎಂದು ಪರಿಗಣಿಸಿದರೆ, ಮತ್ತೊಂದು ವರ್ಗವು ವಿಳಂಬವಾಗುವ ಪ್ರತಿಯೊಂದು ವಾರವೂ ಉದ್ಯಮಿಯೊಬ್ಬರ ಲಾಭಕ್ಕಾಗಿ ದೇಶದ ಹಳ್ಳಿಗಳನ್ನು ಇಂಟರ್ನೆಟ್ನಿಂದ ದೂರವಿಡಲಾಗುತ್ತಿದೆ ಎಂದು ಭಾವಿಸುತ್ತದೆ.

ಬಹಿರಂಗವಾಗಿ ನಡೆಯುತ್ತಿರುವ ಈ ವಾಕ್ಸಮರದಲ್ಲಿ ಸ್ಪಷ್ಟತೆ ಮತ್ತು ಸೂಕ್ತ ಮಾಹಿತಿಯ ಕೊರತೆಯಿದೆ. ಇದರ ಮುಖ್ಯ ವಿಷಯ ಸರಳವಾಗಿದೆ. ಭಾರತ ನೀಡುವ ಪರವಾನಗಿಯು ದೇಶದ ಗಡಿಯೊಳಗೆ ಭೌತಿಕವಾಗಿ ಇರುವ ಸ್ಟಾರ್‌ ಲಿಂಕ್ ಉಪಕರಣಗಳ ಮೇಲೆ ಮಾತ್ರ ನಿಯಂತ್ರಣ ನೀಡುತ್ತದೆ. ಆದರೆ, ಆಕಾಶದಲ್ಲಿರುವ ಉಪಗ್ರಹಗಳ ಮೇಲಾಗಲಿ ಅಥವಾ ಯಾರ ಸಾಧನ ಕೆಲಸ ಮಾಡಬೇಕು ಎಂಬುದನ್ನು ನಿರ್ಧರಿಸುವ ಸಾಫ್ಟ್ವೇರ್ ಮೇಲಾಗಲಿ ಭಾರತಕ್ಕೆ ಯಾವುದೇ ನಿಯಂತ್ರಣವಿರುವುದಿಲ್ಲ.

►ಪ್ರಾದೇಶಿಕ ಪರವಾನಗಿಗಳು ಕಂಪೆನಿಯ ಸಾಮರ್ಥ್ಯವನ್ನು ಕಟ್ಟಿಹಾಕಲಾರವು

ಸ್ಟಾರ್‌ ಲಿಂಕ್ ವ್ಯವಸ್ಥೆಯನ್ನು ಪ್ರಮುಖವಾಗಿ ನಾಲ್ಕು ಭಾಗಗಳಾಗಿ ವಿಂಗಡಿಸಿ ನೋಡಬಹುದು. ಭೂಮಿಯಿಂದ ಕೆಲ ನೂರು ಕಿಲೋಮೀಟರ್ ಎತ್ತರದಲ್ಲಿರುವ ಸಾವಿರಾರು ಉಪಗ್ರಹಗಳು ಇದರ ಮೊದಲ ಭಾಗ; ಇಲ್ಲಿನ ಯಾರಿಗೆ ಇಷ್ಟವಿರಲಿ, ಇಲ್ಲದಿರಲಿ, ಅವು ಭಾರತದ ಮೇಲೂ ಹಾದುಹೋಗುತ್ತವೆ. ಎರಡನೆಯದು ಗ್ರಾಹಕರ ಮೇಲ್ಛಾವಣಿಯ ಮೇಲೆ ಅಳವಡಿಸುವ ಫ್ಲಾಟ್ ಪ್ಯಾನೆಲ್ನಂಥ 'ಡಿಶ್'. ಇದು ಆಕಾಶದಲ್ಲಿ ಚಲಿಸುವ ಉಪಗ್ರಹಗಳ ಜೊತೆ ಸಂಪರ್ಕ ಸಾಧಿಸಲು ತಾನೇ ದಿಕ್ಕು ಬದಲಿಸಿಕೊಳ್ಳುತ್ತದೆ. ಮೂರನೆಯದು ಗೇಟ್‌ ವೇಗಳು; ಇವು ಉಪಗ್ರಹಗಳನ್ನು ಸಾಮಾನ್ಯ ಇಂಟರ್ನೆಟ್ ಜಾಲದೊಂದಿಗೆ ಸಂಪರ್ಕಿಸುತ್ತವೆ. ನಾಲ್ಕನೆಯ ಮತ್ತು ಸುದ್ದಿಗೋಷ್ಠಿಗಳಲ್ಲಿ ಯಾರೂ ಹೆಚ್ಚಾಗಿ ಮಾತನಾಡದ ಪ್ರಮುಖ ಭಾಗವೆಂದರೆ, ಸ್ಪೇಸ್ಎಕ್ಸ್ನ ಕಾರ್ಯಾಚರಣೆ ಕೇಂದ್ರಗಳಲ್ಲಿರುವ ನೆಟ್ವರ್ಕ್ ನಿರ್ವಹಣಾ ಸಾಫ್ಟ್ವೇರ್. ಇದು ಪ್ರತಿ ಡಿಶ್ ಅನ್ನು ದೃಢೀಕರಿಸುತ್ತದೆ, ಇಂಟರ್ನೆಟ್ ವೇಗವನ್ನು ಹಂಚುತ್ತದೆ ಮತ್ತು ಯಾವ ಭಾಗಕ್ಕೆ ಸೇವೆ ಸಿಗಬೇಕು ಎಂಬುದನ್ನು ನಿರ್ಧರಿಸುತ್ತದೆ.

ಹಳೆಯ ಕಾಲದ ಉಪಗ್ರಹ ಬ್ರಾಡ್ ಬ್ಯಾಂಡ್ ಅನ್ನು ಎಂಜಿನಿಯರ್ಗಳು 'ಬೆಂಟ್-ಪೈಪ್' ವ್ಯವಸ್ಥೆ ಎಂದು ಕರೆಯುತ್ತಾರೆ. ಅದರಲ್ಲಿ ಉಪಗ್ರಹವು ಕೇವಲ ಒಂದು ಕನ್ನಡಿಯಂತೆ ಕೆಲಸ ಮಾಡುತ್ತಿತ್ತು; ನಿಮ್ಮ ಸಿಗ್ನಲ್ ಅನ್ನು ನೇರವಾಗಿ ಅದರ ಕೆಳಗಿರುವ ಗೇಟ್‌ ವೇಗೆ ರವಾನಿಸುತ್ತಿತ್ತು. ಆದರೆ, ಹೊಸ ಸ್ಟಾರ್‌ ಲಿಂಕ್ ಉಪಗ್ರಹಗಳು ಲೇಸರ್ ಲಿಂಕ್ ಗಳ ಮೂಲಕ ತಮ್ಮಲ್ಲೇ ಸಿಗ್ನಲ್ಗಳನ್ನು ವಿನಿಮಯ ಮಾಡಿಕೊಳ್ಳುತ್ತವೆ. ಉದಾಹರಣೆಗೆ, ಲಡಾಖ್ನಲ್ಲಿರುವ ಡಿಶ್ನಿಂದ ಹೊರಡುವ ಸಿಗ್ನಲ್, ಬೇರೆ ಖಂಡದ ಗೇಟ್‌ ವೇ ತಲುಪುವ ಮೊದಲು ಹಲವಾರು ಉಪಗ್ರಹಗಳ ಮೂಲಕ ಹಾದುಹೋಗಬಹುದು. ಸಿಗ್ನಲ್ಗಳನ್ನು ಈ ರೀತಿ ಉಪಗ್ರಹಗಳ ನಡುವೆ ವರ್ಗಾಯಿಸುವ ಸಾಮರ್ಥ್ಯವು ವ್ಯವಸ್ಥೆಯನ್ನು ಹೆಚ್ಚು ಸಂಕೀರ್ಣಗೊಳಿಸುತ್ತದೆ. ನಿಮ್ಮ ಇಂಟರ್ನೆಟ್ ಮಾಹಿತಿ ನೆಟ್ವರ್ಕ್ನಿಂದ ಎಲ್ಲಿ ಹೊರಡುತ್ತದೆ ಎಂಬುದು ಭೌಗೋಳಿಕ ವಾಸ್ತವಕ್ಕಿಂತ ಹೆಚ್ಚಾಗಿ ಸಾಫ್ಟ್ವೇರ್ ಮೂಲಕ ನಿರ್ಧಾರವಾಗುವ ರೂಟಿಂಗ್ ನಿರ್ಧಾರವಾಗಿದೆ.

ಹೀಗಾಗಿ, ಸ್ಟಾರ್‌ ಲಿಂಕ್ ನ ನೆಟ್ವರ್ಕ್ ನಿರ್ವಹಣಾ ವ್ಯವಸ್ಥೆಯೇ ಇಡೀ ಕಾರ್ಯಾಚರಣೆಯ ಪ್ರಮುಖ ಕೇಂದ್ರವಾಗಿದೆ. ಇದು ಯಾವುದೇ ಪ್ರದೇಶದಲ್ಲಿ ಸೇವೆಯನ್ನು ಆನ್ ಅಥವಾ ಆಫ್ ಮಾಡುವ, ಡೇಟಾ ಯಾವ ಮಾರ್ಗದಲ್ಲಿ ಸಾಗಬೇಕು ಎಂಬುದನ್ನು ನಿಯಂತ್ರಿಸುವ ಮತ್ತು ಬಳಕೆದಾರರ ಡಿಶ್ಗಳ ಜಿಪಿಎಸ್ (GPS) ಸ್ಥಳವನ್ನು ತಿಳಿದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಈ ಸಾಮರ್ಥ್ಯವನ್ನು ಯಾವುದೇ ದೇಶದ ಪ್ರಾದೇಶಿಕ ಪರವಾನಗಿಗಳು ನಿಯಂತ್ರಿಸಲು ಸಾಧ್ಯವಿಲ್ಲ.

ಅದಕ್ಕಾಗಿಯೇ ಇರಾನ್ ನಲ್ಲಿ ಯಾವುದೇ ಅಧಿಕೃತ ಪರವಾನಗಿ ಇಲ್ಲದಿದ್ದರೂ, ಅಲ್ಲಿ ಕಳ್ಳಸಾಗಣೆ ಮೂಲಕ ತಲುಪಿಸಿದ ಡಿಶ್ಗಳು ಕಾರ್ಯನಿರ್ವಹಿಸಲು ಸಾಧ್ಯವಾಯಿತು. ಅಮೆರಿಕ ಸರ್ಕಾರದ ಅನುಮೋದನೆಯೊಂದಿಗೆ ಸ್ಪೇಸ್ಎಕ್ಸ್ 2022ರಲ್ಲಿ ಅಲ್ಲಿ ಇಂಟರ್ನೆಟ್ ಸೇವೆಯನ್ನು ಆರಂಭಿಸಿತ್ತು. ಇರಾನ್ ಸರ್ಕಾರಕ್ಕೆ ಈ ಬಗ್ಗೆ ಯಾವುದೇ ಮುನ್ಸೂಚನೆ ಇರಲಿಲ್ಲ ಮತ್ತು ಬಯಸಿದ್ದರೂ ಅದನ್ನು ತಡೆಯಲು ಸಾಧ್ಯವಿರಲಿಲ್ಲ.

►ಭಾರತದ ಪರವಾನಗಿ ವಾಸ್ತವವಾಗಿ ಒಳಗೊಂಡಿರುವುದೇನು?

ಪರವಾನಗಿಯಿಂದ ಉಪಗ್ರಹಗಳ ಕಾರ್ಯಾಚರಣೆಯನ್ನಾಗಲಿ ಅಥವಾ ತಂತ್ರಾಂಶವನ್ನಾಗಲಿ ನಿಯಂತ್ರಿಸಲು ಸಾಧ್ಯವಿಲ್ಲ ಎಂದಾದರೆ, ಅದರ ಅಂತಿಮ ಉದ್ದೇಶವೇನು ಎಂಬ ಪ್ರಶ್ನೆ ಮೂಡುವುದು ಸಹಜ.

ಯಾವುದೇ ಕಂಪೆನಿಯು ದೇಶವೊಂದರಲ್ಲಿ ಕಾನೂನುಬದ್ಧವಾಗಿ ಸೇವೆಗಳನ್ನು ಮಾರಾಟ ಮಾಡಲು ಪರವಾನಗಿಯೇ ಆಧಾರವಾಗಿದೆ ಮತ್ತು ಪ್ರತಿಯೊಂದು ದೇಶವೂ ತನ್ನದೇ ಆದ ಕಠಿಣ ನಿಬಂಧನೆಗಳನ್ನು ವಿಧಿಸುತ್ತದೆ. ಭಾರತದಲ್ಲಿ ಪರವಾನಗಿ ಪಡೆಯುವುದು ಮೊದಲ ಹೆಜ್ಜೆ ಮಾತ್ರ. ಯಾವುದೇ ಕಂಪೆನಿ ತನ್ನ ವಾಣಿಜ್ಯ ಸೇವೆಯನ್ನು ಆರಂಭಿಸುವ ಮೊದಲು ಭದ್ರತಾ ತಪಾಸಣೆಯನ್ನು ಪೂರ್ಣಗೊಳಿಸಬೇಕು ಮತ್ತು ಸ್ಪೆಕ್ಟ್ರಂ ಮಂಜೂರಾತಿ ಪಡೆಯಬೇಕು.

ದೂರಸಂಚಾರ ಇಲಾಖೆಯ ದೃಷ್ಟಿಯಿಂದ ಹೇಳುವುದಾದರೆ, ಭಾರತದ ನಿಯಮಗಳು ಇತರ ದೇಶಗಳಿಗಿಂತ ಹೆಚ್ಚು ಕಠಿಣವಾಗಿವೆ. 2025ರ ಮೇ ತಿಂಗಳಲ್ಲಿ ಜಾರಿಗೆ ಬಂದ ಭದ್ರತಾ ನಿಬಂಧನೆಗಳ ಪ್ರಕಾರ, ಭಾರತೀಯ ಗೇಟ್‌ ವೇಗಳ ಮೂಲಕವೇ ಕಾನೂನುಬದ್ಧ ಕಣ್ಗಾವಲು ನಡೆಸಬೇಕು, ಯಾವುದೇ ಭಾರತೀಯರ ಇಂಟರ್ನೆಟ್ ಡೇಟಾವನ್ನು ವಿದೇಶಿ ಗೇಟ್‌ ವೇಗಳ ಮೂಲಕ ರವಾನಿಸುತ್ತಿಲ್ಲ ಎಂಬುದನ್ನು ನೈಜ ಸಮಯದಲ್ಲಿ ಸಾಬೀತುಪಡಿಸಬೇಕು ಮತ್ತು ಭಾರತೀಯ ಮೊಬೈಲ್ ನೆಟ್ವರ್ಕ್ಗಳಲ್ಲಿ ಈಗಾಗಲೇ ನಿಷೇಧಿಸಲಾದ ವೆಬ್ಸೈಟ್ಗಳನ್ನು ಇವರೂ ಬ್ಲಾಕ್ ಮಾಡಬೇಕು. ಇದರೊಂದಿಗೆ ಕಂಪೆನಿಗಳು ಭೂ ಗಡಿಗಳು ಮತ್ತು ಕರಾವಳಿಯ ಉದ್ದಕ್ಕೂ 50 ಕಿ.ಮೀ. ಕಣ್ಗಾವಲು ವಲಯಗಳನ್ನು ಸ್ಥಾಪಿಸಬೇಕು, ನಿಷೇಧಿತ ಪ್ರದೇಶಗಳಿಗೆ ಬರುವ ಯಾವುದೇ ಡಿಶ್ನ ಸಂಪರ್ಕ ಕಡಿತಗೊಳಿಸಬೇಕು ಮತ್ತು ತಮ್ಮ ನೆಟ್ವರ್ಕ್ ಕಾರ್ಯಾಚರಣೆ ಕೇಂದ್ರಗಳನ್ನು ಭಾರತದಲ್ಲೇ ನಿರ್ವಹಿಸಬೇಕು.

ಈ ನಿಬಂಧನೆಗಳ ಅಡಿಯಲ್ಲಿ, ದೇಶದಲ್ಲಿರುವ ಪ್ರತಿಯೊಂದು ಕಾನೂನುಬದ್ಧ ಡಿಶ್ ಕೂಡ ಪರಿಚಿತ ಗ್ರಾಹಕರಿಗೆ ಸೇರಿದ್ದಾಗಿರುತ್ತದೆ. ಅದರ ಡೇಟಾ ಭಾರತೀಯ ಗೇಟ್‌ ವೇಗಳ ಮೂಲಕವೇ ಹರಿಯುತ್ತದೆ ಮತ್ತು ಗಡಿಯ ಬಳಿ ಅದರ ಚಲನವಲನಗಳ ಮೇಲೆ ನಿಗಾ ಇಡಲಾಗುತ್ತದೆ. ಮಣಿಪುರದಲ್ಲಿ ಉಗ್ರರಿಂದ ಮತ್ತು ಅಂಡಮಾನ್ ಸಮುದ್ರದಲ್ಲಿ ಕಳ್ಳಸಾಗಣೆದಾರರಿಂದ ಸ್ಟಾರ್‌ ಲಿಂಕ್ ಡಿಶ್ಗಳನ್ನು ಈಗಾಗಲೇ ವಶಪಡಿಸಿಕೊಳ್ಳಲಾಗಿದೆ.

ಪರವಾನಗಿ ಪಡೆದ ಸೇವೆಯಿದ್ದರೆ, ಭಾರತೀಯ ತನಿಖಾ ಸಂಸ್ಥೆಗಳಿಗೆ ಕನಿಷ್ಠ ಅನುಸರಿಸಲು ಒಂದು ಜಾಡಾದರೂ ಸಿಗುತ್ತದೆ. ಅದೇ ಪರವಾನಗಿ ಇಲ್ಲದಿದ್ದರೆ, ಭಾರತದ ಮೇಲೆ ತನ್ನ ಸಿಗ್ನಲ್ಗಳನ್ನು ಆಫ್ ಮಾಡಿದ್ದೇವೆ ಎಂದು ಸ್ಪೇಸ್ಎಕ್ಸ್ ಹೇಳುವುದನ್ನು ಮಾತ್ರ ನಾವು ನಂಬಬೇಕಾಗುತ್ತದೆ.

ಹಾಗಂದ ಮಾತ್ರಕ್ಕೆ ಪರವಾನಗಿಯಿಂದ ಯಾವುದೇ ಬದಲಾವಣೆ ಆಗುವುದಿಲ್ಲ ಎಂದರ್ಥವಲ್ಲ.

ವಾಸ್ತವವಾಗಿ, ಸಾಮಾನ್ಯ ಸಂದರ್ಭಗಳಲ್ಲಿ ಇದು ಎಲ್ಲವನ್ನೂ ಬದಲಾಯಿಸುತ್ತದೆ. ಸ್ಪೇಸ್ಎಕ್ಸ್ಗೆ ಭಾರತೀಯ ಮಾರುಕಟ್ಟೆ ಬೇಕು ಮತ್ತು ಇಲ್ಲಿ ವ್ಯಾಪಾರ ಮಾಡಲು ಭಾರತವು ತನ್ನದೇ ಆದ ನಿಯಮಗಳನ್ನು ವಿಧಿಸಲು ಪರವಾನಗಿಯೇ ಮಾರ್ಗವಾಗಿದೆ. ಆದರೆ, ಅಸಾಧಾರಣ ಪರಿಸ್ಥಿತಿಯೊಂದು ಎದುರಾದಾಗ, ಅಮೆರಿಕ ಸರ್ಕಾರದ ಒತ್ತಡಕ್ಕೆ ಮಣಿದು ಅಥವಾ ಸ್ವತಃ ಸ್ಪೇಸ್ಎಕ್ಸ್ ಬೇರೆ ನಿರ್ಧಾರ ತೆಗೆದುಕೊಂಡರೆ, ಈ ನಿಯಮಗಳು ಎಷ್ಟು ಕಾಲ ಉಳಿಯುತ್ತವೆ ಎಂಬುದನ್ನು ಪರವಾನಗಿಯಿಂದ ಖಾತರಿಪಡಿಸಲು ಸಾಧ್ಯವಿಲ್ಲ. ಇರಾನ್ ನಲ್ಲಿ ನಡೆದದ್ದು ಅಂತಹದೇ ಒಂದು ಪರಿಸ್ಥಿತಿ.

ಅಂತಿಮವಾಗಿ, ಇಂಟರ್ನೆಟ್ ಡೇಟಾ ನಿಜಕ್ಕೂ ಭಾರತೀಯ ಗೇಟ್‌ ವೇಗಳಲ್ಲೇ ಉಳಿಯುತ್ತದೆಯೇ ಎಂಬುದನ್ನು ಭಾರತವು ಆಡಿಟ್ ಮಾಡುವ ಮೂಲಕವಷ್ಟೇ ಪರಿಶೀಲಿಸಬಲ್ಲದು. ಭೌತಶಾಸ್ತ್ರದ ನಿಯಮಗಳು ಇದಕ್ಕೆ ಯಾವುದೇ ಗ್ಯಾರಂಟಿ ನೀಡುವುದಿಲ್ಲ.

►ಸರ್ಕಾರ ಹೇಳುವುದೇನು?

ಇದು ಯಾವುದೇ ಒಂದು ನಿರ್ದಿಷ್ಟ ಕಂಪೆನಿಗೆ ಸಂಬಂಧಿಸಿದ್ದಲ್ಲ ಎಂಬುದು ಸರ್ಕಾರದ ಮುಖ್ಯ ವಾದವಾಗಿದೆ. ಅಕ್ಟೋಬರ್ 8ರಂದು ಮಾತನಾಡಿದ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ, ಸ್ಟಾರ್‌ ಲಿಂಕ್, ಜಿಯೋದ ಉಪಗ್ರಹ ವಿಭಾಗ ಮತ್ತು Eutelsat OneWeb ಸೇರಿದಂತೆ ಮೂರು ಸಂಸ್ಥೆಗಳು ಸ್ಯಾಟ್ ಕಾಮ್ ಪರವಾನಗಿಗಳನ್ನು ಹೊಂದಿವೆ ಮತ್ತು ಅವು ಯಾವುದಕ್ಕೂ ಇನ್ನೂ ಭದ್ರತಾ ಅನುಮೋದನೆ ಸಿಕ್ಕಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಇಲಾಖೆಯ ರಾಜ್ಯ ಸಚಿವ ಚಂದ್ರಶೇಖರ್ ಪೆಮ್ಮಾಸಾನಿ ಮಾತನಾಡಿ, ಈ ಕಡತವು ಈಗ ಗೃಹ ಸಚಿವಾಲಯದ ಬಳಿಯಿದ್ದು, ಈ ವಿಷಯಕ್ಕೂ "ಯಾವುದೇ ಒಂದು ಕಂಪೆನಿಗೂ ಯಾವುದೇ ಸಂಬಂಧವಿಲ್ಲ" ಎಂದು ತಿಳಿಸಿದ್ದಾರೆ.

ಈ ವಿಚಾರದಲ್ಲಿ ಸರ್ಕಾರದ ವಾದ ಸರಿಯಾಗಿದೆ. ಸ್ಟಾರ್‌ ಲಿಂಕ್ ಕಾಯುತ್ತಿರುವಾಗ ಜಿಯೋ ಕಂಪೆನಿಗೆ ಯಾವುದೇ ವಿಶೇಷ ಅನುಮತಿ ದೊರೆತಿಲ್ಲ. ಆದರೆ, ಒಂದೇ ರೀತಿಯ ನಿಯಮಗಳು ಬೇರೆ ಬೇರೆ ಕಂಪೆನಿಗಳ ಮೇಲೆ ಸಂಪೂರ್ಣವಾಗಿ ಭಿನ್ನವಾದ ಪರಿಣಾಮ ಬೀರಬಹುದು. ಉದಾಹರಣೆಗೆ, ಉಪಗ್ರಹಗಳ ನಡುವೆ ಡೇಟಾ ವರ್ಗಾವಣೆಯಾಗಬಾರದು ಎಂಬುದು ವರದಿಯಾಗಿರುವ ನಿಬಂಧನೆಗಳಲ್ಲಿ ಒಂದಾಗಿದೆ. ಹಳೆಯ ಮಾದರಿಯ 'ಬೆಂಟ್-ಪೈಪ್' ವ್ಯವಸ್ಥೆಗೆ ಇದರಿಂದ ಯಾವುದೇ ನಷ್ಟವಿಲ್ಲ. ಆದರೆ, ಹೊಸ ಉಪಗ್ರಹಗಳಲ್ಲಿ ಲೇಸರ್ ಲಿಂಕ್ ಗಳನ್ನೇ ಮುಖ್ಯ ತಂತ್ರಜ್ಞಾನವಾಗಿ ಹೊಂದಿರುವ ಸ್ಟಾರ್‌ ಲಿಂಕ್ ಗೆ ಇದು ಅದರ ಮೂಲ ವಿನ್ಯಾಸಕ್ಕೇ ಹಿನ್ನಡೆಯನ್ನುಂಟು ಮಾಡುತ್ತದೆ. ಯಾವುದೇ ನಿಯಮವನ್ನು "ತಂತ್ರಜ್ಞಾನ-ತಟಸ್ಥ" (ಟೆಕ್ನಾಲಜಿ ಅಗ್ನೋಸ್ಟಿಕ್) ಎಂದು ಕರೆದ ಮಾತ್ರಕ್ಕೆ ಅದು ವಾಸ್ತವದಲ್ಲಿ ಹಾಗೆಯೇ ಇರುತ್ತದೆ ಎಂದರ್ಥವಲ್ಲ.

ಭದ್ರತೆಗೆ ಸಂಬಂಧಿಸಿದ ವಾದವನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ, ಅದು ಸರ್ಕಾರದ ಅಂತಿಮ ತೀರ್ಮಾನವನ್ನು ಸಮರ್ಥಿಸುತ್ತದೆ ಎಂದೇನಿಲ್ಲ. ಇರಾನ್ ನಲ್ಲಿ ನಡೆದ ಘಟನೆಯು, ಯಾವುದೇ ದೇಶದ ಅನುಮತಿಯಿಲ್ಲದೆ ಸ್ಪೇಸ್ಎಕ್ಸ್ ಆ ದೇಶದ ಮೇಲೆ ಇಂಟರ್ನೆಟ್ ಸೇವೆಯನ್ನು ಸಕ್ರಿಯಗೊಳಿಸಬಲ್ಲದು ಎಂಬುದನ್ನು ತೋರಿಸಿಕೊಟ್ಟಿದೆ. ಸ್ಟಾರ್‌ ಲಿಂಕ್ ಗೆ ಅನುಮೋದನೆ ನಿರಾಕರಿಸುವುದರಿಂದ ಇದನ್ನು ತಡೆಯಲು ಸಾಧ್ಯವಿಲ್ಲ. ಬದಲಿಗೆ, ಇದು ಈಗಾಗಲೇ ಚಲಾವಣೆಯಲ್ಲಿರುವ ಅನಧಿಕೃತ ಡಿಶ್ಗಳ ಮೇಲಿನ ಕಣ್ಗಾವಲನ್ನು ಕಡಿಮೆ ಮಾಡುತ್ತದೆ ಮತ್ತು ಏನಾದರೂ ಸಮಸ್ಯೆಯಾದರೆ ಸ್ಪೇಸ್ಎಕ್ಸ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಭಾರತದ ಬಳಿ ಯಾವುದೇ ಅಧಿಕಾರವಿರುವುದಿಲ್ಲ.

ಪಾರದರ್ಶಕತೆಯ ಕೊರತೆಯು ಮತ್ತೊಂದು ಸಮಸ್ಯೆಯಾಗಿದೆ. ಇರಾನ್ ವರದಿಯನ್ನು ಸರ್ಕಾರವು ಇದುವರೆಗೆ ದೃಢಪಡಿಸಿಯೂ ಇಲ್ಲ ಅಥವಾ ತಳ್ಳಿಹಾಕಿಯೂ ಇಲ್ಲ. ಸ್ಟಾರ್‌ ಲಿಂಕ್ ಕಂಪೆನಿಯು ಅರ್ಜಿ ಸಲ್ಲಿಸಿ ಸುಮಾರು ನಾಲ್ಕು ವರ್ಷಗಳು ಕಳೆದಿದ್ದರೂ, ಗೃಹ ಸಚಿವಾಲಯದ ಪರಿಶೀಲನೆ ಯಾವಾಗ ಮುಗಿಯುತ್ತದೆ ಎಂಬ ಬಗ್ಗೆ ಸರ್ಕಾರ ಇನ್ನೂ ಯಾವುದೇ ನಿರ್ದಿಷ್ಟ ಸಮಯವನ್ನು ನೀಡಿಲ್ಲ. ಆದಾಯದ ಶೇಕಡಾ 5ರಷ್ಟು ಸ್ಪೆಕ್ಟ್ರಂ ಶುಲ್ಕದ ಪ್ರಸ್ತಾವನೆಗೆ ಸೆಪ್ಟೆಂಬರ್ನಲ್ಲಿ ಡಿಜಿಟಲ್ ಕಮ್ಯುನಿಕೇಷನ್ಸ್ ಕಮಿಷನ್ ಒಪ್ಪಿಗೆ ನೀಡಿದ್ದರೂ, ಅದು ಇನ್ನೂ ಸಚಿವ ಸಂಪುಟದ ಅನುಮೋದನೆಗಾಗಿ ಕಾಯುತ್ತಿದೆ. ಭದ್ರತಾ ಪರಿಶೀಲನೆಯನ್ನು ಬಹಿರಂಗವಾಗಿ ನಡೆಸಲು ಸಾಧ್ಯವಿಲ್ಲದಿರಲು ಸಮರ್ಥ ಕಾರಣಗಳಿರಬಹುದು, ಆದರೆ ಅದಕ್ಕೆ ಸಂಬಂಧಿಸಿದ ಮಾನದಂಡಗಳು ಮತ್ತು ಸಮಯದ ಮಿತಿಯನ್ನು ಬಹಿರಂಗಪಡಿಸಬಹುದಿತ್ತು.

ಯಾವುದೇ ನಿರ್ಧಾರವು ನಿಧಾನ ಹಾಗೂ ಅಸ್ಪಷ್ಟವಾಗಿದ್ದಾಗ, ಜನರು ತಾವೇ ಊಹಾಪೋಹಗಳನ್ನು ಹುಟ್ಟುಹಾಕುತ್ತಾರೆ. ಈಗ ನಡೆದಿರುವುದೂ ಅದೇ.

►ಮಸ್ಕ್ ಹೇಳುವುದೇನು?

165ಕ್ಕೂ ಹೆಚ್ಚು ದೇಶಗಳಲ್ಲಿ ಪರವಾನಗಿ ಪಡೆದಿರುವ ಸ್ಟಾರ್‌ ಲಿಂಕ್ ಗೆ ಭಾರತದಲ್ಲಿ ಮಾತ್ರ "ಯಾವ ಪರವಾನಗಿಯೂ ಇಲ್ಲ" ಎಂದು ಅಕ್ಟೋಬರ್ 8ರಂದು ಮಸ್ಕ್ ತಮ್ಮ ಪೋಸ್ಟ್ನಲ್ಲಿ ಪ್ರಶ್ನಿಸಿದ್ದರು. ಆದರೆ, ವಾಸ್ತವವಾಗಿ ಸ್ಟಾರ್‌ ಲಿಂಕ್ ಈಗಾಗಲೇ ಭಾರತದಲ್ಲಿ ಪರವಾನಗಿ ಹೊಂದಿದೆ. ಸ್ಟಾರ್‌ ಲಿಂಕ್ 2025ರ ಜೂನ್ ನಲ್ಲಿ ಸ್ಯಾಟ್ಕಾಮ್ ಪರವಾನಗಿ ಮತ್ತು ಒಂದು ತಿಂಗಳ ಬಳಿಕ ಬಾಹ್ಯಾಕಾಶ ಅಧಿಕಾರವನ್ನು (space authorisation) ಪಡೆದುಕೊಂಡಿದೆ. ಆದರೆ, ಅದಕ್ಕಿನ್ನೂ ಸಿಕ್ಕಿಲ್ಲದಿರುವುದು ಭದ್ರತಾ ಅನುಮೋದನೆ, ಅಂತಿಮ ಸ್ಪೆಕ್ಟ್ರಂ ಹಂಚಿಕೆ ಮತ್ತು ವಿದೇಶಿ ನೇರ ಹೂಡಿಕೆಯ ಅನುಮೋದನೆ ಮಾತ್ರ. ಬ್ರೆಜಿಲ್ ಅಥವಾ ಕೀನ್ಯಾದಲ್ಲಿ ಪರವಾನಗಿಗಳನ್ನು ಹೊಂದಿರುವುದು ಭಾರತದ ನಿಬಂಧನೆಗಳನ್ನು ಪೂರೈಸುವುದಕ್ಕೂ ಯಾವುದೇ ಸಂಬಂಧ ಹೊಂದಿಲ್ಲ, ಏಕೆಂದರೆ ಭಾರತದ ನಿಯಮಗಳು ಇತರ ದೇಶಗಳಿಗಿಂತ ಹೆಚ್ಚು ಕಠಿಣವಾಗಿವೆ.

ಪ್ರತಿಯೊಂದು ಭಾರತೀಯ ಕಾನೂನನ್ನು ಪಾಲಿಸಲು ಸ್ಟಾರ್‌ ಲಿಂಕ್ ಐದು ವರ್ಷಗಳಿಂದ ಶ್ರಮಿಸುತ್ತಿದೆ ಎಂದೂ ಅವರು ಹೇಳಿದ್ದಾರೆ. ಆದರೆ, ಸ್ಪೇಸ್ಎಕ್ಸ್ ಮತ್ತು ಗೃಹ ಸಚಿವಾಲಯವನ್ನು ಹೊರತುಪಡಿಸಿ ಬೇರೆ ಯಾರೂ ಇದನ್ನು ಪರಿಶೀಲಿಸಲು ಸಾಧ್ಯವಿಲ್ಲ. ಹಿಂದಿನ ದಾಖಲೆಗಳೂ ಸಂಪೂರ್ಣವಾಗಿ ಕ್ಲೀನ್ ಆಗಿಲ್ಲ. 2021ರಲ್ಲಿ, ಯಾವುದೇ ಅಧಿಕೃತ ಪರವಾನಗಿ ಪಡೆಯುವ ಮುನ್ನವೇ ಸ್ಟಾರ್‌ ಲಿಂಕ್ ಭಾರತದಲ್ಲಿ ಮುಂಗಡ ಬುಕಿಂಗ್ ಸ್ವೀಕರಿಸಲು ಆರಂಭಿಸಿತ್ತು. ಆಗ ಸರ್ಕಾರವು ಅದನ್ನು ತಡೆದು, ಗ್ರಾಹಕರಿಗೆ ಹಣವನ್ನು ಮರಳಿಸುವಂತೆ ಮಾಡಿತ್ತು. ಅದಕ್ಕಿಂತ ಮುಖ್ಯವಾಗಿ, ಭಾರತಕ್ಕೆ ಅತ್ಯಂತ ಮುಖ್ಯವಾಗಿರುವ ಅಂಶಗಳಾದ ಇಂಟರ್ನೆಟ್ ಡೇಟಾವನ್ನು ಭಾರತೀಯ ಗೇಟ್‌ ವೇಗಳಲ್ಲೇ ಉಳಿಸಿಕೊಳ್ಳುವುದು ಮುಂತಾದವುಗಳನ್ನು ಸ್ಟಾರ್‌ ಲಿಂಕ್ ತನ್ನ ನಿಯಂತ್ರಣದಲ್ಲಿಟ್ಟುಕೊಂಡಿದೆ ಮತ್ತು ಭಾರತವು ಅದನ್ನು ಕೇವಲ ಆಡಿಟ್ ಮಾತ್ರ ಮಾಡಬಲ್ಲದು.

ಸ್ಟಾರ್‌ ಲಿಂಕ್ ತಾನು ನಿಯಮಗಳನ್ನು ಪಾಲಿಸುವುದಾಗಿ ನೀಡುವ ಭರವಸೆಯನ್ನು ಪರಿಶೀಲಿಸುವುದಕ್ಕಾಗಿಯೇ ಭದ್ರತಾ ಪರಿಶೀಲನೆಯನ್ನು ನಡೆಸಲಾಗುತ್ತದೆ.

ಅಕ್ಟೋಬರ್ 7ರಂದು ನಡೆದ ಇಂಡಿಯಾ ಮೊಬೈಲ್ ಕಾಂಗ್ರೆಸ್ನಲ್ಲಿ ಮಾತನಾಡಿದ ಸ್ಟಾರ್‌ ಲಿಂಕ್ ಕಾರ್ಯನಿರ್ವಾಹಕಿ ಲೋರೆನ್ ಡ್ರೇಯರ್, ಕಂಪೆನಿಯು ಭಾರತದಲ್ಲಿ 20 ಗೇಟ್‌ ವೇಗಳನ್ನು ನಿರ್ಮಿಸಿದೆ ಮತ್ತು ಭಾರತೀಯ ಬಳಕೆದಾರರ ಡೇಟಾವನ್ನು ಇಲ್ಲೇ ಸಂಗ್ರಹಿಸುತ್ತದೆ ಎಂದು ತಿಳಿಸಿದ್ದರು. ಇದು ನಂಬಲರ್ಹವಾಗಿದೆ ಮತ್ತು ಡೇಟಾಗೆ ಸಂಬಂಧಿಸಿದ ಪ್ರಶ್ನೆಗಳಿಗೆ ಉತ್ತರಿಸುತ್ತದೆ, ಆದರೆ ಇದು ನಿಯಂತ್ರಣದ ಮೂಲ ಪ್ರಶ್ನೆಗೆ ಪರಿಹಾರ ನೀಡುವುದಿಲ್ಲ. ಇರಾನ್ ಘಟನೆಯು ಹುಟ್ಟುಹಾಕಿದ ಕಳವಳವೆಂದರೆ ಭಾರತೀಯ ಡೇಟಾವನ್ನು ಎಲ್ಲಿ ಸಂಗ್ರಹಿಸಲಾಗಿದೆ ಎಂಬುದಲ್ಲ, ಬದಲಿಗೆ ಭಾರತದಲ್ಲಿ ಸೇವೆಯನ್ನು ಆನ್ ಅಥವಾ ಆಫ್ ಮಾಡಲು ಯಾರಿಗೆ ಅಧಿಕಾರವಿದೆ ಮತ್ತು ಅದು ಯಾರ ನಿಯಂತ್ರಣದಲ್ಲಿರುತ್ತದೆ ಎಂಬುದು.

ಇದರ ಬಳಿಕ ಅಂಬಾನಿ ವಿಚಾರ ಮುನ್ನೆಲೆಗೆ ಬಂತು. ಮೂರು ದಿನಗಳಲ್ಲಿ ಮಸ್ಕ್, ಏಕಸ್ವಾಮ್ಯವನ್ನು ಕಾಯ್ದುಕೊಳ್ಳುತ್ತಿರುವ ಹೆಸರಿಸದ "ಶ್ರೀಮಂತ ಉದ್ಯಮಿಗಳ" ಮೇಲಿನ ವಾಗ್ದಾಳಿಯಿಂದ ಹಿಡಿದು "ಪ್ರಧಾನಿ ಅಂಬಾನಿ" ಎಂಬ ವ್ಯಂಗ್ಯಾತ್ಮಕ ಬಹಿರಂಗ ಪತ್ರ ಬರೆಯುವವರೆಗೆ ಹೋದರು. ಅವರು ಹೈಲೈಟ್ ಮಾಡುತ್ತಿರುವ ಉದ್ದೇಶವೇನೂ ಕಾಲ್ಪನಿಕವಲ್ಲ. ರಿಲಯನ್ಸ್ ತನ್ನದೇ ಆದ ಉಪಗ್ರಹ ಉದ್ಯಮವನ್ನು ಹೊಂದಿದೆ, ಜೊತೆಗೆ ರಕ್ಷಿಸಿಕೊಳ್ಳಬೇಕಾದ ಬೃಹತ್ ಮೊಬೈಲ್ ವ್ಯವಹಾರವೂ ಅದರ ಬಳಿಯಿದೆ. ಹೀಗಾಗಿ, ಅದು ಸ್ಪೆಕ್ಟ್ರಂ ಹರಾಜಿಗಾಗಿ ತೀವ್ರ ಲಾಬಿ ನಡೆಸಿತ್ತು. ಆದರೆ, ವಾಸ್ತವವಾಗಿ ಪ್ರಮುಖವಾದ ನಿರ್ಧಾರಗಳ ವಿಷಯದಲ್ಲಿ ಪರಿಸ್ಥಿತಿ ಮಸ್ಕ್ ಪರವಾಗಿಯೇ ಒಲಿಯಿತು. ಸರ್ಕಾರವು ಹರಾಜು ಪ್ರಕ್ರಿಯೆಯನ್ನು ತಿರಸ್ಕರಿಸಿ, ಸ್ಟಾರ್‌ ಲಿಂಕ್ ಬಯಸಿದಂತೆ ಆಡಳಿತಾತ್ಮಕ ಹಂಚಿಕೆಯ ದಾರಿಯನ್ನು ಆಯ್ಕೆ ಮಾಡಿಕೊಂಡಿತು. ಅಲ್ಲದೆ, 2025ರ ಮಾರ್ಚ್ನಲ್ಲಿ ಜಿಯೋ ಕಂಪೆನಿಯು ಸ್ಟಾರ್‌ ಲಿಂಕ್ ನ ಇಬ್ಬರು ಭಾರತೀಯ ವಿತರಕರಲ್ಲಿ ಒಂದಾಗಿ ಸಹಿ ಮಾಡಿತು. ಕಂಪೆನಿಯೊಂದನ್ನು ಸಂಪೂರ್ಣವಾಗಿ ಕಟ್ಟಿಹಾಕಲು ಯತ್ನಿಸುವ ಯಾರೂ ಇಂತಹ ನಿರ್ಧಾರ ಕೈಗೊಳ್ಳಲು ಸಾಧ್ಯವಿಲ್ಲ.

ಈ ವಿವಾದಕ್ಕೆ ಅಂಬಾನಿ ನೀಡಿರುವ ಪ್ರತಿಕ್ರಿಯೆ ಆಸಕ್ತಿದಾಯಕವಾಗಿದೆ. ರಿಲಯನ್ಸ್ ಆರಂಭದಲ್ಲಿ ಮೌನವಾಗಿದ್ದು, ಅಕ್ಟೋಬರ್ 16ರಂದು ಅತ್ಯಂತ ಸಮತೂಕದ ಹೇಳಿಕೆಯೊಂದನ್ನು ನೀಡಿತು. ಭಾರತದ ಉಪಗ್ರಹ ಇಂಟರ್ನೆಟ್ ಮಾರುಕಟ್ಟೆಯಲ್ಲಿ ಸ್ಟಾರ್‌ ಲಿಂಕ್ ನೀಡುವ ಪೈಪೋಟಿಯನ್ನು ತಾವು ಸ್ವಾಗತಿಸುವುದಾಗಿ ಅದು ತಿಳಿಸಿತು. ಮಸ್ಕ್ ನಡೆಸಿದ ಒಂದು ವಾರಕ್ಕೂ ಹೆಚ್ಚಿನ ವಾಗ್ದಾಳಿಗೆ ರಿಲಯನ್ಸ್ ನೀಡಿದ ಮೊದಲ ಬಹಿರಂಗ ಪ್ರತಿಕ್ರಿಯೆ ಇದಾಗಿತ್ತು. ಜಿಯೋ ಪ್ಲಾಟ್ಫಾರ್ಮ್ಸ್ 2026ರ ಅಕ್ಟೋಬರ್ 21ರಂದು ರೂ. 30,213 ಕೋಟಿ (ಸುಮಾರು 3.5 ಬಿಲಿಯನ್ ಡಾಲರ್) ಮೌಲ್ಯದ ಭಾರತದ ಅತಿದೊಡ್ಡ ಐಪಿಒ (IPO) ಆರಂಭಿಸುವ ಐದು ದಿನಗಳ ಮೊದಲು ಈ ಹೇಳಿಕೆ ಬಂದಿತ್ತು. "ಜಿಯೋದ ಸ್ವಂತ ಉಪಗ್ರಹ ಸೇವೆಗಳೂ ಅನುಮೋದನೆಗಾಗಿ ಕಾಯುತ್ತಿವೆ" ಎಂಬುದು ಅದರ ಪ್ರಮುಖ ಸಾಲಾಗಿತ್ತು. ಅದು ಮಸ್ಕ್ ಹೆಸರು ಪ್ರಸ್ತಾಪಿಸದೆ, "ಸತ್ಯ ಸಂಗತಿಗಳನ್ನು ದಾಖಲಿಸುವ" ಉದ್ದೇಶದಿಂದ "ರಿಲಯನ್ಸ್ ಮತ್ತು ಭಾರತೀಯ ಮಾರುಕಟ್ಟೆಯ ಕುರಿತ ಇತ್ತೀಚಿನ ಹೇಳಿಕೆಗಳಿಗೆ" ಸ್ಪಷ್ಟನೆ ನೀಡುತ್ತಿರುವುದಾಗಿ ಮಾತ್ರ ಹೇಳಿತ್ತು.

ಅದೇ ದಿನ ಸ್ಟಾರ್‌ ಲಿಂಕ್ ತಾನು "ಭಾರತವನ್ನು ಸಂಪರ್ಕಿಸಲು ಸಿದ್ಧವಾಗಿದೆ" ಎಂದು ಹೇಳಿದರೆ, ಮಸ್ಕ್ ರಿಲಯನ್ಸ್ಗೆ "ತುಂಬಾ ಧನ್ಯವಾದಗಳು" ಎಂದು ಉತ್ತರಿಸಿದರು. ಇದು ಹಿಂದಿನ ವಾರದಲ್ಲಿದ್ದ ಅವರ ಆಕ್ರೋಶಕ್ಕೆ ಹೋಲಿಸಿದರೆ ತೀರಾ ಮೃದುವಾದ ಧೋರಣೆಯಾಗಿತ್ತು.

2026ರ ಮೇ ವೇಳೆಗೆ ಭಾರತದ 11,256 ಹಳ್ಳಿಗಳಲ್ಲಿ ಇನ್ನೂ 4G ಸಂಪರ್ಕವಿಲ್ಲ ಎಂಬುದನ್ನು ಎತ್ತಿ ತೋರಿಸುವ ಪೋಸ್ಟ್ನೊಂದಿಗೆ ಮಸ್ಕ್ ಅವರ ಅಸಮಾಧಾನ ಆರಂಭವಾಗಿತ್ತು. ಆ ಕೊರತೆ ಇರುವುದು ನಿಜ ಮತ್ತು ಅದನ್ನು ನೀಗಿಸಲು ಉಪಗ್ರಹಗಳು ಉತ್ತಮ ಮಾರ್ಗವಾಗಿದೆ. ಆದರೆ, ಸ್ಟಾರ್‌ ಲಿಂಕ್ ಸೇವೆಯು ದುಬಾರಿಯಾಗಿದ್ದು, ಗ್ರಾಮೀಣ ಭಾಗದ ಹೆಚ್ಚಿನ ಕುಟುಂಬಗಳು ಮೊಬೈಲ್ ಡೇಟಾಗೆ ವೆಚ್ಚ ಮಾಡುವುದಕ್ಕಿಂತ ತೀರಾ ಹೆಚ್ಚಾಗಿದೆ. ಭಾರತದಲ್ಲಿ ತಮ್ಮ ಸೇವೆಗಳನ್ನು ಕೈಗೆಟುಕುವ ದರದಲ್ಲಿ ನೀಡುವುದಾಗಿ ಮಸ್ಕ್ ಭರವಸೆ ನೀಡುತ್ತಿದ್ದಾರೆ. ಸ್ಟಾರ್‌ ಲಿಂಕ್ ಇದನ್ನು ಬೇರೆಡೆ ಮಾಡಿದೆ: ಕೀನ್ಯಾದಲ್ಲಿ ಅಮೆರಿಕದ 120 ಡಾಲರ್ ದರಕ್ಕೆ ಹೋಲಿಸಿದರೆ ತಿಂಗಳಿಗೆ 10 ಡಾಲರ್ ದರವನ್ನು ನಿಗದಿಪಡಿಸಲಾಗಿತ್ತು. ಆದರೆ, ಭಾರತೀಯ ದರಗಳು ಅಧಿಕೃತವಾಗಿ ಪ್ರಕಟವಾಗುವವರೆಗೆ ಈ ರಿಯಾಯಿತಿ ಕೇವಲ ಭರವಸೆಯಾಗಿಯೇ ಉಳಿಯುತ್ತದೆ.

►ಹಾಗಿದ್ದರೆ ಭಾರತ ಏನು ಮಾಡಬೇಕು?

ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ ಬಿಲಿಯನೇರ್ ಒಬ್ಬರು ವ್ಯಕ್ತಪಡಿಸಿದ ಆಕ್ರೋಶಕ್ಕಾಗಿ ರಾಷ್ಟ್ರೀಯ ಭದ್ರತಾ ಪರಿಶೀಲನೆಯನ್ನು ಅವಸರದಲ್ಲಿ ಮುಗಿಸುವುದು ಸರಿಯಲ್ಲ. ಅವರಿಗೆ ಮಣಿಯುವುದು ಮತ್ತೊಂದು ಹಂತದ ಒತ್ತಡಕ್ಕೆ ಹಾದಿ ಮಾಡಿಕೊಟ್ಟಂತಾಗುತ್ತದೆ.

ಗೃಹ ಸಚಿವಾಲಯವು ತನ್ನ ಚರ್ಚೆಗಳನ್ನು ಗೌಪ್ಯವಾಗಿಟ್ಟುಕೊಂಡು, ಸ್ಟಾರ್‌ ಲಿಂಕ್ ಮತ್ತು ಇತರ ಸಂಸ್ಥೆಗಳು ಏನೆಲ್ಲ ಸಾಬೀತುಪಡಿಸಬೇಕು ಮತ್ತು ಎಷ್ಟು ಸಮಯದೊಳಗೆ ಮಾಡಬೇಕು ಎಂಬುದನ್ನು ಪ್ರಕಟಿಸಬಹುದು. ನೀಡಲಾಗುವ ಯಾವುದೇ ಅನುಮೋದನೆಯು ಕಟ್ಟುನಿಟ್ಟಾದ ಬಾಧ್ಯತೆಗಳೊಂದಿಗೆ ಬರಬೇಕು. ಉದಾಹರಣೆಗೆ, ಭಾರತೀಯ ಪ್ರದೇಶದ ಮೇಲೆ ಸ್ಪೇಸ್ಎಕ್ಸ್ ತನ್ನ ಸೇವೆಯನ್ನು ಬದಲಾಯಿಸುವ ಮೊದಲು ಮುಂಗಡ ಸೂಚನೆ ನೀಡುವುದು, ಡೇಟಾ ಯಾವ ಮಾರ್ಗದಲ್ಲಿ ಸಾಗುತ್ತಿದೆ ಎಂಬುದರ ಸ್ವತಂತ್ರ ಆಡಿಟ್ಗಳು ಮತ್ತು ಭಾರತವು ವಾಸ್ತವವಾಗಿ ಜಾರಿಗೊಳಿಸಬಹುದಾದ ದಂಡನೆಗಳನ್ನು ಒಳಗೊಂಡಿರಬೇಕು.

ಯಾರು ಇದರ ಮೇಲೆ ಅವಲಂಬಿತರಾಗಬಹುದು ಎಂಬುದರ ಕುರಿತು ಎಚ್ಚರಿಕೆ ವಹಿಸುವುದು ಮುಖ್ಯವಾಗಿದೆ. ಗ್ರಾಮೀಣ ಶಾಲೆಗಳು, ಆರೋಗ್ಯ ಕೇಂದ್ರಗಳು, ಮೀನುಗಾರಿಕಾ ದೋಣಿಗಳು ಮತ್ತು ದುರಂತ ನಿರ್ವಹಣಾ ತಂಡಗಳು ಇದನ್ನು ಬಳಸಬಹುದು. ಆದರೆ, ಸಶಸ್ತ್ರ ಪಡೆಗಳು ಮತ್ತು ಕಠಿಣ ಮೂಲಸೌಕರ್ಯಗಳಿಗಾಗಿ ಸ್ಟಾರ್‌ ಲಿಂಕ್ ಮೇಲೆ ಯಾವುದೇ ಅವಲಂಬನೆ ಇರಬಾರದು. ಹಲವು ಸೇವಾದಾರರನ್ನು ಹೊಂದುವುದು ಸಹಕಾರಿಯಾಗುತ್ತದೆ. OneWeb, ಜಿಯೋದ ಸ್ಯಾಟಲೈಟ್ ಯೋಜನೆ ಮತ್ತು ಅಮೆಜಾನ್ ನ Kuiper ಸಂಸ್ಥೆಗಳು ಸಾಲಿನಲ್ಲಿದ್ದು, ಇವುಗಳಿಗೂ ಒಂದೇ ಕಾಲಮಿತಿಯಲ್ಲಿ ಅನುಮೋದನೆ ನೀಡಬೇಕು.

ದೀರ್ಘಕಾಲೀನ ಆಧಾರದಲ್ಲಿ, ಇದಕ್ಕೆ ಒಂದೇ ನೈಜ ಪರಿಹಾರವೆಂದರೆ ನಿಧಾನವಾದ ಮತ್ತು ದುಬಾರಿಯಾದ ಮಾರ್ಗ. ಬೇರೆ ಯಾರೂ ಆಫ್ ಮಾಡಲು ಸಾಧ್ಯವಾಗದ ಜಾಲವನ್ನು ಭಾರತ ಬಯಸಿದರೆ, ಕನಿಷ್ಠ ಸರ್ಕಾರಿ ಮತ್ತು ರಕ್ಷಣಾ ಬಳಕೆಗಾಗಿಯಾದರೂ ಸ್ವತಃ ತಾನೇ ಅದನ್ನು ನಿರ್ಮಿಸಬೇಕಾಗುತ್ತದೆ. ದೇಶದ ಬಳಿ ಅಗತ್ಯ ಉಡಾವಣಾ ವಾಹನಗಳು ಮತ್ತು ಪರಿಣತ ಎಂಜಿನಿಯರ್ಗಳಿದ್ದಾರೆ.

ಅದು ಸಾಧ್ಯವಾಗುವವರೆಗೆ, ಉಪಗ್ರಹ ಇಂಟರ್ನೆಟ್ ಕುರಿತ ಪ್ರತಿಯೊಂದು ವಾದವೂ ಅಂತಿಮವಾಗಿ ಭಾರತಕ್ಕೆ ಇಂಟರ್ನೆಟ್ ಒದಗಿಸುವ ಈ ಉಪಗ್ರಹ ಜಾಲಗಳೆಲ್ಲವೂ ನಮ್ಮ ದೇಶದ ಹಿಡಿತದಲ್ಲಲ್ಲ, ಹೊರಗಿನವರ ನಿಯಂತ್ರಣದಲ್ಲಿವೆ ಎಂಬ ಕಹಿ ಸತ್ಯದಲ್ಲಿ ಬಂದು ನಿಲ್ಲುತ್ತದೆ.

ಸೌಜನ್ಯ: thenewsminute.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor