OECD ಚೌಕಟ್ಟಿಗೆ ಅನುಗುಣವಾಗಿ ಕ್ರಿಪ್ಟೋ ಆಸ್ತಿ ವರದಿ ಮಾರ್ಗದರ್ಶಿ ಬಿಡುಗಡೆ ಮಾಡಿದ ತೆರಿಗೆ ಇಲಾಖೆ: ಮಾರ್ಗದರ್ಶಿ ಟಿಪ್ಪಣಿಯಲ್ಲಿ ಏನಿದೆ?

Update: 2026-07-28 20:39 IST

ಸಾಂದರ್ಭಿಕ ಚಿತ್ರ | Photo Credit : PTI 

 

ಆರ್ಥಿಕ ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯ (OECD) ಅಂತರರಾಷ್ಟ್ರೀಯ ಮಾನದಂಡಗಳಿಗೆ ಅನುಗುಣವಾಗಿ, ಕ್ರಿಪ್ಟೋ-ಆಸ್ತಿಗಳ ವರದಿಯ ನಿಯಮಗಳಿಗೆ ಸಂಬಂಧಿಸಿದಂತೆ ಕೇಂದ್ರ ನೇರ ತೆರಿಗೆಗಳ ಮಂಡಳಿ (CBDT) 198 ಪುಟಗಳ ಸುದೀರ್ಘ ಮಾರ್ಗದರ್ಶಿಯನ್ನು ಬಿಡುಗಡೆ ಮಾಡಿದೆ.

ಈ ಹೊಸ ಕ್ರಮದಿಂದಾಗಿ ಕ್ರಿಪ್ಟೋ ಎಕ್ಸ್‌ಚೇಂಜ್‌ ಗಳು ತಮ್ಮಲ್ಲಿ ನಡೆಯುವ ಪ್ರತಿಯೊಂದು ವಹಿವಾಟಿನ ನಿಖರ ಮತ್ತು ವಿವರವಾದ ಮಾಹಿತಿಯನ್ನು ತೆರಿಗೆ ಇಲಾಖೆಗೆ ಸಲ್ಲಿಸುವುದು ಕಡ್ಡಾಯವಾಗಲಿದೆ. ಅಲ್ಲದೆ, ಮುಂದಿನ ವರ್ಷದಿಂದ ವಿವಿಧ ದೇಶಗಳ ನಡುವೆ ಕ್ರಿಪ್ಟೋ ವಹಿವಾಟುಗಳ ಮಾಹಿತಿಯನ್ನು ಸ್ವಯಂಚಾಲಿತವಾಗಿ ಹಂಚಿಕೊಳ್ಳಲು ಇದು ನೆರವಾಗಲಿದೆ.

ಈ ಮಾರ್ಗದರ್ಶಿ ಟಿಪ್ಪಣಿಯ ಅಡಿಯಲ್ಲಿ ತೆರಿಗೆದಾರರಿಗೆ ಯಾವುದೇ ಹೆಚ್ಚುವರಿ ಫಾರ್ಮ್ ಅಥವಾ ರಿಟರ್ನ್ಸ್ ಸಲ್ಲಿಸುವ ಅಗತ್ಯವಿಲ್ಲದಿದ್ದರೂ, ಸರಿಯಾದ ಲೆಕ್ಕಪತ್ರ ಹಾಗೂ ದಾಖಲೆಗಳನ್ನು ನಿರ್ವಹಿಸುವುದು ಅತ್ಯಂತ ಮುಖ್ಯವಾಗಿದೆ. ಏಕೆಂದರೆ ಇನ್ನು ಮುಂದೆ ತೆರಿಗೆ ಅಧಿಕಾರಿಗಳಿಗೆ ಪ್ರತಿಯೊಂದು ವಹಿವಾಟಿನ ಹಂತ ಹಂತದ ಸಂಪೂರ್ಣ ಮಾಹಿತಿ ಸಿಗಲಿದೆ ಎಂದು ತಜ್ಞರು ತಿಳಿಸಿದ್ದಾರೆ.

ಸೇವಾ ಪೂರೈಕೆದಾರರ ಮೇಲೆಯೇ ಸಂಪೂರ್ಣ ಜವಾಬ್ದಾರಿಯನ್ನು ಹೊರಿಸುವುದರಿಂದ, ಈ ಚೌಕಟ್ಟು ಕ್ರಿಪ್ಟೋ ಕ್ಷೇತ್ರದಲ್ಲಿ ತೆರಿಗೆ ಸಲ್ಲಿಕೆ ವ್ಯವಸ್ಥೆಯನ್ನು ಇನ್ನಷ್ಟು ಬಲಪಡಿಸುವ ನಿರೀಕ್ಷೆಯಿದೆ.

OECDಯ ಈ ವರದಿ ವ್ಯವಸ್ಥೆಯ ಮೂಲಕ, ವಿದೇಶಿ ಎಕ್ಸ್‌ಚೇಂಜ್‌ ಗಳಲ್ಲಿ ನಡೆಯುವ ವಹಿವಾಟುಗಳು ಸೇರಿದಂತೆ ಎಲ್ಲಾ ಕ್ರಿಪ್ಟೋ ವಹಿವಾಟುಗಳ ಸಂಪೂರ್ಣ ಮಾಹಿತಿ ತೆರಿಗೆ ಅಧಿಕಾರಿಗಳಿಗೆ ದೊರೆಯಲಿದೆ. ಇದರಿಂದಾಗಿ ಮುಂದಿನ ದಿನಗಳಲ್ಲಿ ಡೇಟಾ ಆಧಾರಿತ ಪರಿಶೀಲನೆ (Data-driven verification) ಹೆಚ್ಚಾಗುವ ಸಾಧ್ಯತೆಯಿದೆ ಎಂದು ತಜ್ಞರು ತಿಳಿಸಿದ್ದಾರೆ.

ಕಾನೂನಾತ್ಮಕವಾಗಿ ಕ್ರಿಪ್ಟೋ ಆಸ್ತಿಗಳನ್ನು ಹೇಗೆ ವ್ಯಾಖ್ಯಾನಿಸಲಾಗಿದೆ?

ಭಾರತದ ಆದಾಯ ತೆರಿಗೆ ಕಾಯಿದೆಯು "ಕ್ರಿಪ್ಟೋ-ಆಸ್ತಿ"ಯನ್ನು ವಹಿವಾಟುಗಳನ್ನು ದೃಢೀಕರಿಸಲು ಮತ್ತು ಭದ್ರಪಡಿಸಲು ಕ್ರಿಪ್ಟೋಗ್ರಾಫಿಕಲಿ ಸುರಕ್ಷಿತವಾದ 'ಡಿಸ್ಟ್ರಿಬ್ಯೂಟೆಡ್ ಲೆಡ್ಜರ್' ಅಥವಾ ಅಂಥದ್ದೇ ತಂತ್ರಜ್ಞಾನವನ್ನು ಅವಲಂಬಿಸಿರುವ ಮೌಲ್ಯದ ಡಿಜಿಟಲ್ ರೂಪ ಎಂದು ವ್ಯಾಖ್ಯಾನಿಸುತ್ತದೆ. OECDಯ 'ಕ್ರಿಪ್ಟೋ-ಆಸ್ತಿ ವರದಿ ಚೌಕಟ್ಟು' (CARF) ಕೂಡ ಕ್ರಿಪ್ಟೋ-ಆಸ್ತಿಗಳನ್ನು ಇದೇ ರೀತಿ ವ್ಯಾಖ್ಯಾನಿಸುತ್ತದೆ. ಆದರೆ ಇದು ಕ್ರಿಪ್ಟೋಕರೆನ್ಸಿಗಳು ಮತ್ತು ಕ್ರಿಪ್ಟೋಗ್ರಫಿ ಆಧಾರಿತ ಟೋಕನ್‌ ಗಳನ್ನು ಒಳಗೊಂಡಂತೆ "ವಹಿವಾಟುಗಳನ್ನು ದೃಢೀಕರಿಸಲು ಮತ್ತು ಭದ್ರಪಡಿಸಲು ಬಳಸುವ ಸಮಾನ ತಂತ್ರಜ್ಞಾನ"ಗಳನ್ನು ಸಹ ಒಳಗೊಳ್ಳುತ್ತದೆ.

ಈ ಮಾರ್ಗದರ್ಶಿ ಮತ್ತು ಎಫ್‌ಎಕ್ಯೂಗಳಲ್ಲಿ ಹೇಳಲಾಗಿರುವ ವಿಷಯಗಳನ್ನು ಕ್ರಿಪ್ಟೋ-ಆಸ್ತಿಗಳ ವಹಿವಾಟಿನ ಸಿಂಧುತ್ವ, ಕಾನೂನುಬದ್ಧತೆ ಅಥವಾ ಕ್ರಿಪ್ಟೋ ವಹಿವಾಟುಗಳ ನಿಯಂತ್ರಣದ ಮೇಲೆ ಪ್ರಭಾವ ಬೀರುವ ಅಂಶಗಳಾಗಿ ನೋಡಬಾರದು ಎಂದು ಕೇಂದ್ರೀಯ ನೇರ ತೆರಿಗೆಗಳ ಮಂಡಳಿ (CBDT) ಸ್ಪಷ್ಟಪಡಿಸಿದೆ.

ಮಾರ್ಗದರ್ಶಿ ಟಿಪ್ಪಣಿಯಲ್ಲಿ ಏನಿದೆ?

'ಕಾಮನ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್' (CRS) ಮತ್ತು 'ಫಾರಿನ್ ಅಕೌಂಟ್ ಟ್ಯಾಕ್ಸ್ ಕಂಪ್ಲೈಯನ್ಸ್ ಆಕ್ಟ್' (FATCA) ನಂತಹ ಜಾಗತಿಕ ತೆರಿಗೆ ಪಾರದರ್ಶಕತೆ ಉಪಕ್ರಮಗಳ ಮೂಲಕ ಭಾರತವು ಪ್ರಸ್ತುತ ಇತರ ದೇಶಗಳ ತೆರಿಗೆ ಅಧಿಕಾರಿಗಳೊಂದಿಗೆ 'ಸ್ವಯಂಚಾಲಿತ ಮಾಹಿತಿ ಹಂಚಿಕೆ' (AEOI) ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದೆ. ಈ ವ್ಯವಸ್ಥೆಯನ್ನು ಮತ್ತಷ್ಟು ವಿಸ್ತರಿಸಿರುವ OECD, ಜಾಗತಿಕ ತೆರಿಗೆ ಪಾರದರ್ಶಕತೆ ಮಾನದಂಡಗಳನ್ನು ಕ್ರಿಪ್ಟೋ-ಆಸ್ತಿ ಚಟುವಟಿಕೆಗಳಿಗೂ ಅನ್ವಯಿಸಲು 'CARF' ಚೌಕಟ್ಟನ್ನು ಅಭಿವೃದ್ಧಿಪಡಿಸಿದೆ.

ಈ 198 ಪುಟಗಳ ಟಿಪ್ಪಣಿಯು 'ವರದಿ ಮಾಡುವ ಕ್ರಿಪ್ಟೋ-ಆಸ್ತಿ ಸೇವಾ ಪೂರೈಕೆದಾರರು' (RCASPs) 2025ರ ಆದಾಯ ತೆರಿಗೆ ಕಾಯಿದೆಯ ಸೆಕ್ಷನ್ 509 ಹಾಗೂ 2026ರ ಆದಾಯ ತೆರಿಗೆ ನಿಯಮಗಳ 241ರಿಂದ 244ರವರೆಗಿನ ನಿಯಮಗಳು ಮತ್ತು ಫಾರಂ 167ರ ಅಡಿಯಲ್ಲಿ ತಮ್ಮ ವರದಿ ಸಲ್ಲಿಕೆ ಜವಾಬ್ದಾರಿಗಳನ್ನು ಪೂರೈಸಲು ಸಹಾಯ ಮಾಡುತ್ತದೆ.

ತೆರಿಗೆ ವಂಚನೆಯನ್ನು ತಡೆಯುವ ಮತ್ತು ಸರ್ಕಾರದ ಆದಾಯವನ್ನು ರಕ್ಷಿಸುವ ಭಾರತದ ದೃಢ ಸಂಕಲ್ಪದ ನಡುವೆ, ಕ್ರಿಪ್ಟೋ-ಆಸ್ತಿಗಳ ಕ್ಷಿಪ್ರ ಬೆಳವಣಿಗೆಯು ಹೊಸ ಸವಾಲನ್ನು ಒಡ್ಡಿದೆ ಎಂದು CBDT ಅಧ್ಯಕ್ಷ ರವಿ ಅಗರ್ವಾಲ್ ಉಲ್ಲೇಖಿಸಿದ್ದಾರೆ. ಈ ಮಾರ್ಗದರ್ಶಿಯು ಸೇವಾ ಪೂರೈಕೆದಾರರಿಗೆ (RCASPs) ಆದಾಯ ತೆರಿಗೆ ಕಾಯಿದೆ ಮತ್ತು ನಿಯಮಗಳ ಅಡಿಯಲ್ಲಿ ತಮ್ಮ ಜವಾಬ್ದಾರಿಗಳನ್ನು ಸ್ಪಷ್ಟವಾಗಿ ಹಾಗೂ ಸುಲಭವಾಗಿ ಅರ್ಥಮಾಡಿಕೊಂಡು ನಿರ್ವಹಿಸಲು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದ್ದಾರೆ.

ತೆರಿಗೆದಾರರು ಮತ್ತು ಕ್ರಿಪ್ಟೋ ಎಕ್ಸ್‌ಚೇಂಜ್‌ ಗಳ ಮೇಲಾಗುವ ಪರಿಣಾಮಗಳೇನು?

ಈ ಟಿಪ್ಪಣಿಯು ಕ್ರಿಪ್ಟೋ ಸೇವಾ ಪೂರೈಕೆದಾರರಿಗೆ ಅವರ ಜವಾಬ್ದಾರಿಗಳ ಕುರಿತು ಪ್ರಾಯೋಗಿಕ ಮಾರ್ಗದರ್ಶನ ನೀಡುತ್ತದೆ. ಇದರಲ್ಲಿರುವ ವಿಸ್ತೃತ ಎಫ್‌ಎಕ್ಯೂಗಳು ಈ ನಿಯಮಗಳ ವ್ಯಾಪ್ತಿ, ಕೈಗೊಳ್ಳಬೇಕಾದ ತಪಾಸಣೆಗಳು, ವರದಿ ಮಾಡಬೇಕಾದ ಬಳಕೆದಾರರು, ವರದಿ ಸಲ್ಲಿಕೆಯ ಅವಶ್ಯಕತೆಗಳು, ಅರ್ಜಿ ಸಲ್ಲಿಸುವ ಪ್ರಕ್ರಿಯೆ ಮತ್ತು ದಂಡಗಳಿಗೆ ಸಂಬಂಧಿಸಿದ ಪ್ರಮುಖ ಅಂಶಗಳನ್ನು ಸ್ಪಷ್ಟಪಡಿಸುತ್ತವೆ.

"ಮಾರ್ಗದರ್ಶಿ ಟಿಪ್ಪಣಿ ಅಥವಾ ಎಫ್‌ಎಕ್ಯೂಗಳು ಮತ್ತು ಕಾಯಿದೆ ಅಥವಾ ನಿಯಮಗಳ ನಡುವೆ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಕಾಯಿದೆ ಮತ್ತು ನಿಯಮಗಳಲ್ಲಿರುವ ಶಾಸನಬದ್ಧ ನಿಯಮಗಳೇ ಅಂತಿಮವಾಗಿರುತ್ತವೆ ಎಂಬುದನ್ನು ಇದು ಸ್ಪಷ್ಟಪಡಿಸುತ್ತದೆ. ಇದರಲ್ಲಿರುವ ಪ್ರಾಯೋಗಿಕ ವಿವರಣೆಗಳು, ಉದಾಹರಣೆಗಳು ಮತ್ತು ಎಫ್‌ಎಕ್ಯೂಗಳು 'ವರದಿ ಮಾಡುವ ಕ್ರಿಪ್ಟೋ-ಆಸ್ತಿ ಸೇವಾ ಪೂರೈಕೆದಾರರಿಗೆ' ಈ ಕಾನೂನು ಚೌಕಟ್ಟನ್ನು ಅರ್ಥಮಾಡಿಕೊಳ್ಳಲು ಮತ್ತು ಜಾರಿಗೆ ತರಲು ಸಹಾಯ ಮಾಡುತ್ತವೆ" ಎಂದು ಗ್ರಾಂಡ್ ಥಾರ್ನ್ಟನ್ ಭಾರತ್ ಸಂಸ್ಥೆಯ ಟ್ಯಾಕ್ಸ್ ಪಾರ್ಟ್ನರ್ ರಿಚಾ ಸಾಹ್ನಿ ಅವರು 'ದಿ ಇಂಡಿಯನ್ ಎಕ್ಸ್‌ಪ್ರೆಸ್'ಗೆ ತಿಳಿಸಿದ್ದಾರೆ.

ಈ ಹೊಸ ಚೌಕಟ್ಟಿನಲ್ಲಿ ಹೊಸ ಮತ್ತು ಹಳೆಯ ಬಳಕೆದಾರರಿಗೆ ಪ್ರತ್ಯೇಕ ನಿಯಮಗಳನ್ನು ರೂಪಿಸಲಾಗಿದೆ. "ಹೊಸ ಬಳಕೆದಾರರಿಗೆ, ಸಂಸ್ಥೆಗೆ ಸೇರ್ಪಡೆಗೊಳ್ಳುವಾಗಲೇ ಸೂಕ್ತ ತಪಾಸಣೆ ಮತ್ತು ಸ್ವಯಂ-ದೃಢೀಕರಣ (Self-certification) ಕಡ್ಡಾಯವಾಗಿದೆ. 2025 ಡಿಸೆಂಬರ್ 31ಕ್ಕಿಂತ ಮುಂಚಿನ ಹಳೆಯ ಬಳಕೆದಾರರಿಗೆ, 2026 ಜನವರಿ 1ರಿಂದ ಮುಂದಿನ 12 ತಿಂಗಳೊಳಗೆ ಈ ತಪಾಸಣೆ ಪ್ರಕ್ರಿಯೆಯನ್ನು ಪೂರ್ಣಗೊಳಿಸಬೇಕಾಗುತ್ತದೆ. ಇದು ಸೇವಾ ಪೂರೈಕೆದಾರರಿಗೆ ನಿಯಮಗಳನ್ನು ಜಾರಿಗೆ ತರಲು ಪ್ರಾಯೋಗಿಕ ಸಮಯವನ್ನು ನೀಡುತ್ತದೆ" ಎಂದು ಸಾಹ್ನಿ ವಿವರಿಸಿದ್ದಾರೆ.

ನಾಂಗಿಯಾ & ಕೋ ಎಲ್‌ಎಲ್‌ಪಿ ಸಂಸ್ಥೆಯ ಸೀನಿಯರ್ ಪಾರ್ಟ್ನರ್ ಅಮಿತ್ ಅಗರ್ವಾಲ್ ಅವರ ಪ್ರಕಾರ, ಈ ಮಾರ್ಗದರ್ಶಿ ಟಿಪ್ಪಣಿಯ ಬಗ್ಗೆ ಇರುವ ಪ್ರಮುಖ ತಪ್ಪು ಕಲ್ಪನೆಯೆಂದರೆ, ಪ್ರತಿಯೊಬ್ಬ ಕ್ರಿಪ್ಟೋ ಹೂಡಿಕೆದಾರರೂ ಈಗ ನೇರವಾಗಿ ಆದಾಯ ತೆರಿಗೆ ಇಲಾಖೆಗೆ ಹೊಸ ವಿವರಗಳನ್ನು ಸಲ್ಲಿಸಬೇಕು ಎಂಬುದು. "ಮಾರ್ಗದರ್ಶಿಯಲ್ಲಿ ಆ ರೀತಿ ಹೇಳಲಾಗಿಲ್ಲ. ಬದಲಾಗಿ, ಮುಖ್ಯ ನಿಯಮ ಪಾಲನೆಯ ಜವಾಬ್ದಾರಿಯನ್ನು ಕ್ರಿಪ್ಟೋ ಸೇವಾ ಪೂರೈಕೆದಾರರ ಮೇಲೆಯೇ ಹೊರಿಸಲಾಗಿದೆ. ಅವರು ಕ್ರಿಪ್ಟೋ ವಹಿವಾಟುಗಳಿಗೆ ಸಂಬಂಧಿಸಿದ ನಿರ್ದಿಷ್ಟ ಮಾಹಿತಿಯನ್ನು ಸಂಗ್ರಹಿಸಿ, ಪರಿಶೀಲಿಸಿ, ವರದಿ ಮಾಡಬೇಕಾಗುತ್ತದೆ" ಎಂದು ಅವರು ಹೇಳಿದ್ದಾರೆ.

ಕ್ರಿಪ್ಟೋ ಎಕ್ಸ್‌ಚೇಂಜ್‌ ಗಳು ಅಥವಾ ಸೇವಾ ಪೂರೈಕೆದಾರರು ಗ್ರಾಹಕರ ಸೂಕ್ತ ತಪಾಸಣೆ ನಡೆಸಬೇಕು, ಬಳಕೆದಾರರ ತೆರಿಗೆ ನಿವಾಸದ ವಿವರಗಳನ್ನು ನಿರ್ಧರಿಸಬೇಕು, ನಿಗದಿತ ಕೆವೈಸಿ ಮತ್ತು ತೆರಿಗೆದಾರರ ಮಾಹಿತಿಯನ್ನು ಸಂಗ್ರಹಿಸಬೇಕು, ವರದಿ ಮಾಡಬೇಕಾದ ವಹಿವಾಟುಗಳ ದಾಖಲೆಗಳನ್ನು ನಿರ್ವಹಿಸಬೇಕು ಹಾಗೂ ಫಾರಂ 167ರ ಅಡಿಯಲ್ಲಿ ವಾರ್ಷಿಕ ವಹಿವಾಟಿನ ಮಾಹಿತಿಯನ್ನು ಸಲ್ಲಿಸಬೇಕು ಎಂದು ಅವರು ತಿಳಿಸಿದ್ದಾರೆ.

"ತೆರಿಗೆದಾರರು ಆದಾಯ ತೆರಿಗೆ ಕಾಯಿದೆಯ ಪ್ರಸ್ತುತ ನಿಯಮಗಳ ಪ್ರಕಾರವೇ ತಮ್ಮ ಕ್ರಿಪ್ಟೋ ಆದಾಯವನ್ನು ವರದಿ ಮಾಡುವುದನ್ನು ಮುಂದುವರಿಸಬೇಕು. ಖರೀದಿ, ಮಾರಾಟ, ವರ್ಗಾವಣೆ ಮತ್ತು ವಾಲೆಟ್ ವಹಿವಾಟುಗಳ ಸರಿಯಾದ ದಾಖಲೆಗಳನ್ನು ಇಟ್ಟುಕೊಳ್ಳಬೇಕು. ಎಕ್ಸ್‌ಚೇಂಜ್ ಸ್ಟೇಟ್‌ಮೆಂಟ್‌ ಗಳನ್ನು ಸುರಕ್ಷಿತವಾಗಿಟ್ಟುಕೊಳ್ಳಬೇಕು. ಜೊತೆಗೆ ತಮ್ಮ ಐಟಿ ರಿಟರ್ನ್ಸ್‌ನಲ್ಲಿ ನೀಡುವ ಮಾಹಿತಿಯು ಕ್ರಿಪ್ಟೋ ಎಕ್ಸ್‌ಚೇಂಜ್‌ಗಳಲ್ಲಿರುವ ದಾಖಲೆಗಳಿಗೆ ಹೊಂದಾಣಿಕೆಯಾಗುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು" ಎಂದು ಅಗರ್ವಾಲ್ ಹೇಳಿದ್ದಾರೆ.

OECDಯ ವರದಿ ಚೌಕಟ್ಟು (CARF) ಎಂದರೇನು?

ಕ್ರಿಪ್ಟೋ-ಆಸ್ತಿಗಳಿಗೆ ಸಂಬಂಧಿಸಿದ ವಹಿವಾಟುಗಳ ಮಾಹಿತಿಯನ್ನು ಸಂಗ್ರಹಿಸುವ ಮತ್ತು ವರದಿ ಮಾಡುವ ಸೇವಾ ಪೂರೈಕೆದಾರರು ತಮ್ಮ ಬಳಕೆದಾರರನ್ನು ಗುರುತಿಸುವುದು ಹಾಗೂ ನಿರ್ದಿಷ್ಟ ವಹಿವಾಟುಗಳ ವರದಿಯನ್ನು ಸಲ್ಲಿಸುವುದನ್ನು 'ಕ್ರಿಪ್ಟೋ-ಆಸ್ತಿ ವರದಿ ಚೌಕಟ್ಟು' (CARF) ಕಡ್ಡಾಯಗೊಳಿಸುತ್ತದೆ. ಕ್ರಿಪ್ಟೋ-ಆಸ್ತಿಗಳಿಗೆ ಸಂಬಂಧಿಸಿದ ತೆರಿಗೆ-ಸಂಬಂಧಿತ ಚಟುವಟಿಕೆಗಳ ವಾರ್ಷಿಕ ಮಾಹಿತಿಯನ್ನು ಖಚಿತಪಡಿಸಿಕೊಳ್ಳುವುದು ಇದರ ಪ್ರಮುಖ ಉದ್ದೇಶವಾಗಿದೆ.

ತೆರಿಗೆ ಅಧಿಕಾರಿಗಳು ಈ ಮಾಹಿತಿಯನ್ನು ಪಡೆದುಕೊಂಡ ನಂತರ, ನಿಯಮಾನುಸಾರ ಕ್ರಿಪ್ಟೋ-ಆಸ್ತಿ ಬಳಕೆದಾರರು ವಾಸಿಸುವ ದೇಶಗಳ ತೆರಿಗೆ ಅಧಿಕಾರಿಗಳೊಂದಿಗೆ ಸ್ವಯಂಚಾಲಿತವಾಗಿ ಹಂಚಿಕೊಳ್ಳಲಾಗುತ್ತದೆ. ತೆರಿಗೆ ಉದ್ದೇಶಗಳಿಗಾಗಿ ಈ ಮಾಹಿತಿಯನ್ನು ಹಂಚಿಕೊಳ್ಳಲು ಸೂಕ್ತ ಅಂತರರಾಷ್ಟ್ರೀಯ ಒಪ್ಪಂದವು ಕಾನೂನಾತ್ಮಕ ನೆರವು ನೀಡುತ್ತದೆ ಎಂದು ಟಿಪ್ಪಣಿಯಲ್ಲಿದೆ.

ಈ ವರದಿ ಚೌಕಟ್ಟನ್ನು ಮಾಡಿದ್ದೇಕೆ?

ಕ್ರಿಪ್ಟೋ-ಆಸ್ತಿಗಳ ಬಳಕೆ ಹೆಚ್ಚಾಗುತ್ತಿರುವುದು ಜಾಗತಿಕವಾಗಿ ತೆರಿಗೆ ಇಲಾಖೆಗಳಿಗೆ ತೆರಿಗೆ ವಂಚನೆಯ ಆತಂಕವನ್ನು ಹೆಚ್ಚಿಸಿತ್ತು. ಈ ಆಸ್ತಿಗಳನ್ನು ಸಾಂಪ್ರದಾಯಿಕ ಹಣಕಾಸು ವಲಯದ ಹೊರಗೆ ವರ್ಗಾಯಿಸಲು ಮತ್ತು ಇರಿಸಿಕೊಳ್ಳಲು ಅವಕಾಶವಿರುವುದರಿಂದ, ಅವು ಹಾಲಿ ಇರುವ 'ಕಾಮನ್ ರಿಪೋರ್ಟಿಂಗ್ ಸ್ಟ್ಯಾಂಡರ್ಡ್' ಕಣ್ಣಿಗೆ ಬೀಳದೆ ಉಳಿಯುವ ಸಾಧ್ಯತೆಯಿತ್ತು. ಇದು ಮಾಹಿತಿ ಹಂಚಿಕೆ ವ್ಯವಸ್ಥೆಯ ಕಾರ್ಯಕ್ಷಮತೆಯನ್ನು ಕುಗ್ಗಿಸುತ್ತಿತ್ತು. ಈ ಕೊರತೆಯನ್ನು ನೀಗಿಸಲು ಜಾಗತಿಕ ಮಟ್ಟದ ವರದಿ ಚೌಕಟ್ಟಿನ ಅಗತ್ಯವಿತ್ತು.

G-20 ಮತ್ತು OECD ದೇಶಗಳ ಭಾಗವಹಿಸುವಿಕೆಯೊಂದಿಗೆ OECDಯ ಹಣಕಾಸು ವ್ಯವಹಾರಗಳ ಸಮಿತಿಯ ಕಾರ್ಯಪಡೆ (Working Party No.10) ಈ ನಿಟ್ಟಿನಲ್ಲಿ ಕೆಲಸ ಪ್ರಾರಂಭಿಸಿತು. ಇದು ಜಾಗತಿಕ ವೇದಿಕೆಯ ಮೂಲಕ 'ಕ್ರಿಪ್ಟೋ-ಆಸ್ತಿ ವರದಿ ಚೌಕಟ್ಟು' ಗುಂಪಿನ ರಚನೆಗೆ ಕಾರಣವಾಯಿತು. ಭಾರತವೂ ಸೇರಿದಂತೆ 50ಕ್ಕೂ ಹೆಚ್ಚು ದೇಶಗಳು ಇದರ ಸದಸ್ಯರಾಗಿದ್ದಾರೆ.

2021ರ ಏಪ್ರಿಲ್‌ನಲ್ಲಿ, ಜಿ-20 ಹಣಕಾಸು ಸಚಿವರು ಮತ್ತು ಸೆಂಟ್ರಲ್ ಬ್ಯಾಂಕ್ ಗವರ್ನರ್‌ಗಳು ಈ ವಿಷಯದಲ್ಲಿ ಮುಂದಿನ ಕ್ರಮಗಳ ಕುರಿತು ಚರ್ಚಿಸಿದರು. CARF ಅಭಿವೃದ್ಧಿಪಡಿಸುವ ಕೆಲಸವು 2022ರಲ್ಲಿ ಪೂರ್ಣಗೊಂಡು, 2022 ಆಗಸ್ಟ್‌ನಲ್ಲಿ OECDಯ ಅನುಮೋದನೆ ಪಡೆಯಿತು. ನಂತರ 2022ರ ನವೆಂಬರ್‌ ನಲ್ಲಿ ನಡೆದ 'ಜಿ-20 ಬಾಲಿ ಶೃಂಗಸಭೆ'ಯ ನಾಯಕರ ಘೋಷಣೆಯಲ್ಲಿ ಇದಕ್ಕೆ ಸಮ್ಮತಿ ಸೂಚಿಸಲಾಯಿತು. 2023ರಲ್ಲಿ ಭಾರತದ ಜಿ-20 ಅಧ್ಯಕ್ಷತೆಯ ಅವಧಿಯಲ್ಲಿ, ಇದನ್ನು ಜಾರಿಗೆ ತರಲು ಸಂಯೋಜಿತ ಕಾಲಮಿತಿಯನ್ನು ನಿರ್ಧರಿಸುವಂತೆ ಜಾಗತಿಕ ವೇದಿಕೆಗೆ ಕೋರಲಾಯಿತು. ಹೆಚ್ಚಿನ ಸದಸ್ಯ ದೇಶಗಳು 2027 ಅನ್ನು ಈ ಯೋಜನೆ ಅನುಷ್ಠಾನದ ವರ್ಷವಾಗಿ ಬೆಂಬಲಿಸಿವೆ.

ಸೌಜನ್ಯ: indianexpress.com

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News