ಸಿಜೆಪಿ ಪ್ರತಿಭಟನಾ ಸ್ಥಳದ ಬಳಿ ಕಾಣಿಸಿಕೊಂಡ ಕಲ್ಲು ತುಂಬಿದ ಟ್ರಕ್: ಅಸಲಿಯತ್ತು ಬಯಲು ಮಾಡಿದ 'newslaundry' ವರದಿ
Photo Credit : newslaundry.com
ಜುಲೈ 20 ರಂದು ಬೆಳಿಗ್ಗೆ 8 ಗಂಟೆಗೆ ಕಾಕ್ರೋಚ್ ಜನತಾ ಪಾರ್ಟಿ (CJP) ಸದಸ್ಯರು ಜಂತರ್ ಮಂತರ್ ನಲ್ಲಿ ನೆರೆದಿದ್ದಾಗ, ಸಂಸದ್ ಮಾರ್ಗದಿಂದ ಪ್ರತಿಭಟನಾ ಸ್ಥಳಕ್ಕೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಕಲ್ಲುಗಳನ್ನು ಹೊತ್ತು ನಿಂತಿದ್ದ ಟ್ರಕ್ ಒಂದನ್ನು ಕಾರ್ಯಕರ್ತರು ಗಮನಿಸಿದರು. ಈ ಟ್ರಕ್ ಪೊಲೀಸ್ ಬ್ಯಾರಿಕೇಡ್ ದಾಟಿ ಒಳಗೆ ಬರಲು ಹೇಗೆ ಸಾಧ್ಯವಾಯಿತು ಎಂದು ಪ್ರಶ್ನಿಸಿ ಸಂಸ್ಥಾಪಕ ಅಭಿಜಿತ್ ದೀಪ್ಕೆ ವೀಡಿಯೋ ಒಂದನ್ನು ಹಂಚಿಕೊಂಡರು. ಪ್ರತಿಭಟನಾಕಾರರ ಮೇಲೆ ಸುಳ್ಳು ಆರೋಪ ಹೊರಿಸಲು ಅಥವಾ ಹಿಂಸಾಚಾರವನ್ನು ಪ್ರಚೋದಿಸಲು ಈ ಕಲ್ಲುಗಳನ್ನು ಬಳಸಬಹುದು ಎಂದು ಸಿಜೆಪಿ ಆರೋಪಿಸಿತು. ಆದರೆ ಪೊಲೀಸರು ಇದಕ್ಕೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ.
'newslaundry'ಯು ನೋಂದಣಿ ಸಂಖ್ಯೆಯ ಆಧಾರದ ಮೇಲೆ ಆ ವಾಹನವನ್ನು ಪತ್ತೆಹಚ್ಚಿದೆ. ಅದು ಯಾವುದೋ ದಾರಿ ತಪ್ಪಿ ಬಂದ ಟ್ರಕ್ ಆಗಿರಲಿಲ್ಲ. ಜುಲೈ 16ರಂದು ಮುಂಜಾನೆ ನಡೆದ ಅಪಘಾತವೊಂದರಲ್ಲಿ ಏಳು ಜನರು ಗಾಯಗೊಂಡು ಎಫ್‌ಐಆರ್ ದಾಖಲಾಗಿದ್ದ ನಂತರ, ನಾಲ್ಕು ದಿನಗಳ ಹಿಂದಷ್ಟೇ ಪೊಲೀಸರು ಅದನ್ನು ಜಪ್ತಿ ಮಾಡಿದ್ದರು. ಆ ವಾಹನವು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಯ 'ಮಾಲ್ಖಾನಾ'ದ (ಆಯುಧಗಳು, ನಗದು, ಜಪ್ತಿ ಮಾಡಿದ ಸ್ವತ್ತುಗಳು ಮತ್ತು ಅಪರಾಧ ಸ್ಥಳದ ಸಾಕ್ಷ್ಯಗಳನ್ನು ಸಂಗ್ರಹಿಸಿಡುವ ಪೊಲೀಸ್ ಠಾಣೆಯ ವಿಭಾಗ) ವಶದಲ್ಲಿತ್ತು.
ಮುಂದಿನ ಒಂದು ವಾರದ ಅವಧಿಯಲ್ಲಿ ಈ ಡಂಪರ್ ಕನಿಷ್ಠ ನಾಲ್ಕು ಬಾರಿ ಜಾಗ ಬದಲಾಯಿಸಿತು. ಪ್ರತಿಭಟನಾ ಸ್ಥಳಕ್ಕೆ, ಖಾಲಿ ಮಾಡಲು ಭಲಸ್ವಾಗೆ, ರೈಸಿನಾ ರಸ್ತೆಯಲ್ಲಿರುವ ಇಂಡಿಯನ್ ಯೂತ್ ಕಾಂಗ್ರೆಸ್ ಕಚೇರಿಯ ಹೊರಗಿನ ಫುಟ್‌ಪಾತ್‌ಗೆ ಹಾಗೂ ನಂತರ ಕಣ್ಣಿಗೆ ಕಾಣಿಸದ ಸ್ಥಳಕ್ಕೆ ಅದನ್ನು ಒಯ್ಯಲಾಗಿತ್ತು. ಆದರೆ ಅದೇ ಠಾಣೆಯ ಅಧಿಕಾರಿಗಳು ಈ ಕುರಿತು ಪರಸ್ಪರ ವಿರುದ್ಧವಾದ ವಿವರಣೆಗಳನ್ನು ನೀಡುತ್ತಿದ್ದಾರೆ.
►ಆ ಅಪಘಾತ
ಎಫ್‌ಐಆರ್ ಪ್ರಕಾರ, ಜುಲೈ 16ರಂದು ಮುಂಜಾನೆ 4.15ಕ್ಕೆ ಅಪಘಾತ ಸಂಭವಿಸಿದೆ. ಲಟಿಯನ್ಸ್ ದಿಲ್ಲಿಯ ಫಿರೋಜ್ ಶಾ ರಸ್ತೆ ಮತ್ತು ಕಸ್ತೂರ್‌ಬಾ ಗಾಂಧಿ ಮಾರ್ಗ ಜಂಕ್ಷನ್ ನಲ್ಲಿ HR63 E 6865 ನೋಂದಣಿ ಸಂಖ್ಯೆಯ ಟ್ರಕ್ ಅನ್ನು ಅತಿ ವೇಗ ಮತ್ತು ನಿರ್ಲಕ್ಷ್ಯದಿಂದ ಚಾಲನೆ ಮಾಡಿ, HR43 D 9778 ಸಂಖ್ಯೆಯ ಮಾರುತಿ ಇಕೋ ಕಾರಿಗೆ ಡಿಕ್ಕಿ ಹೊಡೆಯಲಾಗಿತ್ತು. ಕಾರಿನಲ್ಲಿದ್ದ ಏಳು ಜನರು ಗಾಯಗೊಂಡಿದ್ದರು. ಎರಡೂ ವಾಹನಗಳನ್ನು ಪಾರ್ಲಿಮೆಂಟ್ ಸ್ಟ್ರೀಟ್ ಪೊಲೀಸ್ ಠಾಣೆಗೆ ತೆಗೆದುಕೊಂಡು ಹೋಗಲಾಗಿತ್ತು.
ಈ ಟ್ರಕ್ ಕೇಶವ್ ಕುಮಾರ್ ಸಾಹ್ನಿ ಎಂಬುವವರ ಹೆಸರಿನಲ್ಲಿ ಕೊನೆಯದಾಗಿ ನೋಂದಣಿಯಾಗಿತ್ತು. ಅಪಘಾತ ಸಂಭವಿಸಿದಂದಿನಿಂದಲೂ ಅದು ಠಾಣೆಯಲ್ಲೇ ಇತ್ತು ಎಂದು ಅವರು ಹೇಳಿದ್ದಾರೆ. "ಇದು ಕಟ್ಟಡ ನಿರ್ಮಾಣಕ್ಕೆ ಬಳಸುವ ಇಟ್ಟಿಗೆ ಮತ್ತು ಕಲ್ಲುಗಳನ್ನು ಒಯ್ಯುತ್ತಿದ್ದ ಡಂಪರ್ ಟ್ರಕ್. ಆದರೆ, ನಾವು ಇದನ್ನು ಎರಡು ತಿಂಗಳ ಹಿಂದೆಯೇ ಮಾರಾಟ ಮಾಡಿದ್ದೆವು. ಅದಕ್ಕೆ ಸಂಬಂಧಿಸಿದ ಒಪ್ಪಂದದ ಪತ್ರ ನನ್ನ ಬಳಿಯಿದೆ" ಎಂದು ಹೇಳಿದ್ದಾರೆ.
ಮಾರುತಿ ಇಕೋ ಕಾರಿನ ಪ್ರಸ್ತುತ ಮಾಲೀಕರ ಸಂಬಂಧಿ ಚರಣ್ ಸಿಂಗ್ ಹಾನಿಗೊಳಗಾದ ವಾಹನವನ್ನು ಠಾಣೆಗೆ ತಂದಿದ್ದರು. ಅಪಘಾತ ಸಂಭವಿಸಿದಾಗ ಕಾರಿನಲ್ಲಿ ಏಳು ಜನರಿದ್ದರು. ಎಲ್ಲರಿಗೂ ಗಾಯಗಳಾಗಿದ್ದವು. "ಇಟ್ಟಿಗೆ ಮತ್ತು ಕಲ್ಲುಗಳನ್ನು ತುಂಬಿದ್ದ ಟ್ರಕ್ ನಮ್ಮ ವಾಹನಕ್ಕೆ ಡಿಕ್ಕಿ ಹೊಡೆದಿತ್ತು" ಎಂದಿದ್ದಾರೆ ಅವರು.
►ಒಂದೇ ಠಾಣೆ, ಮೂರು ರೀತಿಯ ಹೇಳಿಕೆಗಳು
ಹೆಸರು ಹೇಳಲಿಚ್ಛಿಸದ ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಯ ಅಧಿಕಾರಿಯೊಬ್ಬರು, "ಈ ಟ್ರಕ್ ಅನ್ನು ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಯ ಹೊರಗಡೆಯೇ ನಿಲ್ಲಿಸಲಾಗಿತ್ತು. ಆದರೆ ಜುಲೈ 20ರ ಬೆಳಿಗ್ಗೆ ಕಲ್ಲು ತುಂಬಿದ್ದ ಟ್ರಕ್ ನ ವೀಡಿಯೋ ವೈರಲ್ ಆಗುತ್ತಿದ್ದಂತೆ, ನಾವು ಅದನ್ನು ಭಲಸ್ವಾ ಪ್ರದೇಶಕ್ಕೆ ತೆಗೆದುಕೊಂಡು ಹೋಗಿ ಖಾಲಿ ಮಾಡಿಸಿದೆವು. ನಂತರ ಅದನ್ನು ಮತ್ತೆ ತಂದು ಇಲ್ಲೇ ನಿಲ್ಲಿಸಿದೆವು" ಎಂದು ತಿಳಿಸಿದ್ದಾರೆ.
ತನಿಖಾಧಿಕಾರಿ ಮೋಹಿತ್ ಭಾಟಿ ಮಾತನಾಡಿ, ಪ್ರತಿಭಟನೆ ನಡೆಯುತ್ತಿದ್ದ ಕಾರಣ ಮತ್ತು ಠಾಣೆಯಲ್ಲಿ ಜಾಗದ ಅಭಾವವಿದ್ದಿದ್ದರಿಂದ ಟ್ರಕ್ ಅನ್ನು ಆರಂಭದಲ್ಲಿ ಬೇರೆಡೆಗೆ ಸರಿಸಲಾಗಿತ್ತು ಎಂದರು. ಅದು ಯೂತ್ ಕಾಂಗ್ರೆಸ್ ಕಚೇರಿಯ ಬಳಿಗೆ ಹೇಗೆ ತಲುಪಿತು ಎಂದು ಕೇಳಿದ್ದಕ್ಕೆ, "ನಾವು ವಾಹನವನ್ನು ಜಪ್ತಿ ಮಾಡಿದ್ದೆವು. ಅಂದಿನಿಂದ ಅದು ಮಾಲ್ಖಾನಾ ವಿಭಾಗದ ವಶದಲ್ಲಿದೆ. ಇದಕ್ಕಿಂತ ಹೆಚ್ಚಿನ ಮಾಹಿತಿಯನ್ನು ನಾನು ನೀಡಲು ಸಾಧ್ಯವಿಲ್ಲ" ಎಂದರು.
ಸಂಸದ್ ಮಾರ್ಗ ಎಸ್‌ಎಚ್‌ಒ ನೀರಜ್ ಕುಮಾರ್ ಈ ಇಬ್ಬರ ಹೇಳಿಕೆಗಳನ್ನೂ ಅಲ್ಲಗೆಳೆದಿದ್ದಾರೆ. ಪ್ರತಿಭಟನೆಗಿಂತ ಒಂದು ದಿನ ಮುಂಚಿತವಾಗಿ, ಅಂದರೆ ಜುಲೈ 19ರಂದೇ ಟ್ರಕ್ ಖಾಲಿ ಮಾಡಲಾಗಿತ್ತು. ಈಗ ಹರಿದಾಡುತ್ತಿರುವ ವೀಡಿಯೋಗಳು ಹಳೆಯವು ಎಂದು ಅವರು ಹೇಳಿದರು. ಜಪ್ತಿ ಮಾಡಿದ ವಾಹನವನ್ನು ರಾಜಕೀಯ ಪಕ್ಷದ ಕಚೇರಿಯ ಹೊರಗೆ ನಿಲ್ಲಿಸಿದ್ದು ಹೇಗೆ ಎಂಬ ಪ್ರಶ್ನೆಗೆ, ಪೊಲೀಸರು ವಾಹನವನ್ನು ಎಲ್ಲೇ ನಿಲ್ಲಿಸಿದರೂ ವ್ಯತ್ಯಾಸವೇನೂ ಆಗುವುದಿಲ್ಲ ಎಂದರು.
ಈ ಎರಡೂ ಟೈಮ್‌ಲೈನ್ ಗಳು ಪರಸ್ಪರ ತಾಳೆಯಾಗುವುದಿಲ್ಲ. ಟ್ರಕ್ ಅನ್ನು ಜುಲೈ 19ರಂದೇ ಖಾಲಿ ಮಾಡಿದ್ದರೆ, ಮರುದಿನ ಬೆಳಿಗ್ಗೆ ಜಂತರ್ ಮಂತರ್ ನಲ್ಲಿ ಅದು ಕಲ್ಲುಗಳಿಂದ ತುಂಬಿ ನಿಂತಿರಲು ಸಾಧ್ಯವಿಲ್ಲ. ಅಥವಾ ವೀಡಿಯೋ ವೈರಲ್ ಆದ ಕಾರಣಕ್ಕೆ ಜುಲೈ 20ರಂದು ಅದನ್ನು ಖಾಲಿ ಮಾಡಿಸಿರಬೇಕು.
►ರೈಸಿನಾ ರಸ್ತೆಯಲ್ಲಿ ನಾಲ್ಕು ದಿನಗಳು?
ಜುಲೈ 25ರಂದು, ಇಂಡಿಯನ್ ಯೂತ್ ಕಾಂಗ್ರೆಸ್ ಕಾರ್ಯಕರ್ತರು ವೀಡಿಯೋ ಒಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಅದೇ ಟ್ರಕ್ ರೈಸಿನಾ ರಸ್ತೆಯ ತಮ್ಮ ಕಚೇರಿಯ (ಸಂಖ್ಯೆ 5) ಹೊರಗೆ ನಿಂತಿರುವುದು ಕಂಡುಬಂದಿದೆ. ಹಲವಾರು ಬಾರಿ ದೂರು ನೀಡಿ, ಪೊಲೀಸರೊಂದಿಗೆ ವಾಗ್ವಾದ ನಡೆಸಿದ ನಂತರ ಅಂದು ಮಧ್ಯಾಹ್ನ ಸುಮಾರು 12 ಗಂಟೆಗೆ ಆ ಟ್ರಕ್ ಅನ್ನು ತೆರವುಗೊಳಿಸಲಾಯಿತು.
"ಆ ಟ್ರಕ್ ಕಳೆದ ನಾಲ್ಕು ದಿನಗಳಿಂದ ನಮ್ಮ ಕಚೇರಿಯ ಹೊರಗೆ ನಿಂತಿತ್ತು" ಎಂದು ದಿಲ್ಲಿ ಯೂತ್ ಕಾಂಗ್ರೆಸ್ ಅಧ್ಯಕ್ಷ ಅಕ್ಷಯ್ ಲಕ್ರಾ ಹೇಳಿದ್ದಾರೆ. "ನಾವು ಈ ಬಗ್ಗೆ ಹಲವು ಬಾರಿ ದೂರು ನೀಡಿದ್ದೆವು. ಮೂರು ದಿನಗಳ ನಂತರವಷ್ಟೇ ಅದನ್ನು ತೆರವುಗೊಳಿಸಲಾಯಿತು. ಪೊಲೀಸರೇ ಅದನ್ನು ಅಲ್ಲಿ ತಂದು ನಿಲ್ಲಿಸಿದ್ದರು ಮತ್ತು ಅವರೇ ಅದನ್ನು ತೆರವುಗೊಳಿಸಿದರು" ಎಂದು ಆರೋಪಿಸಿದ ಲಕ್ರಾ, ಟ್ರಕ್‌ಗಳಿಗೆ ಪ್ರವೇಶವಿಲ್ಲದ ನಿಷೇಧಿತ ಪ್ರದೇಶಕ್ಕೆ ಟ್ರಕ್ ಬಂದು ಮೂರು ದಿನಗಳ ಕಾಲ ಯಾವುದೇ ವಾರಸುದಾರರಿಲ್ಲದೆ ನಿಂತಿದ್ದು ಹೇಗೆ ಎಂದು ಪ್ರಶ್ನಿಸಿದರು.
ಯೂಟ್ಯೂಬರ್ ರತನ್ ರಂಜನ್ ಅವರು ನಾಲ್ಕು ದಿನಗಳ ಮುಂಚೆಯೇ, ಅಂದರೆ ಜುಲೈ 21ರ ಸಂಜೆ, ಕಚೇರಿಯ ಹೊರಗಿನಿಂದ ಪೋಸ್ಟ್ ಮಾಡಿ, ಇದು ಜಂತರ್ ಮಂತರ್ ನಲ್ಲಿ ಕಂಡುಬಂದಿದ್ದ ಅದೇ ಡಂಪರ್. ಅದು ಅಲ್ಲಿ ಏನು ಮಾಡುತ್ತಿತ್ತು ಎಂಬುದರ ಕುರಿತು ದಿಲ್ಲಿ ಪೊಲೀಸರು ತನಿಖೆ ನಡೆಸಬೇಕು ಎಂದು ಒತ್ತಾಯಿಸಿದ್ದರು.
Photo Credit : newslaundry.com
ಪ್ರತಿಭಟನಾ ಸ್ಥಳದ ಬಳಿ ಬಿಟ್ಟುಹೋಗಿರುವ ಜಖಂಗೊಂಡ ವಾಹನವನ್ನು ನಂತರದ ದಿನಗಳಲ್ಲಿ ಪ್ರತಿಭಟನಾಕಾರರ ಮೇಲೆಯೇ ಧ್ವಂಸದ ಆರೋಪ ಹೊರಿಸಲು ಬಳಸಬಹುದು ಎಂದು ಸಿಜೆಪಿ (CJP) ಜುಲೈ 20ರಂದು ಆರೋಪಿಸಿತ್ತು. ಪಾರ್ಲಿಮೆಂಟ್ ಸ್ಟ್ರೀಟ್ ಠಾಣೆಯ ಸಿಬ್ಬಂದಿ, ಆ ವ್ಯಾನ್ ಅನ್ನು ಇತರ ಪೊಲೀಸ್ ವಾಹನಗಳೊಂದಿಗೆ ಪ್ರತಿಭಟನಾಕಾರರೇ ಜಖಂಗೊಳಿಸಿದ್ದಾರೆ ಎಂದು ‘newslaundry’ಗೆ ತಿಳಿಸಿದ್ದಾರೆ.
ಆದರೆ ಅವರದ್ದೇ ಎಫ್‌ಐಆರ್ ಪ್ರಕಾರ, ವಾಸ್ತವವೇ ಬೇರೆ ಇದೆ. ಅದು ಜುಲೈ 16ರ ಅಪಘಾತದಲ್ಲಿದ್ದ ಮಾರುತಿ ಇಕೋ ಕಾರು. ಅದನ್ನು ಸಹ ಬೇರೆಡೆಗೆ ಸರಿಸಲಾಗಿದೆ ಎಂದು ಚರಣ್ ಸಿಂಗ್ ಹೇಳಿದ್ದಾರೆ. "ನಾನು ನನ್ನ ವಾಹನವನ್ನು ಎಲ್ಲಿ ನಿಲ್ಲಿಸಿದ್ದೆನೋ, ಅಲ್ಲಿ ಇತರ ಜಖಂಗೊಂಡ ವಾಹನಗಳೂ ನಿಂತಿದ್ದವು. ಆದರೆ ಈಗ ಈ ವಾಹನ ಎಲ್ಲಿದೆಯೋ, ಅದನ್ನು ನಾವು ಅಲ್ಲಿ ನಿಲ್ಲಿಸಿರಲಿಲ್ಲ" ಎಂದು ಅವರು ಹೇಳಿದರು.
ಇನ್ನೊಂದೆಡೆ, ಹೆಸರು ಹೇಳಲು ಇಚ್ಛಿಸದ ಮಾಲ್ಖಾನಾ ಸಿಬ್ಬಂದಿಯೊಬ್ಬರು, ಟ್ರಕ್ ಪ್ರಸ್ತುತ ಕಾಳಿ ಬಾರಿ ಮಾರ್ಗದಲ್ಲಿರುವ ಟ್ರಾಫಿಕ್ ಪಿಟ್‌ನಲ್ಲಿ ಇದೆ ಎಂದು ತಿಳಿಸಿದ್ದಾರೆ.
ಆದರೆ 'newslaundry' ಪ್ರತಿನಿಧಿಗಳು ಆ ಸ್ಥಳಕ್ಕೆ ಭೇಟಿ ನೀಡಿದಾಗ ಟ್ರಕ್ ಅಲ್ಲಿರಲಿಲ್ಲ.
►ವರದಿ ಪ್ರಕಟವಾದ ನಂತರ ಪೊಲೀಸರ ಸ್ಪಷ್ಟನೆ
ಈ ವರದಿ ಪ್ರಕಟವಾದ ನಂತರ ದಿಲ್ಲಿ ಪೊಲೀಸರು ಸ್ಪಷ್ಟನೆ ನೀಡಿದ್ದಾರೆ. 'ಎಕ್ಸ್' ಪ್ಲಾಟ್‌ಫಾರ್ಮ್ ನಲ್ಲಿ ಪೋಸ್ಟ್ ಮಾಡಿರುವ ಪೊಲೀಸರು, ಮೆರವಣಿಗೆಯ ಕಾನೂನು ಮತ್ತು ಸುವ್ಯವಸ್ಥೆ ವ್ಯವಸ್ಥೆಯ ಭಾಗವಾಗಿ ಟ್ರಕ್ ಅನ್ನು ಸುರಕ್ಷಿತ ಸ್ಥಳಕ್ಕೆ ಸರಿಸಲಾಗಿತ್ತು ಎಂದು ತಿಳಿಸಿದ್ದಾರೆ. ಅಲ್ಲದೆ, ಈ ವಾಹನವನ್ನು ಪ್ರತಿಭಟನಾಕಾರರ ವಿರುದ್ಧದ ಪಿತೂರಿಗೆ ಜೋಡಿಸುವ ಯಾವುದೇ ಆರೋಪಗಳು ಸಂಪೂರ್ಣವಾಗಿ ಆಧಾರರಹಿತವಾಗಿವೆ ಎಂದು ಸ್ಪಷ್ಟಪಡಿಸಿದ್ದಾರೆ.