Photo Credit : indianexpress.com

ಗೌರವ್ ಶರ್ಮಾ (21) ಕಿರೋಡಿಮಲ್ ಕಾಲೇಜಿನಲ್ಲಿ ಸಂಶೋಧನೆಯೊಂದಿಗೆ ಹಿಂದಿ ಆನರ್ಸ್ ಪದವಿ ಮುಗಿಸಿದವರು. ತಮ್ಮ ಬ್ಯಾಚ್ ನಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳಲ್ಲಿ ಇವರೂ ಒಬ್ಬರು. ಆದರೆ ಈ ವರ್ಷ ಅವರಿಗೆ ದೆಹಲಿ ವಿಶ್ವವಿದ್ಯಾಲಯದ (DU) ಒಂದು ವರ್ಷದ ಸ್ನಾತಕೋತ್ತರ (ಮಾಸ್ಟರ್ಸ್) ಕೋರ್ಸ್ ನಲ್ಲಿ ಪ್ರವೇಶ ಸಿಗಲಿಲ್ಲ. ಹೀಗಾಗಿ ಅವರು ಈಗ ಪೋರ್ಚುಗೀಸ್ ಭಾಷೆಯ ಅರೆಕಾಲಿಕ ಕೋರ್ಸ್ಗೆ ಸೇರಿಕೊಂಡಿದ್ದಾರೆ.

ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಗೌರವ್ ಸಹಾಯಕ ಪ್ರಾಧ್ಯಾಪಕರಾಗುವ ತಮ್ಮ ಗುರಿಯತ್ತ ಮತ್ತಷ್ಟು ಹತ್ತಿರವಾಗುತ್ತಿದ್ದರು. ರಾಷ್ಟ್ರೀಯ ಶಿಕ್ಷಣ ನೀತಿಯ (NEP) ಒಂದು ವರ್ಷದ ಸ್ನಾತಕೋತ್ತರ ಕೋರ್ಸ್, ಪಿಎಚ್ಡಿ ಅಥವಾ NET ಪರೀಕ್ಷೆಗೆ ಅರ್ಜಿ ಸಲ್ಲಿಸುವ ಮೊದಲು ಅವರ ಒಂದು ವರ್ಷದ ಸಮಯವನ್ನು ಉಳಿಸಬೇಕಿತ್ತು. ಆದರೆ ಅದರ ಬದಲಾಗಿ, ಅವರು ಈಗ ತಮ್ಮ ಭವಿಷ್ಯದ ಬಗ್ಗೆ ಪೋಷಕರಿಗಿರುವ ಆತಂಕವನ್ನು ನಿವಾರಿಸುವ ಭರವಸೆಯೊಂದಿಗೆ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿ ಕಾಯುತ್ತಿದ್ದಾರೆ.

NEP ಅಡಿಯಲ್ಲಿ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ ನಲ್ಲಿ ಸೀಟು ಸಿಗದೆ ಭವಿಷ್ಯದ ಬಗ್ಗೆ ಅನಿಶ್ಚಿತತೆ ಎದುರಿಸುತ್ತಿರುವ ದೆಹಲಿ ವಿಶ್ವವಿದ್ಯಾಲಯದ ಮೊದಲ ನಾಲ್ಕು ವರ್ಷಗಳ ಪದವಿ ಬ್ಯಾಚ್ ನ ಸುಮಾರು 4,000 ವಿದ್ಯಾರ್ಥಿಗಳಲ್ಲಿ ಗೌರವ್ ಕೂಡ ಒಬ್ಬರು. ಇವರು ಈಗಾಗಲೇ 2026–27ರ ಶೈಕ್ಷಣಿಕ ವರ್ಷವನ್ನು ಕಳೆದುಕೊಂಡಿದ್ದಾರೆ. ವಿಶ್ವವಿದ್ಯಾಲಯವು ಪ್ರವೇಶ ಪ್ರಕ್ರಿಯೆಯನ್ನು ನಡೆಸಿದ ರೀತಿಯನ್ನು ಪ್ರಶ್ನಿಸಿ ಕನಿಷ್ಠ 50ರಿಂದ 60 ವಿದ್ಯಾರ್ಥಿಗಳು ಆಗಸ್ಟ್ನಿಂದ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.

ಈಗಾಗಲೇ ಪ್ರವೇಶ ಪಡೆದು ಒಂದು ಸೆಮಿಸ್ಟರ್ ಪೂರ್ಣಗೊಳಿಸುವ ಹಂತದಲ್ಲಿರುವ ಸುಮಾರು 2,500 ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ, ಉಳಿದ ವಿದ್ಯಾರ್ಥಿಗಳಿಗೆ ಹೇಗೆ ಅವಕಾಶ ಕಲ್ಪಿಸಬಹುದು ಎಂಬುದನ್ನು ಹೈಕೋರ್ಟ್ ಪರಿಶೀಲಿಸುತ್ತಿದೆ.

ದೆಹಲಿ ವಿಶ್ವವಿದ್ಯಾಲಯದ ಪ್ರವೇಶ ವಿಭಾಗದ ಡೀನ್ ಹನೀತ್ ಗಾಂಧಿ ಅವರ ಪ್ರಕಾರ, 2022ರಲ್ಲಿ ವಿಶ್ವವಿದ್ಯಾಲಯವು NEP ವ್ಯವಸ್ಥೆಯನ್ನು ಅಳವಡಿಸಿಕೊಂಡಾಗ ಲಭ್ಯವಿದ್ದ ಸುಮಾರು 72,600 ಸೀಟುಗಳಿಗೆ 2.5 ಲಕ್ಷ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. 2025ರಲ್ಲಿ ಸುಮಾರು 23,000 ವಿದ್ಯಾರ್ಥಿಗಳು ನಾಲ್ಕನೇ ವರ್ಷದ ಪದವಿಗೆ ಮುಂದುವರಿದರೆ, ಉಳಿದವರು ಮೂರು ವರ್ಷಗಳ ಪದವಿ ಪೂರ್ಣಗೊಳಿಸಿದ್ದಾರೆ.

ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ಗೆ ಸುಮಾರು 14,000 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. “ಇಷ್ಟೊಂದು ಸಂಖ್ಯೆಯ ವಿದ್ಯಾರ್ಥಿಗಳು ಶಿಕ್ಷಣವನ್ನು ಮುಂದುವರಿಸಲು ಆಸಕ್ತಿ ತೋರುತ್ತಾರೆ ಎಂದು ನಾವು ನಿರೀಕ್ಷಿಸಿರಲಿಲ್ಲ. ಇದು ಅತ್ಯಂತ ಸ್ವಾಗತಾರ್ಹ ಬದಲಾವಣೆಯಾಗಿದೆ” ಎಂದು ಗಾಂಧಿ ಹೇಳಿದ್ದಾರೆ.

ಸಾರ್ವಜನಿಕ ಮುಕ್ತ ವಿಶ್ವವಿದ್ಯಾಲಯದ (SOL) ಸೀಟುಗಳು ಸೇರಿದಂತೆ ಈ ಕೋರ್ಸ್ಗೆ DUನಲ್ಲಿ ಕೇವಲ 3,000 ಸೀಟುಗಳು ಲಭ್ಯವಿವೆ. ಪ್ರಸ್ತುತ ಸುಮಾರು 1,800 ವಿದ್ಯಾರ್ಥಿಗಳು ನಿಯಮಿತ ಕೋರ್ಸ್ ನಲ್ಲಿ ಪ್ರವೇಶ ಪಡೆದಿದ್ದಾರೆ. SOL ಸೀಟಿಗೆ ಅರ್ಜಿ ಸಲ್ಲಿಸುವ ಬಹುತೇಕ ಪ್ರತಿಯೊಬ್ಬರಿಗೂ ಪ್ರವೇಶ ನೀಡಲಾಗುತ್ತಿದ್ದು, ಅದರಡಿ ಸುಮಾರು 4,000 ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ ಎಂದು ಗಾಂಧಿ ತಿಳಿಸಿದ್ದಾರೆ. ಆದರೆ, ಹೈಕೋರ್ಟ್ ಮೆಟ್ಟಿಲೇರಿರುವ ವಿದ್ಯಾರ್ಥಿಗಳ ಪ್ರಕಾರ, ಇದು ಇನ್ನೂ 4,000ರಿಂದ 5,000 ವಿದ್ಯಾರ್ಥಿಗಳನ್ನು ನಿಯಮಿತ ಒಂದು ವರ್ಷದ ಮಾಸ್ಟರ್ಸ್ ಕೋರ್ಸ್ನಿಂದ ಹೊರಗಿಟ್ಟಿದೆ.

►ಇದು ಉತ್ತಮ ಭವಿಷ್ಯ ರೂಪಿಸುವ ಹಾದಿ ಎಂದು ನಮಗೆ ಹೇಳಲಾಗಿತ್ತು

2022ರಲ್ಲಿ ದೆಹಲಿ ವಿಶ್ವವಿದ್ಯಾಲಯವು NEP 2020ರ ಪದವಿ ಪಠ್ಯಕ್ರಮದ ಚೌಕಟ್ಟಿನ (UGCF) ಅಡಿಯಲ್ಲಿ ತನ್ನ ಮೊದಲ ಬ್ಯಾಚ್ಗೆ ಪ್ರವೇಶ ನೀಡಿತು. ಇದು ನಾಲ್ಕು ವರ್ಷಗಳ ಪದವಿ ಹಾಗೂ ಅದರ ನಂತರ ಒಂದು ವರ್ಷದ ಮಾಸ್ಟರ್ಸ್ ಕೋರ್ಸ್ ಅನ್ನು ಒಳಗೊಂಡಿತ್ತು. ವಿದ್ಯಾರ್ಥಿಗಳು ಒಂದೇ ವಿಷಯದಲ್ಲಿ ಸಂಶೋಧನೆಯೊಂದಿಗೆ ನಾಲ್ಕು ವರ್ಷಗಳ ಆನರ್ಸ್ ಮಾಡಬಹುದು ಅಥವಾ ಬಹು-ವಿಷಯಗಳ ಕೋರ್ಸ್ ನಲ್ಲಿ ಮೇಜರ್ನೊಂದಿಗೆ ನಾಲ್ಕು ವರ್ಷಗಳ ಬ್ಯಾಚುಲರ್ ಪದವಿ ಮಾಡಬಹುದಾಗಿತ್ತು. ಮೂರು ವರ್ಷಗಳ ನಂತರ ಬ್ಯಾಚುಲರ್ ಪದವಿಯೊಂದಿಗೆ ಅಥವಾ ಒಂದೇ ವಿಷಯವನ್ನು ವ್ಯಾಸಂಗ ಮಾಡಿದ್ದರೆ ಆನರ್ಸ್ ಪದವಿಯೊಂದಿಗೆ ಹೊರಬರುವ ಅವಕಾಶವೂ ವಿದ್ಯಾರ್ಥಿಗಳಿಗಿತ್ತು.

2022ರಲ್ಲಿ ಪ್ರವೇಶ ಪಡೆದವರಲ್ಲಿ ಅರ್ಧಕ್ಕಿಂತ ಸ್ವಲ್ಪ ಕಡಿಮೆ ಸಂಖ್ಯೆಯ ವಿದ್ಯಾರ್ಥಿಗಳು ನಾಲ್ಕನೇ ವರ್ಷಕ್ಕೆ ಮುಂದುವರಿಯಲು ಆಯ್ಕೆ ಮಾಡಿಕೊಂಡರು.

ಗೌರವ್ ಅವರಲ್ಲಿ ಒಬ್ಬರಾಗಿದ್ದರು. “ನಾಲ್ಕು ವರ್ಷಗಳ ಕೋರ್ಸ್ ನಲ್ಲಿ ಸಂಶೋಧನೆಯ ಭಾಗ ಇರುವುದರಿಂದ ಅದಕ್ಕೆ ಹೆಚ್ಚಿನ ಮೌಲ್ಯವಿದೆ ಎಂದು ನಾವು ಭಾವಿಸಿದ್ದೆವು. ಮೂರನೇ ವರ್ಷದ ಕೊನೆಯಲ್ಲಿ ನಾಲ್ಕನೇ ವರ್ಷಕ್ಕೆ ಮುಂದುವರಿಯಬೇಕೇ ಅಥವಾ ಮೂರನೇ ವರ್ಷದಲ್ಲೇ ಆನರ್ಸ್ ಪದವಿಯೊಂದಿಗೆ ಹೊರಬರಬೇಕೇ ಎಂದು ಆಯ್ಕೆ ಮಾಡುವ ಅವಕಾಶ ನಮಗಿತ್ತು. ಆಗ ನಮ್ಮ ಪ್ರಾಧ್ಯಾಪಕರು ಇದು ಉತ್ತಮ ಭವಿಷ್ಯ ರೂಪಿಸುವ ಹಾದಿ ಎಂದು ಭರವಸೆ ನೀಡಿ, ನಾಲ್ಕು ವರ್ಷಗಳ ಕೋರ್ಸ್ ಆಯ್ಕೆ ಮಾಡಲು ನಮಗೆ ಪ್ರೋತ್ಸಾಹಿಸಿದರು” ಎಂದು ಅವರು ಹೇಳುತ್ತಾರೆ.

ಅಂಶಿಕಾ ಮಿಶ್ರಾ ಅವರು ಶ್ಯಾಮಾ ಪ್ರಸಾದ್ ಮುಖರ್ಜಿ ಮಹಿಳಾ ಕಾಲೇಜಿನಲ್ಲಿ ನಾಲ್ಕು ವರ್ಷಗಳ ಇಂಗ್ಲಿಷ್ ಆನರ್ಸ್ ಮಾಡಿದ್ದಾರೆ. ಸಂಶೋಧನಾ ವರ್ಷವು ತಮ್ಮ ವೃತ್ತಿಜೀವನವನ್ನು ಎಲ್ಲಿಗೆ ಕೊಂಡೊಯ್ಯುತ್ತದೆ ಎಂಬುದರ ಕುರಿತು ಅವರು ಯೋಜನೆ ಹೊಂದಿದ್ದರು. ಗೌರವ್ ಅವರಂತೆ ಅವರೂ ನಾಲ್ಕನೇ ವರ್ಷಕ್ಕೆ ಮುಂದುವರಿದಿದ್ದರು. ಈಗ ಅವರ ಬಳಿಯೂ ಮಾಸ್ಟರ್ಸ್ ಸೀಟು ಇಲ್ಲದಿರುವುದರಿಂದ, ಒಂದು NGOನಲ್ಲಿ ಸಂಬಳವಿಲ್ಲದೆ ಕಂಟೆಂಟ್ ರೈಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಮೂರು ವರ್ಷಗಳ ನಂತರ ಪದವಿ ಮುಗಿಸಿ ಹೊರಬಂದ ವಿದ್ಯಾರ್ಥಿಗಳು CUET-PG ಪರೀಕ್ಷೆ ಬರೆದು ನೇರವಾಗಿ ಮಾಸ್ಟರ್ಸ್ ಕೋರ್ಸ್ಗೆ ಸೇರಿಕೊಳ್ಳಲು ಸಾಧ್ಯವಾಯಿತು. ಆದರೆ ನಾಲ್ಕನೇ ವರ್ಷ ಮುಗಿಸಿದ ವಿದ್ಯಾರ್ಥಿಗಳಿಗೆ ನಿಯಮಿತ ಸೀಟುಗಳನ್ನು ನೀಡಲು ಆದ್ಯತಾ ಪಟ್ಟಿಯನ್ನು ಬಳಸಲಾಗುತ್ತದೆ ಎಂಬ ವಿಷಯ ತಡವಾಗಿ ತಿಳಿದುಬಂದಿದೆ.

“ಒಂದು ವರ್ಷದ ಪಿಜಿ ಕೋರ್ಸ್ ಪ್ರವೇಶದಲ್ಲಿ ಆದ್ಯತಾ ವ್ಯವಸ್ಥೆ ಇರುತ್ತದೆ ಎಂದು ನಮಗೆ ಮುಂಚಿತವಾಗಿಯೇ ತಿಳಿದಿದ್ದರೆ, ನಾನು ಬೇರೆ ದಾರಿಗಳನ್ನು ಆಯ್ಕೆ ಮಾಡುತ್ತಿದ್ದೆ. ನಾನು CUET-PG ಪರೀಕ್ಷೆ ಬರೆದು ಮೂರನೇ ವರ್ಷದಲ್ಲೇ ಹೊರಬರಬಹುದಿತ್ತು” ಎಂದು ಅವರು ಹೇಳುತ್ತಾರೆ.

►ಎರಡರಷ್ಟು ಕೆಲಸ ಮಾಡಿದರೂ ಹಿನ್ನಡೆ

ಪ್ರಿಯಾಂಶು ಪಾಂಡೆ (21) ರಾಜಧಾನಿ ಕಾಲೇಜಿನಲ್ಲಿ ಎಲೆಕ್ಟ್ರಾನಿಕ್ಸ್ ಮೇಜರ್ ಹಾಗೂ ಫಿಸಿಕ್ಸ್ ಮತ್ತು ಮ್ಯಾಥ್ಸ್ ಮೈನರ್ ವಿಷಯಗಳೊಂದಿಗೆ ಬಹು-ವಿಷಯಗಳ ಬಿಎಸ್ಸಿ ಪದವಿ ಮಾಡಿದ್ದಾರೆ. ಅವರು ನಾಲ್ಕು ವರ್ಷಗಳಲ್ಲಿ 50 ವಿಷಯಗಳನ್ನು ಪೂರ್ಣಗೊಳಿಸಬೇಕಾಗಿತ್ತು. ಮೂರು ವರ್ಷಗಳ ನಂತರ ಹೊರಬಂದ ವಿದ್ಯಾರ್ಥಿಗಳು 24 ವಿಷಯಗಳನ್ನು ಮಾತ್ರ ಪೂರ್ಣಗೊಳಿಸಬೇಕಿತ್ತು.

“ನಾನು ನಾಲ್ಕು ವರ್ಷಗಳ ಕಾಲ ಕಷ್ಟಪಟ್ಟು ಸುಮಾರು ಎರಡರಷ್ಟು ವಿಷಯಗಳನ್ನು ವ್ಯಾಸಂಗ ಮಾಡಿದೆ. ಆದರೆ ಈಗ ನನಗೆ ಸೀಟು ಸಿಗುತ್ತಿಲ್ಲ” ಎಂದು ಅವರು ಅಳಲು ತೋಡಿಕೊಂಡಿದ್ದಾರೆ.

ಮೂರು ವರ್ಷಗಳ ಪದವಿ ಮುಗಿಸಿದ ವಿದ್ಯಾರ್ಥಿಗಳು ಈಗಾಗಲೇ ಮಾಸ್ಟರ್ಸ್ ಕೋರ್ಸ್ ಗಳಿಗೆ ಸೇರಿಕೊಂಡಿದ್ದಾರೆ. ಎಲ್ಲವೂ ಸರಿಯಾದ ಹಾದಿಯಲ್ಲಿದ್ದಿದ್ದರೆ, ನಾನು 2027ರ ವೇಳೆಗೆ ನನ್ನ ಮಾಸ್ಟರ್ಸ್ ಪೂರ್ಣಗೊಳಿಸುತ್ತಿದ್ದೆ ಎಂದು ಅವರು ಹೇಳುತ್ತಾರೆ.

ತಮ್ಮ ಒಂದು ವರ್ಷ ವ್ಯರ್ಥವಾಗಿರುವುದರಿಂದ, ಪಾಂಡೆ ಈಗ ಉಪಜೀವನಕ್ಕಾಗಿ ಟ್ಯೂಷನ್ ಹೇಳಿಕೊಡುತ್ತಿದ್ದಾರೆ.

ಅರ್ಹ ಅಭ್ಯರ್ಥಿಗಳನ್ನು ದೆಹಲಿ ವಿಶ್ವವಿದ್ಯಾಲಯ ಶ್ರೇಣೀಕರಿಸುವ ವಿಧಾನದಿಂದಾಗಿ ಅವರಿಗೆ ಈ ಪರಿಸ್ಥಿತಿ ಬಂದೊದಗಿದೆ. 2026–27ರ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ ಗಳ ಪ್ರವೇಶ ನೀತಿಯ ಪ್ರಕಾರ, ಸಂಬಂಧಿತ ವಿಷಯದಲ್ಲಿ ಸಂಶೋಧನೆ ಅಥವಾ ಉದ್ಯಮಶೀಲತೆಯೊಂದಿಗೆ ನಾಲ್ಕು ವರ್ಷಗಳ ಆನರ್ಸ್ ಪದವಿ ಪಡೆದ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ (P1) ನೀಡಲಾಗಿದೆ. ಅದೇ ವಿಷಯದಲ್ಲಿ ಮೇಜರ್ ಪದವಿಯೊಂದಿಗೆ ನಾಲ್ಕು ವರ್ಷಗಳ ಕೋರ್ಸ್ ಪೂರ್ಣಗೊಳಿಸಿದವರನ್ನು ಎರಡನೇ ಆದ್ಯತೆ (P2) ವಿಭಾಗಕ್ಕೆ ಸೇರಿಸಲಾಗಿದೆ. P2 ಅಭ್ಯರ್ಥಿಗಳಿಗಿಂತ ಮುಂಚಿತವಾಗಿ P1 ಅಭ್ಯರ್ಥಿಗಳನ್ನು ಪರಿಗಣಿಸುವುದು ಕಡ್ಡಾಯವಾಗಿದೆ. ಇದರಿಂದಾಗಿ, ಕಡಿಮೆ ಅಂಕ (CGPA) ಪಡೆದ ಆನರ್ಸ್ ಪದವೀಧರನಿಗಿಂತ ಹೆಚ್ಚಿನ ಅಂಕ ಪಡೆದ ಬಹು-ವಿಷಯಗಳ ಪದವಿಯ ವಿದ್ಯಾರ್ಥಿಯು ಹಿನ್ನಡೆ ಅನುಭವಿಸುವಂತಾಗಿದೆ.

UGCF ಅಡಿಯಲ್ಲಿ “ಈ ಎರಡೂ ಕೋರ್ಸ್ ಗಳ ನಡುವಿನ ವ್ಯತ್ಯಾಸವು ಪದವಿ ಪ್ರವೇಶದ ಆರಂಭದಿಂದಲೇ ಇರುತ್ತದೆ” ಎಂದು ಹೇಳುವ ಮೂಲಕ DU ತನ್ನ ಶ್ರೇಣೀಕರಣದ ನಿರ್ಧಾರವನ್ನು ಸಮರ್ಥಿಸಿಕೊಂಡಿದೆ. ಅಲ್ಲದೆ, ಆನರ್ಸ್ ಕೋರ್ಸ್ಗೆ ಅತ್ಯಂತ ಕಟ್ಟುನಿಟ್ಟಾದ ಪ್ರವೇಶ ಮಾನದಂಡಗಳಿರುತ್ತವೆ ಎಂದು ತಿಳಿಸಿದೆ. ಒಂದೇ ವಿಷಯವನ್ನು ವ್ಯಾಸಂಗ ಮಾಡಿದವರು ಮತ್ತು ಬಹು-ವಿಷಯಗಳನ್ನು ವ್ಯಾಸಂಗ ಮಾಡಿದ ವಿದ್ಯಾರ್ಥಿಗಳ ನಡುವೆ “ಶೈಕ್ಷಣಿಕ ವಿಷಯಗಳ ಕ್ಲಿಷ್ಟತೆಯಲ್ಲಿ ವ್ಯತ್ಯಾಸವಿರುತ್ತದೆ” ಎಂದು ವಿಶ್ವವಿದ್ಯಾಲಯದ ದೂರು ಪರಿಹಾರ ಸಮಿತಿಯು ಸೆಪ್ಟೆಂಬರ್ 9ರ ತನ್ನ ಆದೇಶದಲ್ಲಿ ಸಮರ್ಥಿಸಿಕೊಂಡಿದೆ.

CGPA ಅನ್ನು ಪ್ರವೇಶದ ಮಾನದಂಡವನ್ನಾಗಿ ಬಳಸಿರುವುದನ್ನು ಅಂಶಿಕಾ ಮಿಶ್ರಾ ಸಹ ಪ್ರಶ್ನಿಸಿದ್ದಾರೆ. “CGPA ಅನ್ನು ಪ್ರವೇಶ ಮಾನದಂಡವನ್ನಾಗಿ ಏಕೆ ಬಳಸಲಾಗುತ್ತಿದೆ? ಕಾಲೇಜಿನಿಂದ ಕಾಲೇಜಿಗೆ CGPA ನೀಡುವಲ್ಲಿ ವ್ಯತ್ಯಾಸಗಳಿರುತ್ತವೆ. ಕೆಲವು ಕಾಲೇಜುಗಳು ನೀಡುವ ಅಂಕಗಳ ಮೇಲೆ ಲಿಖಿತವಲ್ಲದ ಮಿತಿಯನ್ನು ಹೇರಿಕೊಂಡಿರುತ್ತವೆ. ಇದು ಸ್ವಯಂಚಾಲಿತವಾಗಿ ನಮ್ಮನ್ನು ಹಿನ್ನಡೆಗೆ ತಳ್ಳುತ್ತದೆ. ಇಲ್ಲಿಯವರೆಗೆ ಸ್ನಾತಕೋತ್ತರ ಪ್ರವೇಶಕ್ಕೆ CUET-PG ಪರೀಕ್ಷೆಯನ್ನು ಬಳಸುವ ಪದ್ಧತಿಯಿತ್ತು. ಅಂಬೇಡ್ಕರ್ ವಿಶ್ವವಿದ್ಯಾಲಯ ಕೂಡ ತನ್ನ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ ಪ್ರವೇಶಕ್ಕೆ CUET-PG ಪರೀಕ್ಷೆಯನ್ನೇ ಆಧಾರವಾಗಿಟ್ಟುಕೊಂಡಿತ್ತು” ಎಂದು ಅವರು ಹೇಳಿದ್ದಾರೆ.

►ಪರೀಕ್ಷೆಗಳು ಮುಗಿದ ನಂತರ ಬಂದ ನಿಯಮಗಳು

ಜುಲೈ 4ರಂದು, DU NEP 2020ರ ಅಡಿಯಲ್ಲಿ ತನ್ನ ಮೊದಲ ಒಂದು ವರ್ಷದ ಸ್ನಾತಕೋತ್ತರ ಕೋರ್ಸ್ ಅನ್ನು ಆರಂಭಿಸಿತು. ನಾಲ್ಕು ವರ್ಷಗಳ ಪದವಿ ಪೂರ್ಣಗೊಳಿಸಿದ ಸುಮಾರು 23,000 ವಿದ್ಯಾರ್ಥಿಗಳಿಗೆ ಕೇವಲ 1,000ರಷ್ಟು ಸೀಟುಗಳನ್ನು ಮಾತ್ರ ನೀಡಲಾಯಿತು. ಸೀಟುಗಳ ಸಂಖ್ಯೆ ತೀರಾ ಕಡಿಮೆಯಿತ್ತು ಮತ್ತು ಪ್ರವೇಶ ಮಾಹಿತಿ ಕೈಪಿಡಿ (ಬುಲೆಟಿನ್) ಬಿಡುಗಡೆಯಾಗುವಷ್ಟರಲ್ಲಿ ಇತರ ಹಲವು ವಿಶ್ವವಿದ್ಯಾಲಯಗಳು ತಮ್ಮ ಪ್ರವೇಶ ಪ್ರಕ್ರಿಯೆಯನ್ನು ಪೂರ್ಣಗೊಳಿಸಿದ್ದವು ಎಂದು ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜುಲೈ 31ರಂದು ವಿಶ್ವವಿದ್ಯಾಲಯವು ಸೀಟುಗಳ ಸಂಖ್ಯೆಯನ್ನು ಸುಮಾರು 2,500ಕ್ಕೆ ಹೆಚ್ಚಿಸಿತಾದರೂ, ಅದು ಕೂಡ ಪೂರ್ಣ ಪ್ರಮಾಣದಲ್ಲಿ ಸಾಕಾಗಲಿಲ್ಲ.

“ನಾವು ಜೂನ್ ನಲ್ಲಿ ಅಂತಿಮ ಪರೀಕ್ಷೆಗಳನ್ನು ಮುಗಿಸಿದ ನಂತರ, ಅಂದರೆ ಜುಲೈನಲ್ಲಿ ಈ ಮಾಹಿತಿ ಬುಲೆಟಿನ್ ಹೊರಬಂತು” ಎಂದು ಗೌರವ್ ಹೇಳಿದ್ದಾರೆ.

ಆದರೆ, ಈ ಬುಲೆಟಿನ್ ಅನ್ನು ಡಿಸೆಂಬರ್ 2025ರಲ್ಲೇ ಮತ್ತು ಸೀಟುಗಳ ಮಾಹಿತಿಯನ್ನು ನವೆಂಬರ್ 2025ರಲ್ಲೇ ವೆಬ್ಸೈಟ್ನಲ್ಲಿ ಅಪ್ಲೋಡ್ ಮಾಡಲಾಗಿತ್ತು ಎಂದು DU ಸ್ಪಷ್ಟಪಡಿಸಿದೆ. ಪ್ರವೇಶ ಪ್ರಕ್ರಿಯೆ ಆರಂಭವಾಗುವುದಕ್ಕಿಂತ “ಆರು ತಿಂಗಳಿಗಿಂತಲೂ ಮುಂಚಿತವಾಗಿ”, ಅಂದರೆ ಜನವರಿ 2ರಂದೇ ಅರ್ಹತೆ ಮತ್ತು ಸೀಟುಗಳ ಕುರಿತ ಕಾರ್ಯಕಾರಿ ಮಂಡಳಿಯ ನಿರ್ಣಯವನ್ನು ವೆಬ್ಸೈಟ್ನಲ್ಲಿ ಪ್ರಕಟಿಸಲಾಗಿತ್ತು ಹಾಗೂ ಜನವರಿ 13ರಂದು ವಿದ್ಯಾರ್ಥಿಗಳಿಗೆ ಈ ಮಾಹಿತಿ ತಲುಪಿಸಲು ವಿಭಾಗೀಯ ಮುಖ್ಯಸ್ಥರಿಗೆ ಇಮೇಲ್ ಕಳುಹಿಸಲಾಗಿತ್ತು ಎಂದು ವಿಶ್ವವಿದ್ಯಾಲಯ ತಿಳಿಸಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಮಿರಾಂಡಾ ಹೌಸ್ ಕಾಲೇಜಿನ ಭೌತಶಾಸ್ತ್ರ ಪ್ರಾಧ್ಯಾಪಕಿ ಅಭಾ ದೇವ್ ಹಬೀಬ್, ವಿಳಂಬ ನೀತಿಯಿಂದ ವಿದ್ಯಾರ್ಥಿಗಳಿಗೆ ಅನ್ಯಾಯವಾಗಿದೆ ಎಂದು ಹೇಳಿದ್ದಾರೆ. “ಪ್ರತಿಯೊಂದು ಹಂತದಲ್ಲೂ ಸೂಚನೆಗಳನ್ನು ನೀಡುವಲ್ಲಿ ವಿಳಂಬವಾಗಿದೆ. ಇದರಿಂದಾಗಿ ವಿದ್ಯಾರ್ಥಿಗಳ ಶೈಕ್ಷಣಿಕ ವೇಳಾಪಟ್ಟಿ ಮತ್ತು ಭವಿಷ್ಯ ಸಂಪೂರ್ಣವಾಗಿ ಏರುಪೇರಾಗಿದೆ.”

►ಸೀಟು ಇಲ್ಲ, ದುಬಾರಿ ಶುಲ್ಕ ಮತ್ತು ಸೀಮಿತ ಆಯ್ಕೆಗಳು

ಅಂಶಿಕಾ ದುಬೆ (22) ಶ್ರೀ ಅರವಿಂದೋ ಕಾಲೇಜಿನಲ್ಲಿ ಸಂಶೋಧನೆಯೊಂದಿಗೆ ನಾಲ್ಕು ವರ್ಷಗಳ ಇಂಗ್ಲಿಷ್ ಆನರ್ಸ್ ಪೂರ್ಣಗೊಳಿಸಿದ್ದಾರೆ. ಖಾಸಗಿ ವಿಶ್ವವಿದ್ಯಾಲಯಗಳು ಒಂದು ವರ್ಷದ ಕೋರ್ಸ್ಗೆ ಸುಮಾರು 3 ಲಕ್ಷ ರೂಪಾಯಿ ಶುಲ್ಕ ವಿಧಿಸುತ್ತಿವೆ ಎಂದು ಅವರು ಹೇಳುತ್ತಾರೆ. “ನಾವು ನಾಲ್ಕು ವರ್ಷಗಳ ಪದವಿಯನ್ನು ಒಟ್ಟು 50,000ರಿಂದ 60,000 ರೂಪಾಯಿ ವೆಚ್ಚದಲ್ಲಿ ಪೂರ್ಣಗೊಳಿಸಿದ್ದೆವು.”

ಮಿಶ್ರಾ ಮತ್ತು ಇತರ ವಿದ್ಯಾರ್ಥಿಗಳು ವಿಶ್ವವಿದ್ಯಾಲಯದ ಆಡಳಿತ ಮಂಡಳಿಯೊಂದಿಗೆ ತಮ್ಮ ಕಳವಳಗಳನ್ನು ಹಲವು ಬಾರಿ ಹಂಚಿಕೊಂಡಿದ್ದಾರೆ. “ನಾವು ವಿಶ್ವವಿದ್ಯಾಲಯದ ಆಡಳಿತದೊಂದಿಗೆ ನಿರಂತರ ಚರ್ಚೆ ನಡೆಸಿದೆವು. ಉಳಿದ ವಿದ್ಯಾರ್ಥಿಗಳು ಎಲ್ಲಿಗೆ ಹೋಗಬೇಕು? ಮುಕ್ತ ವಿಶ್ವವಿದ್ಯಾಲಯದ (ಓಪನ್ ಲರ್ನಿಂಗ್) ಕೋರ್ಸ್ಗೆ ಸೇರಿಕೊಳ್ಳುವ ಆಯ್ಕೆ ಇದೆ. ಆದರೆ ಅದರ ನಂತರ ವೃತ್ತಿಜೀವನದ ಭವಿಷ್ಯವೇನು? ನನ್ನ ನಾಲ್ಕು ವರ್ಷಗಳ ಕೋರ್ಸ್ ನಲ್ಲಿ ನಾನು ಒಂದು ವರ್ಷ ಸಂಶೋಧನೆ ಮಾಡಿದ್ದೆ. ನನ್ನ ವೃತ್ತಿಜೀವನದ ಹಾದಿಯ ಬಗ್ಗೆ ನನ್ನಲ್ಲಿ ಒಂದು ನಿರ್ದಿಷ್ಟ ಯೋಜನೆಯಿತ್ತು” ಎಂದು ಮಿಶ್ರಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹೊರಗುಳಿದ ಅನೇಕ ವಿದ್ಯಾರ್ಥಿಗಳನ್ನು DU ಈಗ ಈ ಮುಕ್ತ ಕಲಿಕೆಯ ಹಾದಿಗೆ ಕಳುಹಿಸುತ್ತಿದೆ. ಹಂಸರಾಜ್ ಕಾಲೇಜಿನ ಇತಿಹಾಸ ಪದವೀಧರ ಆದಿತ್ಯ ತ್ರಿಪಾಠಿ ಅವರಿಗೆ ಇದು ಸುಲಭದ ಪರಿಹಾರವಾಗಿ ಕಾಣಿಸುತ್ತಿಲ್ಲ. ಹೆಚ್ಚುವರಿಯಾಗಿ 1.9 ಲಕ್ಷ ರೂಪಾಯಿ ಜೀವನಾಧಾರ ವೆಚ್ಚ ಭರಿಸಬೇಕಾಗಿದೆ ಮತ್ತು ಇನ್ನೊಂದು ವರ್ಷ ಅಧ್ಯಯನಕ್ಕಾಗಿ ವ್ಯಯಿಸಬೇಕಾಗಿದೆ ಎಂದು ಅವರು ಹೇಳುತ್ತಾರೆ. “DUನ ಈ ಅಸ್ಪಷ್ಟ ನೀತಿ ನಿರೂಪಣೆಯಿಂದಾಗಿ ನನ್ನ ಒಂದು ವರ್ಷ ವ್ಯರ್ಥವಾಗುತ್ತದೆ” ಎಂಬುದು ಅವರ ಅಳಲು.

ಯಾವ ಕೋರ್ಸ್ ಸೂಕ್ತ ಎಂಬ ಗೊಂದಲದಲ್ಲಿರುವ ತ್ರಿಪಾಠಿ, ಸುರಕ್ಷಿತ ಆಯ್ಕೆಯಾಗಿ DUನಲ್ಲಿ ಎರಡು ವರ್ಷಗಳ ಎಂಎ ಇತಿಹಾಸ ಕೋರ್ಸ್ಗೆ ಸೇರಿಕೊಂಡಿದ್ದಾರೆ. ಇದರೊಂದಿಗೆ ಸಾರ್ವಜನಿಕ ಮುಕ್ತ ವಿಶ್ವವಿದ್ಯಾಲಯದ ಮೂಲಕವೂ ಒಂದು ವರ್ಷದ ಕೋರ್ಸ್ಗೆ ಯತ್ನಿಸುತ್ತಿದ್ದಾರೆ. ಆದರೆ ಈ ಎರಡೂ ಪದವಿಗಳ ಮೌಲ್ಯದ ಬಗ್ಗೆ ಅವರಿಗೆ ಆತಂಕವಿದೆ. “ನಾವು ಮುಕ್ತ ಕಲಿಕೆಯ ಮೂಲಕವೂ ಪ್ರವೇಶ ಪಡೆಯಲು ಯತ್ನಿಸುತ್ತಿದ್ದೇವೆ. ಆದರೆ ಮುಕ್ತ ಪದವಿಯ ಮೌಲ್ಯವೇ ಬೇರೆ” ಎಂದು ಅವರು ಹೇಳಿದ್ದಾರೆ.

ದಿಲ್ಲಿಯಲ್ಲಿ ನೆಲೆಸಿ ಅಧ್ಯಯನ ಮಾಡಬೇಕಾದ ಹೊರರಾಜ್ಯಗಳ ವಿದ್ಯಾರ್ಥಿಗಳಿಗೆ ಈ ಅನಿಶ್ಚಿತತೆ ಮತ್ತಷ್ಟು ಹೊರೆಯಾಗಿದೆ. ಉತ್ತರ ಪ್ರದೇಶದ ಗೋರಖ್ಪುರದವರಾದ ತ್ರಿಪಾಠಿ, ತಮಗೆ ತಿಂಗಳಿಗೆ 15,100ರಿಂದ 16,100 ರೂಪಾಯಿ ವೆಚ್ಚವಾಗುತ್ತದೆ ಎಂದು ಅಂದಾಜಿಸಿದ್ದಾರೆ. ಇದರಲ್ಲಿ ಬಾಡಿಗೆಗೆ 7,100 ರೂಪಾಯಿ, ಆಹಾರಕ್ಕೆ 4,000 ರೂಪಾಯಿ, ತರಗತಿಗಳಿಗೆ ಹೋಗಿ ಬರಲು ಪ್ರಯಾಣಕ್ಕೆ 2,000 ರೂಪಾಯಿ ಮತ್ತು ಇತರ ಖರ್ಚುಗಳಿಗೆ 2,000ರಿಂದ 3,000 ರೂಪಾಯಿ ವೆಚ್ಚವಾಗುತ್ತದೆ. ಒಂದು ವರ್ಷಕ್ಕೆ ಇದು ಸುಮಾರು 1.81ರಿಂದ 1.93 ಲಕ್ಷ ರೂಪಾಯಿಯಷ್ಟಾಗುತ್ತದೆ.

ನಾಲ್ಕನೇ ವರ್ಷದ ಕಾರ್ಯಗತಗೊಳಿಸುವಿಕೆಯನ್ನು ಮೇಲ್ವಿಚಾರಣೆ ಮಾಡುವ ಕಾಲೇಜು ಮಟ್ಟದ ಸಮಿತಿಯ ಸದಸ್ಯರೊಂದಿಗೆ ಸಭೆ ನಡೆದಿತ್ತು. ಆದರೆ ಒಂದು ವರ್ಷದ ಮಾಸ್ಟರ್ಸ್ ಕೋರ್ಸ್ ನ ಪ್ರವೇಶ ಮಾನದಂಡಗಳ ಬಗ್ಗೆ ವಿದ್ಯಾರ್ಥಿಗಳಿಗೆ ಯಾವುದೇ ಸ್ಪಷ್ಟತೆ ಸಿಗಲಿಲ್ಲ ಎಂದು ಅವರು ತಿಳಿಸಿದ್ದಾರೆ. ಮೇ ತಿಂಗಳಲ್ಲಿ ಮಾಹಿತಿ ಕೈಪಿಡಿ ಹೊರಬಂದಾಗಷ್ಟೇ ಮಾರ್ಗದರ್ಶಿ ಸೂತ್ರಗಳು ಲಭ್ಯವಾದವು. “ನಡೆದ ಘಟನೆ ನಿಜಕ್ಕೂ ಆಘಾತಕಾರಿ. ಈ ವಿಷಯವನ್ನು ಮೂರನೇ ವರ್ಷದಲ್ಲೇ ಅಥವಾ ಮೂರನೇ ವರ್ಷದ ಕೊನೆಯಲ್ಲಿ ಸ್ಪಷ್ಟಪಡಿಸಬೇಕಿತ್ತು” ಎಂದು ತ್ರಿಪಾಠಿ ಹೇಳಿದ್ದಾರೆ.

ಗೋರಖ್ಪುರದಲ್ಲಿರುವ ಅವರ ಪೋಷಕರು ಈ ಬೆಳವಣಿಗೆಗಳಿಂದ ತೀವ್ರ ಆತಂಕಕ್ಕೊಳಗಾಗಿದ್ದಾರೆ ಮತ್ತು ಮುಂದಿನ ದಾರಿಯನ್ನು ಹುಡುಕುತ್ತಿರುವ ಕುಟುಂಬವು ಅಸಹಾಯಕತೆಗೆ ಸಿಲುಕಿದೆ.

►ವೈಯಕ್ತಿಕ ದೂರುಗಳಿಂದ ಕೋರ್ಟ್ ಮೆಟ್ಟಿಲೇರುವವರೆಗೆ

ವಿದ್ಯಾರ್ಥಿಗಳು ಮೊದಲ ಬಾರಿಗೆ ದಿಲ್ಲಿ ಹೈಕೋರ್ಟ್ ಮೆಟ್ಟಿಲೇರಿ, ಪ್ರವೇಶ ಮಾಹಿತಿ ಕೈಪಿಡಿಯಲ್ಲಿರುವ “ಅರ್ಜಿದಾರರ ವಿರುದ್ಧ ತಾರತಮ್ಯ ಎಸಗುವ” ನಿಯಮಗಳನ್ನು ರದ್ದುಗೊಳಿಸುವಂತೆ ಕೋರಿದ್ದರು.

ಆಗಸ್ಟ್ 31ರಂದು, ವಿದ್ಯಾರ್ಥಿಗಳ ತಂಡವೊಂದು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡಿದ ಕೋರ್ಟ್, ಈ ವಿಷಯದ ಕುರಿತು “ಮೂರು ದಿನಗಳಲ್ಲಿ ಸೂಕ್ತ ಪರಿಶೀಲನೆ ನಡೆಸಿ ಸ್ಪಷ್ಟ ಆದೇಶ ಹೊರಡಿಸುವಂತೆ” DUನ ದೂರು ಪರಿಹಾರ ಸಮಿತಿಗೆ ಸೂಚಿಸಿತು. ಆದರೆ ಸೆಪ್ಟೆಂಬರ್ 9ರಂದು ಸಮಿತಿಯು ಆದ್ಯತಾ ವ್ಯವಸ್ಥೆ ಮತ್ತು CGPA ಮಾನದಂಡವನ್ನು ಎತ್ತಿಹಿಡಿಯಿತು. ಹೀಗಾಗಿ ಹಲವು ವಿದ್ಯಾರ್ಥಿಗಳು ಆ ಆದೇಶವನ್ನು ಪ್ರಶ್ನಿಸಿ ಮತ್ತು ಜುಲೈನಲ್ಲಿ DU ಹೊರಡಿಸಿದ ಪ್ರವೇಶ ಮಾನದಂಡಗಳನ್ನು ರದ್ದುಗೊಳಿಸುವಂತೆ ಕೋರಿ ಮತ್ತೆ ಕೋರ್ಟ್ ಮೆಟ್ಟಿಲೇರಿದ್ದಾರೆ. ಹೆಚ್ಚಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲು ನ್ಯಾಯಸಮ್ಮತ ಪ್ರಸ್ತಾಪವನ್ನು ಸಲ್ಲಿಸುವಂತೆ ಕೋರ್ಟ್ ಸೂಚಿಸಿದ್ದು, ಅಕ್ಟೋಬರ್ 27ರಂದು ಈ ವಿಚಾರಣೆಯನ್ನು ಕೈಗೆತ್ತಿಕೊಳ್ಳಲಿದೆ.

“ಎಲ್ಲರಿಗೂ ಅವಕಾಶ ಕಲ್ಪಿಸುವ ಉದ್ದೇಶದಿಂದ” ಪದವಿ ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ NET ಪರೀಕ್ಷೆಯ ಅಗತ್ಯವಿಲ್ಲದೆ, ನೇರವಾಗಿ ಪಿಎಚ್ಡಿಗೆ ಪ್ರವೇಶ ಪಡೆಯುವ ವ್ಯವಸ್ಥೆಯನ್ನು DU ಈಗ ತಂದಿದೆ ಎಂದು ಗಾಂಧಿ ತಿಳಿಸಿದ್ದಾರೆ. ಆದರೆ ಇದಕ್ಕೆ ವಿಶ್ವವಿದ್ಯಾಲಯ ನಡೆಸುವ ಪ್ರವೇಶ ಪರೀಕ್ಷೆ ಮತ್ತು ಇತರ ಮಾನದಂಡಗಳು ಅನ್ವಯಿಸುತ್ತವೆ. ಸೀಟುಗಳ ಸಂಖ್ಯೆಯನ್ನು ಇನ್ನೂ ನಿರ್ಧರಿಸಬೇಕಿದ್ದು, “ಬರುವ ಅರ್ಜಿಗಳ ಸಂಖ್ಯೆಯನ್ನು ಆಧರಿಸಿ ಸೀಟುಗಳನ್ನು ನಿಗದಿಪಡಿಸಲಾಗುವುದು” ಎಂದು ಅವರು ಹೇಳಿದ್ದಾರೆ.

“ನಮ್ಮ ಮೂಲಸೌಕರ್ಯ ಮತ್ತು ಸಂಪನ್ಮೂಲಗಳು ಸೀಮಿತವಾಗಿವೆ. ಪಿಎಚ್ಡಿಗೆ ಪ್ರತ್ಯೇಕ ತರಗತಿ ಕೊಠಡಿಗಳ ಅಗತ್ಯವಿರುವುದಿಲ್ಲ. ಇದು ಮುಖ್ಯವಾಗಿ ಮಾರ್ಗದರ್ಶಕ ಪ್ರಾಧ್ಯಾಪಕರೊಂದಿಗಿನ ಸಂವಹನ ಮತ್ತು ಸಂಶೋಧನೆಯನ್ನು ಆಧರಿಸಿದೆ. ಸಂಶೋಧನೆಯನ್ನು ಉತ್ತೇಜಿಸುವ ದೃಷ್ಟಿಯಿಂದ ಹೆಚ್ಚಿನ ಪಿಎಚ್ಡಿ ಸಂಶೋಧಕರನ್ನು ಸೇರಿಸಿಕೊಳ್ಳಲು ನಮ್ಮ ಬೋಧಕ ಸಿಬ್ಬಂದಿಯೂ ಸಿದ್ಧರಿದ್ದಾರೆ” ಎಂದು ಗಾಂಧಿ ಸ್ಪಷ್ಟಪಡಿಸಿದ್ದಾರೆ.

►ನಾಲ್ಕನೇ ವರ್ಷದ ವ್ಯಾಸಂಗ ಪ್ರಯೋಜನ ನೀಡಿತೇ?

ಚೌಕಟ್ಟಿನ ಆರಂಭದಲ್ಲೇ ಸಮಸ್ಯೆಗಳು ಶುರುವಾಗಿದ್ದವು ಎಂದು ಶಿಕ್ಷಕರು ಹೇಳುತ್ತಾರೆ. 2022ರಲ್ಲಿ DU UGCF ವ್ಯವಸ್ಥೆಯನ್ನು ಜಾರಿಗೆ ತಂದಾಗ, ಸಂಪೂರ್ಣ ಚೌಕಟ್ಟು ಮತ್ತು ಮೌಲ್ಯಮಾಪನ ಯೋಜನೆ ಸ್ಪಷ್ಟವಾಗುವ ಮೊದಲೇ ಪಠ್ಯಕ್ರಮಕ್ಕೆ ತರಾತುರಿಯಲ್ಲಿ ಒಪ್ಪಿಗೆ ನೀಡಿದ್ದನ್ನು ಕೆಲವು ಶೈಕ್ಷಣಿಕ ಮಂಡಳಿಯ ಸದಸ್ಯರು ವಿರೋಧಿಸಿದ್ದರು. “ಪ್ರತಿಯೊಂದು ಸೆಮಿಸ್ಟರ್ಗೆ ಅನುಗುಣವಾಗಿ ಪಠ್ಯಕ್ರಮವನ್ನು ಅಂಗೀಕರಿಸಲಾಗಿತ್ತು, ಆದರೆ ಇದ್ದಕ್ಕಿದ್ದಂತೆ ವ್ಯವಸ್ಥೆಯೇ ಬದಲಾಯಿತು. ಶಿಕ್ಷಕರಿಗೂ ಸೂಕ್ತ ಸಿದ್ಧತೆಯಿರಲಿಲ್ಲ, ಸರಿಯಾದ ಮಾರ್ಗದರ್ಶನವೂ ಸಿಗಲಿಲ್ಲ. ಇದರಿಂದಾಗಿ ವಿದ್ಯಾರ್ಥಿಗಳು ನಿಜಕ್ಕೂ ಗೊಂದಲಕ್ಕೊಳಗಾದರು” ಎಂದು ಹಬೀಬ್ ಹೇಳಿದ್ದಾರೆ.

ನಾಲ್ಕನೇ ವರ್ಷಕ್ಕೆ ಸೇರ್ಪಡೆಯಾಗುವ ವಿದ್ಯಾರ್ಥಿಗಳ ಸಂಖ್ಯೆ ಇಳಿಮುಖವಾಗುತ್ತಿದೆ. ಜುಲೈ 10ರಂದು ಕಾಲೇಜುಗಳ ಡೀನ್ಗೆ ಬರೆದ ಪತ್ರದಲ್ಲಿ, ದೆಹಲಿ ವಿಶ್ವವಿದ್ಯಾಲಯದ ಪ್ರಾಂಶುಪಾಲರ ಸಂಘವು (DUPA) 2025–26ರಲ್ಲಿ ಶೇಕಡಾ 30ರಷ್ಟು ವಿದ್ಯಾರ್ಥಿಗಳು ಮಾತ್ರ ನಾಲ್ಕನೇ ವರ್ಷಕ್ಕೆ ಸೇರಿಕೊಂಡಿದ್ದಾರೆ ಮತ್ತು 2026–27ರ ಸಾಲಿಗೆ ಕೇವಲ ಬೆರಳೆಣಿಕೆಯಷ್ಟು ವಿದ್ಯಾರ್ಥಿಗಳು ಮಾತ್ರ ಆಸಕ್ತಿ ತೋರಿಸಿದ್ದಾರೆ ಎಂದು ತಿಳಿಸಿದೆ.

ಕಿರೋಡಿಮಲ್ ಕಾಲೇಜಿನ ಇಂಗ್ಲಿಷ್ ವಿಭಾಗದ ಸಹ ಪ್ರಾಧ್ಯಾಪಕ ರುದ್ರಶಿಶ್ ಚಕ್ರವರ್ತಿ ಮಾತನಾಡಿ, “NEP-UGCF ಅಡಿಯಲ್ಲಿ ತಂದ ನಾಲ್ಕನೇ ವರ್ಷದ ಕೋರ್ಸ್ ಅಂದುಕೊಂಡಂತೆ ಕೆಲಸ ಮಾಡಿಲ್ಲ. ಈ ಶೈಕ್ಷಣಿಕ ವರ್ಷದಲ್ಲಿ ತೀರಾ ಕಡಿಮೆ ವಿದ್ಯಾರ್ಥಿಗಳು ನಾಲ್ಕನೇ ವರ್ಷಕ್ಕೆ ಸೇರಿಕೊಂಡಿದ್ದಾರೆ. ಹೆಚ್ಚುವರಿ ವರ್ಷ ವ್ಯಯಿಸುವುದರಿಂದ ತಮಗೆ ಸಿಗುವ ಪ್ರಯೋಜನ ತೀರಾ ಕಡಿಮೆ ಮತ್ತು ಮುಂದಿನ ಹಾದಿ ಅಸ್ಪಷ್ಟವಾಗಿದೆ ಎಂಬುದು ಕಳೆದ ವರ್ಷದ ಅನುಭವದಿಂದ ವಿದ್ಯಾರ್ಥಿಗಳಿಗೆ ತಿಳಿದಿರುವುದೇ ಇದಕ್ಕೆ ಸ್ಪಷ್ಟ ಕಾರಣ. ಈ ವ್ಯವಸ್ಥೆಯ ರಚನೆಯಲ್ಲೇ ಲೋಪವಿದೆ. ಸಣ್ಣಪುಟ್ಟ ಬದಲಾವಣೆಗಳಿಂದ ಇದರ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯವಿಲ್ಲ” ಎಂದಿದ್ದಾರೆ.

ಹೊಸ ಮಾನದಂಡಗಳು ಶಿಕ್ಷಣವನ್ನು ಮಧ್ಯದಲ್ಲೇ ಕೈಬಿಡುವವರ ಸಂಖ್ಯೆಯನ್ನು ಹೆಚ್ಚಿಸಬಹುದು ಮತ್ತು ಬಹು-ವಿಷಯಗಳ ಕೋರ್ಸ್ ಗಳನ್ನು ಆಯ್ಕೆ ಮಾಡಿಕೊಳ್ಳದಂತೆ ವಿದ್ಯಾರ್ಥಿಗಳನ್ನು ನಿರುತ್ಸಾಹಗೊಳಿಸಬಹುದು ಎಂದು ಶಿಕ್ಷಕರು ಎಚ್ಚರಿಸಿದ್ದಾರೆ. ಒಂದೇ ವಿಷಯದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡುವಾಗ ಆನರ್ಸ್ ಪದವೀಧರರಿಗಿಂತ ಮೇಜರ್ ಪದವೀಧರರು ಹಿನ್ನಡೆ ಅನುಭವಿಸುತ್ತಿರುವುದರಿಂದ, ಮುಂದಿನ ಬ್ಯಾಚ್ಗಳು ನಾಲ್ಕನೇ ವರ್ಷ ಮುಂದುವರಿಸಬೇಕೇ ಬೇಡವೇ ಎಂದು ಮರುಚಿಂತನೆ ನಡೆಸಬಹುದು.

ಆದರೆ ಮೊದಲ ಬ್ಯಾಚ್ ನ ವಿದ್ಯಾರ್ಥಿಗಳಿಗೆ ಈ ಮರುಚಿಂತನೆ ತಡವಾಗಿ ಬಂದಿದೆ. “ಇಂದು ನಮಗೆ ಎಲ್ಲಿಗೆ ಹೋಗಬೇಕೆಂದು ತಿಳಿಯುತ್ತಿಲ್ಲ. ನಮ್ಮ ಪ್ರಾಧ್ಯಾಪಕರೂ ಅಸಹಾಯಕರಾಗಿದ್ದಾರೆ” ಎಂದು ಗೌರವ್ ಆತಂಕ ವ್ಯಕ್ತಪಡಿಸಿದ್ದಾರೆ.

ಸೌಜನ್ಯ: indianexpress.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor