CJP ಪ್ರತಿಭಟನೆ ವಾಪಸ್: ಇನ್ನೂ ಬಂಧನದಲ್ಲಿರುವ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು!

ಸರಕಾರದಿಂದ ಒಪ್ಪಂದ ಉಲ್ಲಂಘನೆ ಆರೋಪ

Update: 2026-07-29 23:38 IST

Photo credit : scroll.in Rokibuz Zaman

ಹೊಸದಿಲ್ಲಿ: ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆಗೆ ಆಗ್ರಹಿಸಿ CJP ನೇತೃತ್ವದಲ್ಲಿ ನಡೆದ ಪ್ರತಿಭಟನೆಯನ್ನು ಹಿಂಪಡೆಯಲು ಕೇಂದ್ರ ಸರ್ಕಾರ ಒಪ್ಪಿದ ಷರತ್ತುಗಳನ್ನು ಈಡೇರಿಸಲು ಬಿಹಾರ, ಪಶ್ಚಿಮ ಬಂಗಾಳ ಮೊದಲಾದ ರಾಜ್ಯ ಸರಕಾರಗಳು ಮೀನಾ-ಮೇಷ ಎಣಿಸುತ್ತಿದ್ದು, ಪರಿಣಾಮ ದೇಶದ ವಿವಿಧ ರಾಜ್ಯಗಳಲ್ಲಿ ಪ್ರತಿಭಟನೆ ನಡೆಸಿದ ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳು ಸೇರಿದಂತೆ ನೂರಾರು ಮಂದಿ ಇನ್ನೂ ಜೈಲಿನಲ್ಲಿದ್ದಾರೆ.

ಜಂತರ್ ಮಂತರ್‌ನಲ್ಲಿ ಹಲವು ವಾರಗಳ ಕಾಲ ನಡೆದ ವಿದ್ಯಾರ್ಥಿ ಪ್ರತಿಭಟನೆಯನ್ನು ಹಿಂಪಡೆಯಲು CJPಯು ಸರ್ಕಾರದೊಂದಿಗೆ ಇಟ್ಟ ನಾಲ್ಕು ಪ್ರಮುಖ ಬೇಡಿಕೆಗಳಲ್ಲಿ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ರಾಜೀನಾಮೆ ಮೊದಲನೆಯದಾಗಿದ್ದರೆ, ಉಳಿದ ಬೇಡಿಕೆಗಳಲ್ಲಿ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಿಮಿನಲ್ ಪ್ರಕರಣ ದಾಖಲಿಸಬಾರದು, ಈಗಾಗಲೇ ದಾಖಲಾಗಿದ್ದರೆ ಅವುಗಳನ್ನು ಹಿಂಪಡೆಯಬೇಕು ಹಾಗೂ ಬಂಧಿತ ವಿದ್ಯಾರ್ಥಿಗಳನ್ನು ಬಿಡುಗಡೆ ಮಾಡಬೇಕು ಎಂಬುದು ಪ್ರಮುಖವಾಗಿತ್ತು. ಸರಕಾರ ಈ ಬೇಡಿಕೆಯನ್ನು ಒಪ್ಪಿಕೊಂಡಿದ್ದರೂ, ಅದನ್ನು ಅನುಷ್ಠಾನಕ್ಕೆ ತರಲು ವಿಳಂಬ ಮಾಡುತ್ತಿದೆ.

ಬಿಹಾರ, ಅಸ್ಸಾಂ ಮತ್ತು ಪಶ್ಚಿಮ ಬಂಗಾಳ ಸೇರಿದಂತೆ ಹಲವು ರಾಜ್ಯಗಳಲ್ಲಿ ವಿದ್ಯಾರ್ಥಿಗಳು, ವಕೀಲರು ಹಾಗೂ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ ಎನ್ನಲಾದ ನಾಗರಿಕರ ವಿರುದ್ಧ ಕೊಲೆ ಯತ್ನ, ಗಲಭೆ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಆರೋಪ, ಕ್ರಿಮಿನಲ್ ಸಂಚು ಹಾಗೂ ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಉತ್ತೇಜಿಸಿದ ಆರೋಪಗಳಡಿ ಪ್ರಕರಣಗಳನ್ನು ದಾಖಲಿಸಲಾಗಿದ್ದು, ಬಂಧಿತ ಬಹುತೇಕರ ಕುಟುಂಬಗಳಿಗೆ ಸ್ಪಷ್ಟ ಮಾಹಿತಿಯನ್ನೇ ನೀಡಿಲ್ಲ ಎಂಬ ಗಂಭೀರ ಆರೋಪಗಳು ಕೇಳಿ ಬಂದಿವೆ.

ಈ ಕುರಿತು The News Minute, Scroll.in ವಿಸ್ತೃತ ವರದಿಯನ್ನು ಪ್ರಕಟಿಸಿದ್ದು, ಅಪ್ರಾಪ್ತ ವಯಸ್ಸಿನ ವಿದ್ಯಾರ್ಥಿಗಳ ಮೇಲೆ ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಿದ ಆರೋಪ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ವರದಿ ಹೇಳಿದೆ.

Scroll.in ವರದಿ ಪ್ರಕಾರ, ವಿದ್ಯಾರ್ಥಿ ಪ್ರತಿಭಟನೆಗಳಲ್ಲಿ ಭಾಗವಹಿಸಿದ್ದವರ ವಿರುದ್ಧ ದಾಖಲಿಸಲಾದ ಎಲ್ಲಾ ಪೊಲೀಸ್ ಪ್ರಕರಣಗಳನ್ನು ಹಿಂಪಡೆಯುವುದಾಗಿ ಜುಲೈ 27ರಂದು ಬಿಹಾರ ಸರ್ಕಾರ ಘೋಷಿಸಿದ್ದರೂ, ಎರಡು ದಿನಗಳು ಕಳೆದರೂ ಈ ಘೋಷಣೆ ಕಾರ್ಯಗತವಾಗಿಲ್ಲ. ಬುಧವಾರ ಪಟ್ನಾದ ಬೆಯೂರ್ ಕೇಂದ್ರ ಕಾರಾಗೃಹದ ಹೊರಗೆ ನೂರಾರು ಕುಟುಂಬಗಳು ತಮ್ಮ ಕುಟುಂಬಸ್ಥರ ಬಿಡುಗಡೆಯ ನಿರೀಕ್ಷೆಯಲ್ಲಿ ಕಾದು ನಿಂತಿದ್ದವು.

ಅವರಲ್ಲಿ ಮುಖೇಶ್ ಕುಮಾರ್ ಕೂಡ ಒಬ್ಬರು. ಜುಲೈ 25ರಂದು ಗಾಂಧಿ ಮೈದಾನದಲ್ಲಿ ನಡೆದ ಪ್ರತಿಭಟನೆಯ ವೇಳೆ ಬಂಧಿತರಾದ ತನ್ನ ಸಹೋದರ ಜೈರಾಮ್ ಬಿಡುಗಡೆಗೊಳ್ಳುವ ನಿರೀಕ್ಷೆಯಲ್ಲಿ ಜೈಲಿನ ಹೊರಗೆ ಕಾಯುತ್ತಿದ್ದರು. 12ನೇ ತರಗತಿ ವಿದ್ಯಾರ್ಥಿಯಾಗಿರುವ ಜೈರಾಮ್ ದಿಲ್ಲಿಯಲ್ಲಿ ನಡೆಯುತ್ತಿದ್ದ CJP ಹೋರಾಟಕ್ಕೆ ಬೆಂಬಲ ಸೂಚಿಸಲು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಅವರನ್ನು ಬಂಧಿಸಲಾಗಿದ್ದು, ಕಳೆದ ಐದು ದಿನಗಳಿಂದ ಆತನನ್ನು ಜೈಲಿನಲ್ಲೇ ಇರಿಸಲಾಗಿದೆ. ಆತ ನಿರಪರಾಧಿ ವಿದ್ಯಾರ್ಥಿ, ಆತನನ್ನು ಶಿಕ್ಷೆ ಅನುಭವಿಸುತ್ತಿರುವ ಖೈದಿಗಳೊಂದಿಗೆ ಇರಿಸುವುದು ಎಲ್ಲಿಯ ನ್ಯಾಯ ಎಂದು ಮುಖೇಶ್ ಪ್ರಶ್ನಿಸಿದ್ದಾರೆ.

"ಐದು ದಿನಗಳಿಂದ ಅವನನ್ನು ಜೈಲಿನಲ್ಲೇ ಇರಿಸಿದ್ದಾರೆ. ಅವನು ಅಪರಾಧಿಯಲ್ಲ. ನಿರಪರಾಧಿ ವಿದ್ಯಾರ್ಥಿಯನ್ನು ಶಿಕ್ಷೆ ಅನುಭವಿಸುತ್ತಿರುವ ಕೈದಿಗಳ ಜೊತೆಗೆ ಇರಿಸುವುದು ನ್ಯಾಯವೇ?" ಎಂದು ಮುಖೇಶ್ ಪ್ರಶ್ನಿಸಿದ್ದಾರೆ.

►ಅಪ್ರಾಪ್ತ ವಯಸ್ಕ ವಿದ್ಯಾರ್ಥಿಗಳ ವಿರುದ್ಧ ಯುದ್ಧ ಸಾರಿದ ಆರೋಪ :

ಜೈರಾಮ್ ವಿರುದ್ಧ ಗಲಭೆ, ಕೊಲೆ ಯತ್ನ, ಭಾರತ ಸರ್ಕಾರದ ವಿರುದ್ಧ ಯುದ್ಧ ಸಾರಿದ ಆರೋಪ ಸೇರಿದಂತೆ ಹಲವು ಗಂಭೀರ ಪ್ರಕರಣಗಳನ್ನು ದಾಖಲಿಸಲಾಗಿದೆ. ಈ ಪ್ರಕರಣದಲ್ಲಿ ಒಟ್ಟು 144 ಮಂದಿಯನ್ನು ಬಂಧಿಸಲಾಗಿದ್ದು, ಎಫ್‌ಐಆರ್‌ನಲ್ಲಿ 5,000ಕ್ಕೂ ಹೆಚ್ಚು ಗುರುತಿಸಲಾಗದ ವ್ಯಕ್ತಿಗಳ ಹೆಸರೂ ಸೇರಿಸಲಾಗಿದೆ ಎಂದು Scroll.in ವರದಿ ಹೇಳಿದೆ.

ಜೈರಾಮ್ ಅವರೊಂದಿಗೆ ಪ್ರತಿಭಟನೆಗೆ ತೆರಳಿದ್ದ ಅವರ ಸ್ನೇಹಿತೆಯ ಹೇಳಿಕೆಯ ಪ್ರಕಾರ, ಪೊಲೀಸರು ಪ್ರತಿಭಟನಾಕಾರರತ್ತ ಧಾವಿಸಿದಾಗ ಜೈರಾಮ್ ತಮ್ಮ ಮೊಬೈಲ್‌ ನಲ್ಲಿ ದೃಶ್ಯ ಚಿತ್ರೀಕರಿಸಲು ಯತ್ನಿಸಿದ್ದರು. ಇದರಿಂದ ಆಕ್ರೋಶಗೊಂಡ ಪೊಲೀಸರು ಅವರನ್ನು ಹಲ್ಲೆ ನಡೆಸಿ ಮೊಬೈಲ್ ಕಸಿದುಕೊಂಡು ಬಂಧಿಸಿದರು. ಸುಮಾರು ಮೂರು ಗಂಟೆಗಳ ಕಾಲ ಅವರಿರುವ ಸ್ಥಳದ ಬಗ್ಗೆ ಯಾವುದೇ ಮಾಹಿತಿ ಸಿಗಲಿಲ್ಲ. ಬಳಿಕ ದಿಘಾ ಪೊಲೀಸ್ ಠಾಣೆಯಿಂದ ಕರೆ ಬಂದರೂ ಕುಟುಂಬದವರಿಗೆ ಅವರನ್ನು ಭೇಟಿಯಾಗಲು ಅವಕಾಶ ನೀಡಲಿಲ್ಲ ಎಂದು ಆರೋಪಿಸಲಾಗಿದೆ.

ಜೈಲಿನಲ್ಲಿ ಆತನನ್ನು ಭೇಟಿಯಾದಾಗ ಆತನ ಮುಖದ ಮೇಲೆ ಗಾಯದ ಗುರುತು ಕಂಡಿದ್ದು, ಬಂಧಿಸುವ ಮುನ್ನವೇ ಪೊಲೀಸರು ಜೈರಾಮ್ ಮೇಲೆ ಹಲ್ಲೆ ನಡೆಸಿದ್ದರು ಎಂದು ಮುಖೇಶ್ ತಿಳಿಸಿದ್ದಾರೆ.

ಗಾಂಧಿ ಮೈದಾನದಲ್ಲೇ ಬಂಧಿತರಾದ ಮತ್ತೊಬ್ಬರು ತಮಿಳುನಾಡಿನಲ್ಲಿ ಕೆಲಸ ಮಾಡುತ್ತಿದ್ದ 28 ವರ್ಷದ ಸಿವಿಲ್ ಇಂಜಿನಿಯರ್ ದೀಪಕ್ ಕುಮಾರ್. ಅವರ ಸಹೋದರಿ ನೂತನ ಕುಮಾರಿ ಅವರ ಪ್ರಕಾರ, ದೀಪಕ್ ಪ್ರತಿಭಟನಾ ಸ್ಥಳದಲ್ಲಿ ಪೊಲೀಸರು ಲಾಠಿ ಚಾರ್ಜ್ ನಡೆಸುತ್ತಿದ್ದ ದೃಶ್ಯವನ್ನು ಮೊಬೈಲ್‌ನಲ್ಲಿ ಸೆರೆಹಿಡಿಯಲು ಯತ್ನಿಸಿದಾಗ ಅವರನ್ನು ಬಂಧಿಸಲಾಗಿದೆ. ಸುಮಾರು 28 ಗಂಟೆಗಳ ಕಾಲ ಕುಟುಂಬಕ್ಕೆ ಅವರ ಬಗ್ಗೆ ಯಾವುದೇ ಮಾಹಿತಿ ಸಿಕ್ಕಿರಲಿಲ್ಲ. ನಂತರ ಕೊಲೆ ಯತ್ನ ಸೇರಿದಂತೆ ಗಂಭೀರ ಆರೋಪಗಳನ್ನು ದೀಪಕ್ ವಿರುದ್ಧ ದಾಖಲಿಸಲಾಗಿದೆ ಎಂಬುದು ತಿಳಿದು ಕುಟುಂಬ ಆಘಾತಕ್ಕೊಳಗಾಗಿದೆ.

"ನನ್ನ ಅಣ್ಣ ಒಬ್ಬ ಇಂಜಿನಿಯರ್. ನಿರಪರಾಧಿಗಳ ಮೇಲೆ ನಡೆಯುತ್ತಿದ್ದ ಹಲ್ಲೆಯನ್ನು ಚಿತ್ರೀಕರಿಸಿದ್ದಕ್ಕೆ ಕೊಲೆ ಯತ್ನದ ಆರೋಪ ಹೊರಿಸಿದ್ದು ಹೇಗೆ?" ಎಂದು ನೂತನ ಪ್ರಶ್ನಿಸಿದ್ದಾರೆ.

ಬಂಧನದ ಬಗ್ಗೆ ಪೊಲೀಸರು ಯಾವುದೇ ಅಧಿಕೃತ ಮಾಹಿತಿ ನೀಡಲಿಲ್ಲ ಎಂದು ಬಂಧಿತರ ಕುಟುಂಬಸ್ಥರು ಆರೋಪಿಸಿದ್ದಾರೆ. ಬೆಗುಸರಾಯಿಯ ಪ್ರಿನ್ಸ್ ಕುಮಾರ್ ಅವರ ತಮ್ಮ ಪಿಯೂಷ್ ಕುಮಾರ್ ಜುಲೈ 25ರಂದು ಪುಸ್ತಕ ಖರೀದಿಸಲು ತೆರಳಿದ್ದ ವೇಳೆ ಬಂಧಿತರಾಗಿದ್ದರು. ಕುಟುಂಬಕ್ಕೆ ಈ ವಿಷಯ ತಿಳಿದಿದ್ದು ಮರುದಿನ ಬೆಳಗ್ಗೆ.

"ಬಂಧನವಾದ 24 ಗಂಟೆಗಳೊಳಗೆ ಕುಟುಂಬಕ್ಕೆ ಮಾಹಿತಿ ನೀಡಬೇಕು ಎಂಬ ನಿಯಮವಿದೆ. ಆದರೆ ನಮಗೆ ಯಾವುದೇ ಮಾಹಿತಿ ನೀಡಲಿಲ್ಲ. 48 ಗಂಟೆಗಳ ನಂತರ ವೈದ್ಯಕೀಯ ಪರೀಕ್ಷೆ ನಡೆಸಿ ನ್ಯಾಯಾಧೀಶರ ಮುಂದೆ ಹಾಜರುಪಡಿಸಿದರು," ಎಂದು ಅವರು ತಿಳಿಸಿದ್ದಾರೆ.

ಇನ್ನು ಕೆಲವು ಪ್ರತಿಭಟನಾಕಾರರ ಪ್ರಕಾರ, ಪೊಲೀಸರು ತಮಗೆ ಓದಲು ಸಾಧ್ಯವಾಗದಂತಹ ಬಾಂಡ್ ಪೇಪರ್‌ಗಳ ಮೇಲೆ ಬಲವಂತದಿಂದ ಸಹಿ ಹಾಕಿಸಿರುವುದಾಗಿ ಆರೋಪಿಸಿದ್ದಾರೆ.

►ಬಾಂಡ್‌ ಪೇಪರ್‌ ಮೇಲೆ ಸಹಿ ಹಾಕಲು ಬಲವಂತ :

ಅಪ್ರಾಪ್ತ ವಯಸ್ಕ ಪ್ರತಿಭಟನಾಕಾರರಲ್ಲೊಬ್ಬಳಾದ 12ನೇ ತರಗತಿ ವಿದ್ಯಾರ್ಥಿನಿ ಸೋಫಿಯಾ (ಹೆಸರು ಬದಲಿಸಲಾಗಿದೆ) ಗಾಂಧಿ ಮೈದಾನದಲ್ಲಿ ಮತ್ತೊಬ್ಬ ವಿದ್ಯಾರ್ಥಿನಿಯ ಮೇಲೆ ಪೊಲೀಸರು ಹಲ್ಲೆ ನಡೆಸುವುದನ್ನು ತಡೆಯಲು ಯತ್ನಿಸಿದ್ದಾಗಿ ಹೇಳಿದ್ದಾರೆ. ಅದಾದ ಬಳಿಕ ಸುಮಾರು 10 ಮಹಿಳಾ ಪೊಲೀಸರು ತಮ್ಮ ಮೇಲೂ ಲಾಠಿಯಿಂದ ಹಲ್ಲೆ ನಡೆಸಿ, ತನ್ನನ್ನು ಹಾಗೂ ಇನ್ನೂ ಏಳು ವಿದ್ಯಾರ್ಥಿನಿಯರನ್ನು ರೂಪಸ್ಪುರ ಪೊಲೀಸ್ ಠಾಣೆಗೆ ಕರೆದೊಯ್ದು ಸುಮಾರು 30 ಗಂಟೆಗಳ ಕಾಲ ಬಂಧನದಲ್ಲಿಟ್ಟಿದ್ದರು ಎಂದು ಅವರು ತಿಳಿಸಿದ್ದಾರೆ. ಬಾಂಡ್‌ಗೆ ಸಹಿ ಹಾಕಿಸಿಕೊಂಡ ನಂತರವೇ ಬಿಡುಗಡೆ ಮಾಡಲಾಗಿದೆ ಎಂದು ಅವರು ಆರೋಪಿಸಿದ್ದಾರೆ.

"ಸಂವಿಧಾನ ನಮಗೆ ಪ್ರತಿಭಟಿಸುವ ಹಕ್ಕು ನೀಡಿದೆ. ಆದರೆ ಈಗ ಮತ್ತೆ ಪ್ರತಿಭಟನೆಗೆ ಹೋಗುವ ಧೈರ್ಯ ಉಳಿದಿಲ್ಲ. ಮತ್ತೆ ಹೋರಾಟದಲ್ಲಿ ಭಾಗವಹಿಸಿದರೆ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ," ಎಂದು ಸೋಫಿಯಾ ಹೇಳಿದ್ದಾರೆ.

The News Minute ವರದಿ ಪ್ರಕಾರ, ಅಸ್ಸಾಂನ ಗುವಾಹಟಿಯ ಚಾಚಲ್ ಪ್ರದೇಶದಲ್ಲಿ ಕಾನೂನು ಪದವೀಧರ ಹಾಗೂ ವಕೀಲ 28 ವರ್ಷದ ಅರಿಫ್-ಉಲ್ ಇಸ್ಲಾಂ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಜುಲೈ 22ರಂದು ಪ್ರತಿಭಟನೆ ನಡೆದಿದ್ದ ಪ್ರದೇಶಕ್ಕೆ ಸ್ನೇಹಿತನನ್ನು ಬಿಟ್ಟು ಬರಲು ಮಾತ್ರ ತೆರಳಿದ್ದ ಅವರು ಪ್ರತಿಭಟನೆಯಲ್ಲಿ ಭಾಗಿಯಾಗಿರಲಿಲ್ಲ ಎಂದು ಅವರ ಪರ ವಕೀಲ ಅಮನ್ ವದುದ್ ತಿಳಿಸಿದ್ದಾರೆ.

ಪೊಲೀಸರು ಗುರುತಿನ ದಾಖಲೆಗಳನ್ನು ಪರಿಶೀಲಿಸಿದ ಬಳಿಕವೂ ಅವರನ್ನು ಬಂಧಿಸಿ, ಪ್ರತಿಭಟನೆಗೆ ನೇತೃತ್ವ ನೀಡುವುದು, ಜನರನ್ನು ಪ್ರಚೋದಿಸುವುದು ಹಾಗೂ ಕರ್ತವ್ಯ ನಿರ್ವಹಿಸುತ್ತಿದ್ದ ಪೊಲೀಸರ ಕೆಲಸಕ್ಕೆ ಅಡ್ಡಿಪಡಿಸಿದ ಆರೋಪಗಳನ್ನು ದಾಖಲಿಸಿದ್ದಾರೆ. ಆದರೆ ಅರಿಫ್ ಯಾವುದೇ ಪ್ರತಿಭಟನೆಯಲ್ಲಿ ಪಾಲ್ಗೊಂಡಿಲ್ಲ ಎಂಬುದು ಅವರ ಪರ ವಕೀಲರು ಹೇಳಿದ್ದಾರೆ.

►ವಕೀಲೆಗೆ ಪೊಲೀಸರಿಂದ ಲೈಂಗಿಕ ಕಿರುಕುಳ: ಆರೋಪ :

ಇದೇ ವೇಳೆ ಬಂಧಿತರಿಗೆ ಕಾನೂನು ನೆರವು ಒದಗಿಸುತ್ತಿದ್ದ ವಕೀಲೆಯೊಬ್ಬರ ಮೇಲೆ ಪೊಲೀಸರು ಲೈಂಗಿಕ ಕಿರುಕುಳ ನಡೆಸಿರುವುದಾಗಿ ಗಂಭೀರ ಆರೋಪ ಕೇಳಿ ಬಂದಿದೆ. ಅಪ್ರಾಪ್ತ ವಯಸ್ಕ ಪ್ರತಿಭಟನಾಕಾರರ ಮನೆಗಳಿಗೆ ತೆರಳಿ ಪೊಲೀಸರು ಬೆದರಿಕೆ ಹಾಕುತ್ತಿದ್ದಾರೆ. ತನಗೆ 200ಕ್ಕೂ ಅಧಿಕ ದೂರುಗಳು ಫೋನ್‌ ಕರೆ ಮೂಲಕ ಬಂದಿರುವುದಾಗಿ ಅವರು ಹೇಳಿದ್ದಾರೆ.

ಜುಲೈ 25ರಂದು ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಹಿನ್ನೆಲೆಯಲ್ಲಿ ನಡೆದ ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡಿದ್ದಾಗ ತಮ್ಮನ್ನೂ ಪೊಲೀಸರು ಬಂಧಿಸಿದ್ದಾಗಿ ಹೇಳಿದ ಅವರು, ಬಂಧನದ ವೇಳೆ ದೈಹಿಕ ಹಾಗೂ ಲೈಂಗಿಕ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿದ್ದಾರೆ. ತಮ್ಮ ಕೈಯಲ್ಲಿದ್ದ ರಾಷ್ಟ್ರಧ್ವಜವನ್ನು ಪುರುಷ ಪೊಲೀಸ್ ಅಧಿಕಾರಿಯೊಬ್ಬರು ಕಸಿದುಕೊಂಡಿದ್ದು, ಮಹಿಳಾ ಪೊಲೀಸ್ ಅಧಿಕಾರಿ ಬೆರಳುಗಳನ್ನು ತಿರುಚಲು ಹಾಗೂ ಬಳಿಕ ಕುತ್ತಿಗೆ ಹಿಸುಕಲು ಯತ್ನಿಸಿದ್ದಾರೆ. ಮತ್ತೊಬ್ಬ ಪುರುಷ ಪೊಲೀಸ್ ಅಧಿಕಾರಿ ತಮ್ಮ ಎದೆ ಭಾಗವನ್ನು ಅಸಭ್ಯವಾಗಿ ಸ್ಪರ್ಶಿಸಿದ್ದಾನೆ ಎಂದು ಅವರು ಆರೋಪಿಸಿದ್ದಾರೆ.

ಜುಲೈ 26ರ ರಾತ್ರಿ ಪಾಟ್ನಾದಲ್ಲೇ 86 ಮಂದಿಯನ್ನು ಕೊಲೆ ಯತ್ನ, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸುವ ಉದ್ದೇಶದಿಂದ ಹಲ್ಲೆ ನಡೆಸಿದ ಆರೋಪ ಸೇರಿದಂತೆ ಹಲವು ಗಂಭೀರ ಸೆಕ್ಷನ್‌ಗಳಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಯಿತು. ಆದರೆ, ಎಫ್‌ಐಆರ್ ಪ್ರತಿಗಳನ್ನು ಅವರ ಪರ ವಕೀಲರಿಗೆ ನೀಡಲು ನಿರಾಕರಿಸಿರುವುದಾಗಿ ಆರೋಪಿಸಲಾಗಿದೆ.

ಸುಮಾರು 200 ವಿದ್ಯಾರ್ಥಿಗಳನ್ನು ಮಧ್ಯರಾತ್ರಿಯಲ್ಲೇ ಪಾಟ್ನಾದ ಛಜ್ಜು ಬಾಗ್ ಪ್ರದೇಶದಲ್ಲಿರುವ ನ್ಯಾಯಾಧೀಶರ ನಿವಾಸಕ್ಕೆ ಕರೆದುಕೊಂಡು ಹೋಗಿ ವಿಚಾರಣೆ ನಡೆಸಲಾಯಿತು. ವಿಚಾರಣೆ ಮುಗಿದ ಬಳಿಕ ವಿದ್ಯಾರ್ಥಿಗಳನ್ನು ನೇರವಾಗಿ ಬೇಊರ್ ಕೇಂದ್ರ ಕಾರಾಗೃಹಕ್ಕೆ ಕಳುಹಿಸಲಾಯಿತು.

ಜುಲೈ 25ರಂದು ಮತ್ತೆ ಗಾಂಧಿ ಮೈದಾನದಲ್ಲಿ ವಿದ್ಯಾರ್ಥಿಗಳು ಸೇರಿದ್ದಾಗ ಮತ್ತೊಂದು ಸುತ್ತಿನ ಬಂಧನ ನಡೆಯಿತು. ಡಿಎಸ್ಒ ನಾಯಕಿ ವರುಣಿ ಕುಮಾರಿ ಅವರ ಪ್ರಕಾರ, ಕಲ್ಲು ತೂರಾಟ ನಡೆಸಿದ ಕೆಲವರು ಅಲ್ಲಿಂದ ತೆರಳಿದ್ದರೂ, ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು, ಅದರಲ್ಲೂ 9 ಮತ್ತು 10ನೇ ತರಗತಿಯ ವಿದ್ಯಾರ್ಥಿಗಳನ್ನು ಸಹ ಪೊಲೀಸರು ಬಂಧಿಸಿದ್ದಾರೆ. ಜುಲೈ 26ರ ವೇಳೆಗೆ 250ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇನ್ನೂ ಪೊಲೀಸ್ ವಶದಲ್ಲಿದ್ದರು ಎಂದು ಅವರು ಹೇಳಿದ್ದಾರೆ ಎಂದು The News Minute ವರದಿ ಮಾಡಿದೆ.

ಅನೇಕ ವಿದ್ಯಾರ್ಥಿಗಳು ಕೋಚಿಂಗ್ ತರಗತಿಗಳಿಗೆ ತೆರಳುತ್ತಿದ್ದವರಾಗಿದ್ದು ಅಥವಾ ಬೇರೆ ಕೆಲಸಕ್ಕಾಗಿ ಹೊರಬಂದವರಾಗಿದ್ದರೂ ಯಾವುದೇ ಪರಿಶೀಲನೆ ನಡೆಸದೆ ಬಂಧಿಸಲಾಗಿದೆ ಎಂದು ಅವರು ಆರೋಪಿಸಿದ್ದಾರೆ. ರಾತ್ರಿ 10 ಗಂಟೆಯವರೆಗೂ ಬಂಧಿತರಿಗೆ ಎಫ್‌ಐಆರ್ ಪ್ರತಿಗಳನ್ನು ನೀಡಿಲ್ಲ ಹಾಗೂ ಮ್ಯಾಜಿಸ್ಟ್ರೇಟ್ ಮುಂದೆ ಹಾಜರುಪಡಿಸಿಲ್ಲ ಎಂದೂ ಅವರು ಹೇಳಿದ್ದಾರೆ.

ಪಶ್ಚಿಮ ಬಂಗಾಳದಲ್ಲಿಯೂ ಪ್ರತಿಭಟನಾಕಾರರ ವಿರುದ್ಧ ಅತ್ಯಂತ ದಮನಕಾರಿ ನೀತಿಯನ್ನು ಅನ್ವಯಿಸಲಾಗಿದೆ. ಸುವೇಂದು ಅಧಿಕಾರಿ ಪ್ರತಿಭಟನಾಕಾರರನ್ನು "ಜಮಾತಿ ಮೂಲಭೂತವಾದಿಗಳು" ಎಂದು ಹೇಳಿದ್ದು, ಅವರು ವಿದ್ಯಾರ್ಥಿಗಳಲ್ಲ, ಗೂಂಡಾಗಳು ಎಂದು ಹೇಳಿ ಕಠಿಣ ಕ್ರಮ ಕೈಗೊಳ್ಳುವುದಾಗಿ ಘೋಷಿಸಿದರು.

ಜುಲೈ 25ರಂದು ಕೊಲ್ಕತ್ತಾದಲ್ಲಿ ನಡೆದ ಪ್ರತಿಭಟನೆಯ ಬಳಿಕ 14 ಮಂದಿಯನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಗೂಂಡಾ ಕಾಯ್ದೆ ಅನ್ವಯಿಸಲಾಗಿದೆ. ಈ ಕಾಯ್ದೆಯಡಿ, ಯಾವುದೇ ನ್ಯಾಯಾಂಗ ವಿಚಾರಣೆ ಇಲ್ಲದೆ ವ್ಯಕ್ತಿಯನ್ನು ಒಂದು ವರ್ಷದವರೆಗೆ ಮುನ್ನೆಚ್ಚರಿಕಾ ಬಂಧನದಲ್ಲಿ ಇರಿಸಬಹುದಾಗಿದೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News